ಕನ್ನಡಪ್ರಭ ವಾರ್ತೆ ಮಡಿಕೇರಿ
ನಾವು ಅಧಿಕಾರಕ್ಕೆ ಬಂದ ನಂತರ 80 ಸಾವಿರ ರೋಹಿಂಗ್ಯಾ ಮುಸ್ಲಿಂ ಬಾಂಗ್ಲಾದೇಶಿಗರನ್ನು ಹೊರ ಕಳುಹಿಸಲಾಗಿದೆ. ಬಿಜೆಪಿಯವರು ಕಳಿಸಿದ್ದಾರಾ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಪ್ರಶ್ನೆ ಮಾಡಿದರು.ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೊಡಗು, ಹಾಸನಕ್ಕೆ ಬಾಂಗ್ಲಾ ವಲಸಿಗರು ಹೇಗೆ ಬಂದರು ? ಇದಕ್ಕೆ ದೇಶದಲ್ಲಿ ಜವಾಬ್ದಾರಿ ಯಾರು..? ಬಿಜೆಪಿ ಕಾಲದಲ್ಲಿಯೇ ಬಾಂಗ್ಲಾ ದೇಶದ ಮುಸಲ್ಮಾನರು ಇಷ್ಟು ಪ್ರಮಾಣದಲ್ಲಿ ಒಳಗೆ ಬರುತ್ತಿದ್ದಾರೆ. ದೇಶದ ಗಡಿಯಲ್ಲಿ ಅಕ್ರಮ ವಲಸಿಗರನ್ನು ಇವರೇ ದೇಶದ ಒಳಗೆ ಬಿಟ್ಟುಕೊಳ್ತಿದಾರೆ. ಇದರ ವಿರುದ್ಧ ಹೋರಾಟ ಆಗಬೇಕು. ಬಿಜೆಪಿಯವರಿಗೆ ಹಿಂದು ಧರ್ಮ ರಕ್ಷಣೆ ಮುಖ್ಯನಾ? ಅಥವಾ ರಾಜಕಾರಣ ಮುಖ್ಯನಾ ಎಂದು ಪ್ರಶ್ನಿಸಿದ ಸಂತೋಷ್ ಲಾಡ್ ಬಿಜೆಪಿಯವರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲಿ. ದೇಶದ ವ್ಯವಸ್ಥೆ ಹಳ್ಳ ಹಿಡಿದು ಹೋಗಿದೆ. ನಮ್ಮ ವಿರುದ್ಧ ಗೂಬೆ ಕೂರಿಸೋದೇ ಬಿಜೆಪಿಗೆ ಕೆಲಸ ಎಂದು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಸಿಎಂ ಮುಂದಾಗಿದ್ದಾರೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿಕುರುಬ ಸಮುದಾಯ ಎಸ್‌ಟಿಗೆ ಸೇರಿಸುವ ವಿಚಾರದಲ್ಲಿ ಪ್ರಸ್ತಾವನೆ ಬಂದಿಲ್ಲ. ಪ್ರಸ್ತಾವನೆ ಬಂದರೆ ಅದರ ಬಗ್ಗೆ ಮಾತನಾಡೋಣ. ಬರುವ ಮುಂಚೆಯೇ ಯಾಕೆ ಸುಮ್ಮನೆ ಮಾತನಾಡುವುದು ? ಪ್ರಸ್ತಾವನೆ ಬಂದಿರುವ ಬಗ್ಗೆ ನನಗಂತೂ ಮಾಹಿತಿ ಇಲ್ಲ. ಸುಮ್ಮನೆ ಬಿಜೆಪಿಯವರು ಮಾತನಾಡುತ್ತಾರೆ ವಿರೋಧಿಸ್ತಾರೆ ಅಷ್ಟೇ. ಪ್ರಧಾನಿ ಮೋದಿಯವರು ಓಬಿಸಿ ಯಲ್ಲಿ ಇದ್ದಾರೆ. ಎಸ್‌ಟಿಗೆ ಸೇರಬೇಕು ಅಂತಿದಾರೆ ಅಂತ ನಾನು ಹೇಳ್ತೇನೆ. ಹೋಗಿ ನೀವು ಮೋದಿಯವರನ್ನು ಪ್ರಶ್ನೆ ಕೇಳ್ತೀರಾ ಎಂದು ಸುದ್ದಿಗಾರರನ್ನು ಪ್ರಶ್ನಿಸಿದರು.
ಇಲ್ಲದ ಜಾತಿಗಳನ್ನು ಅನಧಿಕೃತವಾಗಿ ಸಿದ್ದರಾಮಯ್ಯ ಸೇರಿಸುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿದ ಸಂತೋಷ್ ಲಾಡ್, ಅನಧಿಕೃತವಾಗಿ ಸೇರಿಸುತ್ತಿದ್ದೇವೆ ಅಂತ ಯಾರು ಹೇಳಿದವರು ? ಅನಧಿಕೃತ ಸೇರಿಸಿರುವ ಪಟ್ಟಿ ಬಿಜೆಪಿಯವರಿಗೆ ಎಲ್ಲಿಂದ ಸಿಕ್ಕಿತು ? ಹೇಗೆ ಸಿಕ್ಕಿತು ಹೇಳಲಿ ಎಂದರು.