ಮೊದಲ ಹಂತದಲ್ಲಿಯೇ ಶಿವರಾಜ ತಂಗಡಗಿ ಸಚಿವರಾಗುತ್ತಾರೆ ಎನ್ನುವುದು ಹುಸಿಯಾದ ಮೇಲೆ ಎರಡನೇ ಹಂತದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವುದು ದಿನಕ್ಕೊಂದು ಚರ್ಚೆ
ಸೋಮರಡ್ಡಿ ಅಳವಂಡಿ ಕೊಪ್ಪಳ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸರ್ಕಾರದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ ಧಕ್ಕಲಿದೆ ಎನ್ನುವುದು ದಿನಕ್ಕೊಂದು ಚರ್ಚೆಯಾಗುತ್ತಿದೆ. ಇದ್ದ ಮೂವರಲ್ಲಿ ಯಾರಿಗೆ ಯೋಗವಿದೆ ಎನ್ನುವುದು ಜಿಲ್ಲೆಯ ಕಾಂಗ್ರೆಸ್ ಪಾಳೆಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಮೊದಲ ಹಂತದಲ್ಲಿಯೇ ಶಿವರಾಜ ತಂಗಡಗಿ ಸಚಿವರಾಗುತ್ತಾರೆ ಎನ್ನುವುದು ಹುಸಿಯಾದ ಮೇಲೆ ಎರಡನೇ ಹಂತದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವುದು ದಿನಕ್ಕೊಂದು ಚರ್ಚೆಯಾಗುತ್ತಿದೆ. ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲೇಬೇಕು ಎಂದು ಪಟ್ಟು ಹಿಡಿದಿರುವ ಕನಕಗಿರಿ ಶಾಸಕ ಶಿವರಾಜ ತಂಗಡಗಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ದಿಲ್ಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಇನ್ನು ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಸುಮ್ಮನೇ ಕುಳಿತಿಲ್ಲ. ನನ್ನನ್ನು ಸಚಿವನನ್ನಾಗಿ ಮಾಡಿ ಎಂದು ನಾನು ಕೇಳುವುದಿಲ್ಲ. ಪಕ್ಷವೇ ತೀರ್ಮಾನ ಮಾಡುತ್ತದೆ. ಕೊಟ್ಟರೂ ಸಂತೋಷ, ಕೊಡದಿದ್ದರೂ ಸಂತೋಷ ಎನ್ನುತ್ತಲೇ ಶತಾಯ ಪ್ರಯತ್ನ ನಡೆಸಿದ್ದಾರೆ.
ಏನೇನು ಸಾಧ್ಯತೆ ?: ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ ತಂಗಡಗಿ ಈ ವಿಷಯದಲ್ಲಿ ಅದೃಷ್ಟವಂತ ಶಾಸಕರು, ಪಕ್ಷೇತರರಾಗಿ ಗೆದ್ದಾಗಿನಿಂದ ಹಿಡಿದು ಕಾಂಗ್ರೆಸ್ ಸೇರಿದಾಗಲೂ ಗೆದ್ದಾಗಲೆಲ್ಲ ಮಂತ್ರಿಯಾಗಿದ್ದಾರೆ. ಈ ಬಾರಿಯಂತೂ ಕೆಪಿಪಿಸಿ ಅಧ್ಯಕ್ಷ ಸ್ಥಾನದ ನಾಲ್ಕಾರು ಹೆಸರುಗಳ ಪೈಪೋಟಿಯಲ್ಲಿ ಇವರ ಹೆಸರು ಮುನ್ನೆಲೆಗೆ ಬಂದಿತ್ತು. ಅಷ್ಟೇ ಅಲ್ಲ, ಇವರನ್ನೇ ಮಾಡಬೇಕು ಎನ್ನುವ ಕುರಿತು ದೆಹಲಿಯ ಹೈಕಮಾಂಡ್ ಮಟ್ಟದಲ್ಲಿಯೂ ಚರ್ಚೆಯಾಯಿತು. ಆದರೆ, ಕೊನೆಗಳಿಗೆಯಲ್ಲಿ ಅದು ಕೈತಪ್ಪಿತು. ಏನೇ ಆಗಲಿ ಕೊಪ್ಪಳ ಜಿಲ್ಲೆಯಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮೊದಲು ಪೈಪೋಟಿಗೆ ಬಂದಿದ್ದು ಎನ್ನುವುದು ಮಾತ್ರ ಉತ್ತಮ ಬೆಳಣಿಗೆ.
ಹಾಗೆ ನೋಡಿದರೆ ಶಿವರಾಜ ತಂಗಡಗಿ ಮೊದಲ ಹಂತದಲ್ಲಿಯೋ ಸಚಿವರಾಗುತ್ತಾರೆ ಎನ್ನುವುದು ಹುಸಿಯಾಯಿತು. ತಡರಾತ್ರಿಯವರೆಗೂ ಸಚಿವ ಸಂಪುಟದ ಪಟ್ಟಿಯಲ್ಲಿ ಇವರ ಹೆಸರು ಇತ್ತು. ಆದರೆ ರಾಜ್ಯಪಾಲರಿಗೆ ಕಳುಹಿಸಿದ ಪಟ್ಟಿಯಲ್ಲಿ ಹೆಸರು ಕೈಬಿಡಲಾಯಿತು.
ಈಗ ಎರಡನೇ ಪಟ್ಟಿಯಲ್ಲಿಯಾದರೂ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಶಿವರಾಜ ತಂಗಡಗಿ ದೆಹಲಿಯಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಹೇಗಾದರೂ ಸರಿಯೇ ಸಚಿವ ಸ್ಥಾನ ಪಡೆದುಕೊಂಡು ಬರಲು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಬದಲಾವಣೆಯ ವಿಷಯದಲ್ಲಿ ಯಾವುದೇ ಹೇಳಿಕೆ ನೀಡದೆ ಸಮಾನ ಅಂತರ ಕಾಯ್ದುಕೊಳ್ಳುವ ಮೂಲಕ ಆಗಿನ ಉಪಮುಖ್ಯಮಂತ್ರಿ ಹಾಗೂ ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಜತೆಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ ಇವರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವುದು ಅಭಿಮಾನಿಗಳ ವಿಶ್ವಾಸ.
ಆದರೆ, ಭೋವಿ ಸಮಾಜಕ್ಕೆ ಈಗಾಗಲೇ ಸಚಿವ ಸ್ಥಾನ ನೀಡಿರುವುದರಿಂದ ಕಾಂಗ್ರೆಸ್ ಈ ಬಾರಿ ಲಂಬಾಣಿ ಸಮುದಾಯಕ್ಕೆ ನೀಡಬೇಕು ಎನ್ನುವುದು ಇವರಿಗೆ ಸಚಿವ ಸ್ಥಾನ ಧಕ್ಕುವುದಕ್ಕೆ ಅಡ್ಡಿಯಾಗಿದೆ. ಆದರೂ ಶಿವರಾಜ ತಂಗಡಗಿ ತಮ್ಮ ಪ್ರಭಾವದ ಮೂಲಕ ಸಚಿವ ಸ್ಥಾನ ಪಡೆದೇ ಪಡೆಯಬೇಕು ಎಂದು ಅಭಿಮಾನಿಗಳು ದೇವರಲ್ಲಿ ಬಗೆ ಬಗೆಯಾಗಿ ಪ್ರಾರ್ಥಿಸುತ್ತಲೇ ಇದ್ದಾರೆ.
ರಾಘವೇಂದ್ರ ಹಿಟ್ನಾಳ:ಕೊಪ್ಪಳ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹ್ಯಾಟ್ರಿಕ್ ಗೆಲವು ಸಾಧಿಸಿರುವ ರಾಘವೇಂದ್ರ ಹಿಟ್ನಾಳ ಸಚಿವ ಸ್ಥಾನ ಪಡೆದೇ ಪಡೆಯುತ್ತಾರೆ ಎಂದು ಫಲಿತಾಂಶ ಬಂದಾಗಲೇ ಇವರ ಅಭಿಮಾನಿಗಳು ಸಂಭ್ರಮಿಸಿದ್ದರು. ಆದರೆ ಆಗಲೂ ಸಿದ್ದರಾಮಯ್ಯ ಕೃಪೆಯಾಗಲೇ ಇಲ್ಲ. ಸಚಿವ ಸ್ಥಾನ ಇರಲಿ, ಸಚಿವ ಸ್ಥಾನದ ಸ್ಥಾನಮಾನದ ನಿಗಮವೂ ಧಕ್ಕಲೇ ಇಲ್ಲ.
ಹೀಗಾಗಿ, ಎರಡನೇ ಹಂತದಲ್ಲಿ ಅದರಲ್ಲೂ ಡಿ.ಕೆ.ಶಿವಕುಮಾರ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆಯಲಿದೆ ಎನ್ನುವುದು ಇನ್ನು ಆಕಾಶದ ನಕ್ಷತ್ರದಂತಾಗಿದೆ.
ಸಿಎಂ ಡಿ.ಕೆ.ಶಿವಕುಮಾರ ಕೃಪೆಗೆ ಪಾತ್ರವಾದರೂ ಮಾಜಿ ಸಿ.ಎಂ.ಸಿದ್ದರಾಮಯ್ಯ ಆಶೀರ್ವಾದ ಆಗಬೇಕಾಗಿದೆ. ಕುರುಬ ಸಮುದಾಯಕ್ಕೆ ಮೂರು ಸಚಿವ ಸ್ಥಾನ ನೀಡಲು ಕೆಪಿಸಿಸಿ ತೀರ್ಮಾನಿಸಿದ್ದು, ಈಗಾಗಲೇ ಭೈರತಿ ಸುರೇಶ ಹಾಗೂ ಯತೀಂದ್ರ ಸಿದ್ದರಾಮಯ್ಯ ಮೊದಲ ಹಂತದಲ್ಲಿಯೇ ಸಚಿವರಾಗಿದ್ದಾರೆ. ಈಗ ಉಳಿದಿರುವ ಒಂದು ಸ್ಥಾನಕ್ಕೆ ಪೈಪೋಟಿ ಇದ್ದು, ಸಿದ್ದರಾಮಯ್ಯ ಕೃಪೆ ಇದ್ದವರಿಗೆ ಧಕ್ಕಲಿದೆ. ಇದನ್ನು ಮೀರಿಯೂ ಸಹ ಹೊಸಬರಿಗೆ ಅಧಿಕ ಸಚಿವ ಸ್ಥಾನ ನೀಡಲು ಎಐಸಿಸಿ ರಾಹುಲ್ ಗಾಂಧಿ ಕಟ್ಟುನಿಟ್ಟಿನ ಸೂಚನೆ ನೀಡಿರುವುದರಿಂದ ಅದೃಷ್ಟ ಖುಲಾಯಿಸುತ್ತದೆ ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ.
ಬಸವರಾಜ ರಾಯರಡ್ಡಿ:ಯಲಬುರ್ಗಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿರುವ ಬಸವರಾಜ ರಾಯರಡ್ಡಿಗೆ ಸಚಿವ ಸ್ಥಾನ ಸಿಗಲಿದೆಯೇ ಎನ್ನುವುದು ಈಗ ಭಾರಿ ಕುತೂಹಲವನ್ನುಂಟು ಮಾಡಿದೆ.
ಕಾರಣ ಇಷ್ಟೇ ಸಿಎಂ ಬದಲಾವಣೆಯ ವಿಷಯದಲ್ಲಿ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದರು. ಈ ಕುರಿತು ಅನೇಕ ಬಾರಿ ಹೇಳಿಕೆ ನೀಡಿದ್ದರು. ಇದು ಇವರಿಗೆ ಸಚಿವ ಸ್ಥಾನ ದೊರೆಯುವುದಕ್ಕೆ ಅಡ್ಡಿಯಾಗಿದೆ ಎಂದು ಅನೇಕರು ಷರಾ ಬರೆದಿದ್ದರು. ಆದರೆ, ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಖುದ್ದು ಸಿದ್ದರಾಮಯ್ಯ ರಾಯರಡ್ಡಿ ಅವರನ್ನು ಸಚಿವರನ್ನಾಗಿ ಮಾಡುವಂತೆ ಪಟ್ಟು ಹಿಡಿದಿರುವವರ ಪಟ್ಟಿಯಲ್ಲಿ ಬಸವರಾಜ ರಾಯರಡ್ಡಿ ಹೆಸರೂ ಇದೆ ಎನ್ನುವುದು ಅವರ ಅಭಿಮಾನಿಗಳಲ್ಲಿ ಸಂತಸ ತರಿಸಿದೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಯಲ್ ರೆಡ್ಡಿ ಒಮ್ಮೆ ಹಣಕಾಸು ಸಚಿವನನ್ನಾಗಿ ಮಾಡುತ್ತೇನೆ ಎಂದು ಬಹಿರಂಗ ವೇದಿಕೆಯಲ್ಲಿಯೇ ಹೇಳಿದ್ದರು. ಅದರಂತೆ ಹೈಕಮಾಂಡ್ ಬಳಿ ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲ ಖುದ್ದು ಡಿ.ಕೆ.ಶಿವಕುಮಾರ ಅವರಿಗೆ ನಿನಗೆ ಪೈನಾನ್ಸ್‌ನ್ ನಿರ್ವಹಣೆಯ ಬಹುದೊಡ್ಡ ತಲೆನೋವು ತಪ್ಪುತ್ತದೆ. ರಾಯರಡ್ಡಿ ಪೈನಾನ್ಸ್ ಮಿನಿಸ್ಟರ್ ಮಾಡಿ ಎಂದು ಹೇಳಿದ್ದಾರೆ ಎಂದು ರಾಯರಡ್ಡಿ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಏನೇ ಆಗಲಿ ಕೊಪ್ಪಳ ಜಿಲ್ಲೆಗೆ ಈ ಬಾರಿ ಒಂದಲ್ಲ, ಎರಡು ಸಚಿವ ಸ್ಥಾನ ಧಕ್ಕುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ. ಯಾರಿಗೆ ಅದೃಷ್ಟ ಕಾದಿದೆ ಕಾದು ನೋಡಬೇಕು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.