-54 ಲಕ್ಷ ರು.ಗಳ ವೆಚ್ಚದಲ್ಲಿ ಕಾಮಗಾರಿಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಭೂಮಿ ಪೂಜೆ
-----ಕನ್ನಡಪ್ರಭ ವಾರ್ತೆ ಯಾದಗಿರಿ
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.ಲೋಕೋಪಯೋಗಿ ಇಲಾಖೆ 2023-24ನೇ ಸಾಲಿನ ಲೆಕ್ಕಶೀರ್ಷಿಕೆ ಯೋಜನೆಯ ಅನುದಾನದಡಿ 54 ಲಕ್ಷ ರು. ವೆಚ್ಚದಲ್ಲಿ ನಗರದ ಮಶೇಮ್ಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೋಣೆಗಳ ನಿರ್ಮಾಣಕ್ಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಲು ಹಲವಾರು ಯೋಜನೆ ಜಾರಿಗೆ ತಂದಿದೆ. ಅವರಿಗೆ ಪೌಷ್ಟಿಕ ಆಹಾರ, ಮೊಟ್ಟೆ ವಿತರಣೆ, ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಶಿಕ್ಷಣ ಕಲಿಯಬೇಕು. ಶಿಕ್ಷಕರು ಮಕ್ಕಳಲ್ಲಿ ಶಿಕ್ಷಣದ ಕ್ರಾಂತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.ವಾರ್ಡ್ ನಲ್ಲಿ ಶೌಚಾಲಯ ಹಾಗೂ ಮೂಲಭೂತ ಸಮಸ್ಯೆಗಳ ಬಗ್ಗೆ ಸದಸ್ಯರು ಗಮನಕ್ಕೆ ತಂದಿದ್ದಾರೆ. ಶೀಘ್ರದಲ್ಲಿಯೇ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭೆ ಸದಸ್ಯರಾದ ಹಣಮಂತ ನಾಯಕ ಮಾತನಾಡಿ, ಹಲವು ವರ್ಷಗಳಿಂದ ಶಾಲೆಯು ದೇವಸ್ಥಾನದಲ್ಲಿ ನಡೆಯುತ್ತಿದೆ. ಈ ಕುರಿತು ಶಾಸಕರಿಗೆ ಮನವಿ ಮಾಡಿದಾಗ, ತಕ್ಷಣ ಸ್ಪಂದಿಸಿ, 4 ಕೋಣೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಇದರಿಂದ ವಾರ್ಡ್‌ನ ಮಕ್ಕಳಿಗೆ ಸಂತೋಷ ತಂದಿದೆ ಎಂದರು.ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೈಲಾಸ ಅನವಾರ ಮಾತನಾಡಿ, 54 ಲಕ್ಷ ರು.ಗಳಲ್ಲಿ 4 ಸರ್ಕಾರಿ ಶಾಲೆಗಳ ಕೋಣೆಗಳ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ಮಾಡಿಕೊಡಲಾಗುವುದು ಎಂದರು.
ಶಿಕ್ಷಣ ಸಂಯೋಜಕರಾದ ಕಿಶನ ಪವಾರ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರವಿಚಂದ್ರ ನಾಯ್ಕಲ್, ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಕನ್ನಳ್ಳಿ, ನಗರಸಭೆ ಉಪಾಧ್ಯಕ್ಷರಾದ ರುಕಿಯಾ ಬೇಗಂ, ನಗರಸಭೆ ಸದಸ್ಯರಾದ ವಿಜಯಲಕ್ಷ್ಮಿ ಕೃಷ್ಣ ನಾನೇಕ, ಎಸ್ಡಿಎಂಸಿ ಅಧ್ಯಕ್ಷ ನಾಗಪ್ಪ ಪಿಲ್ಲಿ, ಶಾಲೆಯ ಮುಖ್ಯ ಗುರು ಸುರೇಖಾ ಪಾಂಚಾಳ, ಬಸವರಾಜಪ್ಪ ಬುಡಾಯಿನೋರ್, ರೇಣುಕಾ ಮೋನಪ್ಪ ಹಳಿಗೇರಾ, ಶಿಕ್ಷಕಿಯರಾದ ಪುನಮ್ಮ, ಉಷಾ ಇದ್ದರು.-----
ಫೋಟೊ: ಯಾದಗಿರಿ ನಗರದ ಮಶೇಮ್ಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೋಣೆಗಳ ನಿರ್ಮಾಣಕ್ಕೆ 54 ಲಕ್ಷ ರು.ಗಳ ವೆಚ್ಚದಲ್ಲಿ ಕಾಮಗಾರಿಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಭೂಮಿ ಪೂಜೆ ನೆರವೇರಿಸಿದರು.12ವೈಡಿಆರ್4