ಶುಲ್ಕವಿಲ್ಲದೆ ಅಧಿಕಾರಿಗಳು ಹೇಳಿದಲ್ಲಿ ನೀರು ಹಾಕಿ ಬರಬೇಕಂತೆ: ಮಾಲಿಕರು

KannadaprabhaNewsNetwork | Published : Mar 6, 2024 2:16 AM

ಸಾರಾಂಶ

ಖಾಸಗಿ ನೀರಿನ ಟ್ಯಾಂಕರ್‌ ಸೀಜ್ ಮಾಡಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಮಾಲಿಕರು, ಕಾಂಗ್ರೆಸ್‌ ಬ್ಯಾನರ್‌ ಟ್ಯಾಂಕರ್‌ ತುಂಬಿಸಿ ಬರಲು ಸೂಚನೆ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ

ಬೆಳ್ಳಂಬೆಳಿಗ್ಗೆಯೇ ಆರ್‌ಟಿಒ ಅಧಿಕಾರಿಗಳು ಡಿಸಿ ಆದೇಶದ ಮೇರೆಗೆ ನೂರಾರು ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಸೀಜ್ ಮಾಡಿ ಜಲಮಂಡಳಿ ಕಚೇರಿ ಮುಂಭಾಗ ತಂದು ನಿಲ್ಲಿಸಿದ ಸಂದರ್ಭದಲ್ಲಿ ಆಕ್ರೋಶಗೊಂಡ ಮಾಲಿಕರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದೆ ಘಟನೆ ಜರುಗಿದೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊಟ್ಟಿಗೆರೆ ವಾರ್ಡ್‌ನ ಜಂಬೂಸವಾರಿ ದಿಣ್ಣೆಯ ಬಳಿ ಸಭೆ ಕರೆದು ಚರ್ಚಿಸದೆ ಏಕಾಏಕಿ ವಾಹನಗಳನ್ನು ವಶಕ್ಕೆ ಪಡೆದ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಅಧಿಕಾರಿಗಳು ವಿರುದ್ಧ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಖಾಸಗಿ ನೀರಿನ ಟ್ಯಾಂಕರ್ ವಾಹನದ ಮಾಲೀಕರು ಧಿಕ್ಕಾರ ಕೂಗಿದರು.

ಬೆಳ್ಳಿಗ್ಗೆಯಿಂದ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದು ಜಲಮಂಡಳಿಯಿಂದ ನೀರು ತುಂಬಿಸಿಕೊಂಡು ಜಲಮಂಡಳಿ ಅಧಿಕಾರಿಗಳು ಹೇಳಿದ ಸ್ಥಳಗಳಿಗೆ ತೆರಳಿ ಅಲ್ಲಿರುವ ಟ್ಯಾಂಕರ್‌ಗಳಿಗೆ ನೀರು ತುಂಬಿಸಿ ಬರಬೇಕು. ಇದಕ್ಕೆ ಯಾವುದೇ ಶುಲ್ಕವಿಲ್ಲ, ಖಾಸಗಿ ಟ್ಯಾಂಕರ್ ಮಾಲಿಕರೇ ಡೀಸೆಲ್ ವೆಚ್ಚ ಭರಿಸಬೇಕು ಎಂದು ತಿಳಿಸುತ್ತಿದ್ದಾರೆ ಎಂದು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಎಇಇ ಹಾಗೂ ಕೋಣನಕುಂಟೆ ಇನ್ಸ್‌ಪೆಕ್ಟರ್ ಪ್ರತಿಭಟನಾಕಾರರ ಮನವೊಲಿಸಿ ನೀರಿನ ಸಮಸ್ಯೆ ಹೇರಳವಾಗಿದೆ. ಎಲ್ಲಾ ಟ್ಯಾಂಕರ್ ಮಾಲಿಕರ ಜೊತೆ ಚರ್ಚಿಸಿ ಪರಿಹಾರಕ್ಕೆ ಮುಂದಾಗುವುದಾಗಿ ತಿಳಿಸಿದರು.

ಖಾಸಗಿ ನೀರಿನ ಟ್ಯಾಂಕರ್ ಮಾಲೀಕ ಹರೀಶ್ ಮಾತನಾಡಿ, ಜನರಿಗೆ ಕುಡಿಯುವ ನೀರಿನ ಬವಣೆ ನೀಗಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಖಾಸಗಿ ನೀರಿನ ಟ್ಯಾಂಕರ್ ಮಾಲಿಕರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದೆ. ಏಕಾಏಕಿ ನಾವೆಲ್ಲರೂ ಪ್ರತಿಭಟನೆ ನಡೆಸಿದರೆ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ನಾವೂ ಮನುಷ್ಯರೇ, ನೀರಿನ ಸಮಸ್ಯೆಯ ಬಗ್ಗೆ ನಮಗೂ ಅರಿವಿದೆ ಎಂದರು.

ಮತ್ತೋರ್ವ ಟ್ಯಾಂಕರ್ ಮಾಲೀಕ ರಾಜು ಮಾತನಾಡಿ, ಆರ್‌ಟಿಒ ಅಧಿಕಾರಿಗಳಿಗೆ ಡಿಸಿ ಆದೇಶಿಸಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಲಕ್ಷಾಂತರ ರುಪಾಯಿಗಳ ಬಂಡವಾಳ ಹೂಡಿಕೆ ಮಾಡಿ ವ್ಯವಹರಿಸುವ ಸಂದರ್ಭದಲ್ಲಿ ಈ ರೀತಿಯಲ್ಲಿ ಮಾಹಿತಿ ನೀಡದೆ ವಾಹನಗಳನ್ನು ವಶಕ್ಕೆ ಪಡೆಯುವುದು ಅಪರಾಧ ಎಂದು ಕಿಡಿಕಾರಿದರು.

ಕಾಂಗ್ರೆಸ್ ಬ್ಯಾನರ್‌ ಇರುವ ಟ್ಯಾಂಕರ್‌ ತುಂಬಿಸಬೇಕಂತೆ?

ನೀರಿನ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದು ಜಲಮಂಡಳಿಯಿಂದ ನೀರು ತುಂಬಿಸಿಕೊಂಡು ಜಂಬೂಸವಾರಿ ದಿಣ್ಣೆಯಿಂದ ಸುಮಾರು 50 ರಿಂದ 60 ಕಿ.ಮೀ. ದೂರಕ್ಕೆ ತೆಗೆದುಕೊಂಡು ಹೋಗಿ ಕಾಂಗ್ರೆಸ್ ಬ್ಯಾನರ್ ಹೊದಿಕೆ ಮಾಡಿರುವ ಟ್ಯಾಂಕರ್‌ಗಳಿಗೆ ತುಂಬಿಸಿ ಬರಬೇಕು ಎಂದು ಬಿಟ್ಟು ಕಳುಹಿಸಲಾಗುತ್ತಿದೆ ಎಂಬ ಆರೋಪ ಟ್ಯಾಂಕರ್‌ ಮಾಲಿಕರಿಂದ ಕೇಳಿಬಂದಿದೆ.ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊಟ್ಟಿಗೆರೆ ವಾರ್ಡ್‌ನ ಜಂಬೂಸವಾರಿ ದಿಣ್ಣೆಯ ಬಳಿ ವಾಹನಗಳನ್ನು ವಶಕ್ಕೆ ಪಡೆದ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಖಾಸಗಿ ನೀರಿನ ಟ್ಯಾಂಕರ್ ವಾಹನದ ಮಾಲೀಕರು ಅಧಿಕಾರಿಗಳು ವಿರುದ್ಧ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

- - -

ಬೆಂಗಳೂರಿಗೆ ಅಕ್ಕಪಕ್ಕದ ಜಿಲ್ಲೆಗಳಿಂದ ನೀರು: ಡಿಕೆಶಿಕನ್ನಡಪ್ರಭ ವಾರ್ತೆ ಬೆಂಗಳೂರುನೀರಿನ ವಿಚಾರದಲ್ಲಿ ಬೆಂಗಳೂರು ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದೆ. ಆದರೂ, ಬೆಂಗಳೂರಿಗೆ ನೀರು ಪೂರೈಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.ಮಂಗಳವಾರ ಮಾತನಾಡಿದ ಅವರು, ಬೆಂಗಳೂರಿನ ಸುತ್ತಲಿನ 15 ಕಿ.ಮೀ. ವ್ಯಾಪ್ತಿಯಲ್ಲಿರುವ ನೀರಿನ ಮೂಲಗಳಿಂದ ನಗರಕ್ಕೆ ನೀರು ತರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹೊಸಕೋಟೆ, ರಾಮನಗರ, ಚನ್ನಪಟ್ಟಣ, ಮಾಗಡಿಯಿಂದ ಟ್ಯಾಂಕರ್‌ ಮೂಲಕ ನೀರು ತಂದು ನಗರಕ್ಕೆ ಪೂರೈಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.ಬೆಂಗಳೂರಿನಲ್ಲಿ ಈ ರೀತಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕಾಗಿಯೇ ಮೇಕೆದಾಟು ಯೋಜನೆ ಜಾರಿ ಮಾಡುವುದಕ್ಕೆ ನಾವು ಮುಂದಾಗಿದ್ದೇವೆ. ಬೆಂಗಳೂರಿನ ಪರಿಸ್ಥಿತಿ ಗಮನಿಸಿ ಕೇಂದ್ರ ಸರ್ಕಾರ ಈಗಲಾದರೂ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು ಎಂದರು.

Share this article