ಕಾರವಾರ: ಹೋಯ್ ಯಾರ್ ಬರುರಾ? ಹೇಳುಕಾಗುದಿಲ್ವಾ, ಫಿಫ್ಟಿ ಫಿಫ್ಟಿ ಅಂತರೆ. ಇಲ್ಲಾ ಮೋದಿ ನೋಡಿ ವೋಟ್ ಹಾಕರೆ ಕಾಣ್ತದ್ಯ. ಹಂಗರೆ ಗ್ಯಾರಂಟಿ ನೋಡೂ ಹಾಕಿರುಕೆ ಸಾಕು. ಹೌದು. ಸದ್ಯಕ್ಕಂತೂ ಯಾರೇ ಎದುರಾಗಲಿ. ಇದೇ ಮಾತುಕತೆ. ಕೊನೆಗೂ ಗೆಲುವು ಸೋಲಿನ ಲೆಕ್ಕಾಚಾರ ಬಗೆಹರಿಯುತ್ತಿಲ್ಲ.
ಕರಾವಳಿಯಲ್ಲಿ ಯಾರಿಗೆ ಲೀಡ್, ಘಟ್ಟದ ಮೇಲೆ ಯಾರಿಗೆ ಬಂಪರ್, ಇನ್ನು ಕಿತ್ತೂರು ಖಾನಾಪುರದಲ್ಲಿ ಯಾರ ಹವಾ ಹೀಗೆಲ್ಲ ಬಿಟ್ಟೂ ಬಿಡದೆ ಚರ್ಚೆಯಾಗುತ್ತಿದೆ.
ಬಿಜೆಪಿಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಬೆಂಬಲಿಗರೊಂದಿಗೆ ಬೈಠಕ್ ನಡೆಸಿ ಎಲ್ಲ ಲೆಕ್ಕಾಚಾರ ಹಾಕಿ ಗೆಲುವು ತಮ್ಮದೆ ಎಂದು ಬೀಗುತ್ತಿದ್ದಾರೆ. ಕಾಂಗ್ರೆಸ್‌ನ ಡಾ. ಅಂಜಲಿ ನಿಂಬಾಳ್ಕರ್ ತಮ್ಮವರೊಂದಿಗೆ ಮೀಟಿಂಗ್ ನಡೆಸಿ ತಮ್ಮ ಗೆಲುವು ಪಕ್ಕಾ ಎಂದು ಹೇಳುತ್ತಿದ್ದಾರೆ. ಕಣದಲ್ಲಿರುವ ಇತರ 11 ಅಭ್ಯರ್ಥಿಗಳು ಮಾತ್ರ ಸೋಲು- ಗೆಲುವಿನ ಬಗ್ಗೆ ಏನನ್ನೂ ಹೇಳುತ್ತಿಲ್ಲ.ಫಲಿತಾಂಶಕ್ಕೆ ಇನ್ನೂ ಸುಮಾರು 20 ದಿನಗಳು ಕಾಯಬೇಕು. ಜೂ. 4ರ ತನಕ ಹೇಗೆ ಕಾಯಬೇಕೆಂದು ಅಭ್ಯರ್ಥಿಗಳಲ್ಲಿ ಚಡಪಡಿಕೆ ಉಂಟಾಗಿದೆ. ಸತತ ಎರಡು ತಿಂಗಳ ಕಾಲ ದುಡಿದ ಕಾರ್ಯಕರ್ತರುಗಳೂ ಫಲಿತಾಂಶಕ್ಕಾಗಿ ತುದಿಗಾಲಿನ ಮೇಲೆ ನಿಂತಿದ್ದಾರೆ.
ಹಲವು ಲೆಕ್ಕಾಚಾರಗಳ ನಡುವೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರು, ಮುಖಂಡರು ಈಗ ಕುತೂಹಲದಿಂದ ವಿಜಯಲಕ್ಷ್ಮಿಗಾಗಿ ಕಾದಿದ್ದಾರೆ.