ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಉಪ ಚುನಾವಣೆಯ ಗುಸುಗುಸು...!

KannadaprabhaNewsNetwork |  
Published : Nov 30, 2026, 03:15 AM IST
ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ | Kannada Prabha

ಸಾರಾಂಶ

ಯೋಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಹಾಲಿ ಶಾಸಕ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ, ಎರಡು ವಾರಗಳ ಒಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಧಾರವಾಡದ ಗ್ರಾಮೀಣ ರಾಜಕೀಯ ವಲಯದಲ್ಲಿ ಉಪಚುನಾವಣೆಯ ಪ್ರಶ್ನೆ ಮತ್ತೇ ಮುನ್ನೆಲೆಗೆ ಬಂದಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಮುನ್ನಲೆಗೆ ಬಂದ ಉಪ ಚುನಾವಣೆ ಚರ್ಚೆಗಳು

ವಿನಯ ಕುಲಕರ್ಣಿ ಕುಟುಂಬಕ್ಕೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಸಾಧ್ಯತೆ ಹೆಚ್ಚು

ಉಪ ಚುನಾವಣೆ ಕುರಿತು ಆಂತರಿಕ ಸಿದ್ಧತೆಯಲ್ಲಿದೆ ಬಿಜೆಪಿ

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಯೋಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಹಾಲಿ ಶಾಸಕ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ, ಎರಡು ವಾರಗಳ ಒಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಧಾರವಾಡದ ಗ್ರಾಮೀಣ ರಾಜಕೀಯ ವಲಯದಲ್ಲಿ ಉಪಚುನಾವಣೆಯ ಪ್ರಶ್ನೆ ಮತ್ತೇ ಮುನ್ನೆಲೆಗೆ ಬಂದಿದೆ.

ಸುಪ್ರೀಂ ಕೋರ್ಟ್‌ನ ತೀರ್ಪು ವಿನಯ ಕುಲಕರ್ಣಿ ಅವರ ಬೆಂಬಲಿಗರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪೆಟ್ಟು ನೀಡಿದ್ದು, ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆಗಳ ಬಗ್ಗೆ ಕ್ಷೇತ್ರದ ಮತದಾರರಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.

ಆಘಾತ ನೀಡಿದ ತೀರ್ಪು:

ಕರ್ನಾಟಕ ಹೈಕೋರ್ಟ್‌ನಿಂದ ಜಾಮೀನು ಪಡೆದು, ಸುಮಾರು ಐದು ವರ್ಷಗಳ ಬಳಿಕ ತಮ್ಮ ಕ್ಷೇತ್ರಕ್ಕೆ ಮರಳಿದ್ದ ವಿನಯ ಕುಲಕರ್ಣಿ ಮತ್ತೆ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಲು ಆಶಿಸಿದ್ದರು. ಧಾರವಾಡಕ್ಕೆ ಬಂದಾಗಿನಿಂದ ಸಕ್ರೀಯವಾಗಿ ಅದೇ ಮಾರ್ಗದಲ್ಲಿ ಹೊರಟಿದ್ದರು. ಆದರೆ, ಸುಪ್ರೀಂ ಕೋರ್ಟ್ ಅವರ ಜಾಮೀನನ್ನು ರದ್ದುಗೊಳಿಸಿರುವುದು ಅವರಿಗೆ ಹಾಗೂ ಪಕ್ಷದ ಮುಖಂಡರಿಗೆ ತೀವ್ರ ಆಘಾತ ಉಂಟುಮಾಡಿದೆ. ಇದೀಗ ಅವರ ಮುಂದೆ ಕಾನೂನು ಆಯ್ಕೆಗಳು ಸೀಮಿತವಾಗಿರುವುದರಿಂದ ಉಪ ಚುನಾವಣೆ ನಡೆಯುವ ಸಾಧ್ಯತೆಗಳು ದಟ್ಟವಾಗಿ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ವಿನಯ ಕುಟುಂಬಕ್ಕೆ ಟಿಕೆಟ್‌ ಸಾಧ್ಯತೆ:

ಇದೇ ವೇಳೆ, ಮುಂದಿನ ದಿನಗಳಲ್ಲಿ ಧಾರವಾಡ ಗ್ರಾಮೀಣ ಮತ್ತು ಹಿರಿಯೂರು ಕ್ಷೇತ್ರಗಳಿಗೆ ಚುನಾವಣಾ ಆಯೋಗವು ಉಪಚುನಾವಣೆ ಘೋಷಿಸಬಹುದು ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ, ಉಪಚುನಾವಣೆ ಅನಿವಾರ್ಯವಾದರೆ ಕಣಕ್ಕಿಳಿಸಬಹುದಾದ ಅಭ್ಯರ್ಥಿಗಳ ಕುರಿತು ಕಾಂಗ್ರೆಸ್ ನಾಯಕರು ಅನೌಪಚಾರಿಕ ಚರ್ಚೆಗಳನ್ನು ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಕುಲಕರ್ಣಿ ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್ ನೀಡುವ ಸಾಧ್ಯತೆಗಳು ಹೆಚ್ಚಿವೆ ಎಂದು ಪಕ್ಷದ ನಾಯಕರು ಹಾಗೂ ಕುಲಕರ್ಣಿ ಅವರ ಆಪ್ತರು ಪತ್ರಿಕೆಗೆ ಮಾಹಿತಿ ನೀಡಿದರು.

2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕುಲಕರ್ಣಿಯವರು ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರಲ್ಪಟ್ಟಿದ್ದಾಗ, ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಕಾಂಗ್ರೆಸ್ ಪ್ರಚಾರದ ಮುಂಚೂಣಿಯಲ್ಲಿ ನಿಂತಿದ್ದರು. ಕುಲಕರ್ಣಿಯವರ ಗೆಲುವಿನ ನಂತರವೂ, ಅವರು ಕ್ಷೇತ್ರದ ವ್ಯವಹಾರಗಳನ್ನು ಮೇಲ್ವಿಚಾರಣೆ ಮಾಡುವುದು, ಪಕ್ಷದ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸುವುದು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಕ್ರಿಯರಾಗಿದ್ದಾರೆ. ಹಾಗೆಯೇ, ಅವರ ಪುತ್ರಿ ವೈಶಾಲಿ ಕುಲಕರ್ಣಿ ಕೂಡ ರಾಜಕೀಯದಲ್ಲಿ ಛಾಪು ಮೂಡಿಸಿದ್ದಾರೆ. ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯೆಯಾಗಿರುವ ಅವರು, ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಹೊಂದಿರುದು ಗಮನಾರ್ಹ ಸಂಗತಿ.

ಬಿಜೆಪಿಯಲ್ಲಾರು ಅಭ್ಯರ್ಥಿ?:

ಇನ್ನು, ಬಿಜೆಪಿ ಸಹ ತನ್ನ ಆಂತರಿಕ ಸಿದ್ಧತೆ ಆರಂಭಿಸಿದ್ದು, ಪಕ್ಷದ ನಾಯಕಿಯರಾದ ಮಾಜಿ ಶಾಸಕಿ ಸೀಮಾ ಮಸೂತಿ ಹಾಗೂ ಸವಿತಾ ಅಮರಶೆಟ್ಟಿ ಹೆಸರು ಕೇಳಿ ಬರುತ್ತಿವೆ. ಒಂದು ವೇಳೆ ಕಾಂಗ್ರೆಸ್ ಪಕ್ಷವು ಶಿವಲೀಲಾ ಅಥವಾ ವೈಶಾಲಿ ಕುಲಕರ್ಣಿ ಕಣಕ್ಕಿಳಿಸಿದರೆ, ಉಂಟಾಗಬಹುದಾದ ''''''''ಸಹಾನುಭೂತಿ ಅಲೆ ಎದುರಿಸಲು ಬಿಜೆಪಿ ಮಹಿಳಾ ಅಭ್ಯರ್ಥಿಯನ್ನೇ ಆಯ್ಕೆ ಮಾಡುವ ಸಾಧ್ಯತೆಯಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಅಮೃತ ದೇಸಾಯಿ ''''''''ಆಡಳಿತ ವಿರೋಧಿ ಅಲೆ''''''''ಯನ್ನು ಎದುರಿಸಿದ್ದು, ಸೀಮಾ ಮಸೂತಿ ಅಥವಾ ಸವಿತಾ ಅಮರಶೆಟ್ಟಿ ಅವರಿಗೆ ಅಂತಹ ಯಾವುದೇ ಪ್ರತಿಕೂಲತೆಗಳಿಲ್ಲದೆ ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆಯನ್ನು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಎರಡೂ ಪಕ್ಷಕ್ಕೆ ಪ್ರಮುಖ:

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿನ ಈ ಉಪಚುನಾವಣೆಯ ಗೆಲುವು ಕಾಂಗ್ರೆಸ್ ಪಕ್ಷದ ಸ್ಥಾನವನ್ನು ಬಲಪಡಿಸುವುದಲ್ಲದೆ, ಮುಖ್ಯಮಂತ್ರಿಯವರನ್ನು ಒಬ್ಬ ಸಮರ್ಥ ಚುನಾವಣಾ ತಂತ್ರಗಾರರನ್ನಾಗಿಯೂ ಬಿಂಬಿಸುತ್ತದೆ. ಇನ್ನು ಬಿಜೆಪಿಗೆ, ಈ ಉಪಚುನಾವಣೆಯು ಉತ್ತರ ಕರ್ನಾಟಕದ ಪ್ರಮುಖ ಕ್ಷೇತ್ರವೊಂದನ್ನು ಮರಳಿ ಪಡೆಯುವ ಅವಕಾಶವನ್ನು ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಧಾರವಾಡ ಗ್ರಾಮೀಣ ಕ್ಷೇತ್ರ ಹೆಚ್ಚಿನ ಮಹತ್ವ ಪಡೆದುಕೊಂಡಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾಮಸ್ತಕಾಭಿಷೇಕಕ್ಕೆ ಸಂಘಟಿತ ಸಿದ್ಧತೆ ಅಗತ್ಯ: ಡಾ. ಹೆಗ್ಗಡೆ
ಸಿ ಆ್ಯಂಡ್ ಡಿ , ಸೆಕ್ಷನ್-೪ ಸಮಸ್ಯೆ ಪರಿಹಾರ ಅಗತ್ಯ: ಮಂತರ್‌