- ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
31 ವರ್ಷಗಳ ಹಿಂದಿನ ಪ್ರಕರಣವನ್ನು ಪುನಃ ಕೆದಕಿ ಶ್ರೀರಾಮ ಭಕ್ತರನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ತನ್ನ ನೀಚತನ ತೋರಿಸುತ್ತಿದೆ. ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದ್ದರೆ ಕಾಂಗ್ರೆಸ್ಸಿಗರಿಗೆ ಏಕೆ ಹೊಟ್ಟೆಕಿಚ್ಚು? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಶ್ರೀರಾಮ ಭಕ್ತನ ಬಂಧನ ಸರ್ಕಾರದ ಕುಹಕ, ನೀಚತನವಾಗಿದೆ. ಇದು ಕೇವಲ ಕೋರ್ಟ್ ವಾರಂಟ್ ಎಂದು ಸುಳ್ಳು ಹೇಳುತ್ತಿದ್ದಾರೆ. ಒಂದು ಕಡೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ ದೇಶದ್ರೋಹಿಗಳ ಬಿಡುಗಡೆಗೆ ಪತ್ರ ಬರೆಯುತ್ತಾರೆ. ಕೆಜೆ ಹಳ್ಳಿ, ಡಿಜೆ ಹಳ್ಳಿ, ಪಿಎಫ್‌ಐ ಪ್ರಕರಣ ಹಿಂಪಡೆಯುತ್ತಾರೆ ಎಂದು ಟೀಕಿಸಿದರು.ಮುಸಲ್ಮಾನರ ತುಷ್ಟೀಕರಣ:
ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಇಂತಹ ಹಲವು ಪ್ರಕರಣಗಳನ್ನು ಹಿಂಪಡೆದಿದ್ದೇವೆ. ಈ ಪ್ರಕರಣ ಇರುವುದು ನಮ್ಮ ಗಮನಕ್ಕೆ ಬಂದಿಲ್ಲ. ಇಂತಹ ಕೆಲವು ಪ್ರಕರಣಗಳು ನಮ್ಮ ಗಮನಕ್ಕೆ ಬಾರದೇ ಇರುವುದರಿಂದ ಅಂಥವುಗಳನ್ನು ಅದರಲ್ಲೂ ಶ್ರೀರಾಮ ಮಂದಿರ ನಿರ್ಮಾಣ ಕುರಿತು ನಡೆದ ಪ್ರಕರಣಗಳನ್ನು ಸಿದ್ದರಾಮಯ್ಯ ಸರ್ಕಾರ ಹುಡುಕಿ ಕೆದಕುವ ಮೂಲಕ ಜನರಲ್ಲಿ ದ್ವೇಷಭಾವನೆ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಇಷ್ಟು ದಿನಗಳ ಕಾಲ ಬಿಟ್ಟು ಈಗ ಶ್ರೀರಾಮ ಮಂದಿರ ಉದ್ಘಾಟನೆ ಆಗುವ ವೇಳೆಯಲ್ಲಿ ಬಂಧಿಸುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.
ಪೊಲೀಸ್ ಅಧಿಕಾರಿಗಳು ಸೂರ್ಯಕಾಂತಿ ಇದ್ದಂತೆ, ಸರ್ಕಾರ ಎನ್ನುವ ಸೂರ್ಯ ಎತ್ತ ಕಡೆ ತಿರುಗುತ್ತಾನೆಯೋ ಅತ್ತ ಕಡೆ ತಿರುಗುತ್ತಾರೆ. ಮುಖ್ಯಮಂತ್ರಿಗಳು ಹೇಳಿದಂತೆ ಹುಬ್ಬಳ್ಳಿ ಠಾಣೆಯ ಪೊಲೀಸ್ ಅಧಿಕಾರಿ ಕೇಳುತ್ತಿದ್ದಾರೆ ಎಂದರೆ ಏನರ್ಥ? ಮೊದಲು ನಿಮ್ಮ ಸರ್ಕಾರದಲ್ಲಿರುವ ಕಳ್ಳರು, ದರೋಡೆಕೋರರನ್ನು ಬಂಧಿಸಿ. ಆಮೇಲೆ ಇಂತಹ ರಾಮ ಭಕ್ತರನ್ನು ಬಂಧಿಸುವ ಯೋಚನೆ ಮಾಡುವಿರಂತೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸಿನ ಕೆಲವು ಸಚಿವರು ಸಿದ್ದರಾಮಯ್ಯ ಅವರೇ ನಮಗೆ ರಾಮ ಇದ್ದಂತೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ರಾಮನಂತೆ ಎಂದರೆ ಏನು ಹೇಳುವುದು? ಅವರು ರಾಮನಂತಲ್ಲ ರಾವಣನಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಈಗಾಗಲೇ ಪೊಲೀಸರು ಬಂಧಿಸಿರುವ ಶ್ರೀಕಾಂತ ಪೂಜಾರಿ ಅವರ ಮೇಲೆ ವಿವಿಧ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೋಶಿ, ಅವನ ಮೇಲೆ ಪ್ರಕರಣ ಎಷ್ಟಿವೆ ಎಂಬುದರ ಕುರಿತು ನಾನು ಇಲ್ಲಿ ಮಾತನಾಡುವುದಿಲ್ಲ. ಆದರೆ, ಅವನನ್ನು ಬಂಧಿಸಿರುವುದು ಶ್ರೀರಾಮ ಮಂದಿರ ವೇಳೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂದರು.ಇಂದು ಪ್ರತಿಭಟನೆಶ್ರೀರಾಮಜನ್ಮಭೂಮಿಯ ಹೋರಾಟದ ಪ್ರಕರಣದ ಆರೋಪದಲ್ಲಿ 31 ವರ್ಷದ ಬಳಿಕ ಶ್ರೀಕಾಂತ ಪೂಜಾರಿಯನ್ನು ಬಂಧಿಸಿರುವುದನ್ನು ಖಂಡಿಸಿ ಬಿಜೆಪಿ ಶಹರ ಠಾಣೆಯ ಎದುರು ಬೃಹತ್ ಪ್ರತಿಭಟನೆಯನ್ನು ಜ.3ರಂದು ಹಮ್ಮಿಕೊಂಡಿದೆ.