ಶಿವಾನಂದ ಗೊಂಬಿ
ನಮ್ಮ ಸಿಬ್ಬಂದಿ ಮೇಲೆ ಕಲ್ಲು ತೂರಿ ಹಲ್ಲೆ ನಡೆಸಿದ್ದನ್ನು ನೋಡಿ ಸುಮ್ಮನಿರಲಾಗಲಿಲ್ಲ. ಎಲ್ಲತ್ತೋ ರೋಷ ಉಕ್ಕಿ ಬಂತು... ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿದೆ. ಆತ ಕೇಳುವ ಸ್ಥಿತಿಯಲ್ಲಿರಲಿಲ್ಲ. ಮತ್ತೆ ಪರಾರಿಯಾಗಲು ಯತ್ನಿಸಿದ, ಹೀಗಾಗಿ ಕಾಲಿಗೆ ಗುಂಡು ಹಾರಿಸಿದೆ!
ಇದು ಇಲ್ಲಿನ ಭುವನೇಶ್ವರಿ ಜುವೆಲರಿ ಶಾಪ್‌ನಲ್ಲಿನ ಹತ್ತು ದಿನಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಅಂತಾರಾಜ್ಯ ದರೋಡೆಕೋರ ಫರ್ಹಾನ್ ಶೇಖನ ಮೇಲೆ ಗುಂಡು ಹಾರಿಸಿ, ಹೆಡಮುರಿ ಕಟ್ಟಿದ ಗೋಕುಲ ರೋಡ್ ಠಾಣೆಯ ಪಿಎಸ್‌ಐ ಕವಿತಾ ಮಾಡಗ್ಯಾಳ ಅವರ ಮಾತು.ಈ ಘಟನೆಯ ಬಳಿಕ ಇವರೀಗ ಹುಬ್ಬಳ್ಳಿ ಜನತೆಗೆ ಲೇಡಿ ಸಿಂಗಂ ಆಗಿದ್ದಾರೆ. "ಆ ಹೆಣ್ಮಗಳು ಭಾರೀ ಗಟ್ಟಿ ಅದಾಳ. ಅಂಥ ಅಜಾನುಬಾಹು ದರೋಡೆಕೋರ ಹಲ್ಲೆ ನಡೆಸುತ್ತಿದ್ದಾಗ ಅಂಜದೇ, ಅಳುಕದೇ ಗುಂಡು ಹಾರಿಸ್ಯಾಳ.. ಆಕಿ ಧೈರ್ಯ ಮೆಚ್ಚಬೇಕ್ರಿ.. ಖರೇನ ಅಂಥವರು ಪೊಲೀಸ್ ಇಲಾಖೆಗೆ ಬೇಕು. ಅವರು ನಿಜಕ್ಕೂ ಲೇಡಿ ಸಿಂಗಂ.. ನೋಡ್ರಿ " ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಭುವನೇಶ್ವರಿ ಜುವೆಲರಿ ಶಾಪ್‌ನಲ್ಲಿ ಭಾರೀ ಪ್ರಮಾಣದಲ್ಲಿ ಕಳ್ಳತನವಾಗಿತ್ತು. ಅದನ್ನು ಮುಂಬೈ ಮೂಲದ ಫರ್ಹಾನ್ ಶೇಖ ಸೇರಿದಂತೆ ಅಲ್ಲಿನ ಮೂವರು ಸೇರಿಕೊಂಡು ದರೋಡೆ ಮಾಡಿದ್ದರು ಎನ್ನಲಾಗಿದೆ. ಅವರಿಗೆ ಸ್ಥಳೀಯ ಇಬ್ಬರು ಸಹಕಾರ ನೀಡಿದ್ದರಂತೆ. ಈ ಮಾಹಿತಿ ಪಡೆದ ಪೊಲೀಸರು, ಮುಂಬೈನಿಂದ ಫರ್ಹಾನ್‌ನನ್ನು ಹೆಡೆಮುರಿ ಕಟ್ಟಿ ಕರೆ ತಂದಿದ್ದರು. ಆತ ತಮ್ಮ ಕಳ್ಳತನಕ್ಕೆ ಸ್ಥಳೀಯರಿಬ್ಬರು ನೆರವು ನೀಡಿದ್ದರು ಎಂದು ಬಾಯಿಬಿಟ್ಟಿದ್ದ.
ದಾರಿ ಮಧ್ಯದಲ್ಲಿ ಕಲ್ಲಿನಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಫರ್ಹಾನ ಯತ್ನಿಸಿದ್ದಾನೆ. ಇದರಿಂದ ಮಹಿಳಾ ಪೇದೆ ಹಾಗೂ ಮತ್ತೊಬ್ಬ ಪೇದೆ ಮಹೇಶ ಎಂಬಿಬ್ಬರು ಗಾಯಗೊಂಡಿದ್ದಾರೆ. ಪಿಐ ಹಟ್ಟಿ ಕೂಡ ನೆಲಕ್ಕೆ ಬಿದ್ದಿದ್ದಾರೆ. ಸ್ವಲ್ಪ ದೂರದಲ್ಲಿ ನಿಂತಿದ್ದ ಕವಿತಾ ಅವರಿಗೆ ತಮ್ಮ ಸಿಬ್ಬಂದಿ ಮೇಲೆ ಕಲ್ಲು ತೂರುತ್ತಿರುವುದನ್ನು ನೋಡಿ ತಡೆದುಕೊಳ್ಳಲು ಆಗಿಲ್ಲ. ಹೀಗೆ ಸ್ವಲ್ಪ ಯಾಮಾರಿದರೆ ಈತ ಮತ್ತೆ ತಪ್ಪಿಸಿಕೊಳ್ಳುತ್ತಾನೆ, ಸಿಗುವುದು ಕಷ್ಟ ಎಂಬ ಭಾವನೆ ಕವಿತಾ ಅವರಲ್ಲಿ ಬಂದಿದೆ.
ಕೂಡಲೇ ರಿವಾಲ್ವರ್ ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದರೆ ಗುಂಡು ಹೊಡೆಯುತ್ತೇನೆ ಎಂಬ ಎಚ್ಚರಿಕೆ ನೀಡಿದ್ದಾರೆ. ಆದರೂ ಆರೋಪಿ ಫರ್ಹಾನ ಅಟಾಟೋಪ ಮಾತ್ರ ನಿಂತಿಲ್ಲ. ಎಚ್ಚರಿಕೆ ನೀಡಿದರೂ ತಪ್ಪಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದ್ದರಿಂದ ಅನಿವಾರ್ಯವಾಗಿ ಕಾಲಿಗೆ ಗುಂಡು ಹಾರಿಸಬೇಕಾಯಿತು. ನಮ್ಮವರ ಮೇಲೆ ಹಲ್ಲೆ ಮಾಡುತ್ತಿದ್ದರೆ ಸಹಿಸಲು ಆಗಲಿಲ್ಲ. ಗುಂಡು ಹಾರಿಸಿದೆ ಎನ್ನುತ್ತಾರೆ ಕವಿತಾ. ಈ ಘಟನೆಯಲ್ಲಿ ಕವಿತಾ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ.