ಸುಡುಗಾಡು ಸಿದ್ದರಿಗೆ ಹೊಸ ಬಡಾವಣೆ ಸಿಗೋದು ಯಾವಾಗ?

KannadaprabhaNewsNetwork |  
Published : May 08, 2024, 01:02 AM IST
ಚಿತ್ರಶೀರ್ಷಿಕೆ7ಎಂಎಲ್ ಕೆ1ಮೊಳಕಾಲ್ಮುರು ತಾಲೂಕಿನ ರಾಯಾಪುರಸಮೀಪದ ಸುಡುಗಾಡು ಸಿದ್ದರಿಗೆ ನಿರ್ಮಿಸಿರುವ ಪ್ರತ್ಯೇಕ ಬಡಾವಣೆಯಲ್ಲಿ ಜೋಪಡಿಗಳಲ್ಲಿ ವಾಸ ಮಾಡುತ್ತಿರುವಕುಟುಂಬಗಳು.ಚಿತ್ರಶೀರ್ಷಿಕೆ7ಎಂಎಲ್ ಕೆ2ಮೊಳಕಾಲ್ಮುರು ತಾಲೂಕಿನ ರಾಯಾಪುರಸಮೀಪದ ಸುಡುಗಾಡು ಸಿದ್ದರು ಜಾಲಿ ಮರದ ನೆರಳಿನ ಆಶ್ರಯದಲ್ಲಿ ಕುಳಿತಿದ್ದಾರೆ. | Kannada Prabha

ಸಾರಾಂಶ

ದಶಕದಿಂದ ನೆನೆಗುದಿಗೆ ಬಿದ್ದಿರುವ ಸಿದ್ದರಾಮೇಶ್ವರ ಬಡಾವಣೆ ನಿರ್ಮಾಣ ಕಾರ್ಯಬಿಸಿಲು, ಮಳೆ, ಗಾಳಿಗೆ ಬಳಲಿವೆ ಇಲ್ಲಿ ಜೋಪಡಿಯಲ್ಲಿರುವ 50ಕ್ಕೂ ಹೆಚ್ಚಿನ ಕುಟುಂಬಗಳು

ಬಿಜಿಕೆರೆ ಬಸವರಾಜ

ಕನ್ನಡ ಪ್ರಭ ವಾರ್ತೆ, ಮೊಳಕಾಲ್ಮುರು

ಸರ್ಕಾರ ಸಿದ್ದರಾಮೇಶ್ವರ ಬಡಾವಣೆ ಮುಂಜೂರು ಮಾಡಿ ದಶಕ ಕಳೆದರೂ ಅಧಿಕಾರಿಗಳ ಅಸಡ್ಡೆಯಿಂದಾಗಿ ಸುಡುಗಾಡು ಸಿದ್ದರಿಗೆ ಸೂರು ಇಲ್ಲದೆ ಇಂದಿಗೂ ಹಳೆ ಜೋಪಡಿಗಳಲ್ಲಿ ಬದುಕುವಂತಾಗಿದೆ.

ಹೌದು ತಾಲೂಕಿನ ರಾಯಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜೋಪಡಿಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ಹತ್ತಾರು ಕುಟುಂಬಗಳಿಗೆ ಒಂದೇ ಕಡೆ ಸೂರು ಕಲ್ಪಿಸಲು ಪ್ರತ್ಯೇಕ ಬಡಾವಣೆ ನಿರ್ಮಾಣಕ್ಕಾಗಿ 2017-18 ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತೀರ್ಮಾನಿಸಲಾಯಿತು. ಅಂದಿನ ಸಮಾಜ ಕಲ್ಯಾಣ ಮಂತ್ರಿ ಎಚ್. ಆಂಜನೇಯ ಸಿದ್ದರಾಮೇಶ್ವರ ಬಡಾವಣೆ ಮುಂಜೂರು ಮಾಡಿ ಅನುದಾನ ಒದಗಿಸಿದ್ದು ಇತಿಹಾಸ. ಪ್ರತ್ಯೇಕ ಬಡಾವಣೆ ನಿರ್ಮಾಣಕ್ಕಾಗಿ ರಾಯಾಪುರ ರೇಷ್ಮೆ ಫಾರಂ ಬಳಿ ನಾಲ್ಕು ಎಕರೆ ಜಮೀನು ಗುರುತಿಸಿ ಸ್ವಚ್ಛಗೊಳಿಸಿ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಆಟದ ಮೈದಾನ ಸೇರಿ ಅಗತ್ಯ ಮೂಲ ಭೂತ ಸೌಕರ್ಯ ಕಲ್ಪಿಸಿ ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ಬಡಾವಣೆಯನ್ನು ಅಭಿವೃದ್ಧಿ ಪಡಿಸಲಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳೆದ ಹತ್ತು ವರ್ಷಗಳಿಂದ ವಸತಿ ಸೌಲಭ್ಯ ಕಲ್ಪಿಸದ ಪರಿಣಾಮ ಸುಡುಗಾಡು ಸಿದ್ದರು ವಾಸ ಮಾಡುವ ಜಾಗ ಹೊರತು ಪಡಿಸಿ ಆಟದ ಮೈದಾನ, ಶಾಲೆ, ಅಂಗನವಾಡಿ ಕಟ್ಟಡದ ಜಾಗದಲ್ಲಿ ಜಾಲಿ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ.ಪ್ರತ್ಯೇಕ ಬಡಾವಣೆ ನಿರ್ಮಿಸಿ

ಕಳೆದೊಂದು ದಶಕದಿಂದ ವಸತಿ ಸೌಲಭ್ಯಕ್ಕಾಗಿ ಅಲೆದಾಡುತ್ತಿರುವ ಸುಡುಗಾಡು ಸಿದ್ದರಿಗೆ ಈವರೆಗೂ ನಿವೇಶನ ಹಂಚಿಕೆಯಾಗಿಲ್ಲ. ಜಮೀನು ಅಭಿವೃದ್ಧಿ ಪಡಿಸಿದ್ದು ಹೊರತು ಪಡಿಸಿದರೆ ಉಳಿದಂತೆ ಯಾವುದೇ ಕೆಲಸ ಆಗಿಲ್ಲ. ಇಲ್ಲಿನ ಗ್ರಾಪಂ ಹಕ್ಕು ಪತ್ರ ವಿತರಣೆಗೆ ಪಲಾನುಭವಿಗಳನ್ನು ಗುರುತಿಸಿದೆ ಎನ್ನಲಾಗುತ್ತಿದ್ದರೂ ಈವರೆಗೂ ವಿತರಣೆಯಾಗಿಲ್ಲ. ಇದರಿಂದ ಅಲಕ್ಷಿತ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಂತ ಸರ್ಕಾರದ ಮಹತ್ವದ ಯೋಜನೆ ನೆನೆಗುದಿಗೆ ಬಿದ್ದಂತಾಗಿದೆ.

ಈವರೆಗೂ ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣವಾಗಿಲ್ಲ. ಅಲ್ಲಿನ ಮಕ್ಕಳು 2 ಕಿ.ಮೀ ದೂರದ ರಾಯಾಪುರ ಅಥವಾ ಸಮೀಪದ ಮಲಿಯಮ್ಮನಹಟ್ಟಿ ಸರ್ಕಾರಿ ಶಾಲೆಗೆ ಆಗಮಿಸಬೇಕಿದೆ. ಪಡಿತರಕ್ಕಾಗಿ 2 ಕಿ ಮೀ ಸಾಗಬೇಕಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಅಂಗವಾಡಿಯ ಸೌಲಭ್ಯ ಇಲ್ಲದಾಗಿದೆ ಎನ್ನಲಾಗುತ್ತಿದೆ.

ಆಟಿಕೆ ಸಾಮಾನು, ಸೂಜಿ ಪಿನ್ನು, ಕೂದುಲು, ಚಿಕ್ಕ ಪುಟ್ಟ ಪ್ಲಾಸ್ಟಿಕ್ ವಸ್ತುಗಳ ವ್ಯಾಪಾರ ಮಾಡಿಕೊಂಡು ಮುರುಕು ಜೋಪಡಿಗಳಲ್ಲಿ ಬದುಕು ಕಟ್ಟಿಕೊಂಡಿರುವ 50ಕ್ಕೂ ಹೆಚ್ಚಿನ ಕುಟುಂಬಗಳು ಬಿಸಿಲು, ಮಳೆ, ಗಾಳಿಗೆ ಬಳಲಿವೆ. ಆದರೆ ಕಳೆದೊಂದು ದಶಕದಿಂದ ಬಡಾವಣೆ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿರುವುದು ಸುಡುಗಾಡು ಸಿದ್ದರಿಗೆ ಸಿದ್ದರಾಮೇಶ್ವರ ಬಡಾವಣೆ ಗಗನ ಕುಸುಮದಂತಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಸುಡುಗಾಡು ಸಿದ್ದರಿಗೆ ಸೂರು ಕಲ್ಪಿಸಲು ಮುಂದಾಗಬೇಕೆಂದು ಇಲ್ಲಿನ ಜನ ಒತ್ತಾಯಿಸಿದ್ದಾರೆ. ಬೈಟ್.

ಸುಡುಗಾಡು ಸಿದ್ದರಿಗೆ ಪ್ರತ್ಯೇಕ ಬಡಾವಣೆ ನಿರ್ಮಾಣಕ್ಕಾಗಿ ಜಾಗ ಗುರುತಿಸಿ ಅಭಿವೃದ್ದಿ ಪಡಿಸಲಾಗಿದೆ. ಜೋಪಡಿಗಳನ್ನು ಕಟ್ಟಿಕೊಂಡು ಬದುಕುತ್ತಿರುವ ಆ ಸಮುದಾಯದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶಾಲೆ ,ಅಂಗನವಾಡಿ ಕಟ್ಟಡ ನಿರ್ಮಿಸುವ ಜತೆಗೆ ಕೂಡಲೆ ವಸತಿ ಸೌಲಭ್ಯ ಕಲ್ಪಿಸಬೇಕು.

-- ವೈ.ಡಿ.ಕುಮಾರ ಸ್ವಾಮಿ, ಗ್ರಾಪಂ ಸದಸ್ಯ, ರಾಯಾಪುರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!