ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ರಾಷ್ಟ್ರೀಯ ಸ್ಮಾರಕ ಪ್ರವಾಸಿತಾಣ ಆಗುವುದು ಯಾವಾಗ?

KannadaprabhaNewsNetwork |  
Published : Oct 02, 2026, 02:30 AM IST
ಕೂಡ್ಲಿಗಿಯಲ್ಲಿರುವ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದ ನೋಟ  | Kannada Prabha

ಸಾರಾಂಶ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಗಾಂಧೀಜಿ ಹುತಾತ್ಮರಾದಾಗ ಅವರ ಚಿತಾಭಸ್ಮವನ್ನು ದೇಶದ ನಾನಾ ಭಾಗಗಳಿಗೆ ಕೊಂಡೊಯ್ದು ನದಿಗಳಿಗೆ ಅರ್ಪಿಸುವ ಮೂಲಕ ಧನ್ಯತಾಭಾವ ಮೆರೆದಿದ್ದರು.

ಭೀಮಣ್ಣ ಗಜಾಪುರ ಕೂಡ್ಲಿಗಿ

ಕೂಡ್ಲಿಗಿ ಪಟ್ಟಣದಲ್ಲಿ ಗಾಂಧೀಜಿ ಚಿತಾಭಸ್ಮ, ಹುತಾತ್ಮರ ಸ್ಮಾರಕವಿರುವುದು ಬಹುತೇಕ ಜನರಿಗೆ ಚಿರಪರಿಚಿತವಾಗಿದೆ. ಚಿತಾಭಸ್ಮವಿರುವ ಸ್ಮಾರಕ ಸ್ಥಾಪಿಸಿ 5 ದಶಕ ಕಳೆದರೂ ಅನಾಥವಾಗಿತ್ತು. ಆದರೆ ಸ್ಥಳೀಯ ಗಾಂಧಿವಾದಿಗಳು, ಪ್ರಮುಖರು, ಸಂಘ, ಸಂಸ್ಥೆಯವರ ಹೋರಾಟದ ಫಲವಾಗಿ ಗಾಂಧೀಜಿಯವರ ಚಿತಾಭಸ್ಮವಿರುವ ಸ್ಮಾರಕವನ್ನು ಕಾಪಾಡಿಕೊಂಡು ಬಂದಿದ್ದಾರೆ.

ಇದು ಬರೀ ಗಾಂಧೀಜಿ ಚಿತಾಭಸ್ಮ ಸ್ಮಾರಕವಷ್ಟೇ ಅಲ್ಲ, 1857 ರಿಂದ 1947ರವರೆಗೆ ಸ್ವಾತಂತ್ರ್ಯಕ್ಕೋಸ್ಕರ ಹುತಾತ್ಮರನ್ನು ನೆನೆಯುವ ರಾಷ್ಟ್ರೀಯ ಹುತಾತ್ಮರ ಸ್ಮಾರಕ ಇದಾಗಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ, ಈ ಅಪರೂಪದ ಸ್ಮಾರಕ ಪ್ರವಾಸಿ ತಾಣವಾಗದೇ ಇರುವುದು ಮಾತ್ರ ವಿಪರ್ಯಾಸ.

ಹುತಾತ್ಮರ ಸ್ಮಾರಕದ ಹಿನ್ನೆಲೆ:ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಗಾಂಧೀಜಿ ಹುತಾತ್ಮರಾದಾಗ ಅವರ ಚಿತಾಭಸ್ಮವನ್ನು ದೇಶದ ನಾನಾ ಭಾಗಗಳಿಗೆ ಕೊಂಡೊಯ್ದು ನದಿಗಳಿಗೆ ಅರ್ಪಿಸುವ ಮೂಲಕ ಧನ್ಯತಾಭಾವ ಮೆರೆದಿದ್ದರು.

ದೆಹಲಿ ರಾಜ್ ಘಾಟ್ ನಲ್ಲಿ ಗಾಂಧೀಜಿ ಸಮಾಧಿ ಮಾತ್ರ ನೋಡಬಹುದು ಆದರೆ ಕೂಡ್ಲಿಗಿಯಲ್ಲಿ ಗಾಂಧೀಜಿಯವರ ಚಿತಾಭಸ್ಮ ಗಂಧದ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಕೂಡ್ಲಿಗಿಯಲ್ಲಿ ಅಂದು ಶಿಕ್ಷಕರಾಗಿದ್ದ ಅಪ್ಪಟ ಗಾಂಧಿವಾದಿ ಬಿಂಧು ಮಾಧವ ವಿದ್ಯಾರ್ಥಿಗಳ ಜತೆಗೂಡಿ ಗಾಂಧೀಜಿಯವರ ಚಿತಾಭಸ್ಮವನ್ನು ದೆಹಲಿಯ ರಾಜಘಾಟ್ ನಿಂದ ಬಳ್ಳಾರಿಗೆ ತಂದು ಅಲ್ಲಿಯ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅಲ್ಲಿಂದ ಬಿಂಧು ಮಾಧವ ಮಾಸ್ಟರ್ ನೇತೃತ್ವದಲ್ಲಿ ಕೂಡ್ಲಿಗಿಗೆ ತಂದು ಗುಡೇಕೋಟೆ ರಸ್ತೆಯ ಪಕ್ಕದ ಹೈಸ್ಕೂಲ್ ಮೈದಾನದ ಬದಿಯಲ್ಲಿ ತಾತ್ಕಾಲಿಕ ಕಟ್ಟೆ ನಿರ್ಮಿಸಿ ಇಡಲಾಯಿತು. ಚಿತಾಭಸ್ಮವನ್ನು ಅಂದಿನ ಹೈದರಾಬಾದ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಮಾನಂದ ತೀರ್ಥರ ಹಾಗೂ ಸಂಸದರಾಗಿದ್ದ ಟೇಕೂರು ಸುಬ್ರಹ್ಮಣ್ಯಂ ಸಮ್ಮುಖದಲ್ಲಿ 1948 ರಲ್ಲಿ ಇಡಲಾಗಿತ್ತು. ಆ ನಂತರ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಕೂಡ್ಲಿಗಿಗೆ ಭೇಟಿ ನೀಡಿ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕ ವೀಕ್ಷಿಸಿ ಅನುದಾನ ಬಿಡುಗಡೆ ಮಾಡಿ ಅಮೃತ ಶಿಲೆಯ ಮಂಟಪ ಕೂಡ್ಲಿಗಿಯಲ್ಲಿ ನಿರ್ಮಿಸಿದ್ದರು.

ಮೊದಲೆಲ್ಲ ಈ ಸ್ಮಾರಕ ಹಂದಿ ನಾಯಿ ವಾಸಿಸುವ ಸ್ಥಳವಾಗಿತ್ತು. ಸ್ಥಳೀಯ ದೇಶಪ್ರೇಮಿಗಳ ಹೋರಾಟದ ಫಲವಾಗಿ ಹಾಗೂ ಕೂಡ್ಲಿಗಿ ಶಾಸಕರಾಗಿದ್ದ ಎನ್.ವೈ. ಗೋಪಾಲಕೖಷ್ಣ ಇಚ್ಛಾಶಕ್ತಿಯ ಫಲವಾಗಿ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕ ಅಭಿವೃದ್ಧಿಯಾಗುತ್ತಾ ಬಂದಿದೆ. ಇಂದು ಈ ಸ್ಮಾರಕ ಅಭಿವೃದ್ಧಿಯಾಗುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವಂತಾಗಿದೆ. ಕೂಡ್ಲಿಗಿಯ ಗಾಂಧಿ ಸ್ಮಾರಕ ಸಮಿತಿ ಹಾಗೂ ಕೂಡ್ಲಿಗಿಯ ಪ್ರಗತಿಪರ ಸಂಘಟನೆಗಳ ನಿರಂತರ ಹೋರಾಟದ ಫಲವೂ ಹೌದು. ಯಾವುದೇ ರಾಷ್ಟ್ರೀಯ ಹಬ್ಬ ಬರಲಿ, ಗಾಂಧಿ ಜಯಂತಿ ಹಾಗೂ ಹುತಾತ್ಮರ ದಿನಾಚರಣೆಯಂದು ಈ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಹುತಾತ್ಮರನ್ನು ನೆನೆಯುತ್ತಾರೆ. ಅ. 2 ಹಾಗೂ ಆ.15 ಸೇರಿದಂತೆ ರಾಷ್ಟ್ರೀಯ ಹಬ್ಬಗಳಲ್ಲಿ ಹಬ್ಬದ ರೀತಿಯಲ್ಲಿ ಇಲ್ಲಿಯ ಜನತೆ ವಿದ್ಯಾರ್ಥಿಗಳು ಈ ಸ್ಮಾರಕದ ಬಳಿ ಸೇರಿ ಹುತಾತ್ಮಕರಿಗೆ ನಮನ ಸಲ್ಲಿಸುತ್ತಾರೆ. ಕೂಡ್ಲಿಗಿಯಲ್ಲಿ ಯಾವುದೇ ಜನಪರ ಹೋರಾಟ ನಡೆಯಲಿ ಮೊದಲು ಈ ಸ್ಮಾರಕದಿಂದಲೇ ಪ್ರಾರಂಭವಾಗುತ್ತದೆ. ಕೂಡ್ಲಿಗಿ ಪಟ್ಟಣಕ್ಕೆ ಯಾವುದೇ ಮುಖಂಡರು ಬರಲಿ ಮೊದಲು ಈ ಸ್ಮಾರಕಕ್ಕೆ ಬಂದು ಹುತಾತ್ಮರನ್ನು ನೆನೆದು ಮುಂದಿನ ಕಾರ್ಯಗಳಿಗೆ ಹೋಗುತ್ತಾರೆ.

ಕೂಡ್ಲಿಗಿ ಪಟ್ಟಣದಲ್ಲಿರುವ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕ ಈಗಾಗಲೇ ರಾಷ್ಟ್ರೀಯ ಸ್ಮಾರಕವೆಂದು ಘೋಷಣೆಯಾಗಿದ್ದು, ಇತ್ತೀಚಿನವರೆಗೂ ಅಭಿವೖದ್ಧಿ ಮರೀಚಿಕೆಯಾಗಿತ್ತು. ಈಗ ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಿದೆ. ಈ ತಾಣ ಪ್ರವಾಸಿತಾಣವಾಗಿ ರೂಪುಗೊಳ್ಳಬೇಕಿದೆ. ಇಂದಿನ ಯುವಕರಿಗೆ ದೇಶಭಕ್ತಿಯ ತಾಣವಾಗಿ ಈ ಸ್ಮಾರಕ ಅಭಿವೃದ್ಧಿಪಡಿಸಬೇಕಿದೆ ಎಂದು ಗಾಂಧಿ ಸ್ಮಾರಕ ಸಮಿತಿ ಸದಸ್ಯ ನಾಗರಾಜಪ್ಪ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟ್ಟ ಕೊಡವ ಸಮಾಜದಲ್ಲಿ ಕೈಲ್ ಪೋಳ್ದ್ ಒತ್ತೋರ್ಮೆ ಕೂಟ
ಮಡಿಕೇರಿಯಲ್ಲಿ ಅಂತರ ಕಾಲೇಜು ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ