ನಗರ, ಗ್ರಾಮೀಣ ಮಕ್ಕಳಿಗೆ ಸುಸಜ್ಜಿತ ಗ್ರಂಥಾಲಯ ಅಗತ್ಯ

KannadaprabhaNewsNetwork | Published : Jun 12, 2024 12:39 AM

ಸಾರಾಂಶ

ಮಕ್ಕಳ ಕನಸು ನನಸಾಗಬೇಕಾದರೆ ರಚನಾತ್ಮಕ ಹಾಗೂ ಸೃಜನಾತ್ಮಕ ಕೆಲಸಗಳು ಹೆಚ್ಚಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ವನಿಮಾ ಸಮಾಜ ಡಿಜಿಟಲ್ ಲೈಬ್ರರಿ ಸ್ಥಾಪಿಸುವ ಉತ್ತಮ ಕೆಲಸ ಮಾಡಿದೆ ಎಂದು ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆ ಸಂಸ್ಥಾಪಕ, ಯುವ ಮುಖಂಡ ಜಿ.ಬಿ.ವಿನಯಕುಮಾರ ದಾವಣಗೆರೆಯಲ್ಲಿ ಶ್ಲಾಘಿಸಿದ್ದಾರೆ.

- ವನಿತಾ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ಇನ್‌ಸೈಟ್ಸ್‌ ಐಎಎಸ್‌ ತರಬೇತಿ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಅಭಿಮತ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಮಕ್ಕಳ ಕನಸು ನನಸಾಗಬೇಕಾದರೆ ರಚನಾತ್ಮಕ ಹಾಗೂ ಸೃಜನಾತ್ಮಕ ಕೆಲಸಗಳು ಹೆಚ್ಚಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ವನಿಮಾ ಸಮಾಜ ಡಿಜಿಟಲ್ ಲೈಬ್ರರಿ ಸ್ಥಾಪಿಸುವ ಉತ್ತಮ ಕೆಲಸ ಮಾಡಿದೆ ಎಂದು ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆ ಸಂಸ್ಥಾಪಕ, ಯುವ ಮುಖಂಡ ಜಿ.ಬಿ.ವಿನಯಕುಮಾರ ಶ್ಲಾಘಿಸಿದರು.

ನಗರದ ವನಿತಾ ಸಮಾಜದಲ್ಲಿ ಮಂಗಳವಾರ ಇನ್‌ಸೈಟ್ಸ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವನಿತಾ ಡಿಜಿಟಲ್ ಲೈಬ್ರರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜ್ಞಾನವು ನಮಗೆ ಜೀವನದಲ್ಲಿ ಧೈರ್ಯ ನೀಡಿ, ಜೀವನವನ್ನು ಅನುಭವಿಸುವ ಕ್ರಮವನ್ನು ತಿಳಿಸುತ್ತದೆ ಎಂದರು.

ಇನ್ ಸೈಟ್ಸ್ ಸಂಸ್ಥೆಯ 53ನೇ ಶಾಖೆ ವನಿತಾ ಸಮಾಜದಲ್ಲಿ ಶುರುವಾಗಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ಕೆಲಸಗಳು ಹೆಚ್ಚಾಗಬೇಕು. ನಗರ, ಗ್ರಾಮೀಣ ಮಕ್ಕಳಿಗೆ ಸುಸಜ್ಜಿತ ಗ್ರಂಥಾಲಯ ಇರಬೇಕು. ಮೂಲ ಸೌಕರ್ಯಗಳೆಂದರೆ ಕೇವಲ ರಸ್ತೆ, ಚರಂಡಿ, ನೀರೊದಗಿಸುವುದಷ್ಟೇ ಅಲ್ಲ, ಗ್ರಂಥಾಲಯಗಳನ್ನು ಸ್ಥಾಪಿಸಬೇಕು. ಜನರು ಸ್ವತಂತ್ರವಾಗಿ ಯೋಚಿಸಲು, ಮಾತನಾಡಲು, ಮುಕ್ತ ಅಭಿಪ್ರಾಯ ಹಂಚಿಕೊಳ್ಳಲು ಸ್ಥಳಾವಕಾಶ ಇರಬೇಕು ಎಂದು ತಿಳಿಸಿದರು.

ಶಾಲೆಯಲ್ಲಿ ಸಿಗುವುದಕ್ಕಿಂತ ಹೆಚ್ಚು ಜ್ಞಾನವನ್ನು ಪುಸ್ತಕಗಳು ನೀಡುತ್ತವೆ. ಮನೆಯಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು. ನನಗೂ ಸಹ ತಂದೆ ಇಂತಹ ಹವ್ಯಾಸ ರೂಢಿಸಿದ್ದರಿಂದಲೇ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಯಿತು. ಕನ್ನಡದಿಂದ ಇಂಗ್ಲಿಷ್‌ ಪುಸ್ತಕ ಓದುವ ಅಭ್ಯಾಸ ಮಾಡಿಕೊಂಡೆ. ಹೊಸ ವಿಚಾರ ತಿಳಿಯಬೇಕು. ತಿಳಿದಂತಹ ವಿಚಾರ ಹಂಚಿಕೊಳ್ಳಬೇಕು ಎಂಬ ಭಾವನೆ ನನ್ನದು. ಹಾಗಾಗಿ, ಪುಸ್ತಕದ ಅಭಿರುಚಿ ಬೆಳೆಯಿತು. ಎಲ್ಲರೊಂದಿಗೆ ಮುಕ್ತ ಚರ್ಚೆ ಆರಂಭಿಸಿದೆ ಎಂದು ಹೇಳಿದರು.

ನೋಬೆಲ್ ಪ್ರಶಸ್ತಿ ಪಡೆದಿದ್ದ ಒಂದು ಇಂಗ್ಲಿಷ್ ಪುಸ್ತಕ ನನ್ನ ವಿದ್ಯಾರ್ಥಿ ಜೀವನದಲ್ಲಿ ಗಮನ ಸೆಳೆಯಿತು. ಸುಮಾರು 45 ದಿನಗಳ ಕಾಲ ಅದೇ ಪುಸ್ತಕವನ್ನು ಓದಿದೆ. ಕಷ್ಟಪಟ್ಟು ಆ ಪುಸ್ತಕದ ಬಗ್ಗೆ ತಿಳಿದುಕೊಂಡೆ. ಅದರಿಂದಾಗಿ ನನ್ನಲ್ಲಿ ಜ್ಞಾನವೂ ಹೆಚ್ಚಾಯಿತು. ಚಿಕ್ಕ ವಯಸ್ಸಿನಲ್ಲೇ ಪಠ್ಯ ಹೊರತುಪಡಿಸಿ, ಇತರೇ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ವಿವರಿಸಿದರು.

ಪ್ರತಿಯೊಬ್ಬರ ಜೀವನವೂ ಅತ್ಯಮೂಲ್ಯ. ಹಾಗಾಗಿ ಕೇವಲ ಒಂದೇ ವಿಚಾರಕ್ಕೆ ಮಹತ್ವ ನೀಡದೇ, ಸಮಾಜಕ್ಕೆ ಮಹತ್ತರ ಕೊಡುಗೆ ನೀಡುವ ಹುದ್ದೆ ಹುಡುಕಿಕೊಳ್ಳಬೇಕು. ಸೀಮಿತ ಪರಿಧಿಗೆ ಹೋಗದೆ, ಧೈರ್ಯವಾಗಿ ಮುನ್ನುಗ್ಗಬೇಕು. ನಮ್ಮ ದೃಷ್ಟಿಕೋನದಲ್ಲಿ ವೈವಿಧ್ಯತೆ ಬರಬೇಕು. ವಿಚಾರ ಶಕ್ತಿ ಬೆಳೆಯಬೇಕು. ಅದಕ್ಕಾಗಿ ನಿತ್ಯವೂ ದಿನಪತ್ರಿಕೆ ಓದುತ್ತಾ, ವಿಶ್ವದ ವಿದ್ಯಮಾನಗಳ ಬಗ್ಗೆ ತಿಳಿಯಬೇಕು ಎಂದರು.

ವನಿತಾ ಡಿಜಿಟಲ್ ಗ್ರಂಥಾಲಯದ ಅಧ್ಯಕ್ಷೆ ರೇಖಾ ಪ್ರಸನ್ನಕುಮಾರ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಸದಸ್ಯ, ಮಾಜಿ ಮೇಯರ್ ಎಸ್.ಟಿ.ವೀರೇಶ, ವನಿತಾ ಸಮಾಜದ ಅಧ್ಯಕ್ಷೆ ಪದ್ಮಾ ಪ್ರಕಾಶ, ಕಾರ್ಯದರ್ಶಿ ಆರ್.ವಾಗ್ದೇವಿ, ಡಿ.ಪಲ್ಲವಿ, ಎಸ್.ಸುಮಾ, ಶೀಲಾ ನಲ್ಲೂರು, ಸಮಾಜದ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು ಇದ್ದರು.

- - - ಬಾಕ್ಸ್‌

* ಎನ್‌ಎಸ್‌ಡಿ, ಸ್ಪೋರ್ಟ್ಸ್‌ ಅಕಾಡೆಮಿ ಬರಬೇಕು

ಎನ್ಎಸ್‌ಡಿ ಹಾಗೂ ಸ್ಪೋರ್ಟ್ಸ್‌ ಅಕಾಡೆಮಿಗಳನ್ನು ದಾವಣಗೆರೆಗೆ ತರಬೇಕೆಂಬ ದೊಡ್ಡ ಆಸೆ ತಮಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವೆ. ಈ ಅಕಾಡೆಮಿಗಳಿಂದ ವಿದ್ಯಾರ್ಥಿಗಳು, ಯುವಜನರಿಗೂ ಸಾಕಷ್ಟು ಅನುಕೂಲವಿದೆ. ವನಿತಾ ಡಿಜಿಟಲ್ ಲೈಬ್ರರಿಗೆ ಇದೀಗ ಚಾಲನೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ತಮ್ಮ ಇನ್‌ಸೈಟ್ಸ್ ಅಕಾಡೆಮಿಯಿಂದ ಐಎಎಸ್‌ ಪರೀಕ್ಷೆ ಬರೆಯುವ ಆಕಾಂಕ್ಷಿಗಳು, ಅಭ್ಯರ್ಥಿಗಳು, ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುವುದಕ್ಕೆ ತಾವು ಬದ್ಧ ಎಂದು ಜಿ.ಬಿ.ವಿನಯಕುಮಾರ ಭರವಸೆ ನೀಡಿದರು.

- - -

-11ಕೆಡಿವಿಜಿ5:

ದಾವಣಗೆರೆ ವನಿತಾ ಸಮಾಜ ಆವರಣದಲ್ಲಿ ನೂತನ ವನಿತಾ ಡಿಜಿಟಲ್ ಲೈಬ್ರರಿಯನ್ನು ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆ ಸಂಸ್ಥಾಪಕ, ಯುವ ಮುಖಂಡ ಜಿ.ಬಿ.ವಿನಯಕುಮಾರ ಉದ್ಘಾಟಿಸಿದರು.

Share this article