ಕನ್ನಡಪ್ರಭ ವಾರ್ತೆ ಕಲಬುರಗಿ
ಈಗಾಗಲೇ ಪೊಲೀಸರು ಬಂಧಿಸಿರುವ ಮೂವರು ಆರೋಪಿಗಳು ಕಾಂಗ್ರೆಸ್ ಸದಸ್ಯರೇ ಆಗಿದ್ದಾರೆ, ನಾಸೀರ್ ಹುಸೇನ್ ಗೆಲುವಿನ ಸಂಭ್ರಮಾಚರಣೆಯಲ್ಲೇ ಪಾಕ್ ಪರ ಘೋಷಣೆ ಕೂಗಿದ್ದಾರೆ. ಇದೆಲ್ಲವು ಕಂಗ್ರೆಸ್ ಪಕ್ಷದಲ್ಲಿಯೇ ಉಗ್ರ ಮನೋಧೋರಣೆಯವರು ತುಂಬಿರೋದು ಸ್ಪಷ್ಟಪಡಿಸುತ್ತದೆ ಎಂದು ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಳಿ ನಡೆಸಿದ್ದಾರೆ.
ನಾಸೀರ್ ಹುಸೇನ್ ಪತ್ರದ ಮೇಲೆಯೇ ಬಂಧಿತ ಮೂವರು ಸೇರಿದಂತೆ 25 ಜನ ಬಂದು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದೀಗ ಮೂವರು ಪಾಕ್ ಪರ ಘೋಷಣೆ ಕೂಗಿರೋದು ಧೃಢವಾಗಿದೆ. ಇನ್ನು ಇವರನ್ನು ಪತ್ರ ನೀಡಿ ಕರೆತಂದಿರುವ ನಾಸೀರ್ ಹುಸೇನ್ ಕೂಡಾ ದೇಶದ್ರೋಹದ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ ಆರೋಪಿಯಾಗುತ್ತಾರೆ. ಇವರ ಮೇಲೆ ಅದೇನ್ ಕ್ರಮ ತಗೋತೀರಾ ಹೇಳಿ? ನಾಸೀರ್ ಇವರ ರಾಜ್ಯಸಭಾ ಸದಸ್ಯತ್ವ ರದ್ದು ಮಾಡಬೇಕು, ರಾಜ್ಯಸಭಾ ಸದಸ್ಯತ್ವದಿಂದ ಅವರನ್ನ ಅನರ್ಹಗೊಳಿಸಬೇಕೆಂದು ಅಶೋಕ್ ಆಗ್ರಹಿಸಿದರು.ಕಾಂಗ್ರೆಸ್ಸಿಗರು ಆರಂಭದಲ್ಲಿ ಈ ಪ್ರಕರಣವನ್ನು ತಳ್ಳಿ ಹಾಕುವ ಯತ್ನ ಮಾಡಿದ್ದಾರೆ, ಪ್ರಿಯಾಂಕ್, ಡಾ. ಶರಣಪ್ರಕಾಶ, ಪರಮೇಶ್ವರ, ಚೇಲುವರಾಯಸ್ವಾಮಿ ಸೇರಿದಂತೆ ಅನೇಕ ಸಚಿವರು ಕೇವಲವಾಗಿ ಮಾತನಾಡಿದ್ದಾರೆ, ಬಿಜೆಪಿಯವರೇ ಮಾಡಿಸಿದ್ದಾರೆಂದೂ ನಮ್ಮ ಮೇಲೆಯೇ ಗೂಬೆ ಕೂರಿಸಲು ಮುಂದಾಗಿದ್ದರು. ಇಂಥವರು ಈಗ ಏನು ಹೇಳುತ್ತಾರೆ?
ಹಿಂದೂ ದ್ವಷಿ ಸಿದ್ದು ಸರ್ಕಾರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಸರಕಾರ ಹಿಂದೂ ದ್ವೇಷಿಯಾಗಿದೆ ಎಂಬುದಕ್ಕೆ ಇವೆಲ್ಲವೂ ಉದಾಹರಣೆಗಳೇ ಆಗಿವೆ. ಇವರ 9 ತಿಂಗಳ ಆಡಳಿತದಲ್ಲೇ ರಾಜ್ಯ ಉಗ್ರರ ಸ್ಪೀಪಿಂಗ್ ಸೆಲ್ ಆಗುತ್ತಿದೆ. ಪಾಕ್ ಪ್ರೇರಿತ ಸಂಘಟನೆಗಳವರು ಇಲ್ಲೀಗ ಚುರುಕಾಗುತ್ತಿದ್ದಾರೆ. ಇದಕ್ಕೆಲ್ಲ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ತುಷ್ಟೀಕತರ ಕಾರಣವೆಂದರು.
ಕುವೆಂಪು ನಾಡಗೀತೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟವೆಂದು ಕರುನಾಡನ್ನು ಬಣ್ಣಿಸಿದ್ದರು. ಸಿದ್ದು ಆಡಳಿತದಲ್ಲಿ ಅದು ಅಶಾಂತಯ ತೋಟವಾಗಿದೆ. ಮಂಡ್ಯದ ಕೆರೆಗೋಡು ಹನುಮಧ್ವಜ ಪ್ರಕರಣ, ಪಾಕಿಸ್ತಾನ್ ಜಿಂದಾಬಾದ್ ಪ್ರಸಂಗ, ರಾಮೇಶ್ವರ ಕೆಫೆ ಬಾಂಬ್ ಸ್ಫೋಟದ ಪ್ರಕರಣ, ಕಲಬುರಗಿ ಜಿಲ್ಲೆಯಲ್ಲಿನ ಕಳೆದ 9 ತಿಂಗಳಲ್ಲಿ ನಡೆದಂತಹ ರಜಕೀಯ ಪ್ರೇರಿತ 15ಕ್ಕೂ ಹೆಚ್ಚು ಕೊಲೆ ಪ್ರಕರಣ ಇನ್ನೆಲ್ಲ ಕೂಲಂಕುಷವಾಗಿ ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ, ಅಶಾಂತಿ ತಾಂಡವವಾಡತ್ತಿದೆ ಎಂಬುದು ಸ್ಪಷ್ಟ ಎಂದರು.