ಕನ್ನಡಪ್ರಭ ವಾರ್ತೆ ಕಲಬುರಗಿ
ಭೀಮಾ ನದಿ ಬತ್ತಿ ಹೋಗಿದೆ ಜನ- ಜಾನುವಾರುಗಳ ಬಾಯಾರಿಕೆ ನೀಗಿಸಲು ತುರ್ತಾಗಿ ನದಿಯಲ್ಲಿ 5 ಟಿಎಂಸಿ ಕುಡಿಯುವ ನೀರನ್ನು ಹರಿಸುವಂತೆ ಆಗ್ರಹಿಸಿದ ಕಳೆದೊಂದು ವಾರದಿಂದ ಅಫಲ್ಪುರದಲ್ಲಿ ಆರಂಭವಾಗಿರುವ ಆಮರಣಾಂತ ಉಪವಾಸ ಹೋರಾಟ ಗುರುವಾರ 8ನೇ ದಿನಕ್ಕೆ ಕಾಸಿಟ್ಟಿದೆ.ಹೋರಾಟಗಾರ, ಜೆಡಿಎಸ್ ಮುಖಂಡ ಶಿವಕುಮಾರ ನಾಟೀಕಾರ್ ಅಮರಣ ಉಪವಾಸ ಸತ್ಯಾಗಹಕ್ಕೆ ತಾಲೂಕು, ಅಕ್ಕಪಕ್ಕದ ಭೀಮಾ ತೀರದಲ್ಲಿರುವ ತಾಲೂಕಿನ ಎಲ್ಲ ಹೋರಾಟಗಾರರು, ರಾಜಕೀಯ ನಾಯಕರು, ಹಾಲಿ, ಮಾಜಿ ಶಾಸಕರು, ಸಂಸದರ ಬೆಂಬಲ ದೊರಕಿದೆ. ಇದೊಂದು ನಾದೋಲನವಾಗಿ ರೂಪು ಪಡೆದಿದದು ಅದಾಗಲೇ ನಿನ್ನೆ ಅಫದಲ್ಪುರ ಬಂದ್ ಕೂಡಾ ನಡೆಸಿ ಯಶ ಕಾಣಲಾಗಿದೆ.
ಗುರುವಾರ ಹೋರಾಟದ ಟೆಂಟ್‌ಗೆ ಹೋರಾಟಗಾರ್ತಿ ಶೋಭಾ ಬಾಣಿ, ಅಫಜಲ್ಪುರ ವಕೀಲರ ಸಂಘದ ಸದಸ್ಯರು, ಇಂಡಿ ಜನತಾದಳ ಮುಖಂಡ ಬಿಡಿ ಪಾಟೀಲ್, ರಿತೇಶ ಗುತ್ತೇದಾರ್ ಸೇರಿದಂತೆ ಅನೇಕರು ಭೇಟಿ ಮಾಡಿ ಬೆಂಬಲ ಸೂಚಿಸಿದರಲ್ಲದೆ ಉಪವಾಸದಲ್ಲಿರುವ ಶಿವಕುಮಾರ್ ಆರೋಗ್ಯ ವಿಚಾರಿಸಿದರು.ನಮ್ಮ ರಾಜಕಾರಣಿಗಳಿಗೆ ಭೀಮಾ ಅಂದ್ರೆ ಗೊತ್ತಿಲ್ಲ:
ಹೋರಾಟದ ಟೆಂಟ್‌ನಲ್ಲಿ ಮಾತನಾಡಿದ ಮಾಜಿ ಜಿಪಂ ಸದಸ್ಯೆ, ಬಿಜೆಪಿ ಓಬಿಸಿ ಮೋರ್ಚಾ ಮುಖಂಡರಾದ ಶೋಭಾ ಬಾಣಿ ಮಾತನಾಡಿ, ಭೀಮಾ ಬತ್ತಲು ನಮ್ಮ ರಾಜಕಾರಣಿಗಳೇ ಕಾರಣ ಎಂದು ಹರಿಹಾಯ್ದರು.ಕಾವೇರಿ ನದಿಯಿದಂ ನೀರು ಹರಿಸೋ ವಿಚಾರದಾಗ ನಮ್ಮವರೇ ಅಲ್ಲಿ ಹೋಗಿ ಹೋರಾಟ ಮಾಡಿ ಬರತಾರ, ಭೀಮಾ ನದ್ಯಾಗ ನೀರಿಲ್ಲ ಅಂದ್ರ ಮೌನವಾಗ್ತಾರ, ಯಾಕಂದ್ರ ಭೀಮಾ ನದಿ ಒಣಗಿದ್ರ ಎಲ್ಲಾರ ಉಸುಕಿನ ದಂಧಾ ಓಕೆ, ಇಲ್ಲಂದ್ರ ಎಲ್ಲಾರು ಸಂಕಷ್ಟ. ಹೀಗಾಗಿ ಭೀಮಾ ನದಿ ವಿಚಾರದಾಗ ಯಾರಿಗೂ ನದಿಯೊಳಗ ನೀರೇ ಇರೋದು ಬೇಡವಾಗಿದೆ ಎಂದರು.
ನದ್ಯಾಗ ನೀರಿಲ್ಲಂದ್ರ ಜನ- ಜಾನುವಾರು ಸಂಕಷ್ಟವಾಗ್ತದ, ಪರಿಸರ ಹಾಳಾಗತದ ಅನ್ನೋರ ಪೈಕಿ ನಮ್ಮವರಿಲ್ಲ, ಉಸುಕ ಸಿಕ್ರ ಸಾಕು, ಹತ್ತಾರು ಟಿಪ್ಪರ್ ತುಂಬಿ ಹಣ ಸಂಪಾದಿಸೋಣ ಅನ್ನೋರು ಇವರೆಲ್ಲಾರು. ಹೀಂಗಾಗಿ ಭೀಮಾದಾಗ ನೀರ ಇರ್ಲಿಕ್ಕಿ ಸಾಧ್ಯವಾ? ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಲೇ ಭೀಮಾ ಬತ್ತಿ ಹೋಗಿದೆ. ರೈತರು, ಜಾನುವಾರುಗಳು ಸಂಕಷ್ಟದಲ್ಲಿವೆ ಎಂದು ದೂರಿದರು.ಮಹಾರಾಷ್ಟ್ರದಿಂದ ನಮಗೆ ಬರಬೇಕಿದ್ದ ಹಕ್ಕಿನ ನೀರನ್ನು ಕೇಳೋ ತಾಕತ್ತಿಲ್ಲ ಸರಕಾರಕ್ಕೆ, ಪಕ್ಕದ ನಮ್ಮದೇ ಪಾಲಿನ ಕೃಷ್ಣಾ ನೀರನ್ನ ಬಿಡಲು ಒತ್ತಾಯ ಮಾಡ್ತಿದ್ದಾರೆ, ಇವರಿಗೆ ಮಹಾರಾಷ್ಟ್ರದಿಂದ ನೀರು ಕೇಳಿ ಹರಿಸುವಂತಹ ಧೈರ್ಯವಿಲ್ಲವೆಂದು ಕಿಡಿ ಕಾರಿದರು.
ಭೀಮಾನದಿ ನೀರು ಕುಡ್ದೆ ಉಪವಾಸ ಕೊನೆಗೊಳಿಸುವ ಸಂಕಲ್ಪ:ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಉಪವಾಸ ಕೈಗೊಂಡಿರುವ ಶಿವಕುಮಾರ್ ನಾಟೀಕಾರ್ ಇವರು ಭೀಮಾ ನದಿಗೆ ನೀರು ಬಂದಾದ ಮೇಲೆ ಅದನ್ನು ಕುಡಿದೆ ಉಪವಾಸ ಸತ್ಯಾಗ್ರಹ ಕೊನೆ ಮಾಡೋದಾಗಿ ಹೇಳಿದ್ದಾರೆ.ಅವರು ಉಪವಾಸ ಕುಳಿತು ಇಂದಿಗೆ 8 ದಿನವಾಯ್ತು. ಆರೋಗ್ಯದಲ್ಲಿ ತುಂಬಾ ಏರುಪೇರು ಕಂಡಿದೆಯಾದರೂ ಅವರು ಹಠ ಬಿಡುತ್ತಿಲ್ಲ. ಸ್ಥಳದಲ್ಲೇ ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯರ ತಂಡ ಆ್ಯಂಬುಲೆನ್ಸ್ ಸಮೇತ ತಳ ಊರಿವೆ.
ಏತನ್ಮಧ್ಯೆ ಕಲಬುರಗಿ ಆರ್‌ಸಿ ಕೃಷ್ಣ ಬಾಜಪೇಯಿ ಪ್ರಯತ್ನ, ಶಾಸಕ ಎಂವೈ ಪಾಟೀಲರ ಪ್ರಯತ್ನದಿಂದಾಗಿ ನಾರಾಯಣಪುರದಿಂದ ಭೀಮೆಗೆ ಕೃಷ್ಣೆಯ ನೀರು ಹರಿಸುವ ಪ್ರಯತ್ನ ಶುರುವಾಗಿದೆ. ಈಗಾಗಲೇ ನೀರು ಐಬಿಸಿ ಕಾಲುವೆ ಮೂಲಕ ಬಳಗಾನೂರ ಕ್ಯಾನಲ್‌ನಿಂದ ಉಮರಾಣಿ ಬಾಂದಾರು, ಬಳಗಾನೂರ ಬಲಿ ಬಂದಿವೆ ಎನ್ನಲಾಗಿದ್ದು ಇಂದು ರಾತ್ರಿ ಅಥವಾ ನಾಳೆ ಬೆಳಗಿನೊಳಗೆ ಅಫಜಲ್ಪುರ ತಲುಪುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.