ಹುಬ್ಬಳ್ಳಿ: ಸೆಟಲ್‌ಮೆಂಟ್‌ಗಳಲ್ಲಿ ಹುಟ್ಟಿದ ಪ್ರತಿ ಮಗುವೂ ಅಪರಾಧಿ ಮನಸ್ಥಿತಿಯಲ್ಲಿ ಬದುಕುವುದು ಯಾವ ನ್ಯಾಯ? ಚಿತ್ರ ನಿರ್ಮಾಪಕಿ ಅನನ್ಯಾ ಆಯಾಚಿತ್ ಇಂಥದೊಂದು ಪ್ರಶ್ನೆಯನ್ನು ಎತ್ತಿ ಅಲ್ಲಿ ನೆರೆದಿದ್ದವರ ಹೃದಯ ಕಲಕಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಲೇಖಕಿ ಹೇಮಾ ಪಟ್ಟಣಶೆಟ್ಟಿ, ನೋವುಗಳನ್ನು ಹೇಳಿಕೊಳ್ಳಲು ಸಿನಿಮಾ ದೊಡ್ಡ ಮಾಧ್ಯಮ. ಒಂದು ಸಣ್ಣ ಸಮುದಾಯಗಳ ಸಂಕಟಗಳಿಗೆ ದನಿಯಾಗಲು ಹೊರಟಿರುವ ಅನನ್ಯಾ ಅವರ ಯತ್ನ ನಿಜಕ್ಕೂ ಮಾದರಿ. ಸ್ವತಃ ಸಮುದಾಯಗಳ ಬಳಿ ಹೋಗಿ, ಅವರಿಂದ ಮಾಹಿತಿ ಸಂಗ್ರಹಿಸಿ, ಸಿನಿಮಾ ಮಾಡುತ್ತಿದ್ದಾರೆ. ಸಮುದಾಯದ ಜನತೆ ಯಾವುದೇ ಮುಜುಗರ ಇಲ್ಲದೇ ನಿಮ್ಮ ನೋವುಗಳನ್ನು ಮುಕ್ತವಾಗಿ ಹಂಚಿಕೊಳ್ಳಿ ಎಂದು ನೆರೆದಿದ್ದವರಿಗೆ ಕಿವಿಮಾತು ಹೇಳಿದರು.
ಧಾರವಾಡ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ, ನನ್ನ ರಂಗಭೂಮಿಯ ವೃತ್ತಿಜೀವನದಲ್ಲಿ ಸೆಟ್ಲೆಮೆಂಟ್ ನಿವಾಸಿಗಳೊಂದಿಗೆ ಬಹಳಷ್ಟುಸಲ ಬೆರೆತಿರುವೆ. ನಂಬಿಕೆ, ವಿಶ್ವಾಸ, ಪ್ರೀತಿಗೆ ಅವರು ಹೆಸರುವಾಸಿ. ಇಂದು ಸೆಟ್ಲೆಮೆಂಟ್ ಕುರಿತಂತೆ ಸಿನಿಮಾ ಆಗುತ್ತಿರುವುದು ಸಂತಸ ತಂದಿದೆ. ಅವಕಾಶ ಸಿಕ್ಕರೆ ಇದೇ ವಿಷಯವನ್ನು ನಾಟಕಕ್ಕೆ ಅಳವಡಿಸಿ ಪ್ರದರ್ಶನ ಮಾಡುವುದಾಗಿ ಆಶಯ ವ್ಯಕ್ತಪಡಿಸಿದರು.ಉದ್ಯಮಿ ಕಾಡಪ್ಪ ಮೈಸೂರು ಮಾತನಾಡಿ, ಸೆಟ್ಲಮೆಂಟ್ ಮಕ್ಕಳು ಶಿಕ್ಷಣ ಪಡೆಯುವುದು ಮುಖ್ಯ. ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕು ಎಂದು ಹೇಳಿದರು.
ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ಸೆಟ್ಲೆಮೆಂಟ್ ನಿರ್ಲಕ್ಷಿತ ಸಮುದಾಯಗಳು ಈಗಲೂ ಶೋಷಣೆ, ಅವಮಾನದಲ್ಲೇ ನರಳುತ್ತಿವೆ. ಎಷ್ಟೋ ಕುಟುಂಬಗಳಿಗೆ ಸೂರು, ಶಿಕ್ಷಣ, ಉದ್ಯೋಗ, ಸರ್ಕಾರಿ ಸೌಲಭ್ಯಗಳು ದಕ್ಕಿಲ್ಲ. ಇಂಥ ಸಿನಿಮಾಗಳು ಅವರ ಸಂಕಷ್ಟಮಯ ಬದುಕಿನ ಮೇಲೆ ಬೆಳಕು ಚೆಲ್ಲಿ, ಸರ್ಕಾರ ಮತ್ತು ಸಮಾಜದ ಕಣ್ಣು ತೆರೆಸಿ ಸಮುದಾಯ ಮುಖ್ಯವಾಹಿನಿಗೆ ಬರಲಿ ಎಂದರು.ನಾಟಕಕಾರ ಮಹಾದೇವ ಹಡಪದ, ನಿವೃತ್ತ ಡಿಸಿಪಿ ಪ್ರತಾಪನ್, ಮಾರುತಿ ಕಟ್ಟಿಮನಿ, ಡಾ. ಗುರುಪ್ರಸಾದ, ಡಾ. ಶ್ರೀನಿವಾಸ ಜೋಶಿ ಮತ್ತು ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ, ಕೊಪ್ಪಳ, ಹಾವೇರಿ, ಅಣ್ಣಿಗೇರಿ ಮುಂತಾದೆಡೆಯಿಂದ ಸಮುದಾಯದ ಮುಖಂಡರು ಈ ಸಂವಾದದಲ್ಲಿ ಭಾಗವಹಿಸಿದ್ದರು.