ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಯಾವಾಗ?

KannadaprabhaNewsNetwork |  
Published : May 03, 2026, 02:30 AM IST
ಸ | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯವು ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ರೈತರ ಜೀವನಾಡಿಯಾಗಿದೆ.

ಸಿ.ಕೆ. ನಾಗರಾಜ

ಹೊಸಪೇಟೆ: ತುಂಗಭದ್ರಾ ಜಲಾಶಯವು ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ರೈತರ ಜೀವನಾಡಿಯಾಗಿದೆ. ಜಲಾಶಯ 75 ವರ್ಷ ಹಳೆಯದಾಗಿದ್ದು, ಈ ಜಲಾಶಯಕ್ಕೆ ಈಗ 33 ಕ್ರಸ್ಟ್‌ ಗೇಟ್‌ಗಳನ್ನು ಹೊಸದಾಗಿ ಅಳವಡಿಕೆಯಾಗುವ ಮೂಲಕ ಜಲಾಶಯವು 50-60 ವರ್ಷಗಳ ಸುಭದ್ರವಾಗಲಿವೆ.

ಆದರೆ ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಯಾವಾಗ? ಎನ್ನುವ ಪ್ರಶ್ನೆ ಈ ಭಾಗದ ರೈತರದ್ದಾಗಿದೆ.

75 ವರ್ಷಗಳ ಹಿಂದೆ ನಿರ್ಮಾಣವಾದ ತುಂಗಭದ್ರಾ ಜಲಾಶಯ 2024ರ ವರೆಗೆ ಗಟ್ಟಿಮುಟ್ಟಾಗಿತ್ತು. ಆದರೆ 2024ರ ಆಗಸ್ಟ್‌ 10ರ ರಾತ್ರಿ ಜಲಾಶಯದ 19ನೇ ಕ್ರಸ್ಟ್‌ಗೇಟ್‌ನ ಚೈನ್ ತುಂಡರಿಸಿಕೊಂಡು ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. 60-70 ಟಿಎಂಸಿ ನೀರು ನದಿ ಪಾಲಾಗಿತ್ತು. ಅವಘಡ ನಡೆದಾಗ ಜಲಾಶಯದ ಭದ್ರತೆ ಬಗ್ಗೆ ಆತಂಕ ಮೂಡಿತ್ತು.

ತಕ್ಷಣವೇ ರಾಜ್ಯ ಸರ್ಕಾರ ಜಲಾಶಯ ತಜ್ಞರು, ತುಂಗಭದ್ರಾ ಮಂಡಳಿಯ ಅಧಿಕಾರಿಗಳು ನಿರಂತರವಾಗಿ ಶ್ರಮಿಸಿದ ಫಲವಾಗಿ ಜಲಾಶಯದ ಎಲ್ಲ 33 ಹಳೆಯ ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸಿ ಹೊಸ ಕ್ರಸ್ಟ್ ಗೇಟ್‌ ಅಳವಡಿಸುವ ಮೂಲಕ ರೈತರಲ್ಲಿ ಸಂತಸ ಮೂಡಿಸಿದ್ದಾರೆ.

30 ಟಿಎಂಸಿ ಹೂಳು:

ಆದರೆ, ಜಲಾಶಯದಲ್ಲಿ ಈಗ ಕೇವಲ 10.629 ಟಿಎಂಸಿ ನೀರು ಉಳಿದಿದೆ. ಕುಡಿಯುವ ನೀರಿಗೆ ಆದ್ಯತೆ ನೀಡಬೇಕಾಗಿದೆ. ಜಲಾಶಯದಲ್ಲಿ ಈಗಾಗಲೇ 30 ಟಿಎಂಸಿಗಿಂತ ಹೆಚ್ಚು ಹೂಳು ತುಂಬಿಕೊಂಡಿದೆ. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿರುವುದರಿಂದ ಇದಕ್ಕೆ ಪರ್ಯಾಯವಾಗಿ ನವಲಿ ಸಮಾನಾಂತರ ಜಲಾಶಯ ಯೋಜನೆ ನಿರ್ಮಿಸುವ ಬಗ್ಗೆ ಅನೇಕ ವರ್ಷಗಳಿಂದ ಈ ಭಾಗದ ರೈತರು, ಪ್ರಗತಿಪರ ಹೋರಾಟಗಾರರು ಹೋರಾಟ ನಡೆಸುತ್ತಾ ಬಂದಿದ್ದಾರೆ.

ಆದರೆ ಹಿಂದಿನ ಸರ್ಕಾರಗಳು, ಈಗಿನ ಸರ್ಕಾರ ನವಲಿ ಜಲಾಶಯ ಯೋಜನೆ ಬಗ್ಗೆ ಡಿಪಿಆರ್‌ ಸಿದ್ಧವಾಗಿದೆ ಎಂದು ಹೇಳುತ್ತಾ ಬರುತ್ತಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ, ತುಂಗಭದ್ರಾ ಮಂಡಳಿ ಅನುಮತಿ ಬೇಕಿರುವುದರಿಂದ ಯೋಜನೆ ನಿಧಾನವಾಗಿದೆ ಎಂದು ರಾಜಕಾರಣಿಗಳು ಹೇಳುತ್ತಿದ್ದಾರೆ.

ನವಲಿ ಸಮಾನಾಂತರ ಜಲಾಶಯ ಯೋಜನೆ ಇನ್ನೂ ಕಾಗದದಲ್ಲೇ ಇದೆ. ಕೆಲಸ ಮಾತ್ರ ನೆಲಮಟ್ಟದಿಂದ ಆರಂಭವಾಗಿಲ್ಲ.

ಸಿಎಂ ಸಿದ್ದರಾಮಯ್ಯ 2026-27ನೇ ಬಜೆಟ್‌ನಲ್ಲಿ ನವಲಿ ಸಮಾನಾಂತರ ಜಲಾಶಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್‌ ಕೂಡ ನವಲಿ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದರು.

ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್‌ ಈ ಮೊದಲು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಕ್ರಸ್ಟ್‌ ಗೇಟ್‌ ಅಳವಡಿಸುವ ಕಾರ್ಯ ವೀಕ್ಷಿಸಿದ್ದರು. ಈಗ ಕ್ರಸ್ಟ್‌ ಗೇಟ್‌ ಅಳವಡಿಕೆ ಪೂರ್ಣಗೊಂಡಿರುವುದರಿಂದ ವೀಕ್ಷಣೆಗೆ ಭಾನುವಾರ ಮತ್ತೆ ಜಲಾಶಯಕ್ಕೆ ಆಗಮಿಸುತ್ತಿರುವುದರಿಂದ ನವಲಿ ಸಮಾನಾಂತರ ಜಲಾಶಯದ ಯೋಜನೆ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ, ಮುಂದಿನ ದಿನಗಳಲ್ಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರದಿಂದ ಘೋಷಿಸಬಹುದು ಎನ್ನುವುದು ರೈತರ ಆಶಾಭಾವನೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಾಯಣದ ಭಕ್ತಿರಸದಲ್ಲಿ ಮಿಂದೆದ್ದ ಗೋಕುಲಂ ಗೋಶಾಲೆ
ದುಬೈನಿಂದ ಪತಿ ಪಾರ್ಸೆಲ್‌ ಕಳುಹಿಸಿದ್ದಾರೆ ಎಂದು ನಂಬಿಸಿ ಮಹಿಳೆಗೆ ವಂಚನೆ