ಬಿಡಿಸಿಸಿ ಬ್ಯಾಂಕಿಗೆ ಯಾರಾಗ್ತಾರೆ ಬಾಸ್‌ !

KannadaprabhaNewsNetwork | Published : Oct 6, 2024 1:25 AM

ಸಾರಾಂಶ

ಮಹತ್ವದ ಬೆಳವಣಿಗೆಯಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ರಮೇಶ ಕತ್ತಿ ರಾಜೀನಾಮೆ ನೀಡಿದ್ದು, ಬ್ಯಾಂಕಿನ ಮುಂದಿನ ಅಧ್ಯಕ್ಷರು ಯಾರು ಎಂಬ ಪ್ರಶ್ನೆ ಈಗ ತೀವ್ರ ಕುತೂಹಲ ಮೂಡಿಸಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹತ್ವದ ಬೆಳವಣಿಗೆಯಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ರಮೇಶ ಕತ್ತಿ ರಾಜೀನಾಮೆ ನೀಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಸಂಘರ್ಷದ ಒಳಪೆಟ್ಟು ಈಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಬದಲಿಸುವಂತೆ ಮಾಡಿದೆ. ಡಿಸಿಸಿ ಬ್ಯಾಂಕಿನ ಮುಂದಿನ ಅಧ್ಯಕ್ಷರು ಯಾರು ಎಂಬ ಪ್ರಶ್ನೆ ಈಗ ತೀವ್ರ ಕುತೂಹಲ ಮೂಡಿಸಿದೆ. ಮಾತ್ರವಲ್ಲ, ಈಗಿನ ಅಧ್ಯಕ್ಷರ ನಿರ್ಗಮನಕ್ಕೆ ಕಾರಣವಾದರೂ ಏನು ಎಂಬ ಚರ್ಚೆ ಕೂಡ ನಡೆಯುತ್ತಿದೆ.

ಕಳೆದ 6 ತಿಂಗಳ ಹಿಂದಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ರಮೇಶ ಕತ್ತಿ ಅವರು ಪ್ರಚಾರ ಕಾರ್ಯದಲ್ಲಿ ತೊಡಗದೇ ಇರುವುದು ಕಂಡುಬಂತು. ಕೇವಲ ವರಿಷ್ಠರು ಬಂದಾಗ ಮಾತ್ರ ಹಾಜರಾತಿಗೆ ಬಂದು ಹೋಗಿದ್ದರಷ್ಟೇ ಎಂಬ ಆರೋಪ ಕೂಡ ಕೇಳಿಬಂತು. ಇದು ಕೂಡ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ಹೀಗಾಗಿ ಕತ್ತಿ ಮತ್ತು ಜೊಲ್ಲೆ ನಡುವಿನ ರಾಜಕೀಯ ಸಮರ ಮುಂದುವರಿದಿತ್ತು. ಬ್ಯಾಂಕಿನ ಒಟ್ಟು 17 ನಿರ್ದೇಶಕರ ಪೈಕಿ 15 ನಿರ್ದೇಶಕರು ರಮೇಶ ಕತ್ತಿ ವಿರುದ್ಧವಾಗಿದ್ದರು. ಅಲ್ಲದೇ, ಪ್ರತ್ಯೇಕವಾಗಿ ಸಭೆ ನಡೆಸಿ, ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೂ ಮುಂದಾಗಿದ್ದರು ಎಂದು ಮೂಲಗಳು ಹೇಳಿವೆ. ರಮೇಶ ಕತ್ತಿ ಅವರ ಏಕಪಕ್ಷೀಯ ನಿರ್ಧಾರ, ಅವರ ನಡೆ ಬ್ಯಾಂಕಿನ ನಿರ್ದೇಶಕರು ಮತ್ತು ಸಿಬ್ಬಂದಿ ಕೆಲವರಲ್ಲಿ ಅಸಮಾಧಾನ ಕೂಡ ತಂದಿತ್ತು ಎನ್ನಲಾಗಿದೆ. ರಮೇಶ ಕತ್ತಿ 2015ರಿಂದ 2024ರವರೆಗೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಆಡಳಿತದ ಅವಧಿಯಲ್ಲಿ ಉತ್ತಮ ಆಡಳಿತ ನಡೆಸಿದ್ದರೂ ಏಕಪಕ್ಷೀಯ ನಿರ್ಧಾರ ಇತರೆ ನಿರ್ದೇಶಕರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು. ಕಳೆದ ವರ್ಷ ಬೆಳಗಾವಿ ಡಿಸಿಸಿ ಬ್ಯಾಂಕ್‌ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿತ್ತು. ₹30 ಕೋಟಿ ನಿವ್ವಳ ಲಾಭ ಗಳಿಸಿದ ಹೆಮ್ಮೆಗೂ ಪಾತ್ರವಾಗಿತ್ತು. ರಮೇಶ ಕತ್ತಿ ಅವರ ಅವಧಿ ಇನ್ನೂ ಒಂದು ವರ್ಷ ಬಾಕಿಯಿದ್ದರೂ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಯುವಂತೆ ನಿರ್ದೇಶಕರಿಂದ ತೀವ್ರ ಒತ್ತಡ ನಡೆದಿತ್ತು. ಇದನ್ನರಿತುಕೊಂಡೇ ಕತ್ತಿ ಅವರು ರಾಜೀನಾಮೆ ನೀಡಿರಬಹುದು ಎನ್ನಲಾಗಿದೆ.ಗುರುವಾರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರು ಕರೆದ ಸಭೆಗೆ ಗೈರಾಗಿ 14 ಜನ ನಿರ್ದೇಶಕರು ಪ್ರತ್ಯೇಕವಾಗಿ ಸಭೆ ನಡೆಸಿ, ರಮೇಶ ಕತ್ತಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದರು. ಸದಸ್ಯತ್ವ ವಿಚಾರವಾಗಿ ಬ್ಯಾಂಕಿನ ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ ಅವರು ರಮೇಶ ಕತ್ತಿ ವಿರುದ್ಧ ಸಮರ ಸಾರಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕೊನೆಗೂ ರಮೇಶ ಕತ್ತಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಈ ಮೂಲಕ ಜಿಲ್ಲಾ ರಾಜಕೀಯ ಸಂಘರ್ಷದಲ್ಲಿ ಅಣ್ಣಾಸಾಹೇಬ ಜೊಲ್ಲೆ ಮೇಲುಗೈ ಸಾಧಿಸಿದಂತಾಗಿದೆ.

ಈ ಹಿಂದೆಯೂ ರಮೇಶ ಕತ್ತಿ ವಿರುದ್ಧ ಬ್ಯಾಂಕಿನ ಕೆಲ ನಿರ್ದೇಶಕರು ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದರು. ಆ ವೇಳೆ ಹಿರಿಯ ನಾಯಕರು ನಿರ್ದೇಶಕರ ಮನವೊಲಿಸಿ ಸಮಾಧಾನಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ಅಧ್ಯಕ್ಷರ ಆಯ್ಕೆಗೆ ಐ‍ವರಿಗೆ ಅಧಿಕಾರ:

ರಮೇಶ ಕತ್ತಿ ರಾಜೀನಾಮೆಯಿಂದ ತೆರವಾಗಿರುವ ಡಿಸಿಸಿ ಬ್ಯಾಂಕ್‌ಗೆ ನೂತನ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡಬೇಕೆಂಬ ನಿರ್ಣಯ ತೆಗೆದುಕೊಳ್ಳುವ ಅಧಿಕಾರವನ್ನು ಐವರು ಹಿರಿಯ ನಾಯಕರಿಗೆ ಅಧಿಕಾರ ನೀಡಲಾಗಿದೆ. ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ ಮತ್ತು ರಮೇಶ ಕತ್ತಿ ಅವರಿಗೆ ನೂತನ ಅಧ್ಯಕ್ಷ ಆಯ್ಕೆ ಹೊಣೆಗಾರಿಕೆಯನ್ನು ನೀಡಲಾಗಿದೆ. ಮೂಲಗಳ ಪ್ರಕಾರ ಚಿಕ್ಕೋಡಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಡಿಸಿಸಿ ಬ್ಯಾಂಕಿನ ನೂನತ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹೇಳಲಾಗುತ್ತಿದೆ.ಡಿಸಿಸಿಬ್ಯಾಂಕಿನ ನೂತನ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಸಂಬಂಧ ಐವರು ಹಿರಿಯ ನಾಯಕರಿಗೆ ಅಧಿಕಾರ ನೀಡಲಾಗಿದ್ದು , ಅಕ್ಟೋಬರ್‌ ಅಂತ್ಯದೊಳಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು.

- ಬಾಲಚಂದ್ರ ಜಾರಕಿಹೊಳಿ, ಬೆಮೂಲ ಅಧ್ಯಕ್ಷ, ಅರಬಾವಿ ಶಾಸಕ

Share this article