ಮಯೂರ್ ಹೆಗಡೆ
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯಕ್ಕೆ ಅಸಂಘಟಿತ ವಲಯ ಅಂದರೆ ತಳಮಟ್ಟದ ಕಾರ್ಮಿಕರು ಮಾತ್ರ ವಲಸೆ ಬರುತ್ತಿಲ್ಲ, ಬದಲಾಗಿ ವೈಟ್ ಕಾಲರ್ ಉದ್ಯೋಗದಲ್ಲೂ ಇವರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಭಾಷಾ ವಿಚಾರ, ಪ್ರಾದೇಶಿಕ ಸಂಘರ್ಷದಲ್ಲಿ ಇವರ ಪಾತ್ರವೇ ಮುಖ್ಯವಾಗಿದೆ ಎಂಬ ಅಭಿಪ್ರಾಯ ದಟ್ಟವಾಗಿದೆ.
ಉತ್ತರ ಭಾರತದಿಂದ ಬಂದು ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿರುವವರ ಸಂಖ್ಯೆ ಶೇ.70ಕ್ಕಿಂತ ಹೆಚ್ಚಿದೆ. ಅದರಂತೆ ಹೋಟೆಲ್, ಹೌಸ್‌ಕೀಪಿಂಗ್ ಸೇರಿ ಇತರ ಕಡಿಮೆ ವೇತನದ ಕಾರ್ಮಿಕರು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ಹಂತದಲ್ಲಿ ಈ ವರ್ಗದ ಕಾರ್ಮಿಕರು ತಮ್ಮ ಬದುಕಿನ ಅನಿವಾರ್ಯತೆಗೆ ಸ್ಥಳೀಯರ ಜತೆ ಬೆರೆತು ಭಾಷೆ ಕಲಿಯುವ, ಕೆಲ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಮಾತಿದೆ.ಆದರೆ, ಬೆಂಗಳೂರಿನ ಐಟಿ-ಬಿಟಿ, ಬ್ಯಾಂಕ್, ರೈಲ್ವೆ, ಸೈನ್ಯ ಸೇರಿ ಸರ್ಕಾರಿ ಉನ್ನತ ಹಂತದ ಉದ್ಯೋಗಸ್ಥರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಈ ಬೆಳವಣಿಗೆ ಸ್ಥಳೀಯರ ಮೇಲ್‌ಹಂತದ ಉದ್ಯೋಗ ಕಸಿಯುತ್ತಿರುವುದು ಒಂದು ಕಡೆಯಾದರೆ, ವೈಟ್ ಕಾಲರ್ ನೌಕರರ ಮೇಲರಿಮೆ ಧೋರಣೆ ಪ್ರಾದೇಶಿಕ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ.
ಸ್ಥಳೀಯರನ್ನು ಕೀಳಾಗಿ ಕಾಣುವುದು, ಭಾಷಾ ವಿಚಾರದಲ್ಲಿ ಕಿರಿಕ್, ಕಚೇರಿಗಳಲ್ಲಿ ಕನ್ನಡಿಗರಿಗೆ ಸ್ಪಂದಿಸದೆ ಧಾರ್ಷ್ಟ್ಯ ತೋರುವಲ್ಲಿ, ರೋಡ್‌ರೇಜ್ ಪ್ರಕರಣಗಳಲ್ಲಿ ಇವರ ಕೊಡುಗೆ ಹೆಚ್ಚಿದೆ. ಬೆಂಗಳೂರು ಮಾತ್ರವಲ್ಲದೆ ರಾಮನಗರ, ಹಾಸನ, ತುಮಕೂರು ಸೇರಿ ರಾಜ್ಯದ ವಿವಿಧಡೆ ಅಪರಾಧ ಪ್ರಕರಣಗಳು ಹೆಚ್ಚಲೂ ಕಾರಣರಾಗುತ್ತಿದ್ದಾರೆ ಎಂಬ ಭಾವನೆ ಸ್ಥಳೀಯರಲ್ಲಿದೆ.ಕನ್ನಡ ಮಾತನಾಡದೆ ಅವಮಾನ:
ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಮ್ಯಾನೇಜರ್ ಕನ್ನಡದಲ್ಲಿ ಮಾತನಾಡದೆ ಅವಹೇಳನ ಮಾಡಿದ್ದು, ವೈಯಾಲಿಕಾವಲ್‌ನಲ್ಲಿ ಒಡಿಶಾ ವ್ಯಕ್ತಿ ಮಹಿಳೆ ಕೊಂದು 59 ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟ ಪ್ರಕರಣ, ಹಾಸನದಲ್ಲಿ ಪೊಲೀಸ್ ಜೀಪ್ ಸುಟ್ಟ ಪ್ರಕರಣ, ಕಾರವಾರದಲ್ಲಿ ಆಗಾಗ ಕೇಳಿಬರುವ ಸೀಬರ್ಡ್ ನೌಕರರು-ಮೀನುಗಾರರ ನಡುವಿನ ಸಂಘರ್ಷ ಹೀಗೆ ರಾಜ್ಯದ ವಿವಿಧೆಡೆ ಇಂಥ ಪ್ರಕರಣಗಳು ಇದಕ್ಕೆ ಸಾಕ್ಷಿ.ನೆರವು ಕಾರ್ಮಿಕರ ಸಂಘದ ಅಧ್ಯಕ್ಷ ಅಶ್ವತ್ಥ ಟಿ.ಮರಿಗೌಡ, ‘ಹೊರರಾಜ್ಯದವರು ಮೇಲಿನ ಹುದ್ದೆಗೆ ಬಂದಾಗ ‘ಎ’ ಗ್ರೇಡ್ ಹಂತದ ಹುದ್ದೆಗಳ ಭರ್ತಿ ವಿಚಾರದಲ್ಲಿ ತಮ್ಮವರಿಗೆ ಹೆಚ್ಚಿನ ಮಣೆ ಹಾಕುವುದನ್ನು ನೋಡಿದ್ದೇವೆ. ಅವರು ಸ್ಥಳೀಯರ ಜತೆ ಬೆರೆಯುವ ಪ್ರಯತ್ನವನ್ನೂ ಮಾಡಲ್ಲ. ಅದಕ್ಕಾಗಿಯೇ ನಾವು ಬ್ಯಾಂಕಿಂಗ್ ವಲಯದಲ್ಲಿ ‘ನಮ್ಮ ಉದ್ಯೋಗ, ನಮ್ಮ ಹಕ್ಕು’ ಎಂಬ ಅಭಿಯಾನ ನಡೆಸಿದ್ದವು ಎಂದರು.
ಅಸಂಘಟಿತ ವಲಯದ ಕಾರ್ಮಿಕರು ಒಂದು ಹಂತದವರೆಗೆ ಅನಕ್ಷರಸ್ಥರು. ನೋಂದಣಿ ಅವರಿಗೆ ತಿಳಿಯಲ್ಲ ಎನ್ನಬಹುದು. ಆದರೆ, ಸಂಘಟಿತ ವಲಯದ ಉದ್ಯೋಗಸ್ಥರು ನೋಂದಣಿ ಸೇರಿ ಇತರೆ ಪ್ರಕ್ರಿಯೆಯಿಂದ ಹೊರತಾಗಿರುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು.ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್, ಐಟಿ ಆಫೀಸ್‌ಗಳಲ್ಲಿ ಒಬ್ಬ ವಲಸಿಗ ವ್ಯವಸ್ಥಾಪಕ ಹುದ್ದೆಯಂತಹ ಸ್ಥಾನಕ್ಕೆ ಬಂದರೆ ಆತ ತನ್ನ ಇಡೀ ತಂಡವನ್ನು ಉತ್ತರ ಭಾರತೀಯರಿಂದಲೇ ಭರ್ತಿ ಮಾಡಿಕೊಳ್ಳುವುದು ನೋಡಿದ್ದೇವೆ. ಒಟ್ಟಾರೆ ಕನ್ನಡಿಗರ ಸಂಖ್ಯೆಗೆ ಹೋಲಿಸಿದರೆ ಅವರ ಪ್ರಮಾಣ ಕಡಿಮೆ ಇದ್ದರೂ ರಾಜ್ಯದಲ್ಲಿ ಸಂಭವಿಸುತ್ತಿರುವ ಅಪರಾಧ ಪ್ರಕರಣದಲ್ಲಿ ಅವರ ಪಾಲು ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ ಎನ್ನುತ್ತಾರೆ.
ಜತೆಗೆ ಘರ್ಷಣೆಯಂಥ ಪ್ರಕರಣದಲ್ಲಿ ಉತ್ತರ ಭಾರತೀಯ ವಲಸೆ ವ್ಯಕ್ತಿ ತಪ್ಪಿದ್ದರೂ ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದ ಚರ್ಚೆಯಾಗಿ ಕನ್ನಡಿಗರನ್ನು ತಪ್ಪಾಗಿ ತೋರಿಸಲಾಗುತ್ತದೆ. ಅದೇ ಇಲ್ಲಿನವರಿಗೆ ಅವರಿಂದ ಆಗುವ ಅನ್ಯಾಯ ಮರೆಮಾಚಲಾಗುತ್ತದೆ. ಈ ವೈಟ್ ಕಾಲರ್ ವರ್ಗ ಪ್ರಾದೇಶಿಕ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಅಭಿಪ್ರಾಯ ಪಡುತ್ತಾರೆ.