ಯಾರೇ ಅಡ್ಡಿ ಮಾಡಿದರು ಫುಟ್‌ಪಾತ್ ಒತ್ತುವರಿ ತೆರವು ನಿಲ್ಲಲ್ಲ

KannadaprabhaNewsNetwork | Published : Apr 12, 2025 12:47 AM

ಸಾರಾಂಶ

ಬಿಡದಿ ಪುರಸಭೆಯಲ್ಲಿ ಆಡಳಿತ ಪಕ್ಷವಾಗಿರುವ ಜೆಡಿಎಸ್‌ನವರು ಕೈಗೆತ್ತಿಕೊಂಡಿರುವ ಸರ್ಕಾರಿ ಜಾಗ ಮತ್ತು ಫುಟ್‌ಪಾತ್ ಒತ್ತುವರಿ ತೆರವು ಮಾತ್ರವಲ್ಲದೆ ಎಲ್ಲ ಅಭಿವೃದ್ಧಿಪರ ಕೆಲಸಗಳಿಗೆ ಕಾಂಗ್ರೆಸ್ ಬೆಂಬಲವಾಗಿ ನಿಲ್ಲಲಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ನಾವು ಮತಕ್ಕಾಗಿ ರಾಜಕಾರಣ ಅಲ್ಲ. ಅಭಿವೃದ್ಧಿಗಾಗಿ ರಾಜಕಾರಣ ಮಾಡುತ್ತಿದ್ದೇವೆ. ಹಾಗಾಗಿ ಬಿಡದಿ ಪುರಸಭೆಯಲ್ಲಿ ಆಡಳಿತ ಪಕ್ಷವಾಗಿರುವ ಜೆಡಿಎಸ್‌ನವರು ಕೈಗೆತ್ತಿಕೊಂಡಿರುವ ಸರ್ಕಾರಿ ಜಾಗ ಮತ್ತು ಫುಟ್‌ಪಾತ್ ಒತ್ತುವರಿ ತೆರವು ಮಾತ್ರವಲ್ಲದೆ ಎಲ್ಲ ಅಭಿವೃದ್ಧಿಪರ ಕೆಲಸಗಳಿಗೆ ಕಾಂಗ್ರೆಸ್ ಬೆಂಬಲವಾಗಿ ನಿಲ್ಲಲಿದೆ. ಯಾರು ಎಷ್ಟೇ ವಿರೋಧ ಮಾಡಿದರು ತೆರವು ಕಾರ್ಯಾಚರಣೆ ಮುಂದುವರೆಯಲಿದೆ ಎಂದು ವಿಪಕ್ಷ ನಾಯಕ ಸಿ.ಉಮೇಶ್ ತಿಳಿಸಿದರು.

ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಶೇ.40ರಷ್ಟು ಒತ್ತುವರಿ ತೆರವು ನಡೆದಿದ್ದು, ಉಳಿದ ಶೇ.60ರಷ್ಟನ್ನು ಪೂರ್ಣಗೊಳಿಸುತ್ತೇವೆ. ಸ್ವತ್ತಿನ ಮಾಲೀಕರ ಖಾತೆ ಆಧರಿಸಿ ಎಲ್ಲೆಲ್ಲಿ ಸರ್ಕಾರಿ ಜಾಗ ಮತ್ತು ಫುಟ್‌ಪಾತ್ ಒತ್ತುವರಿ ಆಗಿದಿಯೋ ಅದನ್ನು ಮುಲಾಜಿಲ್ಲದೆ ತೆರವು ಮಾಡುತ್ತೇವೆ ಎಂದರು.

ಫುಟ್‌ಪಾತ್ ವ್ಯಾಪಾರಿಗಳಿಗೆ ಶೀಘ್ರದಲ್ಲಿಯೇ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ. ಬಿಡದಿಯ ಬಿಜಿಎಸ್ ವೃತ್ತದಿಂದ ರೇಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿನ ಫುಟ್ ಪಾತ್ ಒತ್ತುವರಿಯಿಂದಾಗಿ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ಸಮಸ್ಯೆ ಆಗುತ್ತಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪುರಸಭೆ ಸ್ಥಾಯಿ ಸಮಿತಿ ಸಭೆ ಚರ್ಚಿಸಿ, ಸಾಮಾನ್ಯ ಸಭೆಯಲ್ಲಿ ಒತ್ತುವರಿ ತೆರವಿನ ನಿರ್ಧಾರ ಮಾಡಲಾಯಿತು. ಒತ್ತುವರಿದಾರರಿಗೆ ನೋಟಿಸ್ ನೀಡುವ ಜೊತೆಗೆ ಅಧಿಕಾರಿಗಳೇ ಖುದ್ದಾಗಿ ಮನೆ ಮತ್ತು ಅಂಗಡಿ ಮಾಲೀಕರಲ್ಲಿ ತಿಳುವಳಿಕೆ ಮೂಡಿಸಿದ್ದರು. ಇಷ್ಟಾದರು ಒತ್ತುವರಿದಾರರು ಸರ್ಕಾರಿ ಜಾಗ ತೆರವಿಗೆ ಮನಸ್ಸು ಮಾಡಲಿಲ್ಲ. ಅಧಿಕಾರಿಗಳು ಮತ್ತೆ ಚರ್ಚಿಸಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಹಾಗೂ ಶಾಸಕ ಬಾಲಕೃಷ್ಣರವರ ಗಮನಕ್ಕೆ ತಂದು ಒತ್ತುವರಿ ತೆರವು ಮಾಡಲಾಯಿತು. ಆದರೆ, ಮಾಜಿ ಶಾಸಕ ಎ.ಮಂಜುನಾಥ್ ಆರೋಪ ಮಾಡಿದಂತೆ ಯಾರ ಮೇಲು ಏಕಾಏಕಿ ದೌರ್ಜನ್ಯ ನಡೆಸಿಲ್ಲ. ಯಾರ ಆಸ್ತಿಯನ್ನು ಬಲವಂತವಾಗಿ ಕಸಿಯುವ, ತೆರವು ಮಾಡುವ ಕೆಲಸ ಮಾಡಿಲ್ಲ ಎಂದು ತಿರುಗೇಟು ನೀಡಿದರು.

ನಾನು ಬಿಡದಿಯಲ್ಲಿ ಇಲ್ಲದಿದ್ದಾಗ ತೆರವು ಕಾರ್ಯಾಚರಣೆ ಮಾಡಿದ್ದಾರೆಂದು ಮಾಜಿ ಶಾಸಕರು ಸುಳ್ಳು ಹೇಳಿದ್ದಾರೆ. ಕಾರ್ಯಾಚರಣೆ ವೇಳೆ ಮಾಜಿ ಶಾಸಕರು ಬೈರಮಂಗಲ ಸರ್ಕಲ್ ನಲ್ಲಿರುವ ಮಂದರತಿ ಹೋಟೆಲ್ ಕುಳಿತಿದ್ದರು ಎಂಬುದಕ್ಕೆ ನಮ್ಮಲ್ಲಿ ಎಲ್ಲ ದಾಖಲೆಗಳು ಇವೆ. ಬೇಕಾದರೆ ಬಿಡುಗಡೆ ಮಾಡಲೂ ಸಿದ್ಧನಿದ್ದೇನೆ ಎಂದು ಟಾಂಗ್ ನೀಡಿದರು.

ಪುರಸಭೆ ಬಡ ಜನರ ಮೇಲೆ ಎಸಗುತ್ತಿರುವ ದೌರ್ಜನ್ಯ ತಡೆದು, ಒಳ್ಳೆಯದನ್ನು ಮಾಡುವ ಆಶಯ ಮಾಜಿ ಶಾಸಕರಲ್ಲಿ ಇದ್ದಿದ್ದರೆ ಏಕೆ ಸ್ಥಳಕ್ಕೆ ಬರಲಿಲ್ಲ. ಹಾಗೊಂದು ವೇಳೆ ಬಂದಿದ್ದರೂ ನಾನೇ ಅವರಿಗೆ ಮನವರಿಕೆ ಮಾಡಿಕೊಡುತ್ತಿದ್ದೆ. ಕಾರ್ಯಾಚರಣೆ ಮುಗಿದ ಮೇಲೆ ಹತ್ತಾರು ಭಟ್ಟಂಗಿಗಳನ್ನು ಜತೆಯಲ್ಲಿ ನಿಲ್ಲಿಸಿಕೊಂಡು ಜನರಿಂದ ಚಪ್ಪಾಳೆ ತಟ್ಟಿಸಿಕೊಳ್ಳಲು ಬಂದವರಿಗೆ ಏನು ಹೇಳಬೇಕು ಎಂದು ಎ.ಮಂಜುನಾಥ್ ರವರ ಕಾಲೆಳೆದರು.

ಅಧ್ಯಕ್ಷ - ವಿಪಕ್ಷ ನಾಯಕ ಒಟ್ಟಾಗಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿರುವುದನ್ನು ನೋಡಿ ಸಹಿಸದ ಮಾಜಿ ಶಾಸಕರು ವಿಚಲಿತರಾಗಿ ಫೋಟೋ ಸೆಷನ್ ಮಾಡಿದ್ದಾರೆ. ಅಷ್ಟೆ. ತೆರವು ಕಾರ್ಯಾಚರಣೆಯಿಂದ ಯಾರಿಗಾದರು ತೊಂದರೆಯಾಗಿದ್ದರೆ ಕಾನೂನು ಮೂಲಕ ಹೋರಾಟ ಮಾಡಲಿ, ಇದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ, ಮಾಜಿ ಶಾಸಕ ಮಂಜುನಾಥ್ ರವರು ಜನರನ್ನು ಮೆಚ್ಚಿಸಲು ಢೋಂಗಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.

ಮಂಜುನಾಥ್ ರವರು ನನ್ನನ್ನು ಮಹಾನ್ ನಾಯಕ ಎಂದು ಸಂಬೋಧಿಸಿರುವು ಖುಷಿ ತಂದಿದೆ. ನನ್ನ ಋಣ ಅವರ ಮೇಲಿದಿಯೋ ಹೊರತು ಅವರ ಋಣ ನನ್ನ ಮೇಲಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಅವರು ಜೆಡಿಎಸ್ ನಿಂದ ಶಾಸಕರಾಗಲು ನಾನು ಧನ ಸಹಾಯ ಮಾಡಿದ್ದೇನೆ. ನನ್ನ ಕಾಣಿಕೆ, ಶ್ರಮವನ್ನು ಮಂಜುನಾಥ್ ಮರೆಯಬಾರದು ಎಂದು ಹೇಳಿದರು.

ಈಗ ಪುರಸಭೆ ಅಧ್ಯಕ್ಷರಾಗಿರುವ ಹರಿಪ್ರಸಾದ್ ಕಳೆದ ಚುನಾವಣೆಯಲ್ಲಿ ನನ್ನ ಪರವಾಗಿ ಕೆಲಸ ಮಾಡಿದ್ದರು. ನನ್ನ ಗೆಲುವನ್ನು ಸಂಭ್ರಮಿಸಿದ್ದರು. ಈಗ ಅವರು ಅಧ್ಯಕ್ಷರಾಗಿರುವುದಕ್ಕೆ ಹೆಮ್ಮೆ , ಅದನ್ನು ಸ್ವೀಕರಿಸುವ ಮನೋಭಾವನೆಯೂ ಇದೆ. ಆದರೆ, ದಲಿತ ಯುವಕನೊಬ್ಬ ಅಧ್ಯಕ್ಷನಾಗಿರುವುದನ್ನು ಸಹಿಸದ ಮಂಜುನಾಥ್ ರವರು ಮುಖ್ಯರಸ್ತೆಯಲ್ಲಿ ಅಧ್ಯಕ್ಷನನ್ನು ನಿಲ್ಲಿಸಿಕೊಂಡು ನಿಂದಿಸಿದ್ದಲ್ಲದೆ, ತಕ್ಕ ಶಾಸ್ತಿ ಮಾಡಿದ್ದೇನೆಂದು ದುರಹಂಕಾರದಿಂದ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹರಿಪ್ರಸಾದ್ ಗೆ ಅಧ್ಯಕ್ಷ ಸ್ಥಾನವನ್ನು ದಾನ ನೀಡಿದ್ದಲ್ಲ, ಅವರ ಹಕ್ಕನ್ನು ಪಡೆದಿದ್ದಾರೆ. ಒಳ್ಳೆಯ ಕೆಲಸ ಮಾಡಿದಾಗ ಅಭಿನಂದಿಸುವುದನ್ನು ಬಿಟ್ಟು ಜನರ ಎದುರು ನಿಂದಿಸುತ್ತೀರಿ. ದಲಿತರ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ. ಇದೇ ದಲಿತ ಸಮುದಾಯ ನಿಮ್ಮನ್ನು ರಾಜಕೀಯವಾಗಿ ಸಮಾಧಿ ಮಾಡಲಿದೆ ಎಂದು ಉಮೇಶ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಬೆಟ್ಟಸ್ವಾಮಿ, ಪುರಸಭಾ ಸದಸ್ಯರಾದ ನವೀನ್‌ಕುಮಾರ್, ಹೊಂಬಯ್ಯ, ಶ್ರೀನಿವಾಸ್, ಕುಮಾರ್ ಎನ್. ಬಿಂದಿಯಾ, ಮಹಿಮಾಕುಮಾರ್, ನಾಮಿನಿ ಸದಸ್ಯರಾದ ವೈ.ರಮೇಶ್, ರೇಣುಕಯ್ಯ, ಎಂ.ಜಗದೀಶ್ , ಮುಖಂಡರಾದ ಅಬ್ಬನಕುಪ್ಪೆ ರಮೇಶ್, ನಾಗೇಶ್, ಮಹೇಶ್ ಇದ್ದರು.

----------- ಎ.ಮಂಜುನಾಥ್‌ರಲ್ಲಿ ದೂರಾಲೋಚನೆ ಇಲ್ಲ: ಸಿ.ಉಮೇಶ್ ರಾಮನಗರ:ಮಾಜಿ ಶಾಸಕ ಎ.ಮಂಜುನಾಥ್ ಅವರಲ್ಲಿ ದೂರಾಲೋಚನೆ ಇಲ್ಲ, ಕೇವಲ ದುರಾಲೋಚನೆ ಇದೆ. ಬಿಡದಿ ಮಗ ಮಂಜುನಾಥ್ ಅವರಿಂದ ಸಾಧ್ಯವಾಗದ ಬಿಡದಿ ಪಟ್ಟಣದ ಸಮಗ್ರ ಅಭಿವೃದ್ಧಿಯನ್ನು ಹುಲಿಕಟ್ಟೆ ಮಗ ಶಾಸಕ ಬಾಲಕೃಷ್ಣ ಮಾಡುತ್ತಿದ್ದಾರೆ ಎಂದು ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಜುನಾಥ್ 5 ವರ್ಷ ಶಾಸಕರಾಗಿದ್ದಾಗ ಬಿಡದಿ ಪಟ್ಟಣದ ಅಭಿವೃದ್ಧಿಗಾಗಿ ಏನು ಮಾಡಿದ್ದಾರೆ ಎಂಬುದರ ಸಾಕ್ಷಿ ಗುಡ್ಡೆ ತೋರಿಸಲಿ. ಅದೇ ಶಾಸಕ ಬಾಲಕೃಷ್ಣ ಬಿಡದಿ ಪಟ್ಟಣದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಇದರಿಂದ ಮುಂದಿನ ಚುನಾವಣೆಯಲ್ಲಿ ತನಗೆ ತೊಂದರೆ ಆಗುತ್ತದೆ ಎಂಬ ಆತಂಕದಿಂದ ಮಂಜುನಾಥ್ ಬೀದಿಗೆ ಇಳಿದಿದ್ದಾರೆ ಎಂದು ಟೀಕಿಸಿದರು.

ಶಾಸಕರಾಗಿದ್ದಾಗ ಅವರಿಗೆ ಬಸ್ ನಿಲ್ದಾಣ ಬಳಿ ಸಾರ್ವಜನಿಕರಿಗಾಗಿ ಸುಸಜ್ಜಿತ ಶೌಚಾಲಯ ನಿರ್ಮಿಸಲಿಲ್ಲ. ಯುಜಿಡಿ, ಕುಡಿಯುವ ನೀರಿನ ಸಂಪರ್ಕ, ಗ್ಯಾಸ್ ಲೈನ್ ಸಂಪರ್ಕ, ಚರಂಡಿ ಕೆಲಸ ಯಾವುದು ಆಗಿಲ್ಲ. ಈಗ ಆ ಕೆಲಸಗಳು ನಡೆಯುತ್ತಿದ್ದು, ರಸ್ತೆಯಲ್ಲಿ ಗುಂಡಿ ಬೀಳುವುದು ಸಹಜ. ಬಿಡದಿಯ ಪ್ರಮುಖ ಏಳು ರಸ್ತೆಗಳ ಟೆಂಡರ್ ಮುಗಿದಿದ್ದು, ಕಾಮಗಾರಿ ಆರಂಭವಾಗಿದೆ. ಮಂಜುನಾಥ್ ಶಾಸಕರಾಗಿ ದೂರದೃಷ್ಟಿ ಇಲ್ಲದೆ ಕೇವಲ ಅಧಿಕಾರ ಅನುಭವಿಸಿದರು ಅಷ್ಟೆ ಎಂದು ಹರಿಹಾಯ್ದರು.

ಮಂಜುನಾಥ್ ರವರು ನನ್ನ ಸಹೋದರರನ್ನೇ ನನ್ನ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ನನ್ನ ಕುಟುಂಬದವರನ್ನು ನಿಂದಿಸಿ ಆನಂದಿಸುವ ವಿಕೃತ ಮನೋಭಾವದವರು. ಬೇರೆಯವರ ಮನೆ ಹಾಳು ಮಾಡಿ ರಾಜಕಾರಣ ಮಾಡುವ ಅಧೋಗತಿಗೆ ಮಾಜಿ ಶಾಸಕರು ಇಳಿದಿರುವುದು ದುರ್ದೈವದ ಸಂಗತಿ ಎಂದು ಸಿ.ಉಮೇಶ್ ಟೀಕಿಸಿದರು.--- ---..ಕೋಟ್ ...ಬಿಡದಿ ಪಟ್ಟಣದ ಮುಖ್ಯರಸ್ತೆಯಲ್ಲಿ ಒತ್ತುವರಿ ತೆರವು ಮಾಡಿ ಜನರಿಗೆ ಅನುಕೂಲ ಮಾಡಿಕೊಡುವ ಕೆಲಸಕ್ಕೆ ಮುಂದಾಗಿರುವ ಪುರಸಭೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಮಾಜಿ ಶಾಸಕರು ಸಹ ಕೈ ಜೋಡಿಸದೆ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ. ಎಲ್ಲರೂ ಸಹಕಾರ ಮಾಡಿದರಷ್ಟೆ ಪಟ್ಟಣ ಅಭಿವೃದ್ಧಿ ಸಾಧ್ಯ ಎಂದರು.- ಎಲ್ .ಚಂದ್ರಶೇಖರ್ ,ಕಾಂಗ್ರೆಸ್ ಮುಖಂಡರು.-------11ಕೆಆರ್ ಎಂಎನ್ 5.ಜೆಪಿಜಿಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.--------

Share this article