ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಖ್ಯಾತ ಹಿನ್ನಲೆ ಗಾಯಕಿ ಎಸ್.ಜಾನಕಿ ಅವರ ಅಸ್ಥಿಯನ್ನು ಸೋಮವಾರ ಪಟ್ಟಣದ ಘೋಸಾಯಿ ಘಾಟ್ ಸಮೀಪದ ಕಾವೇರಿ ನದಿಯಲ್ಲಿ ಕುಟುಂಬದ ಸದಸ್ಯರು ವೈದಿಕ ವಿಧಿವಿಧಾನಗಳೊಂದಿಗೆ ವಿಸರ್ಜಿಸಿದರು.

ವೈದಿಕ ರಮೇಶ್ ಶರ್ಮಾರ ನೇತೃತ್ವದಲ್ಲಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಪೂಜೆ ಹಾಗೂ ಅಪರ ಕ್ರಿಯೆಗಳು ನೆರವೇರಿದವು. ಎಸ್.ಜಾನಕಿ ಅವರ ಮೊಮ್ಮಗಳು ಅಪ್ಸರಾ ಸೇರಿದಂತೆ ಕುಟುಂಬದ ಸದಸ್ಯರು ವಿಧಿವಿಧಾನಗಳಲ್ಲಿ ಭಾಗವಹಿಸಿದ್ದರು.

ಅಸ್ಥಿ ವಿಸರ್ಜನೆ ಬಳಿಕ ಮಾತನಾಡಿದ ಎಸ್.ಜಾನಕಿ ಅವರ ಆರೈಕೆದಾರ (ಕೇರ್‌ ಟೇಕರ್) ನವೀನ್, ಅಮ್ಮನವರ ಆಸೆಯಂತೆ ಅವರ ಅಸ್ಥಿಯನ್ನು ಪಟ್ಟಣದ ಕಾವೇರಿ ನದಿಯಲ್ಲೇ ವಿಸರ್ಜನೆ ಮಾಡಲಾಗಿದೆ. ಈ ಹಿಂದೆ ಅವರ ಪುತ್ರನ ಅಸ್ಥಿ ವಿಸರ್ಜನೆ ವೇಳೆ ಸ್ವತಃ ಜಾನಕಿ ಅವರು ತಮ್ಮ ಅಸ್ಥಿಯನ್ನೂ ಇದೇ ಸ್ಥಳದಲ್ಲಿ ವಿಸರ್ಜನೆ ಮಾಡುವಂತೆ ಇಚ್ಛೆ ವ್ಯಕ್ತಪಡಿಸಿದ್ದರು. ಅದರಂತೆ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅವರ ಆಸೆಯನ್ನು ಈಡೇರಿಸಿದ್ದೇವೆ ಎಂದರು.

ಎಸ್.ಜಾನಕಿ ಅವರ ಆಸ್ತಿ ಹಾಗೂ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಹರಿದಾಡುತ್ತಿರುವ ಹಲವು ವದಂತಿಗಳನ್ನು ಅವರು ತಳ್ಳಿ ಹಾಕಿದರು. ಅಮ್ಮನವರನ್ನು ನಾವು ಗೃಹಬಂಧನದಲ್ಲಿ ಇರಿಸಿರಲಿಲ್ಲ. ಅವರ ಆಸ್ತಿಯನ್ನು ನಮಗೆ ಹಂಚಿಕೆ ಮಾಡಿದ್ದಾರೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದರು. ಇಂತಹ ಸುಳ್ಳು ಆರೋಪಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಡದಂತೆ ಮನವಿ ಮಾಡಿದರು.


ಜಾನಕಮ್ಮನವರ ಸ್ಮರಣಾರ್ಥ ಸ್ಮಾರಕ ನಿರ್ಮಿಸಲು ಬದ್ಧರಾಗಿದ್ದೇವೆ. ಜೊತೆಗೆ ಮೈಸೂರಿನ ಬೋಗಾದಿ ರಸ್ತೆಗೆ ಎಸ್. ಜಾನಕಿ ಅವರ ಹೆಸರನ್ನು ನಾಮಕರಣ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ, ಎಸ್. ಜಾನಕಿ ಅವರ ಅಂತ್ಯಕ್ರಿಯೆ ಹಾಗೂ ಅಸ್ಥಿ ವಿಸರ್ಜನೆ ವೇಳೆ ಸಹಕಾರ ನೀಡಿದ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಸಾರ್ವಜನಿಕರಿಗೆ ನವೀನ್ ಕೃತಜ್ಞತೆ ಸಲ್ಲಿಸಿದರು.