ರಾಜ್ಯದಲ್ಲಿ ಮನಷ್ಯನ ಜೀವಕ್ಕೆ ಗ್ಯಾರಂಟಿ ಎಲ್ಲಿದೆ?

KannadaprabhaNewsNetwork | Updated : Mar 20 2024, 01:04 PM IST

ಸಾರಾಂಶ

ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಪ್ರತಿ ತಿಂಗಳೂ 22 ಲಕ್ಷ ಕ್ವಿಂಟಲ್ ಅಕ್ಕಿ ನೀಡುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಬಡವರಿಗೆ ನಾನು ಅನ್ನ ಭಾಗ್ಯ ನೀಡಿದ್ದೇನೆ ಎನ್ನುತ್ತಾರೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಟೀಕಿಸಿದರು.

ಕನ್ನಡಪ್ರಭವಾರ್ತೆ ನರಸಿಂಹರಾಜಪುರ

ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಪ್ರತಿ ತಿಂಗಳೂ 22 ಲಕ್ಷ ಕ್ವಿಂಟಲ್ ಅಕ್ಕಿ ನೀಡುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಬಡವರಿಗೆ ನಾನು ಅನ್ನ ಭಾಗ್ಯ ನೀಡಿದ್ದೇನೆ ಎನ್ನುತ್ತಾರೆ ಎಂದು ಲೋಕಸಭಾ ಚುನಾವಣೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಟೀಕಿಸಿದರು.

ಮಂಗಳವಾರ ಅಗ್ರಹಾರದ ಉಮಾ ಮಹೇಶ್ವರ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಈ ಚುನಾವಣೆಯು ಭವಿಷ್ಯ ನಿರ್ಧರಿಸುವ ಚುನಾವಣೆಯಾಗಿದೆ. ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ನೀಡಿದ್ದೇವೆ ಎನ್ನುತ್ತಿದೆ. ಆದರೆ, ಕರ್ನಾಟಕ ರಾಜ್ಯವು ಉಗ್ರವಾದಿಗಳಿಗೆ ಸ್ವರ್ಗವಾಗುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ಹೋಟೆಲ್ ಗಳಲ್ಲಿ ಬಾಂಬ್ ಇಡುತ್ತಾರೆ. ಬೆಂಗಳೂರಿನಲ್ಲಿ ಅಂಗಡಿಯಲ್ಲಿ ಹನುಮಾನ್ ಹಾಡು ಹಾಕಿದರೆ ಹಲ್ಲೆ ಮಾಡುತ್ತಾರೆ. ಮನುಷ್ಯರ ಜೀವಗಳಿಗೆ ಯಾರು ಗ್ಯಾರಂಟಿ ನೀಡುತ್ತಾರೆ. ನರೇಂದ್ರ ಮೋದಿಯವರು ಮನುಷ್ಯರ ಜೀವಕ್ಕೆ ಗ್ಯಾರಂಟಿ ನೀಡುತ್ತಾರೆ ಎಂದರು.

ಪಕ್ಷದ ಆದೇಶದಂತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ನರೇಂದ್ರ ಮೋದಿಯವರು ದೇಶ ದೊಡ್ಡದು, ಭಾರತ ದೊಡ್ಡದು ಎನ್ನುತ್ತಾರೆ. ಆದರೆ, ಕೆಲವರು ಬಾಂಬ್‌ ಹಾಕುವುವರನ್ನು ಬ್ರದರ್ಸ ಎಂದು ಕರೆದು ಬೆಂಬಲ ನೀಡುತ್ತಾರೆ ಎಂದು ಲೇವಡಿ ಮಾಡಿದರು. ನರೇಂದ್ರ ಮೋದಿಯವರು ಈಗ ವಿಶ್ವದ ನಾಯಕರಾಗಿ ಹೊರಹೊಮ್ಮಿದ್ದಾರೆ. ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕು ಎಂಬುದು ಎಲ್ಲಾ ರಾಷ್ಟ ಭಕ್ತರ ಆಶಯವಾಗಿದೆ ಎಂದರು.

ನಾನು ಗ್ರಾಮ ಪಂಚಾಯಿತಿ ಸದಸ್ಯನಾಗಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದು ನಂತರ 4 ಬಾರಿ ವಿಧಾನ ಪರಿಷತ್‌ ಸದಸ್ಯನಾಗಿ ಕೆಲಸ ಮಾಡಿದ್ದೇನೆ. 3 ಬಾರಿ ಮಂತ್ರಿಯಾಗಿದ್ದೇನೆ, 2 ಬಾರಿ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದು ಈಗಲೂ ವಿರೋಧ ಪಕ್ಷದ ನಾಯಕನಾಗಿದ್ದೇನೆ ಎಂದರು.

ಮಾಜಿ ಸಚಿವ ಡಿ.ಎನ್‌. ಜೀವರಾಜ್‌ ಮಾತನಾಡಿ, ಕೋಟಾ ಶ್ರೀನಿವಾಸ ಪೂಜಾರಿಯವರು ಮುಜರಾಯಿ ಇಲಾಖೆಯ ಮಂತ್ರಿಯಾಗಿದ್ದಾಗ ಇತಿಹಾಸದಲ್ಲಿ ಮರೆಯಲಾಗದ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ದೇವಸ್ಥಾನದ ಹಣವನ್ನು ಮಸೀದಿಗೆ ನೀಡುತ್ತಿರುವುದನ್ನು ತಪ್ಪಿಸಿದ್ದಾರೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಸರ್ವಸಮ್ಮತ ಅಭ್ಯರ್ಥಿಯಾಗಿದ್ದಾರೆ. ಬಡ ಕುಟುಂಭದಿಂದ ಬಂದಿದ್ದು ಬಡವರ ಕಷ್ಟಗಳನ್ನು ಅರಿತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 27 ಸಾವಿರ ಮತಗಳ ಅಂತರದಿಂದ ಗೆದ್ದಿದ್ದು ಈ ಬಾರಿ ಅದಕ್ಕಿಂತ ಜಾಸ್ತಿ ಮತ ಪಡೆದು ಕೋಟಾ ಶ್ರೀನಿವಾಸ ಪೂಜಾರಿ ಗೆಲ್ಲಿಸಿ ಅವರು ಕೇಂದ್ರ ಮಂತ್ರಿಯಾಗುವುದನ್ನು ನೋಡಬೇಕು. ಪ್ರತಿ ಬಿಜೆಪಿ ಕಾರ್ಯಕರ್ತನೂ ಮನೆ, ಮನೆಗೆ ಹೋಗಿ ಪ್ರಚಾರ ಮಾಡಬೇಕು. ಈ ದೇಶದಲ್ಲಿ ಏಕರೂಪ ನಾಗರೀಕ ಕಾಯ್ದೆ ಜಾರಿಗೆ ಬರದಿದ್ದರೆ 2047ರ ಸುಮಾರಿಗೆ ದೇಶದಲ್ಲಿ ಹಿಂದೂಗಳೇ ಅಲ್ಪ ಸಂಖ್ಯಾತರಾಗುತ್ತಾರೆ. ಬಿಜೆಪಿ ಶೃಂಗೇರಿ ಕ್ಷೇತ್ರದಲ್ಲಿ ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಸಹಕಾರ ಸಂಘಗಳಲ್ಲೂ ಗೆಲವು ಸಾಧಿಸಿದೆ. ಈ ಲೋಕ ಸಭಾ ಚುನಾವಣೆಯಲ್ಲಿ ಸೈನಿಕರಂತೆ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಗಲ್ಲಿಸಬೇಕು ಎಂದು ಕರೆ ನೀಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ ಮಾತನಾಡಿ, ಕೋಟಾ ಶ್ರೀನಿವಾಸ ಪೂಜಾರಿ ಅಭ್ಯರ್ಥಿ ಎಂದು ಘೋಷಣೆ ಆದ ತಕ್ಷಣದಿಂದಲೇ ಬಿಜೆಪಿ ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿದೆ. ಈಗಾಗಲೇ ತರೀಕೆರೆ, ಶೃಂಗೇರಿ, ಕೊಪ್ಪ, ಚಿಕ್ಕಮಗಳೂರಿನಲ್ಲಿ ಕಾರ್ಯಕರ್ತರ ಸಭೆ ಮುಗಿಸಿದ್ದೇವೆ. ತರೀಕೆರೆಯಲ್ಲಿ ಉಳಿದಿದೆ. ಕೋಟಾ ಶ್ರೀನಿವಾಸ ಪೂಜಾರಿ ದೇವತಾ ಮನುಷ್ಯರಾಗಿದ್ದಾರೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ದೊಡ್ಡ ಕ್ಷೇತ್ರವಾಗಿದ್ದು 300 ಕಿ.ಮೀ. ವ್ಯಾಪ್ತಿ ಹೊಂದಿದೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನು ನಾನೇ ನರೇಂದ್ರ ಮೋದಿ, ನಾನೇ ಕೋಟಾ ಶ್ರೀನಿವಾಸ ಪೂಜಾರಿ ಎಂದು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಬಿಜೆಪಿ ಅಧ್ಯಕ್ಷ ಅರುಣಕುಮಾರ್ ವಹಿಸಿದ್ದರು. ಸಭೆಯಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಕಲ್ಮರುಡಪ್ಪ, ಬಿ.ಕೆ. ಗಣೇಶರಾವ್‌, ರಾಮಸ್ವಾಮಿ, ಶೃಂಗೇರಿ ಶಿವಣ್ಣ, ವೆನಿಲ್ಲಾ ಭಾಸ್ಕರ್‌, ಪುಣ್ಯಪಾಲ್‌, ರಶ್ಮಿದಯಾನಂದ್‌, ಕೆಸವಿ ಮಂಜುನಾಥ್‌, ಪುತ್ತೂರು ವಿಕಾಸ್‌, ಎಚ್‌.ಡಿ. ಲೋಕೇಶ್‌, ಎ.ಬಿ. ಮಂಜುವಾಥ್‌ ಮತ್ತಿತರರು ಇದ್ದರು.-----------------

ನರಸಿಂಹರಾಜಪುರ ಅಗ್ರಹಾರದ ಉಮಾ ಮಹೇಶ್ವರ ಸಭಾಂಗಣದಲ್ಲಿ ಮಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿದರು.

Share this article