ರೋಣ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸಿದ ಗ್ಯಾರಂಟಿ ಯೋಜನೆಗಳು ಎಂದಿಗೂ ನಿಲ್ಲುವುದಿಲ್ಲ. ಅವುಗಳು ಮತ್ತಷ್ಟು ಸುಧಾರಣೆಯೊಂದಿಗೆ ಮುಂದುವರಿಯಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಭಾನುವಾರ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ರೋಣ ಹಾಗೂ ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಯುವ ಕಾಂಗ್ರೆಸ್ ಕಮಿಟಿ ವಿವಿಧ ಘಟಕಗಳ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತವೆ ಎಂದು ಹೇಳುವ ಬಿಜೆಪಿಯವರ ಸುಳ್ಳು, ಗೊಳ್ಳು ಮಾತುಗಳಿಗೆ ಜನತೆ ಕಿವಿಗೊಡಬಾರದು. ಪಂಚ ಗ್ಯಾರಂಟಿ ಬೇಡ ಎಂದು ಬಿಜೆಪಿ ಅವರು ಬೇಕಿದ್ದರೇ ಶಾಸನದಲ್ಲಿ ಹೇಳಲಿ ನೋಡೋಣ, ಕೇವಲ ಭಾಷಣದಲ್ಲಿ ಹೇಳಿ ಜನರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿಯವರಿಗೆ ಗ್ಯಾರಂಟಿ ಯೋಜನೆಗಳು ಜನತೆಗೆ ಎಷ್ಟೊಂದು ಅನುಕೂಲವಾಗಿದೆ ಎಂಬುದು ಮೊದಲು ತಿಳಿದುಕೊಳ್ಳಬೇಕು. ಅಪಪ್ರಚಾರಕ್ಕೆ ಅರ್ಥವಿರಬೇಕೆ ಹೊರತು, ಜನರನ್ನು ದಾರಿ ತಪ್ಪಿಸುವಂತಿರಬಾರದು. ತಿಂಗಳಿಗೆ ₹ 5 ಸಾವಿರ, ವರ್ಷಕ್ಕೆ ₹ 60 ಸಾವಿರ ಮನೆ ಮನೆಗೆ ತಲುಪುವಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಒತ್ತಡದ ಸಾಲ ನೀಡಿ, ಬಡತನದ ಹೊರೆಯ ಮಧ್ಯೆ ಮೈಕ್ರೋ ಫೈನಾನ್ಸನವರು ಬಲವಂತವಾಗಿ ಸಾಲ ವಸೂಲಿ ಮಾಡುವವರಿಗೆ ಕಡಿವಾಣ ಹಾಕುವಲ್ಲಿ ಕಾನೂನು ತಂದಿದ್ದೇವೆ. ಸಾಮಾಜಿಕ ನ್ಯಾಯದ ಬಸಿರಿನಿಂದ ಸೀಳಿ ಬಂದ ಶಾಸನವನ್ನು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶಾಸನ ಸಭೆಯಲ್ಲಿ ಪಾಸ್ ಮಾಡಲಾಯಿತು. ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದಾಗ 20 ಅಂಶಗಳ ಕಾರ್ಯಕ್ರಮದ ಮೂಲಕ ಬಡವರಿಗೆ ಸಹಾಯ ಮಾಡಿದ್ದರು. ಪ್ರಸ್ತುತ ರಾಜ್ಯ ಸರ್ಕಾರ ಉಚಿತ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸಕ್ತ ಅಧಿವೇಶನದಲ್ಲಿ 26 ಮಸೂದೆಗಳನ್ನು ಪಾಸ್ ಮಾಡಲಾಗಿದೆ ಎಂದರು.ಮೇ, ಜೂನ್‌ದಲ್ಲಿ ಜಿಪಂ, ತಾಪಂ ಚುನಾವಣೆ:
ಮೇ, ಜೂನ್‌ನಲ್ಲಿ ಜಿಪಂ, ತಾಪಂ ಚುನಾವಣೆ ನಡೆಯುವಲ್ಲಿ ತಾತ್ವಿಕ ಒಪ್ಪಿಗೆ ಸಿಕ್ಕಿದ್ದು, ಈ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್, ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ, ಪ್ರತಿಯೊಂದು ಕ್ಷೇತ್ರದಲ್ಲಿ ಗೆಲವು ಸಾಧಿಸುವಲ್ಲಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬೇಕು. ಈ ನಿಟ್ಟಿನಲ್ಲಿ ದೃಢ ನಿರ್ಣಯವಾಗಬೇಕು. ಈ ದಿಶೆಯಲ್ಲಿ ಯುವ ಕಾಂಗ್ರೆಸ್ ಕಮಿಟಿ ಸಹಭಾಗಿತ್ವ ಅತಿ ಪ್ರಮುಖವಾಗಿದೆ ಎಂದರು.ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಡಿ.ಬಿ. ಸೌದಾಗರ ಮಾತನಾಡಿ, ಸೋಶಿಯಲ್ ಮಿಡಿಯಾ ಸರಿಯಾಗಿ ಬಳಸಿಕೊಂಡು ಕಾಂಗ್ರೆಸ್ ಸಾಧನೆಯನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ , ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಕಾಂಗ್ರೆಸ್ ಸಂಘಟನೆಯಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ. ರಾಜ್ಯ ಸರ್ಕಾರದ ಯೋಜನೆ, ಅಭಿವೃದ್ಧಿ ಕಾರ್ಯಗಳ ಕುರಿತು ಮನೆ ಮನೆಗೆ ತೆರಳಿ ಜನತೆಗೆ ತಿಳಿಸಬೇಕು ಎಂದರು.ಜಿಪಂ, ತಾಪಂನಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದು. ಕೇವಲ ಚುನಾವಣೆ ಸ್ಪರ್ಧೆ ಉದ್ದೇಶದಿಂದ ಪಕ್ಷಕ್ಕೆ ದುಡಿಯದೇ, ನಿಸ್ವಾರ್ಥತೆಯಿಂದ ಪಕ್ಷಕ್ಕೆ ದುಡಿದಲ್ಲಿ ಅಂತಹ ವ್ಯಕ್ತಿಯನ್ನು ಪಕ್ಷ ಗುರುತಿಸಿ ಅವಕಾಶ ಕಲ್ಪಿಸಲಾಗುವುದು. ಪ್ರತಿ ತಿಂಗಳು ಪಂಚ ಯೋಜನೆಗಳ ಮೂಲಕ ₹ 20 ಕೋಟಿ ಮತಕ್ಷೇತ್ರಕ್ಕೆ ಬರುತ್ತಿದೆ. ಈ ಕುರಿತು ಜನರಿಗೆ ತಿಳಿಸಬೇಕು ಎಂದರು.
ಯುವ ಕಾಂಗ್ರೆಸ್ ಕಮಿಟಿ ರಾಜ್ಯ, ಜಿಲ್ಲೆ, ವಿಧಾನಸಭೆ ಕ್ಷೇತ್ರದ ವಿವಿಧ ಘಟಕಗಳ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಎಚ್.ಎಸ್. ಸೋಂಪೂರ, ಯುವ ಮುಖಂಡ ಮಿಥುನ ಜಿ. ಪಾಟೀಲ, ಶಿವರಾಜ ಘೋರ್ಪಡೆ, ಸಿದ್ದಣ್ಣ ಬಂಡಿ, ಪರಶುರಾಮ ಅಳಗವಾಡಿ, ರೋಣ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಶೆಟ್ಟರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣಾಗೌಡ ಎಚ್. ಪಾಟೀಲ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಕ್ಷಯ ಪಾಟೀಲ ಮಾತನಾಡಿದರು.
ಅಶೋಕ ಮಂದಾಲಿ, ಅಶೋಕ ಬಾಗಮರ, ವಿ.ಆರ್. ಗುಡಿಸಾಗರ, ಪ್ರಭು ಮೇಟಿ, ಶರಣಗೌಡ ಪಾಟೀಲ ಸರ್ಜಾಪುರ, ಬಸವರಾಜ ನವಲಗುಂದ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಮೇಶ ಪಲ್ಲೇದ, ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ಡಾ. ಬಿ.ಆರ್. ಬಸವರಡ್ಡೇರ, ದಶರಥ ಗಾಣಿಗೇರ, ಪರಶುರಾಮ ಅಳಗವಾಡಿ, ರೂಪಾ ಅಂಗಡಿ, ನಾಜಬೇಗಂ ಯಲಿಗಾರ, ಬಾವಾಸಾಬ ಬೇಟಗೇರಿ, ಗೀತಾ ಮಾಡಲಗೇರಿ, ಹನುಮಂತಪ್ಪ ದ್ವಾಸಲ ಉಪಸ್ಥಿತರಿದ್ದರು. ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಶರಣಪ್ಪ ಬೆಟಗೇರಿ ಸ್ವಾಗತಿಸಿದರು. ಬಸವರಾಜ ಶೀಲವಂತರ ಕಾರ್ಯಕ್ರಮ ನಿರೂಪಿಸಿದರು.