ಖರ್ಗೆಗೂ ಸಚಿನ್ ಸೂಸೈಡ್‌ ಕೇಸ್‌ಗೆ ಏನು ಸಂಬಂಧ?

KannadaprabhaNewsNetwork | Published : Jan 9, 2025 12:47 AM

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ: ಬೀದರ್ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಬಗ್ಗೆ ಬಿಜೆಪಿ ಮುಖಂಡರು ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ರಾಜೀನಾಮೆಗಾಗಿ ಪ್ರತಿಭಟನೆ ನಡೆಸುತ್ತಿರುವುದು ಯಾವ ನ್ಯಾಯ. ಪ್ರಿಯಾಂಕ್‌ ಖರ್ಗೆಗೂ ಆತ್ಮಹತ್ಯೆ ಪ್ರಕರಣಕ್ಕೂ ಏನು ಸಂಬಂಧ ಎಂದು ರಾಜ್ಯ ಬಿಜೆಪಿ ನಾಯಕರು ಸಾಬೀತುಪಡಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ: ಬೀದರ್ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಬಗ್ಗೆ ಬಿಜೆಪಿ ಮುಖಂಡರು ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ರಾಜೀನಾಮೆಗಾಗಿ ಪ್ರತಿಭಟನೆ ನಡೆಸುತ್ತಿರುವುದು ಯಾವ ನ್ಯಾಯ. ಪ್ರಿಯಾಂಕ್‌ ಖರ್ಗೆಗೂ ಆತ್ಮಹತ್ಯೆ ಪ್ರಕರಣಕ್ಕೂ ಏನು ಸಂಬಂಧ ಎಂದು ರಾಜ್ಯ ಬಿಜೆಪಿ ನಾಯಕರು ಸಾಬೀತುಪಡಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿನ್‌ ಡೆತ್ ನೋಟ್‌ನಲ್ಲಿ ಸಚಿವರ ಹೆಸರಿಲ್ಲ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದರೂ. ಬಿಜೆಪಿಯವರು ಮಾಡುತ್ತಿರುವ ಆರೋಪ ನೈತಿಕವಾಗಿದೆಯೇ ಎಂದು ಪ್ರಶ್ನಿಸಿದರು. ರಾಜ್ಯ ಬಿಜೆಪಿ ಮುಖಂಡರು ರಾಜಕೀಯ ಜ್ಞಾನವಿಲ್ಲದೆ ಮಾತನಾಡುತ್ತಿದ್ದಾರೆ. ಸಂವಿಧಾನದ ಬದ್ಧತೆಯ ಮೇಲೆ ಪಾರದರ್ಶಕವಾಗಿ ಆಡಳಿತ ಮಾಡುತ್ತಿರುವ ರಾಜ್ಯ ಸರ್ಕಾರದ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಜನರ ಆಶೀರ್ವಾದ ಇರುವವರೆಗೂ ರಾಜ್ಯ ಸರ್ಕಾರಕ್ಕೆ ಯಾವ ಕಂಠಕವೂ ಬರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಮಾನಸಿಕ ಕಿರುಕುಳ ನೀಡಿದರು. ಅದು ಸತ್ಯವಾಯಿತೆ?. ಸಿ.ಟಿ.ರವಿ ಮಹಿಳಾ ಸಚಿವೆಯ ಮೇಲೆ ಇಲ್ಲಸಲ್ಲದ ಮಾತುಗಳನ್ನಾಡಿ ಅವಮಾನಿಸಿದ್ದಾರೆ. ಇದು ರಾಜ್ಯದ ಮಹಿಳೆಯರಿಗೆ ಮಾಡಿದ ದೊಡ್ಡ ಅಪಮಾನ. ಕೇಂದ್ರ ಸಚಿವ ಅಮಿತ್ ಷಾ ಅವರು ಡಾ.ಅಂಬೇಡ್ಕರ್ ಅವರನ್ನು ಅಪಮಾನಿಸುತ್ತಾರೆ. ಸಂಸದ ರಮೇಶ್ ಜಿಗಜಿಣಗಿ ಕೇಂದ್ರ ಸಚಿವರ ಮಾತನ್ನ ಸಮರ್ಥಿಸಿಕೊಳ್ಳುತ್ತಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಖರ್ಗೆ ಅವರು ನನಗೆ ಸುಪಾರಿ ನೀಡಿದ್ದಾರೆ ಎನ್ನುವ ಮಾತು ಅವರ ಹುದ್ದೆಗೆ ಘನತೆ ತರುವಂತದ್ದಲ್ಲ. ರಾಜಕಾರಣ ಸತ್ಯ ಮತ್ತು ಸಂವಿಧಾನ ಬದ್ಧವಾಗಿ ಇರಬೇಕೆ ಹೊರತು ಅಸಂಬದ್ಧ ಮಾತುಗಳು ಅಸಂಬದ್ಧ ವಿಚಾರಗಳನ್ನ ಒಳಗೊಂಡಿರಬಾರದು. ಸಚಿವ ಪ್ರಿಯಾಂಕ್‌ ಖರ್ಗೆ ಅವರ ಮೇಲೆ ಮಾಡುತ್ತಿರುವ ಆರೋಪಗಳನ್ನು ತಕ್ಷಣವೇ ಬಿಜೆಪಿ ಮುಖಂಡರು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಡಿಎಸ್‌ಎಸ್‌ ಮುಖಂಡ ವೈ.ಸಿ ಮಯೂರ ಮಾತನಾಡಿ, ಸಚಿವ ಪ್ರಿಯಾಂಕ್‌ ಖರ್ಗೆ ಅವರ ಮೇಲೆ ಮಾಡುತ್ತಿರುವ ಆರೋಪಗಳು ಸಾಬೀತಾಗಿದ್ದರೆ ಬಿಜೆಪಿಗರು ಅದರ ಮಾಹಿತಿ ನೀಡಿ. ಒಬ್ಬ ದಲಿತ ಸಚಿವರ ಮೇಲೆ ಅವಹೇಳನಕಾರಿಯಾಗಿ ಮಾತನಾಡಿ ಅವರ ಮನೆಗೆ ಮುತ್ತಿಗೆ ಹಾಕುವುದು, ಪ್ರತಿಭಟಿಸುತ್ತಿರುವುದನ್ನು ನೋಡಿ ನಾವು ಸುಮ್ಮನಿರಬೇಕೆ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಸಚಿವ ಪ್ರಿಯಾಂಕ್‌ ಖರ್ಗೆಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಎಂ.ಎ.ಖತೀಬ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ, ರಮೇಶ್ ನಾಟಿಕರ್ ಇದ್ದರು.

Share this article