ಶಿಕ್ಷಣ ಸಚಿವರಾಗಿ ಜಿಲ್ಲೆ ಅಭಿವೃದ್ಧಿಗೆ ಏನು ತಂದಿದ್ದೀರಿ?: ಬಿ.ವೈ.ರಾಘವೇಂದ್ರ ಪ್ರಶ್ನೆ

KannadaprabhaNewsNetwork |  
Published : Aug 05, 2024, 12:32 AM IST
ಪೊಟೋ: 04ಎಸ್‌ಎಂಜಿಕೆಪಿ04:ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ಶಿಕ್ಷಣ ಇಲಾಖೆಯಲ್ಲಿ ಅನೇಕ ಬದಲಾವಣೆ ಆಗಬೇಕಿ ಅದನ್ನು ಮಾಡಿ. ಡಿಡಿಪಿಐಗೆ ಇಷ್ಟು ರೇಟ್, ಬಿಒಗೆ ಇಷ್ಟು ರೇಟ್ ಅಂತ ರಾಜ್ಯದಲ್ಲಿ ಪಿಕ್ಸ್ ಆಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಶಿವಮೊಗ್ಗಕ್ಕೆ ಸಚಿವರಾಗಿ ಮಧು ಬಂಗಾರಪ್ಪ ಏನು ತಂದಿದ್ದಾರೆ. ಶಿಕ್ಷಣ ಸಚಿವರು ಜಿಲ್ಲೆಗೆ ಒಂದು ಕೊಠಡಿ ಸಹ ತಂದಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ತಿರುಗೇಟು ನೀಡಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಸದನಾಗಿ ನನ್ನ ಅಭಿವೃದ್ಧಿ ದೊಡ್ಡ ಪಟ್ಟಿಯನ್ನೇ ನಾನು ಕೊಡುತ್ತೇನೆ. ಅಭಿವೃದ್ಧಿ ಶ್ವೇತಪತ್ರ ಕೊಡಲು ನಾನು ತಯಾರಿದ್ದೇನೆ. 12 ಸಾವಿರ ಶಿಕ್ಷಕರ ನೇಮಕ ಮಾಡಿದ್ದು ನಾವು. ಅದನ್ನು ನಾವೇ ಮಾಡಿದ್ದು ಎಂದು ಶಿಕ್ಷಣ ಸಚಿವರು ಹೇಳುತ್ತಾರೆ. ಶಿಕ್ಷಣ ಸಚಿವರಾಗಿ ಹೆಸರು ಮಾಡಲು ಅವಕಾಶ ಇದೆ ಅದನ್ನು ಉಪಯೋಗಿಸಿಕೊಳ್ಳಿ, ಅಭಿವೃದ್ಧಿ ಮೂಲಕ ಸವಾಲ್ ಹಾಕಿ ಎಂದು ಹರಿಹಾಯ್ದರು.

ಸರ್ವಜನಾಂಗದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದಿರುತ್ತಾರೆ. ಈಗ ಒಬಿಸಿ ನಾಯಕರನ್ನು ತುಳಿಯುವ ಕೆಲಸ ಆಗುತ್ತಿದೆ ಅಂದಿದ್ದಾರೆ. ನಮ್ಮ ಕುಟುಂಬ ಬಗ್ಗೆ ಬೆರಳು ತೋರಿಸುವ ಕೆಲಸವನ್ನು ಸಚಿವ ಮಧು ಬಂಗಾರಪ್ಪ ಮಾಡುತ್ತಿದ್ದಾರೆ. ಕೋರ್ಟ್‌ನಲ್ಲಿ ಕ್ಲೀನ್ ಚಿಟ್ ಆಗಿ ಬಂದಿದ್ದಾರೆ. ನಿಮ್ಮಿಂದ ಕಲಿಯುವ ಅವಶ್ಯಕತೆ ನನಗಿಲ್ಲ. ನಿಮ್ಮ ಮಾತು ನಡುವಳಿಕೆಗೆ ಲೋಕಸಭಾ ಚುನಾವಣೆಯಲ್ಲಿ ನಿಮಗೆ ಹಿನ್ನಡೆ ಆಗಿದೆ. ಶಿಕ್ಷಣ ಇಲಾಖೆಗೆ ಗೌರವ ಬರುವ ರೀತಿಯಲ್ಲಿ ನಡೆಸಿಕೊಳ್ಳಿ, ಮುತ್ಸದ್ಧಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದರು.

ಶಿಕ್ಷಣ ಇಲಾಖೆಯಲ್ಲೂ ವರ್ಗಾವಣೆ ದಂಧೆ, ಆರೋಪ:

ಸುಳ್ಳಿನ ಆರೋಪದ ಮೇಲೆ ಯಡಿಯೂರಪ್ಪನವರನ್ನು ನಿಲ್ಲಿಸಲಾಗಿತ್ತು. ಮಧು ಬಂಗಾರಪ್ಪ ಕುಟುಂಬದ ಮೇಲು ಹಗರಣ ಇದೆ. ಶಿಕ್ಷಣ ಇಲಾಖೆಯಲ್ಲಿ ಅನೇಕ ಬದಲಾವಣೆ ಆಗಬೇಕಿದೆ ಅದನ್ನು ಮಾಡಿ. ಡಿಡಿಪಿಐಗೆ ಇಷ್ಟು ರೇಟ್, ಬಿಒಗೆ ಇಷ್ಟು ರೇಟ್ ಅಂತ ರಾಜ್ಯದಲ್ಲಿ ಪಿಕ್ಸ್ ಆಗಿದೆ. ಟಾರ್ಗೆಟ್ ಮಾಡಿ ಪಟ್ಟಿ ಮಾಡಿ ವರ್ಗಾವಣೆ ಮಾಡುತ್ತಿದ್ದಾರೆ. ವರ್ಗಾವಣೆ ದಂಧೆ ನಡೆಯುತ್ತಿದೆ ಅದು ನನಗೆ ಗೊತ್ತಿಲ್ವಾ. ಆರೋಪ ಪ್ರತ್ಯಾರೋಪಕ್ಕೆ ನಾವು ಹೆದರಲ್ಲ. ಬಂಗಾರಪ್ಪರ ಬಗ್ಗೆ ನಮಗೆ ಗೌರವ ಇದೆ ಎಂದು ಕುಟುಕಿದರು.

ರಾಜ್ಯಾಧ್ಯಕ್ಷರದ್ದು ಎಲ್ಲಾ ಬಿಚ್ಚಿಡುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಅನೇಕ ಹಿರಿಯರು ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದಾರೆ. ಶಿಕ್ಷಣ ಇಲಾಖೆಗೆ ಗೌರವ ಬರುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಆಚಾರ ವಿಲ್ಲದ ನಾಲಿಗೆ ರೀತಿಯಲ್ಲಿ ಮಧು ಬಂಗಾರಪ್ಪ ಮಾತನಾಡುತ್ತಿದ್ದಾರೆ. ಆ ಪುಣ್ಯಾತ್ಮನ ಬಾಯಿಯಲ್ಲಿ ಇವೇನು ಹೊಸತಲ್ಲ ಎಂದು ಕುಟುಕಿದ ಅವರು ನಮಗೂ ಅವರಗಿಂತ ಚೆನ್ನಾಗಿ ಮಾತಾಡಲು ಬರುತ್ತೆ ಎಂದು ವಾಗ್ದಾಳಿ ನಡೆಸಿದರು.

ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಕೆಲಸ ಆಗುತ್ತಿದೆ. ಆದರೆ, ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಸಣ್ಣ ಸಣ್ಣ ಹಣವನ್ನು ಸಹ ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಅಭಿವೃದ್ಧಿ ಕೆಲಸಗಳಿಗಾಗಿ ಸ್ವತಃ ನಾನೇ ಮಧು ಬಂಗಾರಪ್ಪ ಮನೆಗೆ ಹೋಗಿದ್ದೆ. ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದರೆ ಈಗ ಅವರದೇ ಸರ್ಕಾರವಿದೆ. ಬೇಕಾದರೆ ತನಿಖೆ ಮಾಡಿಸಲಿ ಎಂದು ಹರಿಹಾಯ್ದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹರಿಕೃಷ್ಣ, ಕೆ.ವಿ.ಅಣ್ಣಪ್ಪ ಇದ್ದರು.

ಸ್ವಾರ್ಥಕ್ಕಾಗಿ ಎಂದೂ ಬಿಜೆಪಿ ಪ್ರತಿಭಟನೆ ಮಾಡಲ್ಲ:

ಸರ್ಕಾರ ಎಡುವಿದಾಗ ಎಚ್ಚರಿಸುವ ಕೆಲಸ ವಿರೋಧ ಪಕ್ಷ ಮಾಡುತ್ತಿದೆ. ಬಿಜೆಪಿ ಎಂದೂ ಕೂಡ ಸ್ವಾರ್ಥಕ್ಕಾಗಿ ಪ್ರತಿಭಟನೆ ಮಾಡಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಸಂಸದ ಬಿ.ವೈ.ರಾಘವೇಂದ್ರ ತಿರುಗೇಟು ನೀಡಿದರು.

ಈ ಕಾಂಗ್ರೆಸ್ ಸರ್ಕಾರ ಬಂದು 1 ವರ್ಷ ನಾಲ್ಕು ತಿಂಗಳು ಆಯ್ತು. ವಾಲ್ಮೀಕಿ ಹಗರಣದಲ್ಲಿ ಎಸ್ಸಿ ಸಮಾಜದ ಅಧಿಕಾರಿನ್ನು ಕಾಂಗ್ರೆಸ್ ಬಲಿ ತಗೊಂಡಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಕುಟುಂಬ ಭಾಗಿ ಆಗಿದೆ. ಕೋಟ್ಯಾಂತರ ರು. ಬೆಲೆಬಾಳುವ ನಿವೇಶನ ಮಾರಿದ್ದಾರೆ. ಶಾಸಕರು ಕೇಳಿದ್ದ ₹30 ಲಕ್ಷ ಹಣ ಕೊಡಲು ಆಗದೆ ಪಿಎಸ್ಐ ಸಾವನ್ನಪ್ಪಿದ್ದಾರೆ. ಬಡವರ ಹಣ ದುರುಪಯೋಗ ಆಗಿದೆ. ಮುಡಾ ಹಗರಣ ನಡೆದಿದೆ ಇದರ ವಿರುದ್ಧ ಬಿಜೆಪಿ ವಿರೋಧ ಪಕ್ಷವಾಗಿ ಹೋರಾಟ ಮಾಡುತ್ತಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕರ ಎಲ್ಲ ಪ್ರಶ್ನೆಗೆ ಉತ್ತರಿಸಿ: ಸಚಿವರಿಗೆ ಸಿಎಂ ಸಿದ್ದು ಸೂಚನೆ
ಸಂಪುಟ ಪುನಾರಚನೆಗೆ ಹೆಚ್ಚಿದ ಶಾಸಕರ ಒತ್ತಡ