ಕುಷ್ಟಗಿ: ತಾಲೂಕಿನ ಎಂಎಸ್‌ಪಿಟಿಎಸ್ (ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಪೂರಕ ಆಹಾರ ತಯಾರಿಕಾ ಕೇಂದ್ರ) ಕೇಂದ್ರಕ್ಕೆ ಸೇರಿದ ಎರಡು ಚೀಲ ಗೋದಿ ಪಟ್ಟಣದ ಸಮೀಪದ ಕುರುಬನಾಳ ಹಳ್ಳದಲ್ಲಿ ಪತ್ತೆಯಾಗಿದ್ದು, ಇದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಸರ್ಕಾರ ಮಹಿಳಾ ಮತ್ತು ಮಕ್ಕಳ ಪೌಷ್ಟಿಕತೆಯ ಸಲುವಾಗಿ ವಿತರಿಸಿದ ಆಹಾರವಾಗಿರುವ ಈ ಗೋದಿ ಮೂಟೆ ಸಮೇತ ಹಳ್ಳದಲ್ಲಿ ಎಸೆದು ಹೋಗಲು ಕಾರಣವೇನು. ಈ ಗೋದಿ ಚೀಲಗಳ ಮೇಲೆ ಕುಷ್ಟಗಿ ತಾಲೂಕು ಎಂಎಸ್ಪಿಟಿಸಿ ಎಂದು ಸ್ಪಷ್ಟವಾಗಿ ನಮೂದಿಸಿದ್ದು, ಇಂತಹ ಕೆಲಸ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳಬೇಕಿದೆ.
ವಿಡಿಯೋ ವೈರಲ್: ಕುಷ್ಟಗಿ ಪಟ್ಟಣದ ನಿವಾಸಿಗಳು ವಾಯುವಿಹಾರಕ್ಕೆಂದು ತೆರಳಿದ ಸಂದರ್ಭದಲ್ಲಿ ಸಮೀಪದ ಕುರುಬನಾಳ ಹಳ್ಳದಲ್ಲಿ ಈ ಗೋದಿ ಚೀಲಗಳು ಕಂಡು ಬಂದಿದ್ದು, ಗೋದಿ ಚೀಲ ಹಾಗೂ ಹಳ್ಳದಲ್ಲಿ ಹರಿಯುವ ಗೋದಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈ ವಿಡಿಯೋ ವೈರಲ್ ಆಗಿದೆ.ಕಳೆದ ಎರಡು ವರ್ಷಗಳ ಹಿಂದೆ ಅಂಗನವಾಡಿ ಕೇಂದ್ರಗಳಿಗೆ ಗೋದಿ ಪೂರೈಕೆಯಾಗುತ್ತಿತ್ತು, ಇತ್ತೀಚಿಗೆ ಪೌಡರ್ ರೂಪದಲ್ಲಿ ಆಹಾರ ತಯಾರಿಸುವ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುತ್ತಿದ್ದು, ಈ ಗೋದಿ ಚೀಲಗಳು ಈಗ ಎಲ್ಲಿಂದ ಬಂದವು ಎಂಬದನ್ನು ಇಲಾಖೆಯ ಅಧಿಕಾರಿಗಳು ಹಾಗೂ ಎಂಎಸ್ಪಿಟಿಎಸ್ ಕೇಂದ್ರದವರು ಉತ್ತರಿಸಬೇಕಾಗಿದೆ.
ಕಳೆದ ಎರಡು ವರ್ಷಗಳಿಂದ ಅಂಗನವಾಡಿ ಕೇಂದ್ರಗಳಿಗೆ ಪೌಡರ್ ರೂಪದಲ್ಲಿಯೆ ಆಹಾರ ಸರಬರಾಜು ಆಗುತ್ತಿದೆ. ಹಳ್ಳದಲ್ಲಿ ಎಸೆಯಲಾಗಿರುವ ಗೋದಿ ಕುರಿತು ಎಂಎಸ್ಪಿಟಿಎಸ್ ಕೇಂದ್ರದವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು ಉತ್ತರ ನೀಡದಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಕ್ರಮಕ್ಕೆ ಮುಂದಾಗುತ್ತೇನೆದೆಂದು ಕುಷ್ಟಗಿ ಸಿಡಿಪಿಒ ಯಲ್ಲಮ್ಮ ಹಂಡಿ ತಿಳಿಸಿದ್ದಾರೆ.