ಕಾಡಿನಲ್ಲಿ ಬೆಂಕಿ ಇಟ್ಟವರಾರು?...

KannadaprabhaNewsNetwork | Published : May 2, 2024 12:15 AM

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಕರಡಿಕಲ್‌ ಬೆಟ್ಟಕ್ಕೆ ಬೆಂಕಿ ಹಚ್ಚಿದ್ದು ಯಾರು? ಮದ್ದೂರು ಆರ್‌ಎಫ್‌ಒ ಮೇಲೆ ದ್ವೇಷವೇನು? ಬೆಂಕಿ ಹಚ್ಚಲು ಕಾರಣವೇನು ಎಂಬುದು ಅನುಮಾನ ಮತ್ತು ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಕರಡಿಕಲ್‌ ಬೆಟ್ಟಕ್ಕೆ ಬೆಂಕಿ ಹಚ್ಚಿದ್ದು ಯಾರು? ಮದ್ದೂರು ಆರ್‌ಎಫ್‌ಒ ಮೇಲೆ ದ್ವೇಷವೇನು? ಬೆಂಕಿ ಹಚ್ಚಲು ಕಾರಣವೇನು ಎಂಬುದು ಅನುಮಾನ ಮತ್ತು ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ.ಮದ್ದೂರು ವಲಯದ ಹೆದ್ದಾರಿ ಬದಿಯಲ್ಲಿ ಬೆಂಕಿ ಹಚ್ಚಿದ್ದರೆ ಅನುಮಾನ ಬರುತ್ತಿರಲಿಲ್ಲ. ಕರಡಿಕಲ್‌ ಬೆಟ್ಟದ ಬಳಿಗೆ ಹೋಗಬೇಕೆಂದರೆ ಇದು ಅನುಭವ ಇರುವವರೇ ಇರಬೇಕು ಎಂಬ ಮಾತಿದೆ. ಕರಡಿಕಲ್‌ ಬೆಟ್ಟದ ಬಳಿ ಹೋಗಿ ಎರಡು ಕಡೆ ಬೆಂಕಿ ಹಚ್ಚಿ ಯಾರ ಕಣ್ಣಿಗೂ ಬೀಳದೆ ರಾತ್ರಿಯ ವೇಳೆ ಕಾಡಿನೊಳಗೆ ಬಂದಿರುವುದು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿದೆ. ಕಾಡಿನ ಒಳಗೆ ಬೆಂಕಿ ಹಚ್ಚಿರುವ ಕಾಣದ ಕೈ ಯಾರು ಎಂದು ಅರಣ್ಯ ಇಲಾಖೆಗೆ ತಲೆ ನೋವಾಗಿದೆ.

ಮದ್ದೂರು ವಲಯದ ಕರಡಿಕಲ್‌ ಬೆಟ್ಟವನ್ನೇ ಗುರಿಯಾಗಿಸಿ ಬೆಂಕಿ ಇಡಲಾಗಿದೆ. ಆದರೆ ಕರಡಿಕಲ್‌ ಬೆಟ್ಟದ ಬಳಿ ಎರಡು ಕಡೆ ಇಡಲಾಗಿದೆ. ಬೆಂಕಿ ಕರಡಿಕಲ್‌ ಬೆಟ್ಟದಲ್ಲಿ ಹಾಗೂ ಕರಡಿಕಲ್‌ ಬೆಟ್ಟದ ಮತ್ತೊಂದು ತುದಿಯಲ್ಲಿಟ್ಟ ಬೆಂಕಿ ನೆರೆಯ ಗೋಪಾಲಸ್ವಾಮಿ ಬೆಟ್ಟದ ವಲಯದ ಕಡೆಗೆ ಹಬ್ಬಿ ಮದ್ದೂರು ವಲಯಕ್ಕಿಂತ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಕಾಡು ಹೆಚ್ಚು ಬೆಂದಿದೆ ಎನ್ನಲಾಗಿದೆ.

ಪತ್ತೆ ಹಚ್ಚಲು ಕ್ರಮ: ಮದ್ದೂರು ವಲಯದ ಕರಡಿಕಲ್‌ ಬೆಟ್ಟವನ್ನೇ ಗುರಿಯಾಗಿಟ್ಟುಕೊಂಡು ಬೆಂಕಿ ಹಚ್ಚಿದವನ ಪತ್ತೆ ಹಚ್ಚಲು ಅರಣ್ಯ ಇಲಾಖೆ ನಾನಾ ತಂತ್ರಗಳನ್ನು ಹೆಣೆದಿದ್ದು,ಈ ಸಂಬಂಧ ಕೆಲವರು ಮೊಬೈಲ್‌ ಸಿಡಿಆರ್‌ ಹಾಕಿಸಲು ಅರಣ್ಯ ಇಲಾಖೆ ಮುಂದಾಗಿದೆ.

ದ್ವೇಷದ ಕೆಲಸನಾ?

ಹೇಳಿ, ಕೇಳಿ ಮದ್ದೂರು ವಲಯದ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್‌ ಗುರಿಯಾಗಿಟ್ಟುಕೊಂಡೇ ಅಧಿಕಾರಿಯೊಬ್ಬರ ಬೆಂಬಲದಿಂದ ಬೆಂಕಿ ಹಾಕಿದ್ದಾರೆಂಬ ಅನುಮಾನ ಬಲವಾಗಿ ಕೇಳಿ ಬಂದಿದ್ದು ಅಧಿಕಾರಿಗಳ ದ್ವೇಷದ ಕೆಲಸವಾ ಎಂಬ ಸಂಶಯ ಎದ್ದಿದೆ. ಈ ಸಂಬಂಧ ಕೆಲ ಅಧಿಕಾರಿಗಳು, ಕೆಲ ಸಿಬ್ಬಂದಿಗಳ ಮೊಬೈಲ್‌ಗೆ ಬಂದ ಕರೆಗಳ ಮಾಹಿತಿ ಕಲೆ ಹಾಕಿದ್ದೇ ಆದಲ್ಲಿ ಬೆಂಕಿ ಇಟ್ಟವರು, ಬೆಂಕಿ ಇಡಲು ಕುಮ್ಮಕ್ಕು ನೀಡಿದವರ ಬಣ್ಣ ಬಯಲಾಗಲಿದೆ ಎಂದು ಹೆಸರೇಳಲಿಚ್ಚಿಸಿದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಡಿನೊಳಗೆ ಹೋಗಿ ಬೆಂಕಿ ಹಚ್ಚಿದವರ ಬಗ್ಗೆ ಅರಣ್ಯ ಇಲಾಖೆ ಕಲೆ ಹಾಕುತ್ತಿದೆ. ಕೆಲವರ ಮೊಬೈಲ್‌ ಸಿಡಿಆರ್‌ ಹಾಕಿಸಲು ಚಿಂತನೆ ನಡೆಸಲಾಗಿದೆ. ಮದ್ದೂರು ವಲಯ ಗುರಿಯಾಗಿಸಿ ಬೆಂಕಿ ಹಾಕಿಸಿದ್ದಾರೆ? ಹಾಲು ಕುಡಿದ ಮಕ್ಳೇ ಬದುಕಲ್ಲ, ಇನ್ನೂ ವಿಷ ಕುಡಿದ ಮಕ್ಳು ಬದುಕ್ತಾವಾ?-ಜಿ.ರವೀಂದ್ರ, ಎಸಿಎಫ್‌, ಗುಂಡ್ಲುಪೇಟೆ

ರಮೇಶ್‌ಕುಮಾರ್‌ಗೆ ಬಂಡೀಪುರದ ಮೇಲಿನ ಪ್ರೀತಿ, ಬಿಆರ್‌ಟಿ ಮೇಲೇಕಿಲ್ಲ?

ಗುಂಡ್ಲುಪೇಟೆ: ಮೈಸೂರು ವಿಭಾಗದ ಟೈಗರ್‌ ಪ್ರಾಜೆಕ್ಟ್‌ನ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‌ ಕುಮಾರ್‌ ಬಂಡೀಪುರ ಅರಣ್ಯದಲ್ಲಿ ಬೆಂಕಿ ಬಿದ್ದ ತಕ್ಷಣವೇ ಖುದ್ದು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಆದರೆ ನೆರೆಯ ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಾಲ್ಕಾರು ಬಾರಿ ಬೆಂಕಿ ಬಿದ್ದರೂ ಭೇಟಿ ಏಕೆ ನೀಡಲಿಲ್ಲ. ಬಂಡೀಪುರದ ಮೇಲಿನ ಪ್ರೀತಿ ಡಾ.ಪಿ.ರಮೇಶ್‌ ಕುಮಾರ್‌ಗೆ ಇನ್ನೂ ಹೋಗಿಲ್ವ ಎಂದು ಅಧಿಕಾರಿ ವಲಯದಲ್ಲೇ ವ್ಯಂಗವಾಡುತ್ತಿದ್ದಾರೆ.

ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಡಾ.ಪಿ.ರಮೇಶ್‌ ಕುಮಾರ್‌ ಬಂಡೀಪುರದಿಂದ ಹೋಗಲು ಇಷ್ಟವಿರಲಿಲ್ಲ. ವರ್ಗಾವಣೆಯಾದ ಬಳಿಕ ಒಲ್ಲದ ಮನಸ್ಸಿನಿಂದ ಮೈಸೂರು ಪ್ರಾಜೆಕ್ಟ್‌ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೆಂಕಿ ಬಿದ್ದ ನೆಪದಲ್ಲಿ ಮದ್ದೂರು ವಲಯಕ್ಕೆ ಬೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ನೆರೆಯ ಡಾ.ಪಿ.ರಮೇಶ್‌ ಕುಮಾರ್‌ ಆಪ್ತ ಆರ್‌ಎಫ್‌ ಒ ಮಂಜುನಾಥ್‌ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಮದ್ದೂರು ಅರಣ್ಯಕ್ಕಿಂತ ಹೆಚ್ಚು ಕಾಡು ನಾಶವಾದರೂ ಗೋಪಾಲಸ್ವಾಮಿ ಬೆಟ್ಟದ ವಲಯಕ್ಕೆ ಭೇಟಿ ನೀಡಲಿಲ್ಲ ಎನ್ನಲಾಗಿದೆ.

ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತದಲ್ಲಿ ನಾಲ್ಕಾರು ಬಾರಿ ಬೆಂಕಿ, ನೂರಾರು ಎಕರೆ ಪ್ರದೇಶದಲ್ಲಿ ಕಾಡು ನಾಶವಾಗಿದೆ ಎನ್ನಲಾದ ಕಾಡಿಗೋಗದ ಡಾ.ಪಿ.ರಮೇಶ ಕುಮಾರ್‌ ದಿಡೀರ್‌ ಬೆಂಕಿ ಬಿದ್ದ ಮರು ದಿನವೇ ಭೇಟಿ ನೀಡಿ ಮಾಹಿತಿ ಕಲೆ ಹಾಕಿರುವುದು ದ್ವೇಷಕ್ಕಾಗಿ ಇರಬೇಕು ಎಂದು ಹೆಸರೇಳಲಿಚ್ಚಿಸದ ಸಿಬ್ಬಂದಿ ಹೇಳಿದ್ದಾರೆ.

ಸಂಬಂಧ ಹಳಸಿತ್ತು?: ಡಾ.ಪಿ.ರಮೇಶ್‌ ಕುಮಾರ್‌ ಅವರು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ, ನಿರ್ದೇಶಕರಾಗಿದ್ದ ಸಮಯದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಹುತೇಕ ಎಸಿಎಫ್‌, ಆರ್‌ಎಫ್‌ಒಗಳ ಸಂಬಂಧ ಹಳಸಿತ್ತು. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ಪಿ.ರಮೇಶ್‌ ಕುಮಾರ್‌ ವರ್ಗಾವಣೆಯಾದರೂ ಒಲ್ಲದ ಮನಸ್ಸಿನಿಂದ ಬಂಡೀಪುರದಿಂದ ಕಾಲ್ಕಿತ್ತಿದ್ದರು. ವರ್ಗಾವಣೆಯಾದ ಬಳಿಕ ನೂತನ ಡಿಸಿಎಫ್‌ ಹಾಗೂ ಕ್ಷೇತ್ರ ನಿರ್ದೇಶಕ ಪ್ರಭಾಕರನ್‌ ಗೆ ಅಧಿಕಾರ ಕೂಡ ಹಸ್ತಾಂತರ ಮಾಡಲಿಲ್ಲ.

ಬಂಡೀಪುರದಿಂದ ವರ್ಗಾವಣೆಯಾಗಿ ಮತ್ತೆ ಮೈಸೂರು ವಿಭಾಗದ ಪ್ರಾಜೆಕ್ಟ್‌ ಸಂರಕ್ಷಣಾಧಿಕಾರಿಯಾಗಿ ಡಾ.ಪಿ.ರಮೇಶ್‌ ಕುಮಾರ್‌ ವರ್ಗಾವಣೆ ಮಾಡಿಸಿಕೊಂಡ ನಂತರ ಸಹಜವಾಗಿಯೇ ಬಂಡೀಪುರ ಕೆಲ ಎಸಿಎಫ್‌, ಆರ್‌ಎಫ್‌ ಒಗಳಿಗೆ ಆತಂಕ ಬಂದಿದೆ. ಬಂಡೀಪುರ ಸಿಎಫ್‌ ಆಗಿದ್ದ ಸಮಯದಲ್ಲಿ ಕೆಲ ಎಸಿಎಫ್‌, ಆರ್‌ಎಫ್‌ಒಗಳೊಂದಿಗೆ ಉತ್ತಮ ಬಾಂಧವ್ಯ ಇರಲಿಲ್ಲ. ನೂತನ ಡಿಸಿಎಫ್‌ ಬರಲು ಕೆಲ ಆರ್‌ಎಫ್‌ಒಗಳು ಕಾರಣ ಎಂಬುದು ಡಾ.ರಮೇಶ್‌ ಕುಮಾರ್‌ಗೆ ಗೊತ್ತಿರುವ ವಿಚಾರ. ಹಾಗಾಗಿ ಇನ್ಮುಂದೆ ಸಣ್ಣ ಪುಟ್ಟ ವಿಷಯಗಳಿಗೂ ಕಿರುಕುಳ ನೀಡೋದು ಗ್ಯಾರಂಟಿ ಎಂದು ಹೆಸರೇಳಲಿಚ್ಚಿಸದ ಎಸಿಎಫ್‌ ಹೇಳಿದ್ದಾರೆ.

Share this article