ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ನ.13ರಂದು ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಯಾರು ಅಧ್ಯಕ್ಷರಾಗುತ್ತಾರೆಂಬ ಕುತೂಹಲ ಮೂಡಿದೆ. ಮಾಜಿ ಸಂಸದ ರಮೇಶ ಕತ್ತಿ ಅವರು 2024, ಅ.4ರಂದು ಬಿಡಿಸಿಸಿ ಬ್ಯಾಂಕ್‌ಗೆ ರಾಜೀನಾಮೆ ನೀಡಿದ ನಂತರ ತೆರವಾಗಿದ್ದ ಸ್ಥಾನಕ್ಕೆ 40 ದಿನಗಳ ನಂತರ ಈಗ ನೂತನ ಅಧ್ಯಕ್ಷರ ಆಯ್ಕೆಗೆ ಕಸರತ್ತು ನಡೆಯಲಿದೆ.ಬಿಡಿಸಿಸಿಯಲ್ಲಿನ ರಜಾಕೀಯ ಒತ್ತಡದಿಂದ ನೋವಾಗಿ ರಾಜೀನಾಮೆ ನೀಡಿದ್ದೇನೆ ಎಂದು ಈ ಹಿಂದೆಯೇ ರಮೇಶ ಕತ್ತಿ ಅವರು ಸ್ಪಷ್ಟನೆಯನ್ನೂ ನೀಡಿದ್ದರು. ಕತ್ತಿ ಅವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಬ್ಯಾಂಕ್‌ನ ಕೆಲವು ಸದಸ್ಯರು ಅವರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ. ಇದಕ್ಕೂ ಮೊದಲೇ ರಮೇಶ ಕತ್ತಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇನ್ನೊಂದು ವರ್ಷಕ್ಕೆ ಮಾತ್ರ ಅಧ್ಯಕ್ಷರ ಆಯ್ಕೆ:ಒಟ್ಟು 16 ಸದಸ್ಯ ಬಲವನ್ನು ಹೊಂದಿರುವ ಡಿಸಿಸಿ ಬ್ಯಾಂಕ್‌ಗೆ ಅಧ್ಯಕ್ಷ ಆಯ್ಕೆಗೆ ಹಲವರು ಹೆಸರುಗಳು ಕೇಳಿಬಂದಿವೆ. ಬಹುತೇಕ ಅವಿರೋಧ ಆಯ್ಕೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರ ಅವಧಿ ಒಂದು ವರ್ಷ ಮಾತ್ರ ಉಳಿದುಕೊಂಡಿದ್ದು, ಆ ಅವಧಿಗೆ ಮಾತ್ರ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ ಮತ್ತು ರಮೇಶ ಕತ್ತಿ ಅವರಿಗೆ ನೂತನ ಅಧ್ಯಕ್ಷ ಆಯ್ಕೆ ಹೊಣೆಗಾರಿಕೆಯನ್ನು ನೀಡಲಾಗಿದೆ ಎಂದು ಈ ಹಿಂದೆಯೇ ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದ್ದರು. ಅದರಂತೆಯೇ ಒಂದು ವರ್ಷದ ಅಧಿಕಾರಾವಧಿಯ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಕುತೂಹಲ ಕೂಡ ಈಗ ಎಲ್ಲೆಡೆ ಇದೆ.ಅಣ್ಣಾಸಾಹೇಬ ಜೊಲ್ಲೆಗೆ ಇದೆಯಾ ಹೆಚ್ಚು ಅವಕಾಶ?:
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಸೋಲುಂಡಿರುವ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಹೆಸರು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿದೆ. ಇವರ ಜತೆಗೆ ಕಿತ್ತೂರು ಮತಕ್ಷೇತ್ರದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜಾರಕಿಹೊಳಿ ಕುಟುಂಬದಿಂದ ಯಾರೂ ಅಧ್ಯಕ್ಷರಾಗುವುದಿಲ್ಲ ಎಂದು ಈಗಾಗಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈ ಹಿಂದೆಯೇ ಸ್ಪಷ್ಟನೆ ನೀಡಿದ್ದಾರೆ. ಆದರೆ, ನಿರ್ಣಾಯಕ ಪಾತ್ರದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರೇ ಇದ್ದಾರೆ ಎಂಬುವುದರಲ್ಲಿ ಎರಡು ಮಾತಿಲ್ಲ.ಲೋಕಸಭಾ ಚುನಾವಣೆ ವೇಳೆ ಜಾರಕಿಹೊಳಿ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದ ಅಣ್ಣಾಸಾಹೇಬ ಜೊಲ್ಲೆ ಅವರು ಕೂಡ ಈಗ ಆ ವಲಯದಲ್ಲೇ ಗುರುತಿಸಿಕೊಂಡಿದ್ದಾರೆ. ಜತೆಗೆ ರಮೇಶ ಜಾರಕಿಹೊಳಿ ಅವರು ಕೂಡ ಅಣ್ಣಾಸಾಹೇಬ ಜೊಲ್ಲೆ ಅವರು ಅಧ್ಯಕ್ಷರಾಗುವುದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಕಾಂಗ್ರೆಸ್‌ನ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೂ ಅಣ್ಣಾಸಾಹೇಬ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಜೊಲ್ಲೆ ಕುಟುಂಬಕ್ಕೆ ಅಧ್ಯಕ್ಷ ಸ್ಥಾನದ ಅವಕಾಶ ಒದಗಿ ಬರಬಹುದು ಎಂದು ಊಹಿಸಲಾಗಿದೆ.
ಇಂದು ನಾಮಪತ್ರ ಸಲ್ಲಿಕೆ:ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ನ.13ರಂದು ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಅಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಸಿಗಲಿದೆ. ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಕೂಡ ನಡೆಯಲಿದೆ. ಆನಂತರ ಚುನಾವಣೆ ನಡೆಯಲಿದೆ.