ಕಲೆ ಇದ್ದಲ್ಲಿ ಪರಿಸರ ರಕ್ಷಣೆ, ಕಾಳಜಿಯೂ ಇರುತ್ತದೆ: ಭಟ್ಟಾರಕ ಶ್ರೀ

KannadaprabhaNewsNetwork |  
Published : Oct 22, 2024, 12:17 AM IST
14ನೇ ದ್ವೈವಾರ್ಷಿಕ ಸರೋವರ ವಿಚಾರ ಸಂಕಿರಣದ ಸಮಾರೋಪ ಸಮಾರಂಭ | Kannada Prabha

ಸಾರಾಂಶ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಎನರ್ಜಿ ಮತ್ತು ವೆಟ್ ಲಾಂಡ್ಸ್ ರಿಸರ್ಚ್ ಗ್ರೂಪ್ ಆಶ್ರಯದಲ್ಲಿ ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ 4 ದಿನಗಳ ಲೇಕ್ ಅಂತಾರಾಷ್ಟ್ರೀಯ ದ್ವೈವಾರ್ಷಿಕ ಸಮ್ಮೇಳನ ಇತ್ತೀಚೆಗೆ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ವಿಜ್ಞಾನಿ ಇದ್ದಲ್ಲಿ ಜ್ಞಾನ, ಜ್ಞಾನ ಇದ್ದಲ್ಲಿ ಕಲೆ ಇರುತ್ತದೆ. ಅಂತೆಯೇ ಕಲೆ ಇದ್ದಲ್ಲಿ ಪರಿಸರ ರಕ್ಷಣೆ ಮತ್ತು ಕಾಳಜಿಯೂ ಇರುತ್ತದೆ ಎಂದು ಮೂಡುಬಿದಿರೆಯ ಶ್ರೀ ಜೈನಮಠದ ಡಾ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಎನರ್ಜಿ ಮತ್ತು ವೆಟ್ ಲಾಂಡ್ಸ್ ರಿಸರ್ಚ್ ಗ್ರೂಪ್ ಆಶ್ರಯದಲ್ಲಿ ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ 4 ದಿನಗಳ ಲೇಕ್ ಅಂತಾರಾಷ್ಟ್ರೀಯ ದ್ವೈವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸ್ತುತದಲ್ಲಿ ಪ್ರಕೃತಿಯಲ್ಲಿ ಉಂಟಾಗುತ್ತಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಕಾರಣವನ್ನು ಅರ್ಥೈಸಿಕೊಳ್ಳುವುದು ಬಹಳ ಅಗತ್ಯವಿದೆ. ಮನುಷ್ಯನ ಅನೇಕ ಪರಿಸರ ವಿರೋಧಿ ಚಟುವಟಿಕೆಗಳಿಂದ ನೆಲ, ಜಲ, ವಾತಾವರಣ, ಪಶು, ಪಕ್ಷಿಗಳಿಗೆ ಉತ್ತಮ ವಾತಾವರಣವನ್ನು ರೂಪಿಸಿಕೊಡುವಲ್ಲಿ ಹಾನಿಯುಂಟಾಗುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಪ್ರೊ ಚಾನ್ಸಲರ್ ಮೆಲ್ವಿನ್ ಡಿ ಕುನ್ಹ ಮಾತನಾಡಿ, ಒಂದಲ್ಲ ಒಂದು ರೀತಿಯಲ್ಲಿ ಮಾನವ ಮತ್ತು ಪ್ರಕೃತಿ ಪರಸ್ಪರ ಸಂಪರ್ಕವನ್ನು ಹೊಂದಿದೆ. ಪ್ರಕೃತಿಯ ನಿಜ ಸೌಂದರ್ಯವನ್ನು ಕಣ್ಣಾರೆ ಅನುಭವಿಸಬೇಕು ಮತ್ತು ಮುಂದಿನ ಪೀಳಿಗೆ ಸುರಕ್ಷಿತ ಜೀವನ ನಡೆಸಲು ನಾವು ಪರಿಸರವನ್ನು ಉಳಿಸಬೇಕು ಎಂದು ಸಲಹೆ ನೀಡಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಪ್ರಕೃತಿಯಲ್ಲಿ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಐಐಎಸ್‌ಸಿ ಟಿ.ವಿ. ರಾಮಚಂದ್ರ ಅವರು ಲೇಕ್ 2024ರ ಗ್ರಾಮೀಣ ಮತ್ತು ನಗರ ವಲಯಗಳಿಗೆ ಶಿಫಾರಸು ಮಾಡಿದರು.

ಕಾರ್ಯಕ್ರಮದಲ್ಲಿ ವಿಜ್ಞಾನಿ ಟಿ.ವಿ. ರಾಮಚಂದ್ರ, ಪರಿಸರ ಹೋರಾಟಗಾರ ಎಂ.ಕುಮಾರಸ್ವಾಮಿ, ಕುಮಟಾದ ಐಐಎಸ್‌ಸಿ ಎಂ.ಡಿ. ಸುಭಾಷ್ ಚಂದ್ರನ್, ಎನ್ವಿರಾನ್ಮೆಂಟಲ್ ಸೈನ್ಸ್ ಕಠ್ಮಂಡು ವಿಶ್ವವಿದ್ಯಾಲಯದ ಪ್ರೊ. ಡಾ.ಸುಬೋಧ್ ಶರ್ಮ, ಡಾ. ರಾಜಶೇಖರ್, ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನ ಡಾ.ದೀಪಿಕಾ ಶೆಟ್ಟಿ, ಆಳ್ವಾಸ್ ಪದವಿ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಗಗನ ಲೋಕೇಶ್ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಎಸ್.ವಿನಯ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!