ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು-ಮಸ್ಕತ್ ನಡುವೆ ಕಳೆದ ಮೂರು ತಿಂಗಳಿಂದ ಸ್ಥಗಿತಗೊಂಡಿದ್ದ ನೇರ ವಿಮಾನ ಯಾನ ಸದ್ಯ ಪುನಾರಂಭಗೊಳ್ಳುವ ಸಾಧ್ಯತೆ ಕಂಡುಬರುತ್ತಿಲ್ಲ.ಜುಲೈನಲ್ಲಿ ದಿಢೀರ್ ರದ್ದುಗೊಂಡಿದ್ದ ನೇರ ವಿಮಾನ ಸಂಚಾರ, ಇನ್ನೂ ಆರಂಭಗೊಂಡಿಲ್ಲ. ಇದರಿಂದಾಗಿ ಮಸ್ಕತ್‌ನಲ್ಲಿ ಆಗಾಗ ಊರಿಗೆ ಬಂದುಹೋಗುತ್ತಿದ್ದ ಅನಿವಾಸಿ ಕರಾವಳಿ ಕನ್ನಡಿಗರು ಪರದಾಟ ನಡೆಸುವಂತಾಗಿದೆ.
ಮಂಗಳೂರು-ಮಸ್ಕತ್ ನಡುವೆ ವಾರದಲ್ಲಿ ನಾಲ್ಕು ಬಾರಿ ಏರ್‌ಇಂಡಿಯಾ ವಿಮಾನ ಸಂಚರಿಸುತ್ತಿದ್ದವು. ಜುಲೈಯಲ್ಲಿ ದಿಢೀರನೆ ಈ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಕರ್ನಾಟಕ ಕರಾವಳಿ ಮತ್ತು ಕಾಸರಗೋಡಿನ ಮಂದಿ ಮಸ್ಕತ್‌ಗೆ ಪ್ರಯಾಣಿಸಬೇಕಾದರೆ ಸುತ್ತ ಬಳಸುವುದು ಅನಿವಾರ್ಯವಾಗಿದೆ. ಮಸ್ಕತ್‌ನಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಕರಾವಳಿಗರು ಉದ್ಯೋಗದಲ್ಲಿದ್ದಾರೆ.ಪ್ರಯಾಣಿಕರ ಸಂಖ್ಯೆ ಕಡಿಮೆಯಾದ ಕಾರಣ ವಿಮಾನ ಸಂಚಾರ ರದ್ದುಗೊಳಿಸಿದ್ದಾಗಿ ಏರ್‌ಇಂಡಿಯಾ ಪ್ರಯಾಣಿಕರಿಗೆ ಸಮಜಾಯಿಷಿ ನೀಡಿತ್ತು. ಆದರೆ ಎಲ್ಲ ನಾಲ್ಕು ವಿಮಾನಗಳ ಸಂಚಾರ ಸ್ಥಗಿತಗೊಳಿಸಿದ ಉದ್ದೇಶ ಏನು ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಏರ್ ಇಂಡಿಯಾದ ಈ ಕ್ರಮದ ವಿರುದ್ಧ ಪ್ರಯಾಣಿಕರು ಜನಪ್ರತಿನಿಧಿಗಳಿಗೆ, ವಿಮಾನಯಾನ ಸಚಿವಾಲಯಕ್ಕೆ ದೂರು ನೀಡಿದ್ದಾರೆ. ಪ್ರಯೋಜನವಾಗಿಲ್ಲ.
ಒಮ್ಮೆಲೇ ಎಲ್ಲ ವಿಮಾನಗಳೂ ರದ್ದು:ಪ್ರಯಾಣಿಕರ ಕೊರತೆ ಮುಂದಿಟ್ಟುಕೊಂಡು ಏರ್ ಇಂಡಿಯಾ ಮಂಹಗಳೂರು-ಮಸ್ಕತ್ ನಡುವಿನ ಹಾರಾಟ ರದ್ದುಗೊಳಿಸಿರುವುದು ಹಾಸ್ಯಾಸ್ಪದ ಎಂದು ಪ್ರಯಾಣಿಕರೇ ಹೇಳುತ್ತಿದ್ದಾರೆ.
ವಾರದಲ್ಲಿ ನಾಲ್ಕು ದಿನ ಮಂಗಳೂರು-ಮಸ್ಕತ್ ವಿಮಾನ ಸಂಚಾರ ಇರುತ್ತಿತ್ತು.ಇಲ್ಲಿ ಎಲ್ಲ ನಾಲ್ಕು ವಿಮಾಗಳ ಸಂಚಾರವನ್ನೇ ಏರ್ ಇಂಡಿಯಾ ರದ್ದುಪಡಿಸಿರುವುದು ಯಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ಟೋಬರ್‌ನಲ್ಲಿ ಮತ್ತೆ ಪುನಾರಂಭಿಸುತ್ತೇವೆ ಎಂದು ಭರವಸೆ ನೀಡಿದರೂ ಅದು ಕೂಡ ಹುಸಿ ಎನ್ನುತ್ತಾರೆ ಯಾನಿಗಳು. ...............ಈಗ ಸುತ್ತು ಬಳಸಿ ಪ್ರಯಾಣ
ಮಂಗಳೂರು-ಮಸ್ಕತ್ ನೇರ ವಿಮಾನ ಸಂಚಾರ ರದ್ದುಗೊಂಡ ಕಾರಣ ಈಗ ಬಂದುಹೋಗುವ ಕರಾವಳಿ ಕನ್ನಡಿಗರು ಸುತ್ತು ಬಳಸಿ ಪ್ರಯಾಣಿಸಬೇಕಾಗಿದೆ.ಮಂಗಳೂರಿನಿಂದ ಮುಂಬೈ, ಬೆಂಗಳೂರು ಅಥವಾ ದೆಹಲಿ ಮೂಲಕ ಮಸ್ಕತ್ ಪ್ರಯಾಣಿಸಬೇಕಾಗಿದೆ. ಮಸ್ಕತ್‌ನಿಂದ ವಯಾ ಕಣ್ಣೂರು, ಬೆಂಗಳೂರು, ದೆಹಲಿ ಅಥವಾ ಮುಂಬೈ ಮೂಲಕ ಮಂಗಳೂರು ತಲುಪಬೇಕಾಗಿದೆ. ಹೀಗೆ ಸುತ್ತುಬಳಸಿ ಮೂರ್ನಾಲ್ಕು ಗಂಟೆಗಳ ಕಾಲ ವೃಥಾ ಸಮಯ ಪೋಲು ಮಾಡಿಕೊಂಡು ಮಾತ್ರವಲ್ಲ 10 ಸಾವಿರ ರು.ನಿಂದ 35 ಸಾವಿರ ರು. ವರೆಗೆ ದುಬಾರಿ ಟಿಕೆಟ್ ದರ ನೀಡಿ ಪ್ರಯಾಣಿಸುವ ಅನಿವಾರ್ಯತೆ ಏರ್ ಇಂಡಿಯಾ ಸೃಷ್ಟಿಸಿದೆ ಎಂದು ಪ್ರಯಾಣಿಕರು ಆರೋಪಿಸುತ್ತಾರೆ.
ಈ ನೇರ ವಿಮಾನ ಸಂಚಾರವನ್ನು ಮರು ಆರಂಭಿಸುವಂತೆ ಒತ್ತಾಯಿಸಿ ಮಸ್ಕತ್ ಮತ್ತು ಕರಾವಳಿ ಪ್ರದೇಶದ ಅನಿವಾಸಿ ಭಾರತೀಯರು ಈಗಾಗಲೇ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟಗೆ ಮನವಿ ಸಲ್ಲಿಸಿದ್ದಾರೆ. ....................ಮಂಗಳೂರು-ಮಸ್ಕತ್ ನಡುವೆ ನೇರ ವಿಮಾನ ಸಂಚಾರ ರದ್ದುಪಡಿಸಿದ ಕಾರಣ ಅಲ್ಲಿರುವ ಕರಾವಳಿ, ಕಾಸರಗೋಡಿನ ಕನ್ನಡಿಗರು ತೀವ್ರ ಬವಣೆ ಪಡುವಂತಾಗಿದೆ. ವಿನಾ ಕಾರಣ ಎಲ್ಲ ವಿಮಾನಗಳನ್ನೂ ರದ್ದುಪಡಿಸಿರುವುದು ಸರಿಯಾದ ಕ್ರಮವಲ್ಲ. ಕಣ್ಣೂರಿನಲ್ಲಿ ಎಲ್ಲ ದಿನಗಳಲ್ಲೂ ಮಸ್ಕತ್‌ಗೆ ನೇರ ವಿಮಾನ ಸಂಚಾರ ಇದೆ. ಆದ್ದರಿಂದ ರದ್ದುಗೊಳಿಸಿದ ಈ ವಿಮಾನ ಸಂಚಾರ ಕೂಡಲೇ ಪುನಾರಂಭಿಸಬೇಕು.
-ಶಿವಾನಂದ ಕೋಟ್ಯಾನ್, ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು ಓಮಾನ್ ಘಟಕ.......ಮಂಗಳೂರು-ಮಸ್ಕತ್ ನಡುವಿನ ನೇರ ವಿಮಾನ ಹಾರಾಟ ರದ್ದುಗೊಳಿಸಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಒಮಾನ್ ಮತ್ತು ಕಾಸರಗೋಡಿನ ಕನ್ನಡಿಗರು ಗಮನ ಸೆಳೆದಿದ್ದು, ಈ ವಿಮಾನ ಸಂಚಾರವನ್ನು ಪುನಾರಂಭಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
-ಕ್ಯಾ.ಬ್ರಿಜೇಶ್ ಚೌಟ, ದ.ಕ. ಸಂಸದ.