ಸೆ.14ರಂದು ವೆನ್ಲಾಕ್‌ ಜಿಲ್ಲಾಸ್ಪತ್ರೆಗೆ 175ನೇ ವರ್ಷಾಚರಣೆ ಸಂಭ್ರಮ

KannadaprabhaNewsNetwork |  
Published : May 10, 2025, 01:07 AM IST
32 | Kannada Prabha

ಸಾರಾಂಶ

ಮಂಗಳೂರು ವೆನ್ಲಾಕ್‌ ಆಸ್ಪತ್ರೆಯು ೧೭೫ ವರ್ಷಗಳನ್ನು ಪೂರೈಸಿದೆ. ಆಸ್ಪತ್ರೆಯ ಸಂಭ್ರಮಾಚರಣೆಯ ಸಲುವಾಗಿ ಲೇಡಿಗೋಷನ್, ಕೆಎಂಸಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ವೆನ್ಲಾಕ್‌ ಆಸ್ಪತ್ರೆಯ ಹಳೆ ವಿದ್ಯಾರ್ಥಿ ಸಂಘಕ್ಕೆ ಚಾಲನೆ ನೀಡಲಾಗಿದ್ದು, ಸೆಪ್ಟೆಂಬರ್‌ 14ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಜಿಲ್ಲಾಸ್ಪತ್ರೆಯಾಗಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ರೋಗಿಗಳಿಗೂ ಉತ್ತಮ ಚಿಕಿತ್ಸೆಯ ತಾಣವಾಗಿ ಗುರುತಿಸಿಕೊಂಡಿರುವ ವೆನ್ಲಾಕ್‌ ಆಸ್ಪತ್ರೆಯು ೧೭೫ ವರ್ಷಗಳನ್ನು ಪೂರೈಸಿದೆ. ಆಸ್ಪತ್ರೆಯ ಸಂಭ್ರಮಾಚರಣೆಯ ಸಲುವಾಗಿ ಲೇಡಿಗೋಷನ್, ಕೆಎಂಸಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ವೆನ್ಲಾಕ್‌ ಆಸ್ಪತ್ರೆಯ ಹಳೆ ವಿದ್ಯಾರ್ಥಿ ಸಂಘಕ್ಕೆ ಚಾಲನೆ ನೀಡಲಾಗಿದ್ದು, ಸೆಪ್ಟೆಂಬರ್‌ 14ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವೆನ್ಲಾಕ್‌ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಅಧೀಕ್ಷಕ ಹಾಗೂ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಡಾ. ಶಿವಪ್ರಕಾಶ್ ಮಾತನಾಡಿ, ಸೆ. ೧೪ರಂದು ನಗರದ ಟಿಎಂಎ ಪೈ ಕೆನ್ವೆನ್ಶನ್ ಸೆಂಟರ್‌ನಲ್ಲಿ ಸಂಭ್ರಮಾಚರಣೆಯನ್ನು ಆಯೋಜಿಸಲಾಗಿದೆ ಎಂದರು.

ಸಂಭ್ರಮಾಚರಣೆಯ ನಿಮಿತ್ತ ಮ್ಯಾಗಜಿನ್ ಬಿಡುಗಡೆ ಮಾಡಲಾಗುತ್ತಿದ್ದು, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಇದೇ ವೇಳೆ ಆಸ್ಪತ್ರೆ ಹೆಸರಿನಲ್ಲಿ ಕಾಯಿನ್ ಬಿಡುಗಡೆ ಹಾಗೂ ಪೋಸ್ಟ್ ಕಾರ್ಡ್ ಬಿಡುಗಡೆಯನ್ನೂ ಮಾಡಲಾಗುವುದು ಎಂದು ಅವರು ಹೇಳಿದರು.

‘ಕರುಣೆಯ ತೊಟ್ಟಿಲು’ ಬೀರು ಆರಂಭ:

ಆಸ್ಪತ್ರೆಗೆ ಬರುವ ನಿರ್ಗತಿಕರು, ವಿಕಲಚೇತನರು ಅಥವಾ ಬಡ ರೋಗಿಗಳಿಗೆ ಪೂರಕವಾಗಿ ಬಟ್ಟೆಗಳನ್ನು ಒದಗಿಸಲು ‘ಕರುಣೆಯ ತೊಟ್ಟಿಲು’ ಎಂಬ ಹೆಸರಿನಲ್ಲಿ ಬೀರು(ಕಬೋರ್ಡ್)ಗಳನ್ನು ತೆರೆಯಲಾಗುತ್ತದೆ. ಅಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲಾದ ಉತ್ತಮ ಸ್ಥಿತಿಯಲ್ಲಿರುವ ಬಟ್ಟೆಗಳನ್ನು ಇಟ್ಟು, ಅಗತ್ಯವಿದ್ದವರಿಗೆ ಒದಗಿಸುವ ಕಾರ್ಯ ನಡೆಯಲಿದೆ. ೧೭೫ ವರ್ಷಗಳ ಸಂಭ್ರಮಾಚರಣೆಗೆ ಚಾಲನೆ ಈ ಕಾರ್ಯದ ಮೂಲಕ ನಡೆಯಲಿದೆ. ವೆನ್ಲಾಕ್‌ ಆಸ್ಪತ್ರೆಯ ತುರ್ತು ನಿಗಾ ಘಟಕ, ಮಕ್ಕಳ ಆಸ್ಪತ್ರೆ ಹಾಗೂ ಒಪಿಡಿ ವಿಭಾಗದಲ್ಲಿ ಈ ಕರುಣೆಯ ತೊಟ್ಟಿಲು ಬೀರುಗಳನ್ನು ಇರಿಸಲಾಗುವುದು ಎಂದು ಡಾ. ಶಿವಪ್ರಕಾಶ್ ತಿಳಿಸಿದರು.

ಲೇಡಿಗೋಷನ್‌ ಸಾಧನೆ:

ವೆನ್ಲಾಕ್‌ನ ಸಂಭ್ರಮಕ್ಕೆ ಜಿಲ್ಲೆಯ ಮೊದಲ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಾದ ಲೇಡಿಗೋಷನ್ ಆಸ್ಪತ್ರೆ ಪೂರಕವಾಗಿದ್ದು, ೩೦೦ ಹಾಸಿಗೆಗಳಿಂದ ಕೂಡಿದೆ. ವೆನ್ಲಾಕ್‌ ಮತ್ತು ಲೇಡಿಗೋಷನ್ ಆಸ್ಪತ್ರೆಗಳಿಗೆ ಭೇಟಿ ನೀಡುವವರಲ್ಲಿ ಶೇ. ೫೮ ರಷ್ಟು ಜಿಲ್ಲೆಯ ರೋಗಿಗಳಾಗಿದ್ದರೆ, ಹೊರ ರಾಜ್ಯಗಳ ಶೇ. ೨೨ರಷ್ಟು ರೋಗಿಗಳು ಸೇರಿದ್ದಾರೆ. ಶೇ. ೨೦ರಷ್ಟು ಹೊರ ಜಿಲ್ಲೆಯವರಾಗಿದ್ದಾರೆ. ವೆನ್ಲಾಕ್‌ ಹಾಗೂ ಲೇಡಿಗೋಷನ್ ಆಸ್ಪತ್ರೆಗಳ ಸರ್ಕಾರಿ ವೈದ್ಯರ ಜತೆಗೆ ಕೆಎಂಸಿಯ ವೈದ್ಯರು ಹಾಗೂ ವೈದ್ಯಕೀಯ ಸಹಕಾರವೂ ಅತೀ ಪ್ರಮುಖವಾಗಿದೆ. ಲೇಡಿಗೋಷನ್ ಆಸ್ಪತ್ರೆಯಲ್ಲಿ ೨೦೧೮-೧೯ರ ಅವಧಿಯಲ್ಲಿ ೨೨ ತಾಯಿ ಮರಣ ಸಂಭವಿಸಿತ್ತು. ಈ ದುರಂತದ ಹಿನ್ನೆಲೆಯಲ್ಲಿ ಕೈಗೊಂಡ ಹಲವು ಕಾರ್ಯಯೋಜನೆಗಳಿಂದಾಗಿ ಇದೀಗ ತಾಯಿ ಮರಣ ದರ ಶೂನ್ಯವಾಗಿದೆ ಎಂದು ಲೇಡಿಗೋಷನ್‌ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್ ತಿಳಿಸಿದರು.

ಕೆಎಂಸಿ ಡೀನ್ ಹಾಗೂ ಸಂಘದ ಗೌರವಾಧ್ಯಕ್ಷ ಡಾ. ಉಣ್ಣಿಕೃಷ್ಣನ್, ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಕೆ.ಆರ್. ಕಾಮತ್, ಕೋಶಾಧಿಕಾರಿ ಡಾ. ಎಂ. ಅಣ್ಣಯ್ಯ ಕುಲಾಲ್, ವೆನ್ಲಾಕ್‌ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಸುಧಾಕರ್ ಟಿ., ಡಾ. ಸುರೇಶ್ ಶೆಟ್ಟಿ, ಡಾ. ಜೂಲಿಯಾನ ಸಲ್ಡಾನಾ ಇದ್ದರು.

ಬಾಕ್ಸ್‌---

ಅತ್ಯುತ್ತಮ ಲೋಗೋಗೆ ಬಹುಮಾನ೧೭೫ ವರ್ಷಗಳ ನೆನಪಿಗಾಗಿ ಲೇಡಿಗೋಷನ್, ವೆನ್ಲಾಕ್‌ ಹಾಗೂ ಕೆಎಂಸಿಯನ್ನು ಒಲಗೊಂಡು ಅತ್ಯುತ್ತಮ ಲೋಗೋವನ್ನು ಬಿಡುಗಡೆ ಮಾಡಲಾಗುವುದು. ಈ ನಿಟ್ಟಿನಲ್ಲಿ ೧೫ ದಿನಗಳೊಳಗೆ ಅತ್ಯುತ್ತಮ ಲೋಗೋವನ್ನು ಸಾರ್ವಜನಿಕರಿಂದ ಆಹ್ವಾನಿಸಲಾಗುತ್ತಿದೆ. ಆಯ್ಕೆಯಾದ ಅತ್ಯುತ್ತಮ ಲೋಗೋ ತಯಾರಿಸಿದವರಿಗೆ ಬಹುಮಾನವನ್ನು ಸೆ. ೧೪ರ ಕಾರ್ಯಕ್ರಮದಲ್ಲಿ ನೀಡಲಾಗುವುದು. ಆಸಕ್ತರು ಆಸ್ಪತ್ರೆಯ ಇಮೇಲ್ - wlkdk175@gmail.com ಗೆ ಕಳುಹಿಸಲು ಕೋರಲಾಗಿದೆ.ಸೂಪರ್ ಹೀರೋ ಆಗಿ ವೆನ್ಲಾಕ್‌ ಮೇಲ್ದರ್ಜೆಗೆ

ಇತರ ಜಿಲ್ಲಾ ಆಸ್ಪತ್ರೆಗಳಿಗೆ ಹೋಲಿಕೆ ಮಾಡಿದರೆ ಹೀರೋ ಆಗಿ ಗುರುತಿಸಿಕೊಂಡಿರುವ ವೆನ್ಲಾಕ್‌ ಅನ್ನು ಮುಂದಿನ ದಿನಗಳಲ್ಲಿ ಸೂಪರ್ ಹೀರೋ ಆಗಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ವೆನ್ಲಾಕ್‌ನಲ್ಲಿ ಈಗಾಗಲೇ ಆರಂಭಗೊಂಡಿರುವ ಸರ್ಜಿಕಲ್ ವಿಭಾಗ, ಮೆಡಿಕಲ್ ಹಾಗೂ ಆರ್‌ಎಪಿಸಿಸಿ ವಿಭಾಗ ಹೊಸತಾಗಿದೆ. ಅಡ್ಮಿನ್ ಮತ್ತು ಒಪಿಡಿ ವಿಭಾಗ ಹಳೆಯ ಕಟ್ಟಡದಲ್ಲಿದ್ದು, ಅದನ್ನು ದುರಸ್ತಿ ಮಾಡುವ ಕಾರ್ಯ ನಡೆಯುತ್ತಿದೆ. ಕ್ರಿಕಟಲ್ ಕೇರ್ ಬ್ಲಾಕ್ ಕೂಡಾ ಆಗಲಿದ್ದು, ಒಪಿಡಿ ಬ್ಲಾಕ್ ಹೊಸತಾಗಿ ನಿರ್ಮಾಣವಾದರೆ ದೇಶದ ನಂ.೧ ಸೆಟಪ್ ಆಗಿ ಆಸ್ಪತ್ರೆ ಗುರುತಿಸಲ್ಪಡಲಿದೆ. ಹಾಗಾಗಿ ಅಡ್ಮಿನ್ ಬ್ಲಾಕ್ ಸಂಪೂರ್ಣವಾಗಿ ನವೀಕರಣಗೊಳಿಸಲಾಗುವುದು ಎಂದು ವೆನ್ಲಾಕ್‌ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್. ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಘರ್ಷದ ಸಮಾಜಕ್ಕೆ ಧ್ಯಾನವೇ ಪರಿಹಾರ : ಶ್ರೀ ಶ್ರೀ
ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ