ಕನ್ನಡಪ್ರಭ ವಾರ್ತೆ ಕೋಲಾರಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಕೇವಲ ಪೈಪ್‌ಲೈನ್ ಅಳವಡಿಸಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಸುಳ್ಳು ವರದಿ ನೀಡುತ್ತಿರುವ ಪ್ರವೃತ್ತಿ ತಕ್ಷಣ ನಿಲ್ಲಬೇಕು. ವಾಸ್ತವವಾಗಿ ನಲ್ಲಿಗಳಲ್ಲಿ ನೀರು ಬರುತ್ತಿದೆಯೇ ಎಂಬುದನ್ನು ಖುದ್ದಾಗಿ ಪರಿಶೀಲಿಸದೆ ಗುತ್ತಿಗೆದಾರರಿಗೆ ಬಿಲ್ ಪಾವತಿಸುವಂತಿಲ್ಲ ಎಂದು ಸಂಸದ ಎಂ.ಮಲ್ಲೇಶ್ ಬಾಬು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ನಗರದಲ್ಲಿ ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಸಭೆಯುದ್ದಕ್ಕೂ ಅಧಿಕಾರಿಗಳ ಕಾರ್ಯವೈಖರಿ ಹಾಗೂ ಮಂದಗತಿಯ ಕಾಮಗಾರಿಗಳ ಬಗ್ಗೆ ಸಂಸದರು ಮತ್ತು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಕಳಪೆ ಕಾಮಗಾರಿಗೆ ನಿರ್ದಾಕ್ಷಿಣ್ಯ ಕ್ರಮ:ದಾಖಲೆಗಳಲ್ಲಿ ೯೪೫ ಹಳ್ಳಿಗಳಲ್ಲಿ ಜೆಜೆಎಂ ಕಾಮಗಾರಿ ಮುಗಿದಿದೆ ಎಂದು ತೋರಿಸಿದ್ದೀರಿ. ಆದರೆ, ಪಂಚಾಯತಿಗೆ ಹಸ್ತಾಂತರವಾಗಿರುವುದು ಕೇವಲ ೪೫೬ ಹಳ್ಳಿಗಳು ಮಾತ್ರ. ವಿದ್ಯುತ್ ಸಂಪರ್ಕವೇ ಕಲ್ಪಿಸದೆ ನೀರು ಹೇಗೆ ಪೂರೈಸುತ್ತೀರಿ? ಬಾಕಿ ಇರುವ ೭೪ ಕೋಟಿ ರೂ. ಮೊತ್ತ ಪಾವತಿಸುವ ಮುನ್ನ ಕಡ್ಡಾಯವಾಗಿ ಸ್ಥಳ ಪರಿಶೀಲನೆಯಾಗಬೇಕು. ಕಾಮಗಾರಿ ಪೂರ್ಣಗೊಳ್ಳದೆ ಎನ್‌ಒಸಿ ನೀಡುವ ಪಿಡಿಒ ಹಾಗೂ ಗುತ್ತಿಗೆದಾರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ ಎಂದು ಸಂಸದ ಮಲ್ಲೇಶ್ ಬಾಬು ಕಟ್ಟುನಿಟ್ಟಿನ ಸೂಚನೆ ನೀಡಿದರು.ನರೇಗಾ ಯೋಜನೆಯ ಬದಲಾವಣೆಗಳ ಕುರಿತು ಮಾತನಾಡಿದ ಅವರು, ಜುಲೈ ೧ರಿಂದ ಗ್ರಾಮೀಣ ಮೂಲಸೌಕರ್ಯ ಮತ್ತು ಜಲ ಸಂರಕ್ಷಣೆಗೆ ಆದ್ಯತೆ ನೀಡುವ ನೂತನ ವಿಬಿಜಿಪಿಆರ್ ಯೋಜನೆ ಜಾರಿಗೆ ಬರುತ್ತಿದೆ. ಇದರಲ್ಲಿ ೧೨೫ ದಿನಗಳ ಉದ್ಯೋಗ ಖಾತರಿ ಇರಲಿದ್ದು, ನಕಲಿ ಹಾಜರಾತಿ ತಪ್ಪಿಸಲು ಜಿಯೋ-ಫೆನ್ಸಿಂಗ್ ಕಡ್ಡಾಯಗೊಳಿಸಲಾಗಿದೆ. ಎಲ್ಲಾ ಪಿಡಿಒ ಮತ್ತು ಇಒಗಳು ಈ ನೂತನ ನಿಯಮಾವಳಿಗಳ ಬಗ್ಗೆ ತಕ್ಷಣ ತರಬೇತಿ ಪಡೆದು, ಗ್ರಾಪಂಗಳಲ್ಲಿ ಹೊಸ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆಯಬೇಕು ಎಂದು ನಿರ್ದೇಶನ ನೀಡಿದರು.
ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಅವರು, ಜಿಲ್ಲೆಯಲ್ಲಿ ಶಸ್ತ್ರಚಿಕಿತ್ಸಾ ಹೆರಿಗೆ ಪ್ರಮಾಣ ಶೇ.೬೦ಕ್ಕೆ ಏರಿರುವುದು ಆತಂಕದ ವಿಚಾರ. ಯುವತಿಯರಲ್ಲಿ, ಗರ್ಭಿಣಿಯರಲ್ಲಿ ಸಹಜ ಹೆರಿಗೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಿ. ಜೊತೆಗೆ ೧೦೮ ಆಂಬ್ಯುಲೆನ್ಸ್ ಸೇವೆಯಲ್ಲಿ ವಿಳಂಬವಾಗುತ್ತಿರುವುದನ್ನು ತಪ್ಪಿಸಲು, ಸಿಎಸ್‌ಆರ್ ನಿಧಿ ಬಳಸಿ ತುರ್ತಾಗಿ ಹೊಸ ಆಂಬ್ಯುಲೆನ್ಸ್‌ಗಳನ್ನು ಖರೀದಿಸಿ ಎಂದು ಸಲಹೆ ನೀಡಿದರು.ಹಸಿರು ತೋತಾಪುರಿ ಮಾವಿನ ಬೆಲೆ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಸರ್ಕಾರವೇ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಪ್ರತಿ ಕೆ.ಜಿಗೆ ೧೫ ರು. ನಂತೆ ಖರೀದಿಸಲು ೪೨ ಕೋಟಿ ರು. ಮೀಸಲಿಟ್ಟಿದೆ. ರಫ್ತು ಮಾರುಕಟ್ಟೆಯಲ್ಲಿ ನಮ್ಮ ಮಾವು ತಿರಸ್ಕೃತಗೊಳ್ಳುತ್ತಿರುವ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಬೇಕು ಎಂದು ತೋಟಗಾರಿಕಾ ಇಲಾಖೆಗೆ ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಜಿ.ಕೆ. ವೆಂಕಟಶಿವಾರೆಡ್ಡಿ, ಡಾ.ಕೊತ್ತೂರು ಜಿ.ಮಂಜುನಾಥ್, ಸಮೃದ್ಧಿ ಮಂಜುನಾಥ್, ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿ.ಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಕೋಲಾರ ಎಸ್‌ಪಿ ಕನ್ನಿಕಾ ಸಿಕ್ರಿವಾಲ್, ಕೆ.ಜಿ.ಎಫ್ ಎಸ್‌ಪಿ ಶಿವಾಂ ರಜಪೂತ್ ಇದ್ದರು.