ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ ಸ್ವಚ್ಛತೆ ಹೊಣೆ ಯಾರದ್ದು?

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ಸರ್ಕಾರಿ ಶಾಲೆ ಎಂದರೆ ಅಲ್ಲಿ ಅಗತ್ಯ ಮೂಲಸೌಕರ್ಯಗಳು ಇಲ್ಲ ಎಂದೇ ಅರ್ಥ ಎಂಬಂಥ ದುಸ್ಥಿತಿ ಕರ್ನಾಟಕ ರಾಜ್ಯದಲ್ಲಿ ಇರುವುದು ಸುಳ್ಳಲ್ಲ. ಪ್ರತಿನಿತ್ಯ ಪತ್ರಿಕೆ, ಟಿ.ವಿ.ಗಳಲ್ಲಿ ಸರ್ಕಾರಿ ಶಾಲೆಗಳ ಅಧೋಗತಿ ವರದಿಯಾಗುತ್ತಿದ್ದರೂ, ಸರ್ಕಾರದಿಂದ ಸಾಮೂಹಿಕವಾಗಿ ಸೌಲಭ್ಯಗಳ ಕೊರತೆ ನೀಗಿಸುವಲ್ಲಿ ಪ್ರಮುಖ ಕ್ರಮಗಳು ಆಗುತ್ತಿಲ್ಲ. ಈ ವಿಷಯಗಳ ಬಗ್ಗೆಯೇ ವಿದ್ಯಾರ್ಥಿಗಳಿಂದ ನಡೆದ ಮಕ್ಕಳ ಗ್ರಾಮಸಭೆಯಲ್ಲೂ ಪ್ರತಿಧ್ವನಿಸಿವೆ. ಸೊರಬ ತಾಲೂಕಿನ ಕಿಗ್ಗ ಗ್ರಾಮದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಜನನಾಯಕರು, ಅಧಿಕಾರಿಗಳಿಗೆ ಶಾಲಾ ಶೌಚಾಲಯ ವಿಷಯಗಳ ಕುರಿತು ಸಿಕ್ಕಾಪಟ್ಟೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಬಾರದು ಎಂಬ ಸರ್ಕಾರದ ಆದೇಶದಿಂದ ಖುಷಿಯಾಗಿದೆ. ಆದರೆ, ಪ್ರತಿದಿನ ಮಲೀನವಾಗುವ ಶೌಚಾಲಯ ಸ್ವಚ್ಛಗೊಳಿಸುವವರು ಯಾರು?

ಇಂಥ ಪ್ರಶ್ನೆಯನ್ನು ಶಾಲಾ ಮಕ್ಕಳು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮಕ್ಕಳ ಗ್ರಾಮಸಭೆಯಲ್ಲಿ ಪ್ರಶ್ನಿಸಿದ ಘಟನೆ ಸೊರಬ ತಾಲೂಕಿನಲ್ಲಿ ನಡೆಯಿತು.

ಬುಧವಾರ ಶಿಗ್ಗಾ ಗ್ರಾಮದ ಡಾ. ಅಂಬೇಡ್ಕರ್ ಭವನದಲ್ಲಿ ಶಿಗ್ಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2023-24ನೇ ಸಾಲಿನ ಮಕ್ಕಳ ಗ್ರಾಮಸಭೆಯಲ್ಲಿ ನಡೆಯಿತು. ಪ್ರತಿನಿತ್ಯ ಸರತಿಯಲ್ಲಿ ಶಾಲಾ ಶೌಚಾಲಯ ಸ್ವಚ್ಛಗೊಳಿಸುವ ಪ್ರಕ್ರಿಯೆಯಿಂದ ಸರ್ಕಾರ ನಮ್ಮನ್ನು ಮುಕ್ತಗೊಳಿಸಿರುವುದು ಸಂತೋಷದ ವಿಷಯ. ಆದರೆ ಯಾರೂ ಸ್ವಚ್ಛಗೊಳಿಸದ ಶಾಲೆಗಳ ಶೌಚಗೃಹ ದುರ್ನಾತ ಬೀರುವುದನ್ನು ತಪ್ಪಿಸಲು ಯಾವ ಕ್ರಮ ತೆಗೆದುಕೊಂಡಿದ್ದೀರಾ? ಎಂದು ಹಾಜರಿದ್ದ ಮಕ್ಕಳು ಮೇಲಿಂದ ಮೇಲೆ ಸಭೆಯಲ್ಲಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಪ್ರಶ್ನೆಗಳ ಸುರಿಮಳೆ ಸುರಿದು ಪೇಚಿಗೆ ಸಿಲುಕಿಸಿದರು.

ಮಕ್ಕಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಗದೀಶ್ ಮಾತನಾಡಿ, ಶಾಲೆಗಳ ಶೌಚಾಲಯ ಸ್ವಚ್ಛಗೊಳಿಸುವ ವಿಷಯ ಚರ್ಚೆಯಲ್ಲಿದೆ. ಸದ್ಯದ ಮಟ್ಟಿಗೆ ಶೌಚಾಲಯ ಯಾರು ಸ್ವಚ್ಛಗೊಳಿಸಬೇಕು ಎನ್ನುವ ಬಗ್ಗೆ ಮಕ್ಕಳ ಪೋಷಕರು, ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು ಚರ್ಚೆಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ಕುಂದಗಸವಿ ಮತ್ತು ಎನ್.ಹೊಳೆಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಕೊಠಡಿಗಳು ಶಿಥಿಲಗೊಂಡಿವೆ. ಮುಂದಿನ ದಿನಗಳಲ್ಲಿ ಅನಾಹುತ ಸಂಭವಿಸುವ ಮೊದಲು ಶಿಥಿಲ ಕಟ್ಟಡಗಳನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸುವಂತೆ ಮತ್ತು ಅಕ್ಷರ ದಾಸೋಹ ಕೊಠಡಿಗಳ ನಿರ್ಮಾಣ, ಆಟದ ಮೈದಾನ, ಆಟದ ಪರಿಕರಗಳನ್ನು ನೀಡಿ ತಮ್ಮಲ್ಲಿರುವ ಕ್ರೀಡಾ ಸ್ಫೂರ್ತಿಗೆ ಸಹಕರಿಸಬೇಕು. ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆ, ಶಾಲೆಯ ಸುತ್ತಮುತ್ತ ಇರುವ ಬೇಡವಾದ ಗಿಡಗಳನ್ನು ತೆಗೆಸಲು ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಮನವಿ ಮಾಡಿದರು.

ಅಲ್ಲದೇ, ಗ್ರಾಮದ ಕೆಲವು ಕಿಡಿಗೇಡಿಗಳು ಶಾಲಾ ಆವರಣಕ್ಕೆ ನುಗ್ಗಿ ಆವರಣ ಅಶುದ್ಧಗೊಳಿಸುವ ಜೊತೆಗೆ ಶಾಲೆಯ ಪರಿಕರಗಳನ್ನು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆಯೂ ಗಮನಹರಿಸಬೇಕು. ಭಾರತೀಯ ಸಂಸ್ಕೃತಿ ಬಿಂಬಿಸುವ ನೀತಿ ಕಥೆಗಳು, ವೈಜ್ಞಾನಿಕ ಮನೋಭಾವದ ಕಥೆ ಪುಸ್ತಕಗಳನ್ನು ಶಾಲಾ ಗ್ರಂಥಾಲಯಗಳಿಗೆ ನೀಡಬೇಕು. ಶಿಗ್ಗಾ ಗ್ರಾಪಂ ವ್ಯಾಪ್ತಿಯಲ್ಲಿ ಓಡಾಡಲು ಯೋಗ್ಯವಲ್ಲದ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಮುಂದಾಗುವಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮಕ್ಕಳು ಮನವಿ ಮಾಡಿದರು.

ಶಿಗ್ಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಖುಷಿ ಮಕ್ಕಳ ಗ್ರಾಮಸಭೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ವೀರೇಂದ್ರ, ಎಂ.ಎನ್. ಗಾರ್ಗಿ ಕುಂದಗಸವಿ, ಜೀವನ್, ಶ್ರೇಯ, ಮಿಥುನ್, ಪ್ರಜ್ಞಾ, ಚಿನ್ಮಯ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಮಮ್ಮ, ಗ್ರಾಪಂ. ಅಭಿವೃದ್ಧಿ ಅಧಿಕಾರಿ ಜಗದೀಶ್, ಕುಂದಗಸವಿ ಸರ್ಕಾರಿ ಶಾಲೆಯ ಅಧ್ಯಕ್ಷ ಎಂ.ಎಲ್. ನೋಪಿ ಶಂಕರ್, ಶಿಕ್ಷಕರಾದ ಮೇರಿ, ಚಂದ್ರಪ್ಪ, ಅಶೋಕ್, ಭೀಮ ನಾಯಕ್, ತಿಮ್ಮಯ್ಯ, ಅಂಗನವಾಡಿ ಕಾರ್ಯಕರ್ತೆಯರಾದ ಶೋಭಾ, ಸುಧಾ, ವೀಣಾ, ಮಮತಾ, ಮಾಲಾಶ್ರೀ, ಪ್ರತಿಭಾ, ಷಣ್ಮುಖಪ್ಪ ಮತ್ತು ಗ್ರಾಮಸ್ಥರು ಮೊದಲಾದವರಿದ್ದರು.

- - - -03ಕೆಪಿಸೊರಬ01:

ಸೊರಬ ತಾಲೂಕಿನ ಶಿಗ್ಗಾ ಗ್ರಾಮದ ಡಾ. ಅಂಬೇಡ್ಕರ್ ಭವನದಲ್ಲಿ ಶಿಗ್ಗಾ ಗ್ರಾಪಂ ವ್ಯಾಪ್ತಿಯ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿನಿ ಎಂ.ಎನ್. ಗಾರ್ಗಿ ಮಾತನಾಡಿದರು.

Share this article