ಮುಂಡರಗಿ ಪುರಸಭೆ ವ್ಯಾಪ್ತಿಯ ಜನರಿಗೆ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಯಾವಾಗ?

KannadaprabhaNewsNetwork |  
Published : Oct 13, 2025, 02:02 AM IST
ಮುಂಡರಗಿಯ ಶಿರಹಟ್ಟಿ ರಸ್ತೆಯ ಪಕ್ಕದಲ್ಲಿ ನಿವೇಶನವಿಲ್ಲದೇ ಹಲವರು ಗುಡಿಸಲಿನಲ್ಲಿ ವಾಸಿಸುತ್ತಿರುವುದು. | Kannada Prabha

ಸಾರಾಂಶ

2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಡಾ. ಚಂದ್ರು ಲಮಾಣಿ ಶಾಸಕರಾಗಿ ಆಯ್ಕೆಯಾದರು. ಅವರು ಚುನಾವಣೆ ಸಂದರ್ಭದಲ್ಲಿ ಶಾಸಕರಾದ ಒಂದೆರಡು ತಿಂಗಳಿನಲ್ಲಿ ನಿರಾಶ್ರಿತರಿಗೆ ನಿವೇಶನ ನೀಡುವುದು ತಮ್ಮ ಮೊದಲ ಆದ್ಯತೆ ಎಂದಿದ್ದರು. ಇದೀಗ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಈ ಕುರಿತು ನಿರಂತರ ಸಭೆ ನಡೆಸುತ್ತಾ ಬಂದಿದ್ದಾರಾದರೂ ನಿವೇಶನ ಹಂಚಿಕೆ ಮಾತ್ರ ಇದುವರೆಗೂ ಆಗಿಲ್ಲ.

ಶರಣು ಸೊಲಗಿ

ಮುಂಡರಗಿ: ಪುರಸಭೆ ವ್ಯಾಪ್ತಿಯಲ್ಲಿ ಸಾವಿರಾರು ಜನ ನಿರಾಶ್ರಿತರಿದ್ದು, ಅವರಿಗೆ ನಿವೇಶನ ನೀಡಬೇಕೆನ್ನುವ ಉದ್ದೇಶದಿಂದ 2017ರಲ್ಲಿ ಶಿರೋಳ ಗ್ರಾಮದ ಬಳಿ 24 ಎಕರೆ ಜಮೀನು ಖರೀದಿಸಿ, ನಿವೇಶನಗಳನ್ನು ಅಭಿವೃದ್ಧಿಪಡಿಸಿದ್ದು, ಈ ನಿವೇಶನಗಳ ಹಂಚಿಕೆ ಯಾವಾಗ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

2017ರಲ್ಲಿ ಅಂದಿನ ಕಾಂಗ್ರೆಸ್ ಶಾಸಕರಾಗಿದ್ದ ರಾಮಕೃಷ್ಣ ದೊಡ್ಡಮನಿ ಸರ್ಕಾರದಿಂದ ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ಹತ್ತಿರ 24 ಎಕರೆ ಜಮೀನು ಖರೀದಿಸಿದ್ದರು. ಜಮೀನು ಖರೀದಿಸಿ 8 ವರ್ಷಗಳೇ ಕಳೆದಿವೆ.

ಪುರಸಭೆಯ 23 ವಾರ್ಡ್‌ಗಳ ವ್ಯಾಪ್ತಿಯಲ್ಲಿ ವಾಸಿಸುವ ಸುಮಾರು 3ರಿಂದ 4 ಸಾವಿರಕ್ಕೂ ಹೆಚ್ಚು ನಿರಾಶ್ರಿತರಿಂದ ನಿವೇಶನಕ್ಕಾಗಿ ಅರ್ಜಿಗಳು ಬಂದಿದ್ದು, ಅವರಿಗೆ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಿ ಕೊಡಬೇಕು ಎನ್ನುವ ಉದ್ದೇಶದಿಂದಲೇ ದೊಡ್ಡಮನಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಜಮೀನು ಖರೀದಿಸಿದ್ದರು. ಆದರೆ ನಿವೇಶನಗಳನ್ನು ಹಂಚಬೇಕು ಎನ್ನುವಷ್ಟರಲ್ಲಿ ಅವರ ಅವಧಿ ಪೂರ್ಣಗೊಂಡಿತು.ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು, ರಾಮಣ್ಣ ಲಮಾಣಿ ಶಾಸಕರಾದರು. ಅವರು ಸಹ ಶಾಸಕರಾದ ಪ್ರಾರಂಭದಿಂದ 5 ವರ್ಷದ ತಮ್ಮ ಅವಧಿ ಮುಗಿಯುವ ಕೊನೆಯ ಹಂತದವರೆಗೂ ನಿವೇಶನ ಹಂಚಿಕೆಗೆ ಪ್ರಯತ್ನಿಸುತ್ತಾ ಬಂದಿದ್ದರಾದರೂ ಒಂದಿಲ್ಲೊಂದು ಅಡೆತಡೆಗಳು ಹಾಗೂ ಮನೆ ಹೊಂದಿದವರು, ಶ್ರೀಮಂತರು ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ರಾಜೀವಗಾಂಧಿ ವಸತಿ ನಿಗಮಕ್ಕೆ ತಕರಾರು ಅರ್ಜಿಗಳು ಹೋಗಿದ್ದರಿಂದಾಗಿ ನಿವೇಶನಗಳ ಹಂಚಿಕೆ ಆಗಲೇ ಇಲ್ಲ.2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಡಾ. ಚಂದ್ರು ಲಮಾಣಿ ಶಾಸಕರಾಗಿ ಆಯ್ಕೆಯಾದರು. ಅವರು ಚುನಾವಣೆ ಸಂದರ್ಭದಲ್ಲಿ ಶಾಸಕರಾದ ಒಂದೆರಡು ತಿಂಗಳಿನಲ್ಲಿ ನಿರಾಶ್ರಿತರಿಗೆ ನಿವೇಶನ ನೀಡುವುದು ತಮ್ಮ ಮೊದಲ ಆದ್ಯತೆ ಎಂದಿದ್ದರು. ಇದೀಗ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಈ ಕುರಿತು ನಿರಂತರ ಸಭೆ ನಡೆಸುತ್ತಾ ಬಂದಿದ್ದಾರಾದರೂ ನಿವೇಶನ ಹಂಚಿಕೆ ಮಾತ್ರ ಇದುವರೆಗೂ ಆಗಿಲ್ಲ.2024ರ ಡಿಸೆಂಬರ್ 22ರಂದು ಶಾಸಕ ಡಾ. ಚಂದ್ರು ಲಮಾಣಿ ಅವರು ಪುರಸಭೆಯಲ್ಲಿ ಆಶ್ರಯ ಕಮಿಟಿ ಸಭೆ ನಡೆಸಿ 2024ರ ಡಿಸೆಂಬರ್ ಕೊನೆಯ ಅಥವಾ 2025ರ ಜನವರಿ ಮೊದಲ ವಾರದಲ್ಲಿ ಅರ್ಹ ಆಶ್ರಯ ಫಲಾನುಭವಿಗಳ ಮೊದಲ ಪಟ್ಟಿ ಸಿದ್ಧಪಡಿಸಿ ಪುರಸಭೆ ನೋಟಿಸ್ ಬೋರ್ಡಿಗೆ ಹಚ್ಚಿ, ನಂತರದಲ್ಲಿ ರಾಜೀವ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿ, ಕೆಲವು ನಿರಾಶ್ರಿತರ ಪಟ್ಟಿಯನ್ನೂ ಸಿದ್ಧ ಮಾಡಿದ್ದರು. ಅದರಲ್ಲಿಯೂ ಲೋಪಗಳಿವೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆ ಮತ್ತೊಮ್ಮೆ ವಿಳಂಬವಾಗಿದ್ದು, ಇದುವರೆಗೂ ನಿವೇಶನ ಹಂಚಿಕೆ ಆಗಲಿಲ್ಲ.ಈ ಹಿಂದಿನ ಪುರಸಭೆ ಆಡಳಿತ ಮಂಡಳಿ ಸದಸ್ಯರು ಅಧಿಕಾರದಲ್ಲಿದ್ದಾಗಲೇ ಖರೀದಿಸಿದ ಜಮೀನಿನಲ್ಲಿ ತಾವೇ ನಿವೇಶನ ಹಂಚಿಕೆ ಮಾಡಬೇಕೆಂದು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಇದೀಗ ಇಂದಿನ ಪುರಸಭೆಯ ಎಲ್ಲ 23 ಜನ ಸದಸ್ಯರು ತಮ್ಮ 5 ವರ್ಷ ಅಧಿಕಾರದ ಕೊನೆಯ ಅಂಚಿನಲ್ಲಿದ್ದು, ಇವರಿಂದಲೂ ನಿವೇಶನ ಹಂಚಿಕೆ ಸಾಧ್ಯವಾಗಲಿಲ್ಲ. ಒಟ್ಟಿನಲ್ಲಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡುತ್ತೇವೆನ್ನುವುದು ಚುನಾವಣೆಯ ಪ್ರಚಾರದಲ್ಲಿ ಭರವಸೆಯ ನೀಡುವ ವಿಷಯವಾಗಿದೆಯೇ ಹೊರತು ಅರ್ಹ ಫಲಾನುಭವಿಗಳಿಗೆ ನಿವೇಶನ ಮಾತ್ರ ದೊರೆಯುತ್ತಿಲ್ಲ.

ಇಚ್ಛಾಶಕ್ತಿಯ ಕೊರತೆ: ಪಟ್ಟಣದ ನಿರಾಶ್ರಿತರಿಗೆ ನಿವೇಶನ ಒದಗಿಸುವ ಉದ್ದೇಶದಿಂದ ತಾವು ಶಾಸಕರಾಗಿದ್ದಾಗ 24 ಎಕರೆ ಜಮೀನು ಖರೀದಿಸಿದ್ದು, ಎಂಟು ವರ್ಷ ಗತಿಸಿದರೂ ಫಲಾನುಭವಿಗಳಿಗೆ ನಿವೇಶನ ಹಂಚದಿರುವುದು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ದೇವರು ವರ ಕೊಟ್ಟರೂ ಪೂಜಾರಿ ವರ ಕೊಡುತ್ತಿಲ್ಲ ಎನ್ನುವಂತೆ ಸರ್ಕಾರ ಹಣ ಕೊಟ್ಟು ಜಮೀನು ಖರೀದಿಸಿದರೂ ಜನತೆಗೆ ನಿವೇಶನದ ದೊರೆಯದಿರುವುದನ್ನು ನೋಡಿದರೆ ಇಂದಿನ ಜನಪ್ರತಿನಿಧಿಗಳಿಗೆ ಬಡವರ ಬಗ್ಗೆ ಕಾಳಜಿ ಇಲ್ಲದಿರುವುದನ್ನು ಎತ್ತಿ ತೋರಿಸುತ್ತಿದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ