ಗ್ಯಾರಂಟಿ ಅನುಷ್ಠಾನ ಸಮಿತಿಗಳ ಕೆಲಸವೇನು?

KannadaprabhaNewsNetwork |  
Published : Jun 14, 2026, 02:30 AM IST
ಗೃಹಲಕ್ಷ್ಮಿ | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರ ನೀಡಿದ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನವಾಗಲಿ, ಅರ್ಹರಿಗೆ ಯೋಜನೆ ತಲುಪಲಿ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಏನು ಮಾಡುತ್ತಿದೆ? ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ನಡೆಸಿ ದಬಾಯಿಸಲು ಮಾತ್ರ ಸೀಮಿತವೇ? ಸರ್ಕಾರದ ಹಣ ದುರುಪಯೋಗ ಆಗುತ್ತಿದ್ದರೂ ತಡೆಗಟ್ಟಲು ಯಾಕೆ ಸಾಧ್ಯವಾಗಲಿಲ್ಲ?

ಗೃಹಲಕ್ಷ್ಮಿ ಯೋಜನೆ ಹಣ ಮೃತರ ಖಾತೆ ಹಾಗೂ ತೆರಿಗೆ ಪಡೆದವರ ಖಾತೆಗೂ ಜಮೆ ಆಗುತ್ತಿರುವುದರಿಂದ ಪ್ರಜ್ಞಾವಂತರಿಂದ ಕೇಳಿ ಬರುತ್ತಿರುವ ಪ್ರಶ್ನೆಗಳಿವು.

ರಾಜ್ಯ ಕಾಂಗ್ರೆಸ್‌ ಸರ್ಕಾರ ನೀಡಿದ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನವಾಗಲಿ, ಅರ್ಹರಿಗೆ ಯೋಜನೆ ತಲುಪಲಿ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿದೆ.

ರಾಜ್ಯಮಟ್ಟದಲ್ಲಿ ಒಂದು, ಜಿಲ್ಲಾ ಮಟ್ಟ, ಪ್ರತಿ ಕ್ಷೇತ್ರವಾರು ಹಾಗೂ ಬಿಬಿಪಿಎಂ ವ್ಯಾಪ್ತಿಯಲ್ಲಿ 5. ಹೀಗೆ ರಾಜ್ಯದಲ್ಲಿ ಬರೋಬ್ಬರಿ 239 ಸಮಿತಿಗಳಿವೆ. ರಾಜ್ಯಮಟ್ಟದ ಅಧ್ಯಕ್ಷರಿಗೆ ಪ್ರತಿ ತಿಂಗಳು ₹ 50 ಸಾವಿರ ಹಾಗೂ ಸಚಿವ ಸಂಪುಟದ ಸ್ಥಾನಮಾನ, ಜಿಲ್ಲಾಧ್ಯಕ್ಷರಿಗೆ ₹ 40 ಸಾವಿರ, ಜಿಲ್ಲಾಮಟ್ಟದ ಉಪಾಧ್ಯಕ್ಷರಿಗೆ ₹ 10 ಸಾವಿರ, ತಾಲೂಕಾಧ್ಯಕ್ಷರಿಗೆ (ಕ್ಷೇತ್ರ) ₹ 25 ಸಾವಿರ ಹಾಗೂ ಸಭೆಗೆ ಹಾಜರಾದ ಸದಸ್ಯರಿಗೆ ಭತ್ಯೆಯಾಗಿ ₹ 1100ರಂತೆ ನೀಡಲಾಗುತ್ತಿದೆ.

ಇವರು ಆಯಾ ತಿಂಗಳಲ್ಲಿ ಗ್ಯಾರಂಟಿ ಸ್ಕೀಂನ ಪರಿಸ್ಥಿತಿ ಏನಾಗಿದೆ? ಎಲ್ಲಿಯಾದರೂ ದುರುಪಯೋಗ ಆಗುತ್ತಿದೆಯೋ ಹೇಗೆ? ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳೇನು? ಜತೆಗೆ ಅರ್ಹ ಫಲಾನುಭವಿಗಳಿಗೆ ಸರಿಯಾಗಿ ಮುಟ್ಟುತ್ತದೆಯೋ ಇಲ್ವೋ ಎಂಬುದನ್ನು ಪರಿಶೀಲಿಸಬೇಕು. ಅದರಂತೆ ಪ್ರತಿ ತಿಂಗಳು ಇವರು ಸಭೆ ನಡೆಸುತ್ತಾರೆ. ಆದರೆ, ಅಲ್ಲಿ ಯೋಜನೆಗಳಿಗೆ ತಾವೇ ಸುಪ್ರೀಂಗಳಂತೆ ವರ್ತಿಸುತ್ತಾರೆ. ಎಂಎಲ್‌ಎ, ಸಚಿವರಂತೆ ಅಧಿಕಾರಿಗಳನ್ನು ದಬಾಯಿಸುತ್ತಾರೆ. ಹೀಗಾಗಿ ಗ್ಯಾರಂಟಿ ಅನುಷ್ಠಾನದ ಸಭೆ ಕೂಡ ಕೆಡಿಪಿ ಸಭೆಗಳಂತಾಗುತ್ತದೆಯೇ ಹೊರತು ದುರುಪಯೋಗ ತಡೆಯಲು ಸಾಧ್ಯವಾಗುತ್ತಿಲ್ಲ ಎಂಬುದು ಬಹಿರಂಗ ಸತ್ಯ.

ಇದಕ್ಕೆ ಸಾಕ್ಷಿಯೆಂಬಂತೆ ಗೃಹಲಕ್ಷ್ಮಿ ಯೋಜನೆ. ಗೃಹಲಕ್ಷ್ಮಿ ಯೋಜನೆಯಡಿ ಸರಿಸುಮಾರು 2.4 ಕೋಟಿಗೂ ಅಧಿಕ ಮಹಿಳೆಯರಿಗೆ ಹಣ ಜಮೆಯಾಗುತ್ತಿದೆ. ಅದರಲ್ಲೀಗ 1.95 ಲಕ್ಷ ಗೃಹಲಕ್ಷ್ಮಿಯರು ಮೃತಪಟ್ಟಿದ್ದರೂ, 1.94 ಲಕ್ಷ ಜನ ತೆರಿಗೆದಾರರಿದ್ದರೂ ಅವರ ಖಾತೆಗಳಿಗೆಲ್ಲ ಹಣ ಜಮೆಯಾಗಿದೆ. ಮೃತಪಟ್ಟವರು ಎಷ್ಟು ತಿಂಗಳ ಹಿಂದೆ ಮೃತಪಟ್ಟಿದ್ದಾರೆ? ಎಷ್ಟು ತಿಂಗಳ ಹಣ ಜಮೆಯಾಗಿದೆ? ಎಂಬುದು ಅಧಿಕಾರಿಗಳಿಗೂ ಗೊತ್ತಿಲ್ಲ. ಸಮಿತಿ ಅಧ್ಯಕ್ಷರಾಗಲಿ, ಸದಸ್ಯರಿಗಾಗಲಿ ಗೊತ್ತಿಲ್ಲ. ಎಷ್ಟು ತಿಂಗಳ ಹಿಂದೆ ಮೃತಪಟ್ಟಿದ್ದಾರೆ? ಎಷ್ಟು ಕಂತು ಹೀಗೆ ಜಮೆಯಾಗಿದೆ ಎಂಬುದನ್ನು ತಿಳಿಯಲು ಇದೀಗ ಅಂಗನವಾಡಿ ಕಾರ್ಯಕರ್ತೆಯರಿಗೆ ಜವಾಬ್ದಾರಿ ನೀಡಲಾಗಿದೆ. ಇವರು ಕರೆ ಮಾಡಿದರೆ ಸಂಬಂಧಿಕರು ಸರಿಯಾದ ಮಾಹಿತಿಯನ್ನೇ ನೀಡುತ್ತಿಲ್ಲ ಎಂಬ ಗೋಳು ಅಂಗನವಾಡಿ ಕಾರ್ಯಕರ್ತೆಯರದ್ದು.

ಇದೀಗ ಸರ್ಕಾರವೇ ದುರುಪಯೋಗ ತಡೆಯಲು ಇ-ಕೆವೈಸಿ, ಬಯೋಮೆಟ್ರಿಕ್‌ ಪದ್ಧತಿ ಜಾರಿಗೊಳಿಸುತ್ತಿದೆ. ಹಾಗಾದರೆ 3 ವರ್ಷದಿಂದ ಅನುಷ್ಠಾನ ಸಮಿತಿ ಮಾಡಿರುವ ಕೆಲಸಗಳೇನು? ಬರೀ ಅಧಿಕಾರಿಗಳನ್ನು ದಬಾಯಿಸಲು ಸರ್ಕಾರ ನೇಮಿಸಿದೆಯೇ? ಸರ್ಕಾರದಿಂದ ಗೌರವಧನ ಪಡೆದು ದುರುಪಯೋಗ ತಡೆಯುವಲ್ಲಿ ಸಾಧ್ಯವಾಗದಿದ್ದರೆ ಮತ್ತೇಕೆ ಬೇಕು ಈ ಸಮಿತಿಗಳು? ಎಂಬೆಲ್ಲ ಪ್ರಶ್ನೆಗಳನ್ನು ಪ್ರಜ್ಞಾವಂತರು ಕೇಳುತ್ತಿದ್ದಾರೆ.

ಇನ್ನಾದರೂ ಅನುಷ್ಠಾನ ಸಮಿತಿಗಳು ತಾವೇನು ಕೆಲಸ ಮಾಡಬೇಕು. ಏನು ಮಾಡುತ್ತಿವೆ ಎಂಬುದರ ಅವಲೋಕನ ಮಾಡಿಕೊಳ್ಳಬೇಕು ಎಂಬ ಒಕ್ಕೊರಲಿನ ಆಗ್ರಹ ಸಾರ್ವಜನಿಕರದ್ದು.

ಗ್ಯಾರಂಟಿ ಯೋಜನೆಗಳಲ್ಲಿ ಆಗುತ್ತಿರುವ ದುರುಪಯೋಗದ ಬಗ್ಗೆ ನೋಡಿದರೆ ಅನುಷ್ಠಾನ ಸಮಿತಿಗಳು ಇಷ್ಟು ಏನು ಮಾಡಿದವು ಎಂಬ ಪ್ರಶ್ನೆ ಕಾಡುತ್ತಿದೆ. ಈ ರೀತಿ ಸಮಿತಿ ಮಾಡುವ ಬದಲು ಅವುಗಳನ್ನು ಕೈ ಬಿಟ್ಟು ಶಾಸಕರಿಗೆ, ಸಚಿವರಿಗೆ ಜವಾಬ್ದಾರಿ ನೀಡಿದರೆ ಒಳಿತು ಎಂದೆನಿಸುತ್ತದೆ.

ರಮೇಶ ಪಾಟೀಲ, ಸಾರ್ವಜನಿಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಅತಂತ್ರ
ಸಂವಿಧಾನದಿಂದ ಬಾಲ ಕಾರ್ಮಿಕ ಪದ್ಧತಿ ದೂರವಿಡಲು ಸಾಧ್ಯ