..ಈಶ್ವರಪ್ಪ ವಿರುದ್ಧ ನಾಲಿಗೆ ಹರಿಬಿಟ್ಟರೆ ಜೋಕೆ

KannadaprabhaNewsNetwork |  
Published : Jul 14, 2026, 01:45 AM IST
ಪೋಟೋ: 13ಎಸ್‌ಎಂಜಿಕೆಪಿ05ಶಿವಮೊಗ್ಗದ ಪತ್ರಿಕಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಮೋಹನ್ ಜಾಧವ್ ಮಾತನಾಡಿದರು.  | Kannada Prabha

ಸಾರಾಂಶ

ಈಶ್ವರಪ್ಪನವರು ಇಂದಿಗೂ ಬಿಜೆಪಿ ಪಕ್ಷದ ನಿಷ್ಠಾವಂತ ನಾಯಕ. ಅವರ ರಾಷ್ಟ್ರಭಕ್ತಿ, ಹಿಂದೂತ್ವ ಮತ್ತು ರಾಜಕೀಯ ಹೋರಾಟದ ಹಾದಿಯ ಬಗ್ಗೆ ಮಾತನಾಡಲು ಶಾಸಕ ಬೇಳೂರು ಗೋಪಾಲಕೃಷ್ಣ ಅರ್ಹರಲ್ಲ ಎಂದು ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಮೋಹನ್ ಜಾಧವ್ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಈಶ್ವರಪ್ಪನವರು ಇಂದಿಗೂ ಬಿಜೆಪಿ ಪಕ್ಷದ ನಿಷ್ಠಾವಂತ ನಾಯಕ. ಅವರ ರಾಷ್ಟ್ರಭಕ್ತಿ, ಹಿಂದೂತ್ವ ಮತ್ತು ರಾಜಕೀಯ ಹೋರಾಟದ ಹಾದಿಯ ಬಗ್ಗೆ ಮಾತನಾಡಲು ಶಾಸಕ ಬೇಳೂರು ಗೋಪಾಲಕೃಷ್ಣ ಅರ್ಹರಲ್ಲ ಎಂದು ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಮೋಹನ್ ಜಾಧವ್ ಕಿಡಿಕಾರಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಕಟ್ಟುವಲ್ಲಿ ಯಡಿಯೂರಪ್ಪರಷ್ಟೇ ಈಶ್ವರಪ್ಪರೂ ದುಡಿದಿದ್ದಾರೆ. ಅವರೆಂದೂ ಚಿಗುರಲ್ಲ ಹೆಮ್ಮರ. ಈಶ್ವರಪ್ಪನವರು ರಾಜ್ಯದಲ್ಲೇ ಹೆಮ್ಮರವಾಗಿ ಬೆಳೆದು ನಿಂತಿದ್ದು, ಅವರು ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ್ದಾರೆ. ನಾಯಕರನ್ನಾಗಿ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯಕರ್ತರಿಗೆ ಟಿಕೆಟ್‌ ನೀಡಿ ಗೆಲ್ಲಿಸಿದ್ದಾರೆ. ಜಿ.ಪಂ.ಸದಸ್ಯರನ್ನಾಗಿ ಮಾಡಿದ್ದಾರೆ. ಮೇಯರ್, ಉಪ ಮೇಯರ್, ನಿಗಮಗಳ ಅಧ್ಯಕ್ಷರನ್ನಾಗಿ ಮಾಡಿ, ನಿಷ್ಠಾವಂತ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡಿದ್ದಾರೆ. ಬೇಳೂರು ಯಾರನ್ನು ಬೆಳೆಸಿದ್ದಾರೆ. ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಈಶ್ವರಪ್ಪನವರ ರಾಜಕೀಯ ಜೀವನವೇ ನೆಲೆಗಟ್ಟಿನಲ್ಲಿ ಬೆಳೆದು ಬಂದಿದೆ. ರಾಷ್ಟ್ರಪ್ರೇಮಿ ಮುಸ್ಲಿಮರನ್ನು ಅವರು ಎಂದಿಗೂ ವಿರೋಧಿಸುವುದಿಲ್ಲ. ಆದರೆ ಧರ್ಮವಿರೋಧಿಗಳು ಯಾರೇ ಆದರೂ ಅವರನ್ನು ವಿರೋಧಿಸದೆ ಬಿಡುವುದಿಲ್ಲ. ಬಹುಶಃ ಹಿಂದೂತ್ವವಾದಿಗಳನ್ನು ಟಾರ್ಗೆಟ್ ಮಾಡಿ ಮಾತನಾಡಿದರೆ ಹಿಂದೂ ವಿರೋಧಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಬಹುದು ಎಂಬ ಕನಸಿನಿಂದ ಬೇಳೂರು ಗೋಪಾಲಕೃಷ್ಣ ಅವರು ಈಶ್ವರಪ್ಪನವರ ಬಗ್ಗೆ ವೈಯಕ್ತಿಕ ನೆಲೆಯಲ್ಲಿ ಮಾತನಾಡಿರಬಹುದು ಎಂದು ದೂರಿದರು.

ರಾಜಕೀಯ ಲಾಭಕ್ಕಾಗಿ ದೇಶದಲ್ಲಿನ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಒಂದೇ ಹಂತದಲ್ಲಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಬಗ್ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ರಾಷ್ಟ್ರಭಕ್ತ ಬಳಗವು ತೀವ್ರವಾಗಿ ಖಂಡಿಸಿದೆ. ಕೂಡಲೇ ಬೇಳೂರು ಗೋಪಾಲಕೃಷ್ಣ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಈ. ವಿಶ್ವಾಸ್ ಮಾತನಾಡಿ, ಶರಾವತಿ ಪಂಪ್ ಹೌಸ್ ಯೋಜನೆಯನ್ನು ಈಶ್ವರಪ್ಪನವರು ಯಾವುದೇ ರಾಜಕೀಯ ಲಾಭಕ್ಕಾಗಿ ವಿರೋಧಿಸಿಲ್ಲ. ಈ ಯೋಜನೆಯಿಂದ ಆಗಬಹುದಾದ ದುಷ್ಪರಿಣಾಮಗಳನ್ನು ಮನಗಂಡು ಹೋರಾಟದ ಹಾದಿ ತುಳಿದಿದ್ದಾರೆ. ಮತ್ತು ಈ ಯೋಜನೆಗೆ ಸಾಗರ ಕ್ಷೇತ್ರದ ಜನತೆಯೂ ಬೆಂಬಲ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಗೋಪಾಲಕೃಷ್ಣ ಅವರು ತಮ್ಮ ಕ್ಷೇತ್ರದ ಜನರ ಜೊತೆ ನಿಲ್ಲುತ್ತಾರೋ ಅಥವಾ ಯೋಜನೆಯ ಪರವಾಗಿ ನಿಲ್ಲುತ್ತಾರೋ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಸಾವಿರಾರು ಕೋಟಿ ರು. ವೆಚ್ಚದ ಈ ಯೋಜನೆಯಿಂದ ತಮಗೆ ಏನಾದರೂ ಲಾಭದ ನಿರೀಕ್ಷೆ ಇರಬಹುದೇನೋ ಎಂಬ ಅನುಮಾನವನ್ನು ಸಾಗರದ ಜನತೆಯೇ ವ್ಯಕ್ತಪಡಿಸಿದ್ದಾರೆ ಎಂದು ಕುಟುಕಿದರು.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾರುತಿ ಗುರೂಜಿಯವರನ್ನು ‘ಯಾರೋ ಸ್ವಾಮೀಜಿ’ ಎಂದು ಬೇಳೂರು ಕರೆದಿರುವುದನ್ನು ಕೂಡ ನಾವು ಖಂಡಿಸುತ್ತೇವೆ. ಸ್ವಾಮೀಜಿಗಳು ಸಾವಿರಾರು ಭಕ್ತರನ್ನು ಹೊಂದಿದ್ದಾರೆ. ಹೀಗೆ ಗುರೂಜಿಗಳನ್ನು ಕೂಡ ಅವಮಾನಿಸುತ್ತಿರುವುದು ಸರಿಯಲ್ಲ ಎಂದರು.

ಮುಂದೆಯೂ ಈ ರೀತಿಯ ಹೋರಾಟಗಳಿಗೆ ಈಶ್ವರಪ್ಪನವರೇ ಮುಂದಾಗುತ್ತಾರೆ. ಎಸ್‌.ಬಂಗಾರಪ್ಪ ಅವರ ಶಿಷ್ಯರಾಗಿರುವ ಬೇಳೂರು ಗೋಪಾಲಕೃಷ್ಣ ಅವರ ಬಾಯಲ್ಲಿ ಇಂತಹ ಮಾತುಗಳು ಕೇಳಿ ಬಂದಿದ್ದು ಸರಿಯಲ್ಲ. ಅವರು ಇನ್ನು ಮುಂದಾದರೂ ದುರುದ್ದೇಶದಿಂದ ಮಾತನಾಡದೆ ಸಮಚಿತ್ತದಿಂದ ಹೇಳಿಕೆ ನೀಡಬೇಕು ಎಂದು ಹರಿಹಾಯ್ದರು.

ಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ, ಲಕ್ಷೀ ಶಂಕರ್ ನಾಯ್ಕ್,ರಾಜು,ಶಂಕರ್ ನಾಯ್ಕ್, ಸೀತಾಲಕ್ಷ್ಮಿ, ಕೆಂಪಮ್ಮ ಸುರೇಶ್ ಪ್ರಮೋದ್, ಮತ್ತು ಇತರರು ಉಪಸ್ಥಿತರಿದ್ದರು.

-----------

ಬಾಕ್ಸ್

ಬೇಳೂರು ಮನೆಗೆ ಮಹಿಳೆಯರಿಂದ ಮುತ್ತಿಗೆಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪರಂತ ನಾಯಕರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಇದು ಮುಂದುವರಿದರೆ ಅವರಿಗೆ ಮಾನಸಿಕ ಚಿಕಿತ್ಸೆಗೆ ಒಳಪಡಿಸಬೇಕಾಗುತ್ತದೆ ಈ. ವಿಶ್ವಾಸ್‌ ಕಿಡಿಕಾರಿದರು.

ಈಶ್ವರಪ್ಪ ಬಗ್ಗೆ ಕೀಳಾಗಿ ಮಾತನಾಡಿರುವ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಇನ್ನೂ 15 ದಿನಗಳ ಒಳಗೆ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ರಾಷ್ಟ್ರಭಕ್ತ ಬಳಗದ ಮಹಿಳೆಯರೇ ಅವರ ಮನೆಗೆ ಮುತ್ತಿಗೆ ಹಾಕುತ್ತಾರೆ ಎಂದು ಎಚ್ಚರಿಕೆ ನೀಡಿದರು.

-------------------

ಪೋಟೋ: 13ಎಸ್‌ಎಂಜಿಕೆಪಿ05

ಶಿವಮೊಗ್ಗದ ಪತ್ರಿಕಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಮೋಹನ್ ಜಾಧವ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೀಘ್ರದಲ್ಲೇ ‌ಹಲವು ಅಭಿವೃದ್ಧಿ ಕಾಮಗಾರಿಗಳು ಪೂರ್ಣ: ಕೆ.ಎಂ.ಉದಯ್
ಕಾವೇರಿ ನದಿಯಲ್ಲಿ ಗಾಯಕಿ ಎಸ್.ಜಾನಕಿ ಅಸ್ಥಿ ವಿಸರ್ಜನೆ