ಕೊಪ್ಪಳ ವಿಮಾನ ನಿಲ್ದಾಣ ನಿರ್ಮಾಣ ಯಾವಾಗ?

KannadaprabhaNewsNetwork |  
Published : Apr 16, 2026, 02:15 AM IST
ಸಸಸ | Kannada Prabha

ಸಾರಾಂಶ

ಭೂ ಸ್ವಾಧೀನಕ್ಕಾಗಿ ಕೆಕೆಆರ್ ಡಿಬಿಯಿಂದ ನೀಡಲಾಗಿದ್ದ ಅನುದಾನ ವಾಪಸ್‌ ಪಡೆದ ಮೇಲೆ ವಿಮಾನ ನಿಲ್ದಾಣ ಯೋಜನೆ ಜಾರಿಗೆ ಎಳ್ಳು ನೀರು ಬಿಟ್ಟಂತೆ ಕಾಣುತ್ತಿದೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ಕೊಪ್ಪಳ ಬಳಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆಯನ್ನು ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಮರೆತಂತೆ ಕಾಣುತ್ತದೆ.

ಕಳೆದೆರಡು ವರ್ಷಗಳಿಂದ ಈ ಬಗ್ಗೆ ಚಕಾರ ಎತ್ತುತ್ತಲೇ ಇಲ್ಲ. ಅಷ್ಟೇ ಅಲ್ಲ ಭೂ ಸ್ವಾಧೀನಕ್ಕಾಗಿ ಕೆಕೆಆರ್ ಡಿಬಿಯಿಂದ ನೀಡಲಾಗಿದ್ದ ಅನುದಾನ ವಾಪಸ್‌ ಪಡೆದ ಮೇಲೆ ವಿಮಾನ ನಿಲ್ದಾಣ ಯೋಜನೆ ಜಾರಿಗೆ ಎಳ್ಳು ನೀರು ಬಿಟ್ಟಂತೆ ಕಾಣುತ್ತಿದೆ.

ಕೊಪ್ಪಳ ಬಳಿ ಈಗಾಗಲೇ ಇರುವ ಖಾಸಗಿ ಎಂಎಸ್ ಪಿಎಲ್ ವಿಮಾನ ತಂಗುದಾಣದಲ್ಲಿಯೇ ಉಡಾನ್ ಜಾರಿ ಮಾಡಿ ವಿಮಾನ ಸಂಚಾರಕ್ಕೆ ಮುಂದಾಗಲಾಗಿತ್ತು. ಆದರೆ ಎಂಎಸ್ ಪಿಎಲ್ ಕಂಪನಿಯ ಅಸಹಕಾರದಿಂದ ಅದು ಜಾರಿಯಾಗಲೇ ಇಲ್ಲ.

ಇದಾದ ಮೇಲೆ ವಿಮಾನ ನಿಲ್ದಾಣ ಮಾಡುವುದಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿತು. ಕಳೆದ ಸರ್ಕಾರದ ಅವಧಿಯಲ್ಲಿ ಭೂಸ್ವಾಧೀನಕ್ಕೆ ಕೆಕೆಆರ್ ಡಿಬಿಯಲ್ಲಿ ಅನುದಾನ ನೀಡಲಾಯಿತು. ದುರಂತ ಎಂದರೆ ಸರ್ಕಾರ ಬದಲಾದ ತಕ್ಷಣ ಭೂ ಸ್ವಾಧೀನಕ್ಕೆ ನಿಗದಿಯಾಗಿದ್ದ ಅನುದಾನ ವಾಪಸ್‌ ಪಡೆಯಲಾಯಿತು. ಅದಾದ ನಂತರ ವಿಮಾನ ನಿಲ್ದಾಣ ಯೋಜನೆಯನ್ನೇ ಸಚಿವರು, ಶಾಸಕರು ಮರೆತೇ ಬಿಟ್ಟರು.

ಮಂಜೂರಾಗಿದ್ದ ನಿಲ್ದಾಣ:ಕೊಪ್ಪಳಕ್ಕೆ ಉಡಾನ್ ಯೋಜನೆ ಮಂಜೂರಾಗಿದ್ದು, ಖಾಸಗಿ ವಿಮಾನ ತಂಗುದಾಣದ ಅಸಹಕಾರದಿಂದ ಜಾರಿಯಾಗದೇ ಇದ್ದಾಗ ಸರ್ಕಾರ ಪ್ರತ್ಯೇಕ ವಿಮಾನ ನಿಲ್ದಾಣಕ್ಕೆ ಮುಂದಾಯಿತು. ಜಾಗೆ ಸಹ ಗುರುತು ಮಾಡಲಾಯಿತು. ಈ ಜಾಗದ ಕುರಿತು ಉಂಟಾದ ವಿವಾದದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಕೈಬಿಡುವಂತಾಯಿತು. ಸ್ಥಳೀಯರ ಭಿನ್ನಾಭಿಪ್ರಾಯ ಅದರಲ್ಲೂ ಶಾಸಕ ರಾಘವೇಂದ್ರ ಹಿಟ್ನಾಳ ಇಚ್ಛಾಶಕ್ತಿಯ ಕೊರತೆಯಿಂದ ವಿಮಾನ ನಿಲ್ದಾಣ ನನೆಗುದಿಗೆ ಬಿದ್ದಿತು.

ಕೆಕೆಆರ್ ಡಿಬಿಯಲ್ಲಿ ಭೂ ಸ್ವಾಧೀನಕ್ಕೆ ನಿಗದಿಯಾಗಿದ್ದ ಅನುದಾನ ವಾಪಸ್‌ ಪಡೆದು ಬೇರೆ ಕಾಮಗಾರಿಗಳಿಗೆ ಬಳಕೆ ಮಾಡುವಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಪ್ರಮುಖ ಪಾತ್ರ ವಹಿಸಿದರು. ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಪಡೆಯುವ ಕುರಿತು ಹೇಳಿದರಾದರೂ ಇದುವರೆಗೂ ಅದ್ಯಾವುದು ಜಾರಿಯಾಗಲೇ ಇಲ್ಲ.

ಕೆಐಎಡಿಬಿಯಲ್ಲಿಯೂ ಪ್ರಸ್ತಾವನೆ:ಕೊಪ್ಪಳ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕಾಗಿ ಭೂ ಸ್ವಾಧೀನ ಮಾಡಿಕೊಳ್ಳುವ ಸಂಬಂಧ ಕೆಐಎಡಿಬಿಯಲ್ಲಿಯೂ ಪ್ರಸ್ತಾವನೆ ಇದೆ. ರಾಜ್ಯ ಸರ್ಕಾರ ಹಣ ಜಮೆ ಮಾಡಿದರೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗುತ್ತಿತ್ತು. ಆದರೆ, ಕೆಕೆಆರ್ ಡಿಬಿಯಲ್ಲಿ ನೀಡಿದ್ದ ಅನುದಾನ ವಾಪಸ್‌ ಪಡೆದಿದ್ದೇ ಇಡೀ ಯೋಜನೆ ನನೆಗುದಿಗೆ ಬೀಳಲು ಕಾರಣವಾಯಿತು.

ಷಡ್ಯಂತ್ರ ನಡೆದಿದೆಯೇ?:ಕೊಪ್ಪಳ ಬಳಿ ವಿಮಾನ ನಿಲ್ದಾಣ ಬರದಂತೆ ತಡೆಯುವ ಷಡ್ಯಂತ್ರವೂ ಇದೆ ಎನ್ನುವ ಮಾತು ಇದೆ. ಅಂಜನಾದ್ರಿ ಮತ್ತು ಹಂಪಿಗೆ ತೀರಾ ಹತ್ತಿರವಾಗುವುದರಿಂದ ಪಕ್ಕದ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಮಹತ್ವ ಕಡಿಮೆಯಾಗಬಹುದು ಎನ್ನುವ ಕಾರಣಕ್ಕಾಗಿಯೇ ತಡೆಯಲಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಕೊಪ್ಪಳ ಬಳಿ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆ ಮೊದಲು ಅಸಹಕಾರ ಮಾಡಿದವರೇ ಉಡಾನ್ ಜಾರಿಗೆ ಸಹಕಾರ ನೀಡುವುದಾಗಿ ಹೇಳಿದರು. ಹೀಗಾಗಿ, ಅತ್ತ ಅದೂ ಆಗದೆ, ಇತ್ತ ಇದೂ ಆಗದೆ ಯೋಜನೆ ಹಳ್ಳ ಹಿಡಿದಿದೆ.

ಕೊಪ್ಪಳ ಬಳಿ ವಿಮಾನ ನಿಲ್ದಾಣ ಇನ್ನೇನು ನಿರ್ಮಾಣವಾಗುತ್ತದೆ ಎನ್ನುವಷ್ಟರಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ನನೆಗುದಿಗೆ ಬಿದ್ದಿತು. ಹೀಗಾಗಿ, ಈಗ ಹೋರಾಟ ರೂಪಿಸುವುದೊಂದೇ ಬಾಕಿಯಿದೆ ಎಂದು ವಿಮಾನ ನಿಲ್ದಾಣ ಹೋರಾಟ ಸಮಿತಿ ಸಂಚಾಲಕ ಆರ್.ಬಿ.ಪಾನಘಂಟಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮವೇ ಪ್ರಪಂಚಕ್ಕೆ ಆಧಾರ ನಮ್ಮದು ಮಾತ್ರ ಧರ್ಮ ಉಳಿದವು ಮತಗಳು: ವಿಧುಶೇಖರ ಶ್ರೀಗಳು
ಲ್ಯಾಂಡ್ ಜಿಹಾದ್: ಪ್ರಮೋದ್ ಮುತಾಲಿಕ್ ಆಕ್ರೋಶ