ಬಳ್ಳಾರಿ: ಜಿಲ್ಲೆಯ ಅಭಿವೃದ್ಧಿ ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೊಡುಗೆ ಏನು ಎಂದು ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪ ರೆಡ್ಡಿ ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹುಬ್ಬಳ್ಳಿಗೆ ಸೀಮಿತರಾಗಿದ್ದಾರೆ. ಎಂದೂ ಕೂಡ ಬಳ್ಳಾರಿಗೆ ಬಂದು ಈ ಭಾಗದ ಪ್ರಗತಿಯ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಚರ್ಚಿಸಿಲ್ಲ. ಬಳ್ಳಾರಿಯ ರಿಂಗ್ ರಸ್ತೆ ಏನಾಗಿದೆ? ಬೈಪಾಸ್ ರಸ್ತೆಯ ಪರಿಸ್ಥಿತಿ ಹೇಗಿದೆ? ಮೂಲಸೌಕರ್ಯ ಏನಾಗಬೇಕಾಗಿದೆ ಎಂದು ಸ್ಥಳೀಯ ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳ ಜೊತೆ ಒಂದೇ ಒಂದು ಸಭೆ ನಡೆಸಿಲ್ಲ. ಇದೀಗ ಚುನಾವಣೆ ಬಂದಿತೆಂದು ಬಳ್ಳಾರಿಗೆ ಬಂದು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾರೆ. ಈಶಾನ್ಯ ಪದವೀಧರ ಕ್ಷೇತ್ರದಿಂದ ಈ ಹಿಂದೆ ಗೆದ್ದಿದ್ದ ನಿಮ್ಮ ಪಕ್ಷದ ಅಭ್ಯರ್ಥಿ ಈ ಭಾಗಕ್ಕೆ ಮಾಡಿದ ಕೆಲಸವೇನು ಎಂದು ಹೇಳುವುದು ಬಿಟ್ಟು, ದೇಶದ ವಿಚಾರಗಳನ್ನು ಮಾತನಾಡಿ ಹೋಗುತ್ತಾರೆ ಎಂದು ಟೀಕಿಸಿದರು.
ಭ್ರಮನಿರಸನ:ಈಶಾನ್ಯ ಪದವೀಧರ ಕ್ಷೇತ್ರದ ಏಳು ಜಿಲ್ಲೆಗಳಲ್ಲಿ ಈಗಾಗಲೇ ಪ್ರಚಾರ ಕಾರ್ಯ ನಡೆಸಲಾಗಿದೆ. ಕಾಂಗ್ರೆಸ್-ಬಿಜೆಪಿದಿಂದ ಗೆದ್ದ ಅಭ್ಯರ್ಥಿಗಳ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ. ಕಾಲೇಜುಗಳು, ಉಪನ್ಯಾಸಕರು, ಶಿಕ್ಷಕರು, ಅತಿಥಿ ಉಪನ್ಯಾಸಕರು ಹೀಗೆ ಯಾರನ್ನೇ ಮಾತನಾಡಿಸಿದರೂ ಈ ಹಿಂದೆ ಕಾಂಗ್ರೆಸ್-ಬಿಜೆಪಿಯಿಂದ ಗೆದ್ದವರ ಬಗ್ಗೆ ತೀವ್ರ ಬೇಸರದ ಮಾತುಗಳನ್ನಾಡುತ್ತಾರೆ ಎಂದರು.
ಕಳೆದ ಚುನಾವಣೆಯಲ್ಲಿ ಕುಲಗೆಟ್ಟ ಮತಗಳಿಂದ ನಾನು ಸೋಲಬೇಕಾಯಿತು. ಈ ಬಾರಿ ಕ್ಷೇತ್ರದ ಪದವೀಧರರು ನನ್ನ ಪರವಾಗಿದ್ದಾರೆ. ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದೇನೆ. ಆರು ಬಾರಿ ಚುನಾವಣೆಯಲ್ಲೂ ಬೀದರ್, ಗುಲ್ಬರ್ಗದವರಿಗೆ ಅವಕಾಶ ಮಾಡಿಕೊಡಲಾಗಿದ್ದು, ನಮಗೊಂದು ಅವಕಾಶ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.