ಕನ್ನಡಪ್ರಭ ವಾರ್ತೆ ವಿಧಾನಸಭೆ
ಪ್ರತಿಪಕ್ಷದವರಿಗೆ ವಿವೇಕವೂ ಇಲ್ಲ, ವಿಚೇಚನೆಯೂ ಇಲ್ಲ. ನಮ್ಮ ಸರ್ಕಾರಕ್ಕೆ ವಿವೇಕವೂ ಇದೆ, ವಿವೇಚನೆಯೂ ಇದೆ ಎಂದು ಹೇಳಿದರು.
ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸಲು ಪ್ರಸ್ತಾವನೆ ಮಂಡಿಸಿ ಮಾತನಾಡಿದ ಕಾಂಗ್ರೆಸ್‌ನ ಎ.ಎಸ್.ಪೊನ್ನಣ್ಣ ಅವರು, ಪೂರ್ಣ ಭಾಷಣ ಮಾಡದ ರಾಜ್ಯಪಾಲರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಎಸ್. ಸುರೇಶ್ ಕುಮಾರ್, ‘ರಾಜ್ಯಪಾಲರು ಭಾಷಣ ಮಾಡಿಲ್ಲ ಎನ್ನುವುದಾದರೆ ವಂದನಾ ನಿರ್ಣಯ ಯಾಕೆ ಮಂಡಿಸುತ್ತೀರಿ? ಸರ್ಕಾರಕ್ಕೆ ವಿವೇಕ ಹಾಗೂ ರಾಜ್ಯಪಾಲರಿಗೆ ವಿವೇಚನೆ ಇರಬೇಕು ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನಮಗೆ ವಿವೇಕವೂ ಇದೆ. ವಿವೇಚನೆಯೂ ಇದೆ. ವಿರೋಧಪಕ್ಷಕ್ಕೆ ಮೊದಲು ಇದು ಇರಬೇಕು. ಸಂವಿಧಾನದಲ್ಲಿ ಏನಿದೆ ಎಂಬುದನ್ನು ಪೊನ್ನಣ್ಣ ಹೇಳುತ್ತಿದ್ದಾರೆ. ರಾಜ್ಯಪಾಲರ ಬಗ್ಗೆ ಮಾತನಾಡಲೇಬಾರದೇ? ನಿಮ್ಮ ಆಕ್ಷೇಪವಿದ್ದರೆ ನೀವು ಮಾತನಾಡುವಾಗ ಹೇಳಿ’ ಎಂದರು.ಮನರೆಗಾ ಯೋಜನೆ ರದ್ದುಪಡಿಸಿ ಉದ್ಯೋಗ ಖಾತ್ರಿ ಯೋಜನೆಯಿಂದ ಮಹಾತ್ಮಗಾಂಧೀಜಿ ಹೆಸರು ತೆಗೆದಿದ್ದೀರಿ. ಇದೀಗ ಮಹಾತ್ಮಗಾಂಧೀಜಿ ಪ್ರತಿಮೆ ಮುಂದೆ ಕುಳಿತುಕೊಳ್ಳಲು ಪ್ರತಿಭಟನೆ ನಡೆಸಿದ್ದೀರಿ. ಗಾಂಧೀಜಿ ಪ್ರತಿಮೆ ಮುಂದೆ ಕುಳಿತುಕೊಳ್ಳಲು ಯಾವ ನೈತಿಕತೆ, ಪ್ರಾಮಾಣಿಕತೆ ಇದೆ ನಿಮಗೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.ಮನರೇಗಾಗಾಗಿ ಜೈಲಿಗೆ ಹೋಗಲೂ ಸಿದ್ಧ:
ಗ್ರಾಮೀಣ ಭಾಗದ ಬಡವರು, ಕೂಲಿ ಕಾರ್ಮಿಕರಿಗೆ ಉದ್ಯೋಗ ಗ್ಯಾರಂಟಿ ನೀಡುತ್ತಿದ್ದ ಮನರೇಗಾ ಯೋಜನೆ ಮರು ಜಾರಿಯಾಗುವುವರೆಗೂ ಕಾಂಗ್ರೆಸ್ ಹೋರಾಟ ನಿಲ್ಲುವುದಿಲ್ಲ. ಇದಕ್ಕಾಗಿ ನಾವು ಜೈಲಿಗೆ ಹೋಗಲೂ ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಪ್ರೀಡಂ ಪಾರ್ಕ್‌ನಲ್ಲಿ ಕೆಪಿಸಿಸಿ ವತಿಯಿಂದ ‘ಮನರೇಗಾ ಬಚಾವೋ ಆಂದೋಲನ’ದ ಅಂಗವಾಗಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಹಾಗೂ ರಾಜ್ ಭವನ ಚಲೋ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರತಿ ತಾಲ್ಲೂಕು ಮಟ್ಟದಲ್ಲಿ 5 ಕಿ.ಮೀ. ಪಾದಯಾತ್ರೆ ನಡೆಸುತ್ತೇವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಹೋರಾಟ ಮಾಡುತ್ತೇವೆ. ಪೊಲೀಸರು ಬೇಕಿದ್ದರೆ ನಮ್ಮ ಮಂತ್ರಿಗಳನ್ನೂ ಸೇರಿ ಎಲ್ಲ ನಾಯಕರನ್ನೂ ಬಂಧಿಸಲಿ. ನಾವು ಜೈಲಿಗೆ ಹೋಗಲೂ ಸಿದ್ಧ ಎಂದು ಹೇಳಿದರು. ನಮ್ಮ ಉದ್ಯೋಗ ಖಾತರಿ ಯೋಜನೆಯನ್ನು ವಿಶ್ವವೇ ಗಮನಿಸಿತ್ತು. ಈ ಯೋಜನೆ ಬಹಳ ಅತ್ಯುತ್ತಮ ಯೋಜನೆ ಎಂದು ವಿಶ್ವಬ್ಯಾಂಕ್ 2013ರಲ್ಲಿ ಶ್ಲಾಘಿಸಿತ್ತು. 5700 ಪಂಚಾಯ್ತಿಗಳಿದ್ದು, ಪ್ರತಿ ವರ್ಷ ನಮ್ಮ ರಾಜ್ಯದಲ್ಲಿ ಈ ಯೋಜನೆಯಿಂದ 6 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿತ್ತು. ಬೇರೆಯವರ ಜಮೀನಿನಲ್ಲಿ ಕೂಲಿಗೆ ಹೋಗಲು ಹಿಂಜರಿಯುವವರಿಗೆ ತಮ್ಮ ಜಮೀನಿನಲ್ಲೇ ಕೆಲಸ ಮಾಡಿ ಕೂಲಿ ಪಡೆಯುವ ಅವಕಾಶ ಈ ಯೋಜನೆಯಲ್ಲಿತ್ತು. ಇಂತಹ ಐತಿಹಾಸಿಕ ತೀರ್ಮಾನವನ್ನು ಯುಪಿಎ ಸರ್ಕಾರ ತೆಗೆದುಕೊಂಡಿತ್ತು. ಅಂತಹ ಜನಪರ ಕಾಯ್ದೆಯನ್ನು ಇಂದಿನ ಕೇಂದ್ರ ಸರ್ಕಾರ ರದ್ದು ಮಾಡಿರುವುದು ಖಂಡನೀಯ ಎಂದರು.ನನ್ನ ಕ್ಷೇತ್ರ ಕನಕಪುರದಲ್ಲಿ ವರ್ಷಕ್ಕೆ 200 ಕೋಟಿ ರು. ಅನುದಾನ ಬಳಸಿಕೊಂಡು ಅನೇಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಆಮೂಲಕ ಈ ಯೋಜನೆ ಪರಿಣಾಮಕಾರಿ ಜಾರಿಗೊಳಿಸಿದ ತಾಲೂಕಿನಲ್ಲಿ ಅಗ್ರಸ್ಥಾನ ಪಡೆದಿದೆ. ಈ ಯೋಜನೆಯಲ್ಲಿ ಡಿ.ಕೆ. ಶಿವಕುಮಾರ್ ಹಣ ಹೊಡೆದಿದ್ದಾನೆ ಎಂಬ ಅನುಮಾನದ ಮೇಲೆ ಕೇಂದ್ರ ಸರ್ಕಾರ ತನಿಖೆ ಮಾಡಿಸಿತು. ನಂತರ ಅವರೇ ನಮ್ಮ ಕೆಲಸ ನೋಡಿ ಪ್ರಶಸ್ತಿ ನೀಡಿದರು. ಯಾವುದೋ ಒಂದೆರಡು ಕಡೆ ಏನೋ ಆಗಿದೆ ಅಂತ ಇಡೀ ಕಾಯ್ದೆಯನ್ನೇ ರದ್ದುಪಡಿಸುವುದು ಎಷ್ಟು ಸರಿ? ಎಂದರು.ಕೋಟ್:ಬಡ ಕೂಲಿಕಾರರಿಗೆ ಹಣ ಇಲ್ವಾ?ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಂಡವಾಳ ಶಾಹಿಗಳ 23 ಲಕ್ಷ ಕೋಟಿ ರು.ನಷ್ಟು ಸಾಲ ಮನ್ನಾ ಮಾಡಿದೆ. ಮನರೇಗಾ ಯೋಜನೆಗೆ ಖರ್ಚಾಗುತ್ತಿದ್ದುದು 1 ಲಕ್ಷ ಕೋಟಿ ರು. ಮಾತ್ರ. ಬಡ, ಕೂಲಿ ಕಾರ್ಮಿಕರ ಉದ್ಯೋಗ ಖಾತ್ರಿಗೆ ಕೇಂದ್ರ ಸರ್ಕಾರ ಅಷ್ಟು ಹಣ ಕೊಡಲಾಗುವುದಿಲ್ಲವೇ? ಇದು ಜನವಿರೋಧಿ ನೀತಿ. ಇದರ ವಿರುದ್ಧ ಇಡೀ ದೇಶದ ಜನರು ಹೋರಾಟಕ್ಕೆ ಬರಬೇಕು.- ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ.