ಕೇಣಿ ಬಂದರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳ ಭವಿಷ್ಯ ಏನು?

KannadaprabhaNewsNetwork |  
Published : Sep 22, 2025, 01:01 AM IST
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತ ಸಾರ್ವಜನಿಕ ಸಭೆಯಲ್ಲಿ ಯೋಜನೆಗೆ  ವ್ಯಾಪಕ ವಿರೋಧ ವ್ಯಕ್ತವಾಯಿತು. | Kannada Prabha

ಸಾರಾಂಶ

ಸಾರ್ವಜನಿಕ ಸಭೆಯಲ್ಲಿ ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ಸೇರಿ ಒಕ್ಕೊರಲಿನಿಂದ ಯೋಜನೆಯನ್ನು ವಿರೋಧಿಸಿದರು.

ವಸಂತಕುಮಾರ್ ಕತಗಾಲ

ಕಾರವಾರ: ಕೇಣಿ ವಾಣಿಜ್ಯ ಬಂದರು ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳ ಬಗ್ಗೆ ಈಚೆಗೆ ಸಾರ್ವಜನಿಕ ಅಹವಾಲು ಸಭೆ ನಡೆದು, ಯೋಜನೆ ಬಗ್ಗೆ ಸಾರ್ವತ್ರಿಕವಾಗಿ ವಿರೋಧ ವ್ಯಕ್ತವಾಗಿದೆ. ಹಾಗಿದ್ದರೆ ಈ ಯೋಜನೆಗಳ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಕಾಡುತ್ತಿದೆ.

ಕುತೂಹಲಕರ ಸಂಗತಿ ಎಂದರೆ ಅಂಕೋಲಾದಲ್ಲಿ ನಡೆದ ಕೇಣಿ ಬಂದರು ಕುರಿತು ಸಾರ್ವಜನಿಕ ಸಭೆಯಲ್ಲಿ ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ಸೇರಿ ಒಕ್ಕೊರಲಿನಿಂದ ಯೋಜನೆಯನ್ನು ವಿರೋಧಿಸಿದರು. ಪರಿಸರವಾದಿಗಳು, ಪರಿಸರ, ಕಡಲ ವಿಜ್ಞಾನಿಗಳು, ಮೀನುಗಾರರು, ರೈತರು ಸೇರಿದಂತೆ ಎಲ್ಲರೂ ಯೋಜನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ವಾಣಿಜ್ಯ ಬಂದರು ಯೋಜನೆಯನ್ನು ರದ್ದುಗೊಳಿಸುವಂತೆ ಪಟ್ಟು ಹಿಡಿದರು. ಸಭೆಯಲ್ಲಿ ಪಾಲ್ಗೊಂಡ ಶೇ. 99ರಷ್ಟು ಜನತೆ ಯೋಜನೆಯ ವಿರೋಧಿಗಳಾಗಿದ್ದರು. ನಮ್ಮ ಪರಿಸರ, ನೆಲ, ಜಲದ ಪರವಾಗಿದ್ದರು. ಒಂದಿಬ್ಬರು ಮಾತ್ರ ಯೋಜನೆಯ ಪರವಾಗಿ ಮಾತನಾಡಲು ಬಂದರೂ ಯೋಜನೆ ಬೇಕು ಎನ್ನಲು ಕಾರಣವೇ ಇರಲಿಲ್ಲ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಸಾರ್ವಜನಿಕ ಅಹವಾಲು ಸಭೆ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಗಲ್‌ನಲ್ಲಿ ಸೆ. 16ರಂದು ಹಾಗೂ ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪದಲ್ಲಿ ಸೆ. 18ರಂದು ನಡೆಯಿತು. ಈ ಎರಡೂ ಸಭೆಗಳಲ್ಲಿ ಜನತೆ ಸಾರಾಸಗಟಾಗಿ ಯೋಜನೆ ವಿರುದ್ಧ ಅರ್ಜಿ ಸಲ್ಲಿಸಿದರು. ಅಷ್ಟೇ ಅಲ್ಲ ಮಾತನಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಗೇರುಸೊಪ್ಪ ಸಭೆಯಲ್ಲಂತೂ 5-6 ಸಾವಿರ ಜನರು ಪಾಲ್ಗೊಂಡಿದ್ದು ಸಾರ್ವಜನಿಕ ಅಹವಾಲು ಸಭೆ ಯೋಜನೆ ವಿರುದ್ಧ ಜನಾಂದೋಲನದಂತೆ ಕಾಣಿಸಿತು.

ಈಗ ಕೇಣಿ ಬಂದರು ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅಹವಾಲು ಆಲಿಕೆ ಸಭೆಯಲ್ಲಿ ಸಂಪೂರ್ಣ ವಿರೋಧ ವ್ಯಕ್ತವಾದಾಗ ಯೋಜನೆ ರದ್ದುಪಡಿಸಬೇಕಾದ ಒತ್ತಡ ಸರ್ಕಾರದ ಮೇಲಿದೆ. ಈ ಹಿಂದೆ ತದಡಿ ಬಾರ್ಜ್ ಮೌಂಟೆಂಡ್ ವಿದ್ಯುತ್ ಯೋಜನೆ ಬಗ್ಗೆಯೂ ನಡೆದ ಅಹವಾಲು ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ರದ್ದುಪಡಿಸಲಾಗಿತ್ತು. ಆದರೆ ಕೈಗಾ ಅಣು ವಿದ್ಯುತ್ ಯೋಜನೆ 5 ಮತ್ತು 6ನೇ ಘಟಕ ನಿರ್ಮಾಣಕ್ಕೆ ತೀವ್ರ ವಿರೋಧದ ನಡುವೆಯೂ ಸರ್ಕಾರ ಅನುಮತಿ ನೀಡಿತ್ತು.

ಸ್ಥಳೀಯರು ಹಾಗೂ ಜನತೆಯ ಸಂಪೂರ್ಣ ವಿರೋಧ ಇದ್ದರೂ ಸರ್ಕಾರ ಯೋಜನೆ ಜಾರಿಗೆ ಮುಂದಾದರೆ ಸಾರ್ವಜನಿಕ ಅಹವಾಲು ಸಭೆ ನಡೆಸಿದ ಔಚಿತ್ಯ ಏನು? ಸಭೆ ನಡೆಸಿದ್ದೂ ಕೇವಲ ಜನತೆಯ ಕಣ್ಣಿಗೆ ಮಣ್ಣೆರಚಲು ಮಾಡಿದ ನಾಟಕವೇ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಜತೆಗೆ ಈ ಯೋಜನೆಗಳು ಜಾರಿಯಾದರೆ ಸಾರ್ವಜನಿಕ ಅಹವಾಲು ಸಭೆಯ ಮೇಲೆ ಜನತೆ ವಿಶ್ವಾಸ ಕಳೆದುಕೊಳ್ಳಲಿದ್ದಾರೆ.

ಸಾರ್ವಜನಿಕ ಅಹವಾಲು ಸಭೆಯ ವಿಶ್ವಾಸಾರ್ಹತೆ ಉಳಿಯಬೇಕೆಂದರೆ ಕೇಣಿ ವಾಣಿಜ್ಯ ಬಂದರು ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಎರಡೂ ಯೋಜನೆಗಳನ್ನು ಸರ್ಕಾರ ರದ್ದು ಮಾಡಬೇಕು. ಇಲ್ಲದಿದ್ದಲ್ಲಿ ಪೂರ್ವನಿಗದಿತ ಯೋಜನೆಗೆ ಸಾರ್ವಜನಿಕ ಅಹವಾಲು ಸಭೆ ಎಂಬ ನಾಟಕ ಮಾಡಲಾಗಿದೆ ಎನ್ನುವುದು ಸಾಬೀತಾಗಲಿದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಅಹವಾಲು ಸಭೆಯಲ್ಲಿ ವಿಜ್ಞಾನಿಗಳು, ತಜ್ಞರು ಅಧ್ಯಯನಪೂರ್ಣ ಮಾಹಿತಿ ನೀಡಿದ್ದಾರೆ. ಪ್ರಶ್ನಿಸಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರಿಸುವುದು ಸಭೆ ನಡೆಸಿದವರ ಜವಾಬ್ದಾರಿ. ಸರ್ಕಾರ ಜನರ ಧ್ವನಿಗೆ ಮಹತ್ವ ನೀಡುವುದು ಹೌದಾದಲ್ಲಿ ಈ ಯೋಜನೆ ಜಾರಿಗೊಳ್ಳಲಾರದು ಎನ್ನುತ್ತಾರೆ ಪರಿಸರ ತಜ್ಞ ಶಿವಾನಂದ ಕಳವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌