ಸಿಯುಕೆ ಕ್ಯಾಂಪಸ್‌ಲ್ಲಿ ಕರ್ನಾಟಕದ ವಿದ್ಯಾರ್ಥಿಗಳೇ ಇಲ್ಲ ಏಕೆ?

KannadaprabhaNewsNetwork |  
Published : Jan 10, 2026, 01:15 AM IST
ಫೋಟೋ- ಬಟು ಸತ್ಯನಾರಾಯಣಕಲಪತಿಗಳು, ಸಿಯುಕೆ, ಕಲಬುರಗಿ | Kannada Prabha

ಸಾರಾಂಶ

Smart library, Centre of Excellence for English learning. In a decade and a half, the number of Karnataka children entering CUK has not crossed three figures

-ಸ್ಮಾರ್ಟ್‌ ಲೈಬ್ರರಿ, ಇಂಗ್ಲಿಷ್‌ ಕಲಿಕೆಗೆ ಸೆಂಟರ್‌ ಆಫ್‌ ಎಕ್ಸಲನ್ಸ್‌ ಸವಲತ್ತು । ಒಂದೂವರೆ ದಶಕದಲ್ಲಿ ಕರ್ನಾಟಕ ಮಕ್ಕಳು ಸಿಯುಕೆ ಪ್ರವೇಶಿಸಿದ್ದು ಮೂರಂಕಿ ದಾಟಿಲ್ಲ

---

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಕ್ಯಾಂಪಸ್‌ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ಕಲಿಕೆ, ಅಧ್ಯಯನ, ಸಂಶೋಧನೆಯ ನೆಚ್ಚಿನ ತಾಣವಾಗಿ ಹೊರಹೊಮ್ಮುತ್ತಿದ್ದರೂ ಅದ್ಯಾಕೋ ಏನೋ ವಿವಿ ತಲೆ ಎತ್ತಿರುವ ಕರ್ನಾಟಕ ರಾಜ್ಯದ, ಅದರಲ್ಲೂ ಕಲ್ಯಾಣ ನಾಡಿನಿಂದ ನಿರೀಕ್ಷೆಯಂತೆ ವಿದ್ಯಾರ್ಥಿಗಳಿಲ್ಲಿ ಪ್ರವೇಶ ಪಡೆಯುತ್ತಿಲ್ಲವೆಂಬ ಕೊರಗು ಕಾಡಲಾರಂಭಿಸಿದೆ.

ಕರ್ನಾಟಕ ಕೇಂದ್ರೀಯ ವಿವಿ (ಸೆಂಟ್ರಲ್‌ ಯೂನಿವರ್ಸಿಟಿ ಆಫ್‌ ಕರ್ನಾಟಕ- ಸಿಯುಕೆ) ಕ್ಯಾಂಪಸ್‌ ಸದ್ಯದ ಬೇಡಿಕೆಯ ಹಾಗೂ ಮೂಲ ವಿಜ್ಞಾನ, ಕಲೆ, ವಾಣಿಜ್ಯ ವಿಷಯಗಳಲ್ಲಿ 15 ಯೂಜಿ, 30ಕ್ಕೂ ಹೆಚ್ಚು ಪಿಜಿ ಕೋರ್ಸ್‌ಗಳು ಹೊಂದಿದೆ.

ಸುಸಜ್ಜಿತ ಲ್ಯಾಬರೋಟರಿಗಳು, ಸ್ಮಾರ್ಟ್‌ ಗ್ರಂಥಾಲಯ, ಇಂಗ್ಲಿಷ್‌ ಲ್ಯಾಗ್ವೇಜ್‌ ಲ್ಯಾಬೋರೇಟರಿ ಸೆಲ್ಟ್‌, ಸೆಂಟರ್‌ ಆಪ್‌ ಎಕ್ಸಲನ್ಸ್‌ ನಂತಹ ಕೇಂದ್ರಗಳನ್ನು ತನ್ನೊಡಲಲ್ಲಿ ಹೊಂದಿದ್ದರೂ ಇಂದಿಗೂ ಕರ್ನಾಟಕ ರಾಜ್ಯದ, ಅದರಲ್ಲೂ ವಿವಿ ಇರುವ ಕಲ್ಯಾಣದ ಜಿಲ್ಲೆಗಳಿಂದ ವಿದ್ಯಾರ್ಥಿಗಳು ನಿರೀಕ್ಷೆಯಂತೆ ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯುತ್ತಿಲ್ಲ ಯಾಕೆ? ಎಂಬುದೇ ಉತ್ತರ ಸಿಗದ ಪ್ರಶ್ನೆಯಾಗಿದೆ.

ಮೂರಂಕಿ ದಾಟಿಲ್ಲ!: ಕಡಗಂಚಿಯಲ್ಲಿ ಕೇಂದ್ರೀಯ ವಿವಿ ಆರಂಭವಾಗಿ 15ವರ್ಷ ಕಳೆದರೂ ಸ್ನಾತಕ, ಸ್ನಾತಕೋತ್ತರ, ಸಂಶೋಧನೆಯಲ್ಲಿ ಕರ್ನಾಟಕ, ಕಲ್ಯಾಣದ ಜಿಲ್ಲೆಗಳಿಂದ ಪ್ರವೇಶ ಪಡೆದವರ ಸಂಖ್ಯೆ ಮೂರಂಕಿ ದಾಟಿಲ್ಲ.

ದೇಶದಲ್ಲಿರುವ ಕೇಂದ್ರೀಯ ವಿವಿಗಳ ಪ್ರವೇಶಕ್ಕಾಗಿ ಎನ್‌ಟಿಎ ನಡೆಸುವ ಪ್ರವೇಶ ಪರೀಕ್ಷೆಯೊಂದಿಗೆ ಈ ವಿವಿಗೂ ಪರೀಕ್ಷೆ ನಡೆದು ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಅಧ್ಯಯನಕ್ಕೆ ಬರುತ್ತಿದ್ದರೂ ಕಲಬುರಗಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳು, ರಾಜ್ಯದ ಇತರೆ ಜಿಲ್ಲೆಗಳಿಂದ ಪ್ರವೇಶ ಪಡೆಯುವವರ ಸಂಖ್ಯೆ ಆರಕ್ಕೇರುತ್ತಿಲ್ಲ.

ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಮಕ್ಕಳಿಗೆ ವಿವಿ ಕಲಂ 371 (ಜೆ) ಅಡಿಯಲ್ಲಿ ಪ್ರವೇಶದಲ್ಲಿ ಶೇ. 8ರ ಮೀಸಲಾತಿ ನೀಡುತ್ತಿದ್ದರೂ ಮೀಸಲು ಸೀಟುಗಳು ಕೂಡಾ ಭರ್ತಿಯಾಗುವಷ್ಟು ಮಕ್ಕಳು ಈ ಪ್ರದೇಶದಿಂದ ಕೇಂದ್ರೀಯ ವಿವಿ ಕ್ಯಾಂಪಸ್‌ನತ್ತ ಮುಖ ಮಾಡುತ್ತಿಲ್ಲ ಯಾಕೆಂದು ಶಿಕ್ಷಣ ತಜ್ಞರು, ವಿವಿ ಆಡಳಿತ ಕಳವಳಪಡುವಂತಾಗಿದೆ.

ಸ್ನಾತಕ ಪದವಿಯಲ್ಲಿ ಅತೀ ಬೇಡಿಕೆಯ ಕೃತಕ ಬುದ್ದಿಮತ್ತೆ, ಮಶೀನ ಲರ್ನಿಂಗ್‌ ನಿಂದ ಹಿಡಿದು ಇಂಜಿನಿಯರಿಂಗ್‌, ವಿಜ್ಞಾನ, ಕಲಾ ನಿಕಾಯದಲ್ಲೆಲ್ಲಾ ಅತ್ಯುತ್ತಮ ಕೋರ್ಸ್‌ಗಳನ್ನು ನೀಡಲಾಗುತ್ತಿದೆ. ಸ್ನಾತಕೋತ್ತರ ವಿಭಾಗದಲ್ಲಿಯೂ ಗುಣಮಟ್ಟದ, ಬೇಡಿಕೆಯ ಕೋರ್ಸಗಳೇ ಇಲ್ಲಿದ್ದರೂ ಅದ್ಯಾಕೆ ಕರ್ನಾಟಕದ ಮಕ್ಕಳು ಇತ್ತ ಆಕರ್ಷಿತರಾಗುತ್ತಿಲ್ಲ ಎಂದು ವಿವಿ ಕುಲಪತಿ, ಕುಲಸಚಿವರಿಂದಾದಿಯಾಗಿ ಅನೇಕರು ಚಿಂತೆಗೊಳಗಾಗಿದ್ದಾರೆ.

ವಿವಿ ಸ್ಥಾಪನೆಯಾಗಿರೋದು ಕರ್ನಾಟಕದ ಅತೀ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ. ಹೀಗಾಗಿ ಸಹಜವಾಗಿಯೇ ಈ ಪ್ರದೇಶದ 7 ಜಿಲ್ಲೆಗಳ ಮಕ್ಕಳು ಇಲ್ಲಿ ಸ್ನಾತಕ, ಸ್ನಾತಕೋತ್ತರ, ಸಂಶೋಧನೆಯಲ್ಲಿ ಮುಂದಿರಬೇಕಿತ್ತು. ಆದರೆ ವಾಸ್ತವ ಬೇರೆಯೇ ಇದೆ. ಕೇರಳ, ಆಂಧ್ರ, ತೆಲಂಗಾಣ, ತಮೀಳುನಾಡು, ಮಹಾರಾಷ್ಟ್ರದಿಂದ ಅತೀ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದಾರೆ. ಕಾಶ್ಮೀರ ಸೇರಿದಂತೆ ಈಶಾನ್ಯದ ರಾಜ್ಯದ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಆದರೆ, ಬೆರಳೆಣಿಕೆಯಷ್ಟೇ ಕರ್ನಾಟಕದಿಂದ, ಅದರಲ್ಲೂ ಕಲ್ಯಾಣದ ಕಲಬರಗಿ, ವಿಜಯನಗರ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿಯಿಂದ ವಿದ್ಯಾರ್ಥಿಗಳು ಸಿಯುಕೆಗೆ ಬರುತ್ತಿದ್ದಾರೆಂಬುದು ವಿವಿ ಉನ್ನತ ಹುದ್ದೆಯಲ್ಲಿದ್ದವರ ಕೊರಗಾಗಿದೆ.

ಗುಣಮಟ್ಟದಲ್ಲಿ ಉತ್ಕೃಷ್ಟ: ಗುಣಮಟ್ಟ, ಶುಲ್ಕ , ಸೌಲಭ್ಯಗಳು, ಬೋಧನೆ ಗುಣಮಟ್ಟ ಸೇರಿದಂತೆ ಯಾವುದರಲ್ಲೂ ಕೇಂದ್ರೀಯ ವಿವಿ ಹೋಲಿಕೆ ಮಾಡಲಾಗದು. ಇಲ್ಲಿರುವ ಸವಲತ್ತು ವಿಶ್ವ ದರ್ಜೆಯದ್ದಾಗಿವೆ ಎಂಬುದರಲ್ಲಿ ದೂಸ್ರಾ ಮಾತಿಲ್ಲ. ಕನ್ನಡದ ಮಕ್ಕಳೇಕೆ ಸಿಯುಕೆ ಕಲಬುರಗಿ ಕ್ಯಾಂಪಸ್‌ನತ್ತ ಮುಖ ಮಾಡುತ್ತಿಲ್ಲವೋ? ಎಂಬುದು ಉತ್ತರ ಸಿಗದ ಪ್ರಶ್ನೆ. 2009ರಲ್ಲೇ ಆರಂಭವಾಗಿರುವ ವಿವಿಯಲ್ಲಿ ದೇಶದ ಮೂಲೆ ಮೂಲೆಗಳಿಂದ ಬಂದ ವಿದ್ಯಾರ್ಥಿಗಳ ಸಂಖ್ಯೆ ಸದ್ಯ ನಾಲ್ಕಂಕಿ ದಾಟಿದೆ. 3 ಸಾವಿರದಷ್ಟು ಮಕ್ಕಳಿದ್ದಾರೆ. ಕರುನಾಡಿನವರೇ ಇಲ್ಲದಂತಾಗಿರೋದು ನಿರಾಶೆ ಮೂಡಿಸಿದೆ.

-ಪಾಯಿಂಟ್ಸ್‌

ಸೌಲಭ್ಯಪೂರ್ಣ ಸಿಯುಕೆ ಕ್ಯಾಂಪಸ್‌

- ಇಂಗ್ಲೀಷ್‌ ಭಾಷೆ ಕಲಿಸುವ ಸೆಲ್ಟ್‌

- ಸಿಯುಕೆ ಮುಕುಟ ಸ್ಮಾರ್ಟ್‌ ಲೈಬ್ರರಿ

- ಅತ್ಯಾಧುನಿಕ ಸೆಂಟರ್‌ ಆಫ್‌ ಎಕ್ಸಲನ್ಸ್‌

- ವೈಫೈ ಕ್ಯಾಂಪಸ್‌, 2 ಹಾಸ್ಟೆಲ್‌, ಬ್ಯಾಟರಿ ವಾಹನ, 3 ಬಸ್‌ ವಿವಿ,

ಜಿಮ್‌, ಆರೋಗ್ಯ ಕೇಂದ್ರ, ಆಟೋಟದ ಮೈದಾನ.

---------------

.....ಕೋಟ್‌......

ಕೇಂದ್ರೀಯ ವಿವಿ ಇದೀಗ ಗುಣಣಟ್ಟದಲ್ಲಿ ಜಾಗತಿಕವಾಗಿ 150 ರಿಂದ 200 ನೇ ರ್‍ಯಾಂಕಿಂಗ್‌ ನಲ್ಲಿದೆ. ಗುಣಮಟ್ಟದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೆ ವಿವಿಯನ್ನು ಟಾಪ್‌ ನೂರು ವಿವಿಗಳಲ್ಲಿ ಒಂದಾಗಿಸುವ ಯತ್ನ ನಮ್ಮದು. ಕರ್ನಾಟಕದ ಮಕ್ಕಳು, ಕಲಬುರಗಿ ಭಾಗದ ಮಕ್ಕಳು ಹೆಚ್ಚು ಇಲ್ಲಿ ಪ್ರವೇಶ ಪಡೆಯುವಂತಾದಲ್ಲಿ ವಿವಿ ಇಲ್ಲಿ ತಲೆ ಎತ್ತಿದ್ದಕ್ಕೂ ಸಾರ್ಥಕ.

ಪ್ರೊ. ಬಟು ಸತ್ಯನಾರಾಯಣ, ಕುಲಪತಿ, ಕೇಂದ್ರೀಯ ವಿವಿ.

----

.....ಕೋಟ್‌.....

ನಾವು ಕೇಂದ್ರೀಯ ವಿವಿಗೆ ಕರ್ನಾಟಕದ, ಅದರಲ್ಲೂ ಕಲ್ಯಾಣ ನಾಡಿನ ಜಿಲ್ಲೆಗಳ ವಿದ್ಯಾರ್ಥಿಗಳು ಹೆಚ್ಚಿಗೆ ಸೆಳೆಯಲು ಎನ್‌ಟಿಎ ನಡೆಸುವ ಸಿಇಟಿ ಪ್ರವೇಶ ಪರೀಕ್ಷಾ ಕೇಂದ್ರಗಳನ್ನು ರಾಜ್ಯದಲ್ಲಿ 15ಕ್ಕೂ ಹೆಚ್ಚುಕಡೆ ಗುರುತಿಸಿದ್ದೇವೆ. ನಾಡಿನ ಮಕ್ಕಳು ಹೆಚ್ಚು ಸಿಯುಸಿಇಟಿ ಬರೆಯಲಿ. ಕಲಬುರಗಿಯ ಸೌಲಭ್ಯಪೂರಣ ವಿವಿ ಕ್ಯಾಂಪಸ್‌ಗೆ ಹೆಚ್ಚು ಬರುವಂತಾಗಲಿ

-ಪ್ರೊ. ಆರ್‌. ಆರ್‌. ಬಿರಾದಾರ್‌, ಕುಲಸಚಿವ, ಕರ್ನಾಟಕ ಕೇಂದ್ರೀಯ ವಿವಿ, ಕಲಬುರಗಿ

------------------......ಬಾಕ್ಸ್‌......ಕರ್ನಾಟಕದಲ್ಲೇ 15 ಕಡೆ ಪ್ರವೇಶ ಪರೀಕ್ಷೆ ಕೇಂದ್ರ ಸ್ಥಾಪನೆಸಿಯುಕೆ ಕಲಬುರಗಿಯಲ್ಲಿ ಆರಂಭವಾದಾಗಿನಿಂದ ಇಂದಿನವರೆಗೂ ರಾಜ್ಯದ ಪ್ರತಿ ಎರಡು ಜಿಲ್ಲೆಗೊಂದರಂತೆ ಪ್ರವೇಶ ಪರೀಕ್ಷೆ ಕೇಂದ್ರ ಆರಂಭಿಸಿದೆ. ಅಷ್ಟೇ ಅಲ್ಲ, ಪ್ರಮುಖ ಕಾಲೇಜುಗಳಿಗೂ ಹೋಗಿ ವಿವಿ ಸಿಬ್ಬಂದಿ ಬ್ರೋಚರ್‌ ನೀಡಿ ವಿದ್ಯಾರ್ಥಿಗಳನ್ನು ಸೆಳೆವ ನಿರಂತರ ಪ್ರಯತ್ನದಲ್ಲಿದ್ದಾರೆ. ಇದಲ್ಲದೆ ವಿವಿ ಕ್ಯಾಂಪಸ್ಸಿಗೇ ಕಾಲೇಜು ಮಕ್ಕಳನ್ನು ಆಹ್ವಾನಿಸುವ ಯೋಜನೆ ಆರಂಭಿಸಿ ಕರ್ನಾಟಕ ಮಕ್ಕಳ ಸಂಖ್ಯಾಬಲ ವೃದ್ಧಿಗೆ ಮುಂದಾದರೂ ಇವೆಲ್ಲ ಪ್ರಯತ್ನಗಳು ನಿರೀಕ್ಷೆಯಂತೆ ಯಶ ಕೊಟ್ಟಿಲ್ಲವಾದರೂ ವಿವಿ ಈ ವಿಚಾರದಲ್ಲಿ ತನ್ನ ನಿರಂತರ ಪ್ರಯತ್ನ ಮಾತ್ರ ಬಿಟ್ಟುಕೊಟ್ಟಿಲ್ಲ.

----

ಫೋಟೋ- ಸೆಂಟ್ರಲ್‌ ಯೂನಿವರ್ಸಿಟಿ 1, 4

ಕಲಬುರಗಿ ಕೇಂದ್ರೀಯ ವಿವಿಯಲ್ಲಿರುವ ಸ್ಮಾರ್ಟ್‌ ಲೈಬ್ರರಿಯಲ್ಲಿರೋ ಬ್ರೈಲ್‌ ಸಂಪನ್ಮೂಲ ಕೇಂದ್ರ, ಯಾವುದೇ ಬಾಷೆಯಲ್ಲಿರುವ ಪುಸ್ತಕಗಳನ್ನಿಲ್ಲಿ ಬ್ರೈಲ್‌ನಲ್ಲಿ ಪರಿವರ್ತಿಸಿ ಅಂಧರಿಗೆ ಅನುಕೂಲ ಮಾಡಲಾಗುತ್ತಿದೆ

ಫೋಟೋ- ಸೆಂಟ್ರಲ್‌ ಯೂನಿವರ್ಸಿಟಿ 2

ಕಲಬುರಗಿ ಸಿಯುಕೆಯಲ್ಲಿರುವ ಸ್ಮಾರ್ಟ್‌ ಗ್ರಂಥಾಲಯದಲ್ಲಿರುವ 8, 500 ಕ್ಕೂ ಹೆಚ್ಚಿನ ಪುಸ್ತಕಗಲಿರುವ ನೋಟ

ಫೋಟೋ- ಸೆಂಟ್ರಲ್‌ ಯೂನಿವರ್ಸಿಟಿ 5 ಮತ್ತು ಸೆಂಟ್ರಲ್‌ ಸೆಂಟ್ರಲ್‌ ಯೂನಿವರ್ಸಿಟಿ 6

ಕಲಬುರಗಿ ಬಲಿ ಕಡಗಂಚಿಯಲ್ಲಿ 650 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ತಲೆ ಎತ್ತಿರುವ ಕರ್ನಾಟಕ ಕೇಂದ್ರೀಯ ವಿವಿ ಕ್ಯಾಂಪಸ್‌ ನೋಟ

ಫೋಟೋ- ಬಟು ಸತ್ಯನಾರಾಯಣ

ಕಲಪತಿಗಳು, ಸಿಯುಕೆ, ಕಲಬುರಗಿ

ಫೋಟೋ- ಸೆಂಟ್ರಲ್‌ ಯೂನಿವರ್ಸಿಟಿ 32

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ