ಏನು ಸಾಧನೆ ಮಾಡಿದ್ದೀರಿ ಅಂತ ಸಾಧನಾ ಸಮಾವೇಶ?

KannadaprabhaNewsNetwork |  
Published : May 20, 2025, 01:00 AM IST
19ಎಚ್‌ಯುಬಿ22ಬಿಜೆಪಿ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ದುಬಾರಿ ಜೀವನ, ಅಭಿವೃದ್ಧಿ ಶೂನ್ಯ, ಇದುವೇ ಕಾಂಗ್ರೆಸ್‌ ಸರ್ಕಾರದ ಸಾಧನೆ ಎಂಬ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ನೂರಾರು ಬಾಣಂತಿಯರ ಸಾವು, ದಲಿತರ ಹಣ ಲೂಟಿ ಹೊಡೆದಿದ್ದೆ ಇವರ ಸಾಧನೆ. ಸಿಎಂ ಸಿದ್ದರಾಮಯ್ಯ ಅವರಿಂದ ಹಿಡಿದು ಎಲ್ಲರೂ ಲೂಟಿ‌ ಹೊಡೆದಿದಿದ್ದಾರೆ. ಇದು 60 ಪರ್ಸೆಂಟೇಜ್‌ ಸರ್ಕಾರ. ಗುತ್ತಿಗೆದಾರರೇ ಈ ಬಗ್ಗೆ ಹೇಳುತ್ತಿದ್ದಾರೆ. ಈ ಸರ್ಕಾರದಿಂದ ಒಂದೇ ಒಂದು ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಮುಸ್ಲಿಂ ಗುತ್ತಿಗೆದಾರರಿಗೆ ಶೇ. 4 ಮೀಸಲಾತಿ ಸೇರಿದಂತೆ ಮುಸ್ಲಿಮರ ತುಷ್ಠೀಕರಣ ಮಾಡುತ್ತಿದೆ

ಹುಬ್ಬಳ್ಳಿ: ಎರಡು ವರ್ಷದಲ್ಲಿ ಏನು ಸಾಧನೆ ಮಾಡಿದ್ದೀರಿ ಅಂತ ಸಮಾವೇಶ ‌ಮಾಡುತ್ತೀರಿ? ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ವಿಜಯನಗರದ ಕಾಂಗ್ರೆಸ್ ಸಮಾವೇಶ ಹಿನ್ನೆಲೆಯಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಎರಡು ವರ್ಷ ರಾಜ್ಯವನ್ನು ಲೂಟಿ, ದರೋಡೆ ಮಾಡಿದ್ದಕ್ಕೆ ಸಮಾವೇಶನಾ? ಎಂದು ಕೇಳಿದ ಅವರು ಎಐಸಿಸಿಗೆ ರಾಜ್ಯ ಎಟಿಎಂ ಆಗಿದೆ ಎಂದು ಆರೋಪಿಸಿದರು.

ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ನೂರಾರು ಬಾಣಂತಿಯರ ಸಾವು, ದಲಿತರ ಹಣ ಲೂಟಿ ಹೊಡೆದಿದ್ದೆ ಇವರ ಸಾಧನೆ. ಸಿಎಂ ಸಿದ್ದರಾಮಯ್ಯ ಅವರಿಂದ ಹಿಡಿದು ಎಲ್ಲರೂ ಲೂಟಿ‌ ಹೊಡೆದಿದಿದ್ದಾರೆ. ಇದು 60 ಪರ್ಸೆಂಟೇಜ್‌ ಸರ್ಕಾರ. ಗುತ್ತಿಗೆದಾರರೇ ಈ ಬಗ್ಗೆ ಹೇಳುತ್ತಿದ್ದಾರೆ. ಈ ಸರ್ಕಾರದಿಂದ ಒಂದೇ ಒಂದು ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಮುಸ್ಲಿಂ ಗುತ್ತಿಗೆದಾರರಿಗೆ ಶೇ. 4 ಮೀಸಲಾತಿ ಸೇರಿದಂತೆ ಮುಸ್ಲಿಮರ ತುಷ್ಠೀಕರಣ ಮಾಡುತ್ತಿದೆ ಎಂದು ದೂರಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾ‍‍ಳಿಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರತಿ ಕ್ಷೇತ್ರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಸಮಾವೇಶದಲ್ಲಿ ಸಿಎಂ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಕುರಿತು ಪ್ರಸ್ತಾಪಿಸುತ್ತೀರಾ ಎಂದು ಪ್ರಶ್ನಿಸಿದರು.

ಮಾತ್ತೆತ್ತಿದರೆ ಕೇಂದ್ರ ಸರ್ಕಾರ, ಮೋದಿ ಕುರಿತು ಮಾತನಾಡುವ ಸಚಿವ ಲಾಡ್ ತಮ್ಮ ಕಾರ್ಮಿಕ ಇಲಾಖೆಯಲ್ಲಿ ನಡೆದ ₹75 ಕೋಟಿ ವ್ಯವಹಾರದ ಬಗ್ಗೆ ಯಾಕೆ ಸ್ಪಷ್ಟನೆ ಕೊಡುತ್ತಿಲ್ಲ?. ನಗರದಲ್ಲಿ ₹93 ಕೋಟಿಯಲ್ಲಿ ಎಲ್ಇಡಿ ದೀಪ ಅಳವಡಿಸುವ ಕುರಿತಂತೆ ಟೆಂಡರ್‌ ಆಗಿದೆ. ಗುತ್ತಿಗೆದಾರರು ಇಲಾಖಾ ಸಚಿವರನ್ನು ಭೇಟಿ ಮಾಡಿಲ್ಲ ಎನ್ನುವ ಒಂದೇ ಕಾರಣಕ್ಕೆ ವರ್ಕ್‌ ಆರ್ಡರ್‌ ನೀಡಿಲ್ಲ. ಇವೆಲ್ಲ ಸಂಗತಿ ಗಮನಿಸಿದಾಗ ಅಕ್ರಮದ ವಾಸನೆ ಬರುತ್ತಿದೆ ಎಂದರು.

ಇದೇ ವೇಳೆ ದುಬಾರಿ ಜೀವನ, ಅಭಿವೃದ್ಧಿ ಶೂನ್ಯ, ಇದುವೇ ಕಾಂಗ್ರೆಸ್‌ ಸರ್ಕಾರದ ಸಾಧನೆ ಎಂಬ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ನಿಂಗಪ್ಪ ಸುತಗಟ್ಟಿ, ಬಸವರಾಜ ಕುಂದಗೋಳಮಠ, ಈರಣ್ಣ ಜಡಿ, ಮಾಂತೇಶ ಶ್ಯಾಗೋಟಿ, ರವಿ ನಾಯಕ ಮುಂತಾದವರಿದ್ದರು.ಹು-ಧಾ ಪೊಲೀಸ್‌ ಆಯುಕ್ತರಿಂದ ವಸೂಲಿ: ಶಾಸಕ ಬೆಲ್ಲದ ಆರೋಪ

ಹುಬ್ಬಳ್ಳಿ:

ಹು-ಧಾ ಪೊಲೀಸ್‌ ಕಮಿಷನರ್ ಹಾಗೂ ಪೊಲೀಸ್‌ ಸಿಬ್ಬಂದಿ ಕಲೆಕ್ಷನ್‌ಗೆ ನಿಂತಿದ್ದಾರೆ. ಯಾರೋ ಒಬ್ಬರಿಗೆ ಗುಂಡು ಹೊಡೆದು- ಉಳಿದವರಿಗೆ ನಿನಗೂ ಗುಂಡು ಹೊಡೆಯುತ್ತೇನೆ ಎಂದು ಬೆದರಿಸಿ ವಸೂಲಿ ಮಾಡಲಾಗುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಗಂಭೀರ ಆರೋಪ ಮಾಡಿದರು.

ನಗರ ಬಿಜೆಪಿ ಕಚೇರಿಯಲ್ಲಿ ಸೋಮವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ, ಇಸ್ಪೀಟ್, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್ ದಂಧೆ ರಾಜರೋಷವಾಗಿ‌ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುತ್ತಿಲ್ಲ. ಪೊಲೀಸರಿಗೆ ಕ್ರಮಕೈಗೊಳ್ಳಲು ಸ್ವಾತಂತ್ರ್ಯವಿಲ್ಲದಿರುವುದರಿಂದ ಅಕ್ರಮ ರಾಜಾರೋಷವಾಗಿ ನಡೆಯುತ್ತಿದೆ. ಸ್ವತಃ ಪೊಲೀಸ್‌ ಆಯುಕ್ತರೇ ವಸೂಲಿಗೆ ನಿಂತಿದ್ದಾರೆ ಎಂದರು.

ಅವ‍‍ಳಿ ನಗರದಲ್ಲಿ ಮೇ 2ರಿಂದ 10ರ ವರೆಗೆ ಅತೀ ಹೆಚ್ಚು ಸಿಮ್‌ ಖರೀದಿಯಾಗಿದೆ. ಒಬ್ಬರ ಹೆಸರಲ್ಲೇ 4-5 ಸಿಮ್‌ಗಳು ಖರೀದಿಯಾಗಿರುವ ಮಾಹಿತಿ ದೊರೆತಿದೆ. ಈ ಕುರಿತೂ ಆಯುಕ್ತರಿಗೆ ಮತ್ತು ಗೃಹ ಸಚಿವರಿಗೂ ಪತ್ರ ಬರೆದು ತಿಳಿಸಿದ್ದೇನೆ. ಇಂತಹ ಸಿಮ್‌ಗಳಿಂದ ದೇಶದ್ರೋಹಿ ಕೆಲಸ ನಡೆಯುವ ಸಾಧ್ಯತೆ ಇದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಧಾರವಾಡದ ಜನ್ನತನಗರದ ಮಸೀದಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಿದ್ದರೂ ಹು-ಧಾ ಪೊಲೀಸ್‌ ಕಮಿಷನರ್‌ ಯಾವುದೇ ಕ್ರಮಕೈಗೊಂಡಿಲ್ಲ. ಅನುಮಾನಾಸ್ಪದ ವ್ಯಕಿಗಳ ಸೂಕ್ಷ್ಮವಿಚಾರವನ್ನು ಪತ್ರ ಬರೆಯುವ ಮೂಲಕ ಮೇ 10ರಂದೇ ಆಯುಕ್ತರ ಗಮನಕ್ಕೆ ತಂದಿದ್ದೆ. ಆದರೆ, ಅವರು ಇದುವರೆಗೆ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕಮಗಳೂರು ಗಿರಿಧಾಮಗಳಲ್ಲಿ ಪ್ರವಾಸಿಗರ ಕಾರುಬಾರು
ನಾಲ್ಕೈದು ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ : ಡಿಕೆಶಿ