ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಅರಳೀಸೆರೆಕೊಪ್ಪಲು ಗ್ರಾಮದಲ್ಲಿ ₹1 ಕೋಟಿ ವೆಚ್ಚದ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಜೆಡಿಎಸ್‌ಗಾಗಿ ಶ್ರಮಿಸಿದ ನಿಷ್ಠಾವಂತ ನಾಯಕರನ್ನು ಪಕ್ಷದಿಂದ ಹೊರಹಾಕುವ ಮೂಲಕ ಅವರು ದೋಷ ಮಾಡಿಕೊಂಡರೇ ಹೊರತು ನನ್ನಿಂದ ಜೆಡಿಎಸ್‌ಗೆ ಯಾವುದೇ ದೋಷವಾಗಿಲ್ಲ ಎಂದು ತಿಳಿಸಿದರು.
ಕಳೆದ 35 ವರ್ಷಗಳ ಹಿಂದಿನ ಚುನಾವಣೆಯಲ್ಲಿ ತಾಲೂಕಿನಿಂದ ಸ್ಪರ್ಧಿಸಿದ್ದ ಜನತಾದಳದ ಅಭ್ಯರ್ಥಿ ಕೇವಲ 3 ಸಾವಿರ ಮತ ಪಡೆದಿದ್ದರು. ನಂತರ 1994ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಲ್.ಆರ್.ಶಿವರಾಮೇಗೌಡ ಗೆಲುವು ಸಾಧಿಸಿದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ವಿ.ಧರಣೇಂದ್ರಬಾಬು ಎರಡನೇ ಸ್ಥಾನ, ಜನತಾದಳದ ಅಭ್ಯರ್ಥಿಯಾಗಿದ್ದ ಎಚ್.ಟಿ.ಕೃಷ್ಣಪ್ಪ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದರು ಎಂದರು.ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ 1994ರಲ್ಲಿ ನಾನು ಜಿಪಂ ಉಪಾಧ್ಯಕ್ಷನಾಗಿ ಎಸ್.ಡಿ.ಜಯರಾಂ ಅವರ ಜೊತೆಗೂಡಿ ಜೆಡಿಎಸ್ ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದೇನೆ. ಈ ನಡುವೆ ದಿ.ಕೆ.ಎನ್.ನಾಗೇಗೌಡರು ಮತ್ತು ಎಲ್.ಆರ್.ಶಿವರಾಮೇಗೌಡರಿಗೋಸ್ಕರ ದೇವೇಗೌಡರಾದಿಯಾಗಿ ಜಿಲ್ಲೆಯ ಜನತಾದಳದ ನಾಯಕರೆಲ್ಲರೂ ನನ್ನ ವಿರುದ್ಧ ನಿಂತರು. ಆರೋಗ್ಯ ಸಮಸ್ಯೆಯಿಂದ ಎಸ್.ಡಿ.ಜಯರಾಂ ಅವರು ನಿಧನರಾದ ನಂತರ ಜನತಾದಳದ ನಾಯಕರು ಕೊಡಬಾರದ ಹಿಂಸೆ ಕೊಟ್ಟರೂ ಎಲ್ಲವನ್ನೂ ಸಹಿಸಿಕೊಂಡು ನಾನು ಏಕಾಂಗಿಯಾಗಿ ಹೋರಾಟ ಮಾಡಿದ್ದೇನೆ ಎಂದು ತಿಳಿಸಿದರು.
ಇಷ್ಟೆಲ್ಲಾ ಆದಮೇಲೂ ಕೂಡ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವಂತಾಯಿತು ಎಂದು ಈ ಹಿಂದಿನ ರಾಜಕಾರಣವನ್ನು ನೆನಪಿಸಿಕೊಂಡ ಸಚಿವರು, ಯಾರ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳಾಗುತ್ತಿವೆ ಎಂಬುದನ್ನು ತಾಲೂಕಿನ ಜನರು ಈಗಲಾದರೂ ಅರ್ಥೈಸಿಕೊಳ್ಳಬೇಕು ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಕಾಂಗ್ರೆಸ್ ಮುಖಂಡ ಸುನಿಲ್ ಲಕ್ಷ್ಮೀಕಾಂತ್, ಎಂ.ಪ್ರಸನ್ನ, ಬೋನಗೆರೆ ಸುರೇಶ್, ಕೆಆರ್‌ಐಡಿಎಲ್‌ನ ಇಇ ಸೋಮಶೇಖರ್, ಗ್ರಾಮದ ಮುಖಂಡರಾದ ಗಂಗಪ್ಪ, ದೇವರಾಜು, ಶ್ರೀಕಂಠ, ನಂದೀಶ್, ರವಿ, ಕೂಚಹಳ್ಳಿ ನವೀನ್ ಕುಮಾರ್ ಸೇರಿದಂತೆ ಹಲವರು ಇದ್ದರು.