ಕನ್ನಡಪ್ರಭ ವಾರ್ತೆ ಕಲಬುರಗಿ
ದೇಶಾದ್ಯಂತ ಜನರು ಮತ್ತೊಮ್ಮೆ ಮೋದಿ ಮೋದಿ ಎನ್ನುತ್ತಿದ್ದಾರೆ. ಹೀಗಾಗಿ, ಮತ್ತೊಮ್ಮೆ ನಮ್ಮ ಪ್ರಧಾನಿ ಅಭ್ಯರ್ಥಿ ಮೋದಿ ಎಂದು ಬಿಜೆಪಿ ಘೋಷಿಸಿದೆ. ಆದರೆ, ಕಾಂಗ್ರೆಸ್ಸಿನಿಂದ ಪ್ರಧಾನಿ ಅಭ್ಯರ್ಥಿ ಯಾರು ಎಂದು ಅವರು ಘೋಷಿಸಲು ಆಗುತ್ತಿಲ್ಲ. ಆ ಪಕ್ಷಕ್ಕೆ ಕ್ಯಾಪ್ಟನ್ ಯಾರು ಎಂಬುದೇ ಗೊತ್ತಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಅಶೋಕ್ ಲೇವಡಿ ಮಾಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ.10ರಷ್ಟು ಸಹ ಮತಗಳು ಬಾರದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷದ ಸ್ಥಾನವೂ ಲಭಿಸಲಿಲ್ಲ ಎಂಬುದನ್ನು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅರ್ಥ ಮಾಡಿಕೊಳ್ಳಬೇಕು ಎಂದು ಅವರ ಇತ್ತೀಚಿನ ಟೀಕೆ ಪ್ರಸ್ತಾಪಿಸಿ ಚಾಟಿ ಬೀಸಿದರು.
ಜೆಡಿಎಸ್ ಯಾರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೋ ಆ ಪಕ್ಷ ಸತ್ಯಾನಾಸ್ ಆಗುತ್ತದೆ ಎಂದು ಕೆಲವು ಕಾಂಗ್ರೆಸ್ ಮುಖಂಡರು ಲೇವಡಿ ಮಾಡುತ್ತಿದ್ದಾರೆ ಎಂಬ ಪತ್ರಕರ್ತರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೇವಲ 79 ಸ್ಥಾನಗಳು ಲಭಿಸಿದ್ದವು. ಆಗ ಜೆಡಿಎಸ್ ಪಕ್ಷದವರ ಮನೆಬಾಗಿಲಲ್ಲಿ ನಿಂತು ಬಾಗಿಲು ತಟ್ಟಿದವರು ಯಾರು ಎಂದು ಪ್ರಶ್ನಿಸಿದರು.ರಾಮೇಶ್ವರಂ ಕೆಫೆ ಘಟನೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿ ಇದೊಂದು ವ್ಯವಹಾರ ಸಂಬಂಧಿತ ದ್ವೇಷದಿಂದ ನಡೆದಿರಬಹುದಾದ ಘಟನೆ ಎಂದು ವ್ಯಾಖ್ಯಾನಿಸಿದ್ದರು. ಇದಕ್ಕಿಂತಲೂ ಕೆಲವು ತಿಂಗಳ ಹಿಂದೆ ಅವರೆಲ್ಲರೂ ನಮ್ಮ ಬ್ರದರ್ಸ್ ಎಂದಿದ್ದರು. ಈಗ ರಾಮೇಶ್ವರಂ ಕೆಫೆ ಪ್ರಕರಣವನ್ನು ಭಯೋತ್ಪಾದಕ ಚಟುವಟಿಕೆ ಎಂದು ಸ್ವತಃ ಸರಕಾರವೇ ಹೇಳುತ್ತಿದೆ. ಅಲ್ಪಸಂಖ್ಯಾತರನ್ನು ಓಲೈಸುತ್ತಾ ರಾಜಕೀಯ ಲಾಭ ಪಡೆಯುವುದಷ್ಟೇ ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಅವರ ಮತ ಗಿಟ್ಟಿಸಲು ಹೀಗೆಲ್ಲಾ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇಷ್ಟು ದಿನ ನಾವೆಲ್ಲಾ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುತ್ತಿದ್ದೆವು. ಈಗ ಕರ್ನಾಟಕ ಪಾಕಿಸ್ತಾನದ ಮಕ್ಕಳು ಹುಟ್ಟುವ ಅಡ್ಡೆಯಾಗಿದೆ. ಅವರಿಗೂ ಬರ್ತ್ ಸರ್ಟಿಫಿಕೆಟ್ ನೀಡುವ ವ್ಯವಸ್ಥೆ ಆಗುತ್ತಿದೆ. ಇಂತಹ ಘಟನೆಗಳಿಂದ ಬೆಂಗಳೂರಿನ ಜನರು ತತ್ತರಿಸಿ ಹೋಗಿದ್ದಾರೆ. ಕಳೆದ ಒಂಬತ್ತು ತಿಂಗಳಲ್ಲಿ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಹಿಂದೂಗಳನ್ನು ದ್ವೇಷಿಸುತ್ತಿದೆ. ಶ್ರೀರಾಮ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾವು ಅಯೋಧ್ಯೆಗೆ ಹೋಗುವುದಿಲ್ಲ ಎಂದು ಸಿಎಂ ಘೋಷಿಸಿದ್ದರು. ಮೇಲಾಗಿ, ಅಯೋಧ್ಯೆ ರಾಮಮಂದಿರ ಇರುವ ಪ್ರದೇಶ ಒಂದು ವಿವಾದಿತ ಪ್ರದೇಶ ಎಂದಿದ್ದರು. ಪ್ರಾಣ ಪ್ರತಿಷ್ಠಾಪನೆಯ ದಿನ ರಾಜ್ಯದಲ್ಲಿ ಎಲ್ಲಿಯೂ ಕಾರ್ಯಕ್ರಮ ನಡೆಯದಂತೆ ಹಲವು ತೊಂದರೆಗಳನ್ನು ಕೊಡಲಾಯಿತು. ಆ ಮೂಲಕ ಓಲೈಕೆ ರಾಜಕಾರಣ ಮಾಡುತ್ತಾ, ಕರ್ನಾಟಕ ಸ್ಲೀಪರ್ ಸೆಲ್ ತಾಣ ಮಾಡಲಾಗುತ್ತಿದೆ. ಇಂತಹ ಮುಲಾಜುಗಳಿಂದ ಕರ್ನಾಟಕ ಭಯೋತ್ಪಾದಕರ ಪ್ರಯೋಗ ಶಾಲೆ ಮಾಡಲು ಬಿಡಬೇಡಿ ಎಂದು ಎಚ್ಚರಿಕೆ ನೀಡಿದರು.
ಸಂಸದ ಡಾ.ಉಮೇಶ್ ಜಾಧವ್, ಶಾಸಕ ಬಸವರಾಜ ಮತ್ತಿಮೂಡ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್, ರಾಜು ವಾಡೇಕರ್ ಸೇರಿದಂತೆ ಇತರರಿದ್ದರು.