ಕನ್ನಡಪ್ರಭ ವಾರ್ತೆ ಧಾರವಾಡ
ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬರುತ್ತಿಲ್ಲ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಸಾಕ್ಷಿ, ಆಧಾರ ಕೇಳಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷಗಳು ಅನುದಾನದ ವಿಷಯವಾಗಿ ಏನೆಲ್ಲಾ ಆರೋಪ ಮಾಡುತ್ತಿದ್ದಾರೆ. ಅದಕ್ಕೆಲ್ಲಿದೆ ಆಧಾರ. ಈಗಾಗಲೇ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಹೊಸ ಹೊಸ ಕಾರ್ಯಕ್ರಮಗಳೂ ನಡೆಯುತ್ತಿವೆ. ನಡೆಯುತ್ತಿರುವ ಕೆಲಸಗಳಿಗೆ ಹಂತ ಹಂತವಾಗಿ ಅನುದಾನವೂ ಬರುತ್ತದೆ ಎಂದರು.
ಶನಿವಾರ ಧಾರವಾಡ ಜಿಲ್ಲೆಗೆ ಕೇಂದ್ರದ ಬರ ಅಧ್ಯಯನ ತಂಡವು ಬರುತ್ತಿದೆ. ಹಸಿರು ಬರ ಮಾಡಬೇಕೆಂಬ ಆಗ್ರಹ ನಮ್ಮದಾಗಿದೆ. ಕಲಘಟಗಿ, ಅಣ್ಣಿಗೇರಿ, ಅಳ್ನಾವರ ಭಾಗದಲ್ಲಿಯೂ ಬರ ಇದೆ. ಆದರೆ, ಮೇಲ್ನೋಟಕ್ಕೆ ಹಸಿರು ಕಾಣುತ್ತಿದೆ. ಹೀಗಾಗಿ ಹಸಿರು ಬರ ಘೋಷಣೆಗೆ ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡಲಾಗಿದೆ ಎಂದ ಸಚಿವರು, ಹಸಿರು ಕಂಡ ತಕ್ಷಣ ಎಲ್ಲವೂ ಚೆನ್ನಾಗಿದೆ ಎಂದಲ್ಲ. ಸೆಟ್‌ಲೈಟ್‌ನಲ್ಲಿ ನೋಡಿದಾಗ ಹೊಲಗಳಲ್ಲಿ ಹಸಿರು ಬೆಳೆ ಕಾಣುತ್ತದೆ. ಆದರೆ, ಎಲ್ಲ ಬೆಳೆ ಹಾಳಾಗಿ ಹೋಗಿದೆ. ಹೀಗಾಗಿ, ಕೇಂದ್ರ ತಂಡಕ್ಕೆ ಹಸಿರು ಬರ ಘೋಷಣೆ ಮಾಡಲು ಈ ಸಂಬಂಧ ಆಗ್ರಹ ಮಾಡುತ್ತೇವೆ ಎಂದರು.ಹಳೇ ಹುಬ್ಬಳ್ಳಿ ಗಲಭೆಗಳ ಕೇಸ್ ವಾಪಸ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಅದರ ಬಗ್ಗೆ ಡಿ.ಕೆ. ಶಿವಕುಮಾರ ಅವರನ್ನು ಕೇಳಬೇಕು. ಎಲ್ಲರಿಗೂ ಒಂದೇ ಕಾನೂನು ಇದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಿಯೇ ಆಗುತ್ತದೆ ಎಂದರು.