ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಆಯ್ಕೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಪಾಲಿಕೆಗೆ ಚುನಾವಣೆ ನಡೆದು ೧೪ ತಿಂಗಳ ಬಳಿಕ ಜ.9 ರಂದು ಮೇಯರ್ - ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಯುತ್ತಿದೆ.ವೇಳಾಪಟ್ಟಿಯಂತೆ ಜ.9 ರ ಬೆಳಗ್ಗೆ 9 ರಿಂದ ೧೧ರ ವರೆಗೆ ನಾಮಪತ್ರಗಳ ಸ್ವೀಕಾರ, ಮಧ್ಯಾಹ್ನ ೧ ಗಂಟೆ ನಂತರ ಸಭೆ ಆರಂಭಿಸಿ, ಹಾಜರಾತಿ, ಕೋರಂ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಕೆ ಹಿಂಪಡೆಯುವುದು, ಅಂತಿಮ ಉಮೇದುವಾರರ ಪಟ್ಟಿ ಘೋಷಣೆ, ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ, ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ, ಮತಗಳ ಏಣಿಕೆ ಹಾಗೂ ಫಲಿತಾಂಶ ಘೋಷಣೆ ಪ್ರಕ್ರಿಯೆಗಳು ನಡೆಯಲಿವೆ.
ವಿಜಯಪುರ ಪಾಲಿಕೆ ಮೇಯರ್ ಸ್ಥಾನ ಕಾಂಗ್ರೆಸ್‌ಗೆ ಪಾಲಾಗುವುದು ಮೇಲ್ನೋಟಕ್ಕೆ ಪಕ್ಕಾ ಆಗಿದೆ. ಆದರೂ, ತೆರೆಮರೆಯಲ್ಲಿ ಬಿಜೆಪಿ ರಣತಂತ್ರ ನಡೆಸುತ್ತಿದೆ. ಇದೆಲ್ಲದರ ನಡುವೆ ಯಾರೇ ಮೇಯರ್ ಹುದ್ದೆ ಅಲಂಕರಿಸಲು ಪಕ್ಷೇತರರ ಬೆಂಬಲ ಮಾತ್ರ ಅಗತ್ಯವಾಗಿದೆ. ಹೀಗಾಗಿ ಪಕ್ಷೇತರರಲ್ಲೂ ಅದರಲ್ಲೂ ಈ ಹಿಂದಿನ ಬಿಜೆಪಿ ಒಡನಾಡಿ, ಈಗ ಕಾಂಗ್ರೆಸ್ ಸೇರಿರುವ ಅಶೋಕ ನ್ಯಾಮಗೌಡ ಅವರ ನಡೆ ಮೇಲೆ ಮೇಯರ್ ಆಯ್ಕೆ ನಿಂತಿದೆ.೩೫ ಸದಸ್ಯ ಬಲ ಹೊಂದಿರುವ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ೧೭, ಕಾಂಗ್ರೆಸ್ ೧೦, ಎಐಎಂಐಎಂ ೨, ಜೆಡಿಎಸ್ ೧ ಹಾಗೂ ೫ ಪಕ್ಷೇತರ ಸದಸ್ಯರು ಇದ್ದಾರೆ. ಆದರೆ, ಮೂರು ದಿನಗಳ ಹಿಂದೆ ಪಾಲಿಕೆಯ ೨೯ನೇ ವಾರ್ಡಿನ ಸದಸ್ಯ ವಿಜಯಕುಮಾರ ಬಿರಾದಾರ ಅನಾರೋಗ್ಯದಿಂದ ನಿಧನವಾಗಿರುವುದರಿಂದ ಬಿಜೆಪಿ ಬಲ ೧೬ಕ್ಕೆ ಕುಸಿದಿದೆ.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ಇದೇ ವೇಳೆ ನಡೆದಿರುವುದರಿಂದ, ಪಾಲಿಕೆ ಮೇಯರ್ ಚುನಾವಣೆ ಜವಾಬ್ದಾರಿ ಯಾರೂ ವಹಿಸಿಕೊಂಡಿಲ್ಲ. ಇತ್ತ ಎಐಎಂಐಎಂ, ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರು ಸಚಿವ ಎಂ.ಬಿ.ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇಬ್ಬರು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು ಹಾಗೂ ೧೦ ಮಂದಿ ಪಾಲಿಕೆ ಸದಸ್ಯರು ಸೇರಿದಂತೆ ೨೨ ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.ಕಾಂಗ್ರೆಸ್‌ನಲ್ಲಿ ಮೇಯರ್, ಉಪ ಮೇಯರ್ ಹುದ್ದೆಗೆ ಭಾರಿ ಲಾಭಿ ನಡೆದಿದೆ. ಮೇಯರ್ ಹುದ್ದೆಗೆ ಮಹೆಜಬೀನ್ ಅಬ್ದುಲ್ ರಜಾಕ್ ಹೊರ್ತಿ (ವಾರ್ಡ್ ನಂ.೩೪ ಸದಸ್ಯೆ) ಹಾಗೂ ಉಪ ಮೇಯರ್ ಸ್ಥಾನಕ್ಕೆ ದಿನೇಶ್ ಹಳ್ಳಿ (ವಾರ್ಡ್ ನಂ.೧೮) ಅವರ ಹೆಸರು ಮುಂಚೂಣಿಯಲ್ಲಿದ್ದು, ಬಹುತೇಕ ಇವರೇ ಅಂತಿಮವಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ, ಬಿಜೆಪಿಯಿಂದ ಮೇಯರ್, ಉಪ ಮೇಯರ್ ಹುದ್ದೆಗೆ ಯಾರ ಹೆಸರು ಇನ್ನೂ ಅಂತಿಮವಾಗಿಲ್ಲ.