ಚಿಂತಕರ ಚಾವಡಿ ಪ್ರವೇಶಿಸುವವರ್‍ಯಾರು?

KannadaprabhaNewsNetwork |  
Published : Oct 25, 2026, 02:15 AM IST
ಮೋಹನ ಲಿಂಬಿಕಾಯಿ | Kannada Prabha

ಸಾರಾಂಶ

ಚಿಂತಕರ ಚಾವಡಿ ಎಂದೇ ಕರೆಯುವ ವಿಧಾನಪರಿಷತ್‌ನ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಸುಸೂತ್ರವಾಗಿ ಮತದಾನ ನಡೆದು ಮತಪೆಟ್ಟಿಗೆಯೆಲ್ಲ ಸ್ಟ್ರಾಂಗ್‌ ರೂಮ್‌ನಲ್ಲಿ ಭದ್ರವಾಗಿವೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಚಿಂತಕರ ಚಾವಡಿ ಎಂದೇ ಕರೆಯುವ ವಿಧಾನಪರಿಷತ್‌ನ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಸುಸೂತ್ರವಾಗಿ ಮತದಾನ ನಡೆದು ಮತಪೆಟ್ಟಿಗೆಯೆಲ್ಲ ಸ್ಟ್ರಾಂಗ್‌ ರೂಮ್‌ನಲ್ಲಿ ಭದ್ರವಾಗಿವೆ. ಈ ನಡುವೆ ಎಸ್‌.ವಿ. ಸಂಕನೂರ ಹ್ಯಾಟ್ರಿಕ್‌ ಜಯಭೇರಿ ಬಾರಿಸುತ್ತಾರಾ? ಅಥವಾ ಮೋಹನ್‌ ಲಿಂಬಿಕಾಯಿ ಕಮಾಲ್‌ನಿಂದ ಕ್ಷೇತ್ರ ಮತ್ತೆ ಕೈವಶವಾಗುತ್ತಾ? ಎಂಬುದು ಕುತೂಹಲ ಮೂಡಿಸಿದೆ.

ಇಷ್ಟು ದಿನ ಚುನಾವಣೆ ರಂಗಿನಲ್ಲಿದ್ದ ಕ್ಷೇತ್ರದಲ್ಲಿ ಈಗ ಈ ವಿಷಯವೇ ಚರ್ಚಿತ ವಿಷಯವಾಗಿದೆ. ಹಾಗೆ ನೋಡಿದರೆ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಎಂಟ್ಹತ್ತು ತಿಂಗಳು ಮುಂಚಿತವಾಗಿಯೇ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮೋಹನ ಲಿಂಬಿಕಾಯಿಗೆ ಟಿಕೆಟ್‌ ಸಿಗುತ್ತಿದ್ದಂತೆ ಇತ್ತ ಸಂಕನೂರ ಅವರ ಹೆಸರನ್ನು ಬಿಜೆಪಿ ಅಖೈರು ಮಾಡುತ್ತಿತ್ತು. ಹೀಗೆ ಮುಂಚಿತವಾಗಿಯೇ ಅಭ್ಯರ್ಥಿಗಳ ಘೋಷಿಸಿದ್ದರೂ ಚುನಾವಣೆಯ ಅಖಾಡ ರಂಗೇರಿದ್ದು ಮಾತ್ರ ತಿಂಗಳ ಹಿಂದೆಯಷ್ಟೇ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಎರಡು ಪಕ್ಷಗಳು ಅಖಾಡಕ್ಕಿಳಿದು ಹಿಂದೆಂದೂ ಕಾಣದಂತಹ ಅಬ್ಬರದ ಪ್ರಚಾರ ನಡೆಸಿದ್ದು ಈ ಸಲದ ವಿಶೇಷ.

ಮತದಾನೋತ್ತರ ವಿಶ್ಲೇಷಣೆಯನ್ನು ಎರಡು ರಾಜಕೀಯ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಮಾಡುತ್ತಿವೆ. ಕಾಂಗ್ರೆಸ್ಸಿಗರು ತಮ್ಮದೇ ಸರ್ಕಾರವಿದೆ. ಈ ರೀತಿಯ ಚುನಾವಣೆಗಳಲ್ಲಿ ಆಡಳಿತ ಪಕ್ಷದ ಪರವಾಗಿಯೇ ಮತದಾರ ಒಲವು ತೋರುವುದು ಹೆಚ್ಚು. ಜತೆಗೆ ಕ್ಷೇತ್ರದ 23 ಶಾಸಕರ ಪೈಕಿ 17 ಜನರು ಕಾಂಗ್ರೆಸ್ಸಿಗರೇ ಇದ್ದಾರೆ. ಹೀಗಾಗಿ ಲಿಂಬಿಕಾಯಿ ಗೆಲ್ಲುವುದು ಖಚಿತ ಎಂದು ಕಾರ್ಯಕರ್ತರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತ ಬಿಜೆಪಿಗರು, ಕಾಂಗ್ರೆಸ್‌ ಸರ್ಕಾರವಿದ್ದರೂ ಯುವ ಸಮುದಾಯ ಸರ್ಕಾರದ ಪರವಾಗಿಲ್ಲ. ಕಾಂಗ್ರೆಸ್‌ನ ದುರಾಡಳಿತ ನಮಗೆ ಪ್ಲಸ್‌ ಆಗುತ್ತದೆ. ಪದವೀಧರ ಮತದಾರರು ಪ್ರಜ್ಞಾವಂತರು. ಹೀಗಾಗಿ ಸರ್ಕಾರದ ದುರಾಡಳಿತ ಅವರಿಗೆ ತಿಳಿದಿದ್ದು ಸಂಕನೂರ ಹ್ಯಾಟ್ರಿಕ್‌ ಜಯಭೇರಿ ಸಾಧಿಸುವುದು ಖಚಿತ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಜೆನ್‌ಝೀ ಅಭ್ಯರ್ಥಿ:

ಈ ನಡುವೆ ಸರ್ಕಾರದ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ವಿದ್ಯಾರ್ಥಿಗಳ ಹೋರಾಟದಿಂದ ರಾಜ್ಯದ ಗಮನ ಸೆಳೆದಿರುವ ಕಾಂತಕುಮಾರ ಸಹ ಕಣದಲ್ಲಿದ್ದರು. ಜೆನ್‌ಝೀ ಅಭ್ಯರ್ಥಿಯೆಂದೇ ಕ್ಷೇತ್ರದಲ್ಲಿ ಹೇಳಲಾಗುತ್ತಿದೆ. ಕೆಲ ಯುವ ಸಮುದಾಯವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರೂ ಗೆಲುವು ಸಾಧಿಸುವುದು ಅಷ್ಟು ಸುಲಭವಲ್ಲ. ಆದರೆ, ಮತಗಳನ್ನು ಅಲ್ಪಸ್ವಲ್ಪ ಆಚೆ-ಈಚೆ ಮಾಡಬಹುದು ಎಂದು ಹೇಳಲಾಗುತ್ತಿದೆ.

ಜೋರಾಗಿ ಸುರಿದು ವರುಣ ಆರ್ಭಟ ಶಾಂತವಾದರೂ ಮಳೆ ನೀರು ನಿಲ್ಲುವುದಿಲ್ಲ ಎಂಬ ಮಾತಿನಂತೆ ಚುನಾವಣೆ ಮುಗಿದರೂ ಕ್ಷೇತ್ರದಲ್ಲಿ ಮಾತ್ರ

ಅದರ ಕಾವು ಮತ್ತಷ್ಟು ಹೆಚ್ಚುತ್ತಿದೆ. ಆದರೆ, ಫಲಿತಾಂಶಕ್ಕೆ ಮಾತ್ರ ಅ.27ರ ವರೆಗೆ ಕಾಯುವುದು ಅನಿವಾರ್ಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹತ್ತಾರು ಕ್ಷೇತ್ರಗಳಲ್ಲಿ ಕೊಂಕಣಿಗರ ಛಾಪು: ಫಾ. ಥಾಮಸ್ ಫರ್ನಾಂಡೀಸ್
ಬೇಡ್ತಿ- ಅಘನಾಶಿನಿ ತಿರುವು ಯೋಜನೆ ವಿರೋಧಿಸಿ ನವೆಂಬರ್ 3ರಂದು ಹೆದ್ದಾರಿ ತಡೆ