ಚಿನ್ನ ಹೋಗಿದ್ದೆಲ್ಲಿಗೆ? ಸದಾಶಿವನಗರಕ್ಕೋ? ಚಾಮರಾಜಪೇಟೆಗೋ?: ಶಾಸಕ ಸುನೀಲ್‌

KannadaprabhaNewsNetwork | Published : Mar 12, 2025 12:45 AM

ಸಾರಾಂಶ

ನಟಿ ರನ್ಯಾರಾವ್‌ ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಸರ್ಕಾರ ಅಥವಾ ಸಚಿವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದರ ಹಿಂದೆ ಯಾರ್‍ಯಾರು ಇದ್ದಾರೆ ಎಂಬುದು ಬಹಿರಂಗವಾಗಬೇಕು ಎಂದು ಬಿಜೆಪಿ ಶಾಸಕ ವಿ.ಸುನೀಲ್‌ ಕುಮಾರ್‌ ಆಗ್ರಹಿಸಿದ್ದಾರೆ.

ಬೆಂಗಳೂರು: ನಟಿ ರನ್ಯಾರಾವ್‌ ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಸರ್ಕಾರ ಅಥವಾ ಸಚಿವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದರ ಹಿಂದೆ ಯಾರ್‍ಯಾರು ಇದ್ದಾರೆ ಎಂಬುದು ಬಹಿರಂಗವಾಗಬೇಕು ಎಂದು ಬಿಜೆಪಿ ಶಾಸಕ ವಿ.ಸುನೀಲ್‌ ಕುಮಾರ್‌ ಆಗ್ರಹಿಸಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಉಳಿದ ಎಲ್ಲಾ ಹಗರಣಗಳ ಜೊತೆ ರಾಜ್ಯ ಸರ್ಕಾರ ಗೋಲ್ಡ್ ಸ್ಮಗ್ಲಿಂಗ್‌ನಲ್ಲೂ ದೊಡ್ಡ ಪಾತ್ರ ವಹಿಸಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಕಿಡಿಕಾರಿದರು. ತಿಂಗಳಿಗೆ 4-5 ಬಾರಿ ದುಬೈಗೆ ಹೋಗಿ ಚಿನ್ನ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು ಎಂದು ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ. ಹಾಗಾದರೆ ಈ ಹಿಂದೆ ಕಳ್ಳತನ ಮಾಡಿಕೊಂಡು ಬಂದ ಚಿನ್ನ ಎಲ್ಲಿಗೆ ಹೋಗಿದೆ? ಅದು ಚಾಮರಾಜಪೇಟೆಗೆ ಹೋಗಿದೆಯಾ? ಅಥವಾ ಸದಾಶಿವನಗರಕ್ಕೆ ಹೋಗಿದೆಯಾ? ಅಥವಾ ವಿಧಾನಸೌಧದ ಮೊಗಸಾಲೆಯ ತನಕ ಬಂದಿದೆಯಾ? ಎಂಬುದು ಗೊತ್ತಾಗಬೇಕು ಎಂದರು.

ಕೆಲವು ವರ್ಷಗಳ ಹಿಂದೆ ಕೇರಳದ ಸಿಎಂ ಗೋಲ್ಡ್ ಸ್ಮಗ್ಲಿಂಗ್‌ನಲ್ಲಿ ಭಾಗಿ ಎಂಬುದು ಎಷ್ಟು ದೊಡ್ಡ ಸುದ್ದಿಯಾಗಿತ್ತು ಎನ್ನುವುದು ಗೊತ್ತಿದೆ. ಅದೇ ರೀತಿಯಾದ ವಾತಾವರಣ ಇವತ್ತು ರಾಜ್ಯದಲ್ಲಿ ಕಂಡು ಬರುತ್ತಿದೆ.

ಇದೆಲ್ಲವೂ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಗೃಹ ಸಚಿವರು ಮೂರು ದಿನದಿಂದ ನನಗೇನೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಕಳ್ಳ ಸಾಗಾಣಿಕೆ ಆಗಿದ್ದರೂ ಏನೂ ಆಗಿಲ್ಲ ಎಂದು ಸರ್ಕಾರ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಪ್ರಕರಣದ ಹಿಂದೆ ಯಾರ್‍ಯಾರ ಕೈವಾಡ ಇದೆ? ಸರ್ಕಾರ ಮತ್ತು ರಾಜಕಾರಣಿಗಳ ಕೈವಾಡ ಇಲ್ಲದೆ ಇಷ್ಟೆಲ್ಲಾ ನಡೆಯೋಕೆ ಸಾಧ್ಯ ಇದೆಯಾ? ಸರ್ಕಾರ ಶಾಸಕರಿಗೆ, ಸಚಿವರಿಗೆ, ಹಿರಿಯ ಅಧಿಕಾರಿಗಳಿಗೆ ಪ್ರೋಟೋಕಾಲ್ ನೀಡುತ್ತದೆ. ಒಬ್ಬ ಅಧಿಕಾರಿಯ ಮಗಳಿಗೆ ಪ್ರೋಟೋಕಾಲ್ ಕೊಡುತ್ತದೆ ಎನ್ನುವುದಾದರೆ ಈ ಪ್ರಕರಣದಲ್ಲಿ ಪರೋಕ್ಷವಾಗಿ ನಿಂತು ಮಾಡುತ್ತಿದೆಯಾ ಎಂಬ ಅನುಮಾನ ಬರುತ್ತಿದೆ ಎಂದರು.

ಕೇಂದ್ರ ಸರ್ಕಾರದ ವೈಫಲ್ಯ ಆರೋಪವನ್ನು ತಳ್ಳಿ ಹಾಕಿದ ಸುನೀಲ್‌ ಕುಮಾರ್‌, ಕೇಂದ್ರ‌ ಸರ್ಕಾರ, ಡಿಆರ್‌ಐ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಿರುವುದಕ್ಕಾಗಿ ಇದು ಬಹಿರಂಗವಾಗಿದೆ. ಇದಕ್ಕಿಂತ ಮುಂಚೆ ಆಗಿರುವ ಸ್ಮಗ್ಲಿಂಗ್‌ನಲ್ಲಿ ಚಿನ್ನ ಎಲ್ಲಿಗೆ ಹೋಗಿದೆ ಎಂಬುದು ಗೊತ್ತಾಗಬೇಕಿದೆ. ಕೇಂದ್ರ ಸರ್ಕಾರದ ಪಾತ್ರ ಇದೆ ಎಂದು ರಾಜ್ಯದಲ್ಲಾಗಿರುವ ಕಳ್ಳ ಸಾಗಣೆಯನ್ನು ಮರೆತು ಬಿಡಲಾಗುತ್ತದೆಯೇ? ಈ ಸಾಗಾಣಿಕೆಯಲ್ಲಿ ರಾಜ್ಯ ಸರ್ಕಾರದ ಕೈವಾಡ ಏನೂ ಇಲ್ಲವೇ? ಯಾವ ಸಚಿವರು ಇದರ ಹಿಂದೆ ಬೆಂಗಾವಲಾಗಿ ನಿಂತಿದ್ದಾರೆ ಎಂಬುದೆಲ್ಲಾ ಚರ್ಚೆಯಾಗಬೇಕಿದೆ. ನನಗೇನೂ ಗೊತ್ತಿಲ್ಲ? ಏನು ಗೊತ್ತಿಲ್ಲ? ಎಂದು ಹೇಳುತ್ತಿರುವುದು ಹಲವು ಅನುಮಾನಗಳಿಗೆ ಪುಷ್ಟಿ ನೀಡಿದೆ ಎಂದು ತಿಳಿಸಿದರು.

Share this article