15ರಿಂದ ಕೆಎಸ್‌ಆರ್‌ಟಿಸಿ ‘ಮಂಗಳೂರು ದಸರಾ ದರ್ಶನ’ ಪ್ಯಾಕೆಜ್‌ ಪ್ರವಾಸ

KannadaprabhaNewsNetwork |  
Published : Oct 08, 2023, 12:00 AM IST
ಕಳೆದ ಬಾರಿಯ ಮಂಗಳೂರು ದಸರಾ ವಿಶೇಷ ಬಸ್‌ಗಳು | Kannada Prabha

ಸಾರಾಂಶ

ಈ ಬಾರಿ ಮಂಗಳೂರು ದಸರಾ ದರ್ಶನದಲ್ಲಿ ಮಂಗಳೂರು-ಮಡಿಕೇರಿ, ಮಂಗಳೂರು-ಕೊಲ್ಲೂರು, ಪಂಚದುರ್ಗಾ ದರ್ಶನ ವ್ಯವಸ್ಥೆ ಪರಿಚಯಿಸಲು ಕೆಎಸ್‌ಆರ್‌ಟಿಸಿ ಸಿದ್ಧತೆ ನಡೆಸಿದೆ. ಕಳೆದ ವರ್ಷ ಟೂರ್‌ ಪ್ಯಾಕೇಜ್‌ಗೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿಯೂ ಅದೇ ರೀತಿಯ ಪ್ಯಾಕೆಜ್‌ಗಳನ್ನು ಸಿದ್ಧಪಡಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು ಕಳೆದ ವರ್ಷದಂತೆ ಈ ಬಾರಿಯೂ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಅ.15ರಿಂದ 24ರ ವರೆಗೆ ಮಂಗಳೂರು ದಸರಾ ದರ್ಶನ ಪ್ರವಾಸಿ ಪ್ಯಾಕೆಜ್‌ ಆರಂಭಿಸಲಿದೆ. ಸುಮಾರು ನಾಲ್ಕು ಪ್ಯಾಕೇಜ್‌ಗಳಲ್ಲಿ ಪ್ರವಾಸಿ ಬಸ್‌ ಮಂಗಳೂರಿನಿಂದ ವಿವಿಧ ಕಡೆಗಳಿಗೆ ಕಾರ್ಯಾಚರಿಸಲಿದೆ. ಈ ಬಾರಿ ಮಂಗಳೂರು ದಸರಾ ದರ್ಶನದಲ್ಲಿ ಮಂಗಳೂರು-ಮಡಿಕೇರಿ, ಮಂಗಳೂರು-ಕೊಲ್ಲೂರು, ಪಂಚದುರ್ಗಾ ದರ್ಶನ ವ್ಯವಸ್ಥೆ ಪರಿಚಯಿಸಲು ಕೆಎಸ್‌ಆರ್‌ಟಿಸಿ ಸಿದ್ಧತೆ ನಡೆಸಿದೆ. ಕಳೆದ ವರ್ಷ ಟೂರ್‌ ಪ್ಯಾಕೇಜ್‌ಗೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿಯೂ ಅದೇ ರೀತಿಯ ಪ್ಯಾಕೆಜ್‌ಗಳನ್ನು ಸಿದ್ಧಪಡಿಸಿದೆ. ಮಂಗಳೂರು ದಸರಾ ದರ್ಶನ: ಮಂಗಳೂರು ದಸರಾ ದರ್ಶನ ಪ್ಯಾಕೇಜ್‌ನಡಿ ಬೆಳಗ್ಗೆ 8 ಗಂಟೆಗೆ ಮಂಗಳೂರು ಬಸ್‌ ನಿಲ್ದಾಣದಿಂದ ಬಸ್‌ ಹೊರಡಲಿದ್ದು, ಶ್ರೀ ಮಂಗಳಾದೇವಿ ಕ್ಷೇತ್ರ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಸುಂಕದಕಟ್ಟೆಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಹಾಗೂ ಬೀಚ್‌, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಉರ್ವ ಮಾರಿಯಮ್ಮ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ನವದುರ್ಗ ದರ್ಶನ ಬಳಿಕ ರಾತ್ರಿ 7.30ಕ್ಕೆ ಪ್ರವಾಸ ಕೊನೆಗೊಳ್ಳಲಿದೆ. ನರ್ಮ್‌ ಸಾರಿಗೆಯಲ್ಲಿ ವಯಸ್ಕರಿಗೆ 400 ರು. ಮತ್ತು ಮಕ್ಕಳಿಗೆ 300 ರು., ವೋಲ್ವೋ ಬಸ್‌ನಲ್ಲಿ ವಯಸ್ಕರಿಗೆ 500 ರು. ಮತ್ತು ಮಕ್ಕಳಿಗೆ 400 ರು. ದರ ನಿಗದಿಪಡಿಸಲಾಗಿದೆ. ಮಂಗಳೂರು-ಮಡಿಕೇರಿ ಪ್ಯಾಕೇಜ್‌: ಮಂಗಳೂರು-ಮಡಿಕೇರಿ ಮಧ್ಯೆ ಬೆಳಗ್ಗೆ 7 ಗಂಟೆಗೆ ಮಂಗಳೂರಿನಿಂದ ಬಸ್‌ ಹೊರಟು, ಮಡಿಕೇರಿ, ರಾಜಾಸೀಟ್‌, ಅಬ್ಬಿಫಾಲ್ಸ್‌, ಕಾವೇರಿ ನಿಸರ್ಗಧಾಮ, ಗೋಲ್ಡನ್‌ ಟೆಂಪಲ್‌, ಹಾರಂಗಿ ಡ್ಯಾಂನಿಂದ ಮತ್ತೆ ರಾತ್ರಿ 10.30ಕ್ಕೆ ಮಂಗಳೂರು ತಲುಪಲಿದೆ. ಕರ್ನಾಟಕ ಸಾರಿಗೆ ಬಸ್‌ನಲ್ಲಿ ವಯಸ್ಕರಿಗೆ 500 ರು., ಮಕ್ಕಳಿಗೆ 400 ರು. ನಿಗದಿಪಡಿಸಲಾಗಿದೆ.. ಮಂಗಳೂರು-ಕೊಲ್ಲೂರು: ಮಂಗಳೂರು ಬಸ್‌ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಟ ಬಸ್‌ ಮಾರಣಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಆಗಿ ಸಂಜೆ 6.30ಕ್ಕೆ ಮಂಗಳೂರಿಗೆ ಆಗಮಿಸಲಿದೆ. ವಯಸ್ಕರಿಗೆ 500 ರು., ಮಕ್ಕಳಿಗೆ 400 ರು. ದರ ನಿಗದಿಪಡಿಸಲಾಗಿದೆ. .ಈ ಬಾರಿ ಪಂಚದುರ್ಗಾ ದರ್ಶನ ವಿಶೇಷ ಈ ಬಾರಿ ವಿಶೇಷವಾಗಿ ಪಂಚದುರ್ಗಾ ದರ್ಶನ ಪ್ಯಾಕೇಜ್‌ನ್ನು ಕೆಎಸ್‌ಆರ್‌ಟಿಸಿ ಪರಿಚಯಿಸುತ್ತಿದೆ. ಮಂಗಳೂರು ಬಸ್‌ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಬಸ್‌ ಹೊರಡಲಿದೆ. ಬಳಿಕ ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಮುಂಡ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ, ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಚಿತ್ರಾಪುರ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಆಗಮಿಸಿ ಸಂಜೆ 6 ಗಂಟೆಗೆ ಮತ್ತೆ ಮಂಗಳೂರು ಬಸ್‌ ನಿಲ್ದಾಣವನ್ನು ತಲುಪಲಿದೆ. ನರ್ಮ್‌ ಸಾರಿಗೆಯಲ್ಲಿ ವಯಸ್ಕರಿಗೆ 400 ರು. ಮತ್ತು ಮಕ್ಕಳಿಗೆ (6ರಿಂದ 12 ವರ್ಷ) 300 ರು. ದರ ನಿಗದಿಪಡಿಸಲಾಗಿದೆ. ಶಕ್ತಿ ಯೋಜನೆ ಅನ್ವಯ ಇಲ್ಲ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಈ ದಸರಾ ಪ್ಯಾಕೇಜ್‌ ಅನ್ವಯ ಆಗುವುದಿಲ್ಲ. ಮಹಿಳಾ ಪ್ರಯಾಣಿಕರು ಕೂಡ ನಿಗದಿತ ದರ ನೀಡಿಯೇ ಪ್ರಯಾಣ ಮಾಡಬೇಕು ಎನ್ನುತ್ತಾರೆ ಕೆಎಸ್ಸಾರ್ಟಿಸಿ ಅಧಿಕಾರಿಗಳು. ಮುಂಗಡ ಬುಕ್ಕಿಂಗ್‌ ಸೌಲಭ್ಯ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಈ ಬಾರಿ ನವರಾತ್ರಿ ದಸರಾ ಹಬ್ಬಕ್ಕೆ ಟೂರ್‌ ಬಸ್‌ ಪ್ಯಾಕೇಜ್‌ ಆರಂಭಿಸಲಾಗುತ್ತಿದೆ. ಕಳೆದ ಬಾರಿ ಪ್ರವಾಸಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಈ ಬಾರಿ ಅ.15 ರಿಂದ 24ರ ವರೆಗೆ ದಸರಾ ದರ್ಶನ ಬಸ್‌ ವಿವಿಧ ಕಡೆಗಳಿಗೆ ಸಂಚರಿಸಲಿದೆ. ಮುಂಗಡ ಬುಕ್ಕಿಂಗ್‌ಗಾಗಿ www.ksrtc.in ಅಥವಾ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗ(9663211553) ಸಂಪರ್ಕಿಸಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ