ಸಿಂದೂರ ಯಶಸ್ಸಿಗೆ ರಾಜ್ಯಾದ್ಯಂತ ಪೂಜೆ

KannadaprabhaNewsNetwork |  
Published : May 09, 2025, 12:36 AM IST
8ಕೆಎಂಎನ್ ಡಿ14 | Kannada Prabha

ಸಾರಾಂಶ

‘ಆಪರೇಷನ್ ಸಿಂದೂರ’ ಮೂಲಕ ಪಾಕಿಸ್ತಾನದ ಉಗ್ರರ ನೆಲೆಗಳ ನಾಶಕ್ಕೆ ಭಾರತೀಯ ಸೇನೆ ಕೈಗೊಂಡಿರುವ ಕಾರ್‍ಯಾಚರಣೆಗೆ ಯಶಸ್ಸು ಕೋರಿ ರಾಜ್ಯದ ಮುಜರಾಯಿ ದೇಗುಲಗಳಲ್ಲಿ ವಿಶೇಷ ಸಂಕಲ್ಪದೊಂದಿಗೆ ಪೂಜೆ ನಡೆಸುವಂತೆ ಸರ್ಕಾರ ಆದೇಶ ನೀಡಿದ್ದು, ಅದರಂತೆ ರಾಜ್ಯಾದ್ಯಂತ ದೇವಾಲಯಗಳಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಆಪರೇಷನ್ ಸಿಂದೂರ’ ಮೂಲಕ ಪಾಕಿಸ್ತಾನದ ಉಗ್ರರ ನೆಲೆಗಳ ನಾಶಕ್ಕೆ ಭಾರತೀಯ ಸೇನೆ ಕೈಗೊಂಡಿರುವ ಕಾರ್‍ಯಾಚರಣೆಗೆ ಯಶಸ್ಸು ಕೋರಿ ರಾಜ್ಯದ ಮುಜರಾಯಿ ದೇಗುಲಗಳಲ್ಲಿ ವಿಶೇಷ ಸಂಕಲ್ಪದೊಂದಿಗೆ ಪೂಜೆ ನಡೆಸುವಂತೆ ಸರ್ಕಾರ ಆದೇಶ ನೀಡಿದ್ದು, ಅದರಂತೆ ರಾಜ್ಯಾದ್ಯಂತ ದೇವಾಲಯಗಳಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ಬೆಂಗಳೂರಿನಲ್ಲಿ ಮಲ್ಲೇಶ್ವರಂನಲ್ಲಿನ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಬೆಂಗಳೂರಿನ ಹನುಮಂತನಗರದ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಶತ್ರುಸಂಹಾರಕ್ಕಾಗಿ ವಿಶೇಷ ದುರ್ಗಾ ಹೋಮ ನಡೆಸಲಾಯಿತು. ‘ಆಪರೇಷನ್‌ ಸಿಂದೂರ’ದ ಯಶಸ್ಸಿಗಾಗಿ ಸೈನಿಕರನ್ನು ಅಭಿನಂದಿಸಿ, ಅವರಿಗೆ ಮುಂದೆಯೂ ಸರ್ವರೀತಿಯ ಯಶಸ್ಸನ್ನು ಕೋರಿ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಪೂಜೆ ಸಲ್ಲಿಸಿದರು.

ಮಂಗಳೂರಿನ ಕದ್ರಿ ಶ್ರೀಮಂಜುನಾಥ ದೇವಸ್ಥಾನ, ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿಗಳಲ್ಲಿಯೂ ವಿಶೇಷ ಪೂಜೆ ಸಲ್ಲಿಸಲಾಯಿತು. ಕುದ್ರೋಳಿಯ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಪೂಜೆಯ ನಂತರ ಮಹಿಳೆಯರ ಹಣೆಗೆ ಸಿಂದೂರ ಇಟ್ಟು ಸಂಭ್ರಮಿಸಲಾಯಿತು.

ಉಡುಪಿಯ ಕಡಿಯಾಳಿದಲ್ಲಿ ಮಹಿಷಾಸುರ ಮರ್ಧಿನಿ ದೇವಿಗೆ ದೀಪಾರಾಧನೆ ನಡೆಸಿ, ದೇಶದ ಸೇನೆಯ ವಿಜಯಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಯಶಸ್ಸಿನ ಸಂಕೇತವಾಗಿ ಭಕ್ತರು ಸಾಲು, ಸಾಲು ದೀಪಗಳನ್ನು ಬೆಳಗಿದರು. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಕೊಡವೂರು ಶಿರ್ಡಿ ಸಾಯಿಬಾಬಾ ಮಂದಿರಲ್ಲಿ ಪೂಜೆ ಮತ್ತು ಸಿಂದೂರ ವಿತರಣೆ ನಡೆಸಲಾಯಿತು.

ಉಡುಪಿಯ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣನಿಗೆ ವಿಶೇಷ ಮಂಗಳಾರತಿ ನಡೆಸಿ, ಭಾರತೀಯ ಸೇನೆಯ ಶ್ರೇಯಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು. ಪುತ್ತಿಗೆ ಕಿರಿಯ ಪಟ್ಟದ ಸುಶ್ರೀಂದ್ರ ತೀರ್ಥ ಶ್ರೀಪಾದರು ಕೃಷ್ಣನಿಗೆ ‘ಚಕ್ರಧಾರಿ ಯೋಧ ಕೃಷ್ಣ’ನ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ವಿಶೇಷವೆಂದರೆ ಕೃಷ್ಣನ ಒಂದು ಕೈಯಲ್ಲಿ ಚಕ್ರವಿದ್ದರೆ, ಇನ್ನೊಂದು ಕೈಯಲ್ಲಿ ಬೆಳ್ಳಿಯ ಸಿಂದೂರ ತಟ್ಟೆ ಇತ್ತು. ಆಪರೇಷನ್ ಸಿಂದೂರದ ವಿಜಯದ ಮತ್ತು ಸೇನೆಯ ಮುಂದಿನ ಕಾರ್ಯಾಚರಣೆಗೆ ಕೃಷ್ಣನ ಅಭಯದ ಪ್ರತೀಕವಾಗಿ ಶ್ರೀಗಳು ಈ ಅಲಂಕಾರ ಮಾಡಿದ್ದರು.

ಮಡಿಕೇರಿಯ ಓಂಕಾರೇಶ್ವರ ದೇವಾಲಯ, ಮಡಿಕೇರಿ ತಾಲೂಕಿನ ಭಾಗಮಂಡಲದ ಭಗಂಡೇಶ್ವರ ದೇವಾಲಯ, ತಲಕಾವೇರಿ ದೇವಾಲಯಗಳಲ್ಲಿ ಹೆಮ್ಮೆಯ ಸೇನಾ ಯೋಧರಿಗೆ ಮತ್ತಷ್ಟು ಶಕ್ತಿ ತುಂಬಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.

ಬೇಲೂರಿನ ಐತಿಹಾಸಿಕ ಚನ್ನಕೇಶವ ದೇಗುಲದಲ್ಲಿ ಸೈನಿಕರ ಶ್ರೇಯೋಭಿವೃದ್ದಿಗಾಗಿ ಸಂಕಲ್ಪ, ಅಷ್ಟೊತ್ತರ ಸ್ತುತಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಮಂಡ್ಯದ ಚಾಮುಂಡೇಶ್ವರಿನಗರದ ಶ್ರೀ ಶನೇಶ್ಚರ ದೇವಾಲಯದಲ್ಲಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಮಹಾಮೃತ್ಯುಂಜಯ ಹೋಮ ನಡೆಸಿ, ಭಾರತೀಯ ಸೈನಿಕರ ಕ್ಷೇಮಕ್ಕೆ ಪ್ರಾರ್ಥಿಸಲಾಯಿತು.

ಕೊಪ್ಪಳ ತಾಲೂಕಿನ ಐತಿಹಾಸಿಕ ಹುಲಿಗೆಮ್ಮಾ ದೇವಸ್ಥಾನದಲ್ಲಿ ದೇವಿಯ ಮುಂದೆ ಮಾಂಗಲ್ಯ ಸರ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳ್ಳಾರಿ ನಗರದ ಕನಕದುರ್ಗಮ್ಮ ಸೇರಿ ಬಳ್ಳಾರಿ ಜಿಲ್ಲೆಯ 619 ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಅರ್ಚನೆಗಳು ನಡೆದವು. ಬೀದರ್‌ನಲ್ಲಿ ಭಾರತೀಯ ಗೋ ಪರಿವಾರದ ನೇತೃತ್ವದಲ್ಲಿ ಕೆಇಬಿ ಹತ್ತಿರದ ಹನುಮಾನ ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ನೆರವೇರಿಸಿ, ಹನುಮಾನ ಚಾಲೀಸ್ ಪಠಣ ಮಾಡಿದರು. ಚಾಮರಾಜನಗರದ ಲಕ್ಷ್ಮೀ ಜನಾರ್ದನ ದೇವಾಲಯದಲ್ಲಿ ಪೂಜೆಯ ವೇಳೆ ದೇವರು ಬಲಭಾಗದಿಂದ ಹೂವಿನ ಪ್ರಸಾದ ನೀಡಿದ್ದು, ಇದು ಶುಭ ಸಂಕೇತವೆಂದು ಭಕ್ತರು ಸಂಭ್ರಮಿಸಿದ್ದಾರೆ. ಇದೇ ವೇಳೆ, ಮೈಸೂರಿನ ಚಾಮುಂಡಿಬೆಟ್ಟ, ನಂಜನಗೂಡಿನ ಶ್ರೀಕಂಠೇಶ್ವರ, ಕಳಸದ ಕಳಸೇಶ್ವರ, ಗೋಕರ್ಣದ ಮಹಾಬಲೇಶ್ವರ ಸೇರಿ ಇತರ ದೇವಾಲಯಗಳಲ್ಲಿಯೂ ವಿಶೇಷ ಪೂಜೆಗಳು ನಡೆದವು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ