ಬೇಕೆನಿಸಿದ್ದು ಬಾರದು, ಬೇಡವೆನಿಸಿದ್ದು ನಿಲ್ಲದು!

KannadaprabhaNewsNetwork |  
Published : Feb 25, 2026, 02:30 AM IST
ಶರಾವತಿ ಕಣಿವೆ | Kannada Prabha

ಸಾರಾಂಶ

ಉತ್ತರ ಕನ್ನಡದಲ್ಲಿ ಜನತೆಗೆ ಬೇಡವಾದ, ಹೊರೆಯಾದ ಯೋಜನೆಗಳೇ ಒಂದೊಂದಾಗಿ ಬರಸಿಡಿಲಿನಂತೆ ಅಪ್ಪಳಿಸುತ್ತಿವೆ. ಹೊನ್ನಾವರ, ಕೇಣಿ ವಾಣಿಜ್ಯ ಬಂದರುಗಳು, ಶರಾವತಿ ಪಂಪ್ಡ್‌ ಸ್ಟೊರೇಜ್, ಬೇಡ್ತಿ, ಅಘನಾಶಿನಿ.... ಹೀಗೆ ವಿವಿಧ ಯೋಜನೆಗಳ ವಿರುದ್ಧ ಜನತೆ ನಿರಂತರವಾಗಿ ಹೋರಾಡುವಂತಾಗಿದೆ. ಇವುಗಳ ಬಗ್ಗೆ ಕನ್ನಡಪ್ರಭ ಸರಣಿ ವರದಿ ಆರಂಭಿಸುತ್ತಿದೆ.

ಜಿಲ್ಲೆಯಾದ್ಯಂತ ಯೋಜನೆಗಳ ದಳ್ಳುರಿ । ನಿರಂತರ ಹೋರಾಟ

ಕ್ಯಾಂಪೇನ್ ಸ್ಟೋರಿ-1

ಉತ್ತರ ಕನ್ನಡದಲ್ಲಿ ಜನತೆಗೆ ಬೇಡವಾದ, ಹೊರೆಯಾದ ಯೋಜನೆಗಳೇ ಒಂದೊಂದಾಗಿ ಬರಸಿಡಿಲಿನಂತೆ ಅಪ್ಪಳಿಸುತ್ತಿವೆ. ಹೊನ್ನಾವರ, ಕೇಣಿ ವಾಣಿಜ್ಯ ಬಂದರುಗಳು, ಶರಾವತಿ ಪಂಪ್ಡ್‌ ಸ್ಟೊರೇಜ್, ಬೇಡ್ತಿ, ಅಘನಾಶಿನಿ.... ಹೀಗೆ ವಿವಿಧ ಯೋಜನೆಗಳ ವಿರುದ್ಧ ಜನತೆ ನಿರಂತರವಾಗಿ ಹೋರಾಡುವಂತಾಗಿದೆ. ಇವುಗಳ ಬಗ್ಗೆ ಕನ್ನಡಪ್ರಭ ಸರಣಿ ವರದಿ ಆರಂಭಿಸುತ್ತಿದೆ.ವಸಂತಕುಮಾರ್ ಕತಗಾಲ

ಕನ್ನಡಪ್ರಭ ವಾರ್ತೆ ಕಾರವಾರಉತ್ತರಕನ್ನಡ ಜಿಲ್ಲೆ ಯೋಜನೆಯ ಭಾರದಲ್ಲಿ ತೊಳಲಾಡುತ್ತಿದೆ. ಒಂದರ ಮೇಲೊಂದು ಯೋಜನೆಗಳು ಧುತ್ತೆಂದು ಬಂದು ಬಹುತೇಕ ಜಿಲ್ಲೆಯ ಎಲ್ಲ ಭಾಗಗಳಿಗೂ ಒಂದೊಂದು ಯೋಜನೆಯ ಬಿಸಿ ತಟ್ಟತೊಡಗಿದೆ. ಎಲ್ಲೆಡೆ ಪ್ರತಿಭಟನೆ, ಹೋರಾಟ ನಡೆಯುತ್ತಿದೆ.

ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಹೋರಾಟದ ಕಿಚ್ಚು ಎಬ್ಬಿಸಿದೆ.ಬೇಡ್ತಿ ವರದಾ ನದಿ ಜೋಡಣೆ ಯೋಜನೆ ಬೇಡ್ತಿ (ಗಂಗಾವಳಿ) ನದಿಯುದ್ದಕ್ಕೂ ಕೋಲಾಹಲವನ್ನು ಉಂಟುಮಾಡಿದ್ದು, ಜನತೆ ಹೋರಾಟದ ಕಹಳೆ ಮೊಳಗಿಸಿದ್ದಾರೆ.ಅಘನಾಶಿನಿ ವೇದಾವತಿ ನದಿ ಜೋಡಣೆ ಶಿರಸಿ ಸಿದ್ಧಾಪುರ ಹಾಗೂ ಕುಮಟಾದಲ್ಲಿ ನದಿಪಾತ್ರದ ಜನತೆಯ ಆಕ್ರೋಶ ಹುಟ್ಟಿಸಿದ್ದು ಹೋರಾಟ ಶುರುವಾಗಿದೆ.ಅಂಕೋಲಾದ ಕೇಣಿಯಲ್ಲಿ ಉದ್ದೇಶಿತ ಗ್ರೀನ್‌ಫೀಲ್ಡ್ ಬಂದರಿನ ವಿರುದ್ಧ ಸ್ಥಳೀಯರು ಸುಮಾರು ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.ಹೊನ್ನಾವರದ ಕಾಸರಕೋಡನಲ್ಲಿ ಉದ್ದೇಶಿತ ವಾಣಿಜ್ಯ ಬಂದರು ವಿರುದ್ದ ನಿರಂತರವಾಗಿ ಹೋರಾಟ ನಡೆದಿದೆ.ಈ ಹಿಂದೆಯೂ ಜಿಲ್ಲೆಯಲ್ಲಿ ಬೃಹತ್ ಯೋಜನೆಗಳ ವಿರುದ್ದ ಅವ್ಯಾಹತವಾಗಿ ಚಳವಳಿ, ಪ್ರತಿಭಟನೆ, ಪಾದಯಾತ್ರೆ ಹೀಗೆ ವಿವಿಧ ರೀತಿಯ ಹೋರಾಟ ನಡೆದಿದ್ದನ್ನು ಸ್ಮರಿಸಬಹುದು.ಕೈಗಾ ಅಣು ವಿದ್ಯುತ್ ಯೋಜನೆ, ಸೀಬರ್ಡ ನೌಕಾನೆಲೆ ಯೋಜನೆ, ಶರಾವತಿ ಟೇಲರೇಸ್, ಸುಪಾ, ಕೊಡಸಳ್ಳಿ, ಕದ್ರಾ ಮತ್ತಿತರ ಜಲವಿದ್ಯುತ್ ಯೋಜನೆಗಳು, ತದಡಿಯ ಬಾರ್ಜ್ ಮೌಂಟೆಂಡ್ ಯೋಜನೆ, ರನ್ ಅಪ್ ದಿ ರಿವರ್ ಯೋಜನೆ..... ಹೀಗೆ ಹಲವು ಯೋಜನೆಗಳ ವಿರುದ್ಧ ಜಿಲ್ಲೆಯ ಜನತೆ ಹೋರಾಟ ನಡೆಸಿದ್ದಾರೆ. ಈಗಲೂ ವಿವಿಧ ಯೋಜನೆಗಳ ವಿರುದ್ಧ ಹೋರಾಡುತ್ತಿದ್ದಾರೆ. ಜಿಲ್ಲೆಯ ಜನರಿಗೆ ನಿರಂತರ ಹೋರಾಟದಲ್ಲಿಯೆ ಇರುವಂತಾಗಿದೆ. ಹೋರಾಟದ ಬದುಕು ಇವರದ್ದು.ಇದರ ಜೊತೆಗೆ ಪಟ್ಟಾ ನೀಡುವಂತೆ ಅರಣ್ಯಭೂಮಿ ಅತಿಕ್ರಮಣದಾರರು ದಶಕಕ್ಕೂ ಹೆಚ್ಚು ಕಾಲದಿಂದ ಹೋರಾಟದ ಹಾದಿಯಲ್ಲೆ ಇದ್ದಾರೆ.ಬೇರೆ ಬೇರೆ ಜಿಲ್ಲೆಯ ಜನತೆ ಜಿಲ್ಲೆಗೆ ಪೂರಕವಾದ ಯೋಜನೆಗಳು ಬರಲಿ ಎಂದು ಹೋರಾಟದಲ್ಲಿ ತೊಡಗಿಕೊಂಡಿದ್ದರೆ, ಜಿಲ್ಲೆಯ ಜನತೆಗೆ ಮಾರಕ ಯೋಜನೆಗಳನ್ನು ಹೊಡೆದೋಡಿಸುವುದರಲ್ಲೆ ನಿರತರಾಗಿರಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಸುಸಜ್ಜಿತ ಆಸ್ಪತ್ರೆ ಬೇಕು, ಆಧುನಿಕ ಶಿಕ್ಷಣ ಕೋರ್ಸ್‌ಗಳು ಆರಂಭವಾಗಬೇಕು, ಯುವ ಜನತೆಯ ಕೈಗೆ ಉದ್ಯೋಗ ನೀಡುವ ಪರಿಸರ ಪೂರಕ ಕೈಗಾರಿಕೆಗಳು ಬೇಕು, ಸಾರಿಗೆ ಸಂಪರ್ಕ ಸುಧಾರಿಸಬೇಕು ಹಾಗೂ ಜನಪರ ಯೋಜನೆಗಳಿಗಾಗಿ ಬೀದಿಗಿಳಿಯಲು ಸಮಯವೇ ಇಲ್ಲ. ಇದೂ ಕೂಡ ಅಭಿವೃದ್ಧಿಯಲ್ಲಿ ಜಿಲ್ಲೆ ಹಿಂದುಳಿಯಲು ಪ್ರಮುಖ ಕಾರಣಗಳಲ್ಲೊಂದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಂದೇ ವಾರದಲ್ಲಿ ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು
ಹಾಲು ಉತ್ಪಾದಕ ಸಂಘಗಳು ರೈತರ ಬೆನ್ನೆಲುಬು