ಶಿರೋಳ ಗ್ರಾಮಸ್ಥರಿಗೆ ಜಲಜೀವನ ಭಾಗ್ಯ ಯಾವಾಗ?

KannadaprabhaNewsNetwork |  
Published : Apr 30, 2026, 02:15 AM IST
(27ಎನ್.ಆರ್.ಡಿ4 ಕುಡಿಯುವ ಶುದ್ದ ನೀರಿಗಾಗಿ ಜನರು ಶುದ್ದ ಘಟದ ಮುಂದೆ ಸರದಿ ಸಾಲಿನಲ್ಲಿ ನಿಂತಿರವದು.)  | Kannada Prabha

ಸಾರಾಂಶ

ಪ್ರಧಾನಿ ದೇಶದ ಪ್ರತಿಯೊಬ್ಬರಿಗೂ ಶುದ್ಧ ನೀರು ಸಿಗಲಿ ಎಂಬ ಸದಾಶಯದಿಂದ ಜಲಜೀವನ ಮಿಷನ್ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಲಾಭ ಶಿರೋಳ ಗ್ರಾಮಸ್ಥರಿಗೆ ಸಮರ್ಪಕವಾಗಿ ಸಿಗುವುದು ಯಾವಾಗ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ಪ್ರಧಾನಿ ದೇಶದ ಪ್ರತಿಯೊಬ್ಬರಿಗೂ ಶುದ್ಧ ನೀರು ಸಿಗಲಿ ಎಂಬ ಸದಾಶಯದಿಂದ ಜಲಜೀವನ ಮಿಷನ್ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಲಾಭ ಶಿರೋಳ ಗ್ರಾಮಸ್ಥರಿಗೆ ಸಮರ್ಪಕವಾಗಿ ಸಿಗುವುದು ಯಾವಾಗ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ತಾಲೂಕಿನಲ್ಲಿ ಶಿರೋಳ ಗ್ರಾಮವು ಸುಮಾರು 20 ಸಾವಿರ ಜನಸಂಖ್ಯೆ ಹೊಂದಿದೆ. ಆದರೆ ಎಲ್ಲ ಗ್ರಾಮಸ್ಥರಿಗೆ ಜಲಜೀವನ ಮಿಷನ್ ಯೋಜನೆಯಡಿ ಶುದ್ಧ ನೀರು ಪೂರೈಕೆ ಆಗುತ್ತಿಲ್ಲ. ಇದರಿಂದ ಅನಿವಾರ್ಯವಾಗಿ ಶುದ್ಧ ನೀರಿನ ಘಟಕದ ಮುಂದೆ ಸರದಿಯಲ್ಲಿ ನಿಲ್ಲುವಂತಾಗಿದೆ.

ಬೋರ್‌ವೆಲ್ ನೀರು ಸೇವಿಸಬೇಕು

ಹಳೇ ಶಿರೋಳ ಗ್ರಾಮಕ್ಕೆ ಗ್ರಾಪಂನವರು ಕೆರೆಯ ಮೂಲಕ ಅಥವಾ ಮಲಪ್ರಭಾ ನದಿಯಲ್ಲಿ ಹಾಕಿರುವ 5 ಕೈ ಬೋರ್‌ಗಳಿಂದ ನೀರು ಪೂರೈಕೆ ಮಾಡುತ್ತಾರೆ. ಆದರೆ ಬೋರ್‌ಗಳ ಮೂಲಕ ಬರುವ ನೀರು ಪ್ಲೋರೈಡ್‌ಯುಕ್ತ ಆಗಿರುವುದರಿಂದ ಈ ನೀರನ್ನು ಗ್ರಾಮಸ್ಥರು ಕುಡಿಯುವುದಿಲ್ಲ.

ಗ್ರಾಪಂ ಮುಂದಿನ ಶುದ್ಧ ಘಟಕದಲ್ಲಿ ಸರದಿ ಸಾಲಿನಲ್ಲಿ ನಿಂತು ನೀರು ತೆಗೆದುಕೊಂಡು ಹೋಗುವ ಸ್ಥಿತಿ ಹಲವು ವರ್ಷಗಳಿಂದ ನಡೆದಿದೆ. ಈ ಬಗ್ಗೆ ಗ್ರಾಮಸ್ಥರು ಜಲಾಶಯದಿಂದ ಶುದ್ಧ ನೀರನ್ನು ಗ್ರಾಮಕ್ಕೆ ಪೂರೈಕೆ ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಸ್ವಲ್ಪ ಜನರಿಗೆ ಶುದ್ಧ ನೀರು

ಕೇಂದ್ರ ಸರ್ಕಾರದ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಹೊಸ ಗ್ರಾಮಕ್ಕೆ ಮಾತ್ರ ಜಲಾಶಯದಿಂದ ಬರುವ ಶುದ್ಧ ನೀರು ಪೂರೈಸಲಾಗುತ್ತಿದೆ. ಆದರೆ, ಈ ಗ್ರಾಮದ 3ರಿಂದ 5ಸಾವಿರ ಜನಸಂಖ್ಯೆಗೆ ಮಾತ್ರ ಈ ಯೋಜನೆ ಭಾಗ್ಯ ಮಾತ್ರ ಸಿಕ್ಕಿದೆ. ಉಳಿದವರಿಗೆ ಈ ನೀರು ಸಿಗದೆ ಜನರು ಪರದಾಟ ಮಾಡಬೇಕಾದ ಸ್ಥಿತಿಯಿದೆ.

ಖಾಲಿಯಾದ ಕೆರೆ

ಕೆರೆಯಲ್ಲಿ ನೀರು ಸಂಗ್ರಹವಿಲ್ಲದಿರುವುದರಿಂದ ಶುದ್ಧೀಕರಿಸಿ ಪೂರೈಸಲು ಆಗದಂತಾಗಿದೆ. ಅನಿವಾರ್ಯವಾಗಿ ಕುಡಿಯಲು ಯೋಗ್ಯವಲ್ಲದ ಬೋರ್‌ವೆಲ್‌ ನೀರು ಸೇವಿಸಬೇಕಾಗಿದೆ. ಶುದ್ಧ ನೀರು ಬೇಕೆಂದರೆ ಘಟಕಕ್ಕೆ ಹೋಗಿ ಹಣ ನೀಡಿ ತರಬೇಕು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮಲಪ್ರಭಾ ಜಲಾಶಯದಿಂದ ಬರುವ ಶುದ್ಧ ನೀರು ಪೂರೈಕೆ ಮಾಡಿ. ಇಲ್ಲವಾದರೆ ಗ್ರಾಮದ ಕೆರೆ ತುಂಬಿಸಿ ಗ್ರಾಮಸ್ಥರಿಗೆ ನೀರು ಸರಬರಾಜು ಮಾಡಬೇಕು ಎಂದು ಕರವೇ ತಾಲೂಕಾಧ್ಯಕ್ಷ ನಬಿಸಾಬ ಕಿಲ್ಲೇದಾರ ಆಗ್ರಹಿಸಿದರು.

ಹಳೇ ಶಿರೋಳ ಗ್ರಾಮಕ್ಕೆ ಜಲಾಶಯ ಘಟಕದಿಂದ ಬರುವ ಶುದ್ಧ ನೀರಿನ ಪೈಪ್‌ಗಳನ್ನು ಜೋಡಣೆ ಮಾಡಲು ಕ್ರಿಯಾಯೋಜನೆ ಮಾಡಿಕೊಂಡಿದ್ದೇವೆ. ಶೀಘ್ರದಲ್ಲಿ ಶುದ್ಧ ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಲ್ಲಪ್ಪ ವಾಲಿ ತಿಳಿಸಿದರು.

ಗ್ರಾಮದ ಕುಡಿಯುವ ನೀರು ಪೂರೈಕೆ ಮಾಡುವ ಕೆರೆ ಖಾಲಿಯಾಗಿದೆ. ಈ ಕೆರೆ ತುಂಬಿಸಲು ಕಾಲುವೆ ನೀರು ಪೂರೈಕೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದು ಜಿಪಂ ಸಹಾಯಕ ಎಂಜಿನಿಯರ್ ಗಣೇಶ ಟೆಕನದಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ಗುರಿ ಓಸ್ಯಾಟ್ ಸಂಸ್ಥೆಯದ್ದಾಗಿದೆ
ಮೀಸಲಾತಿ ಹೆಚ್ಚಿಸಲು 9ನೇ ಶೆಡ್ಯೂಲ್‌ಗೆ ಸೇರಿಸಲು ಒತ್ತಾಯ